ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಬುಡ ಮುಚ್ಚಿದ ಡಾಂಬರ್

Last Updated 28 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಹನನವಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಬದಿಯ ಮರಗಳ ಬುಡವನ್ನು ಕಾಂಕ್ರೀಟ್ ಮತ್ತು ಡಾಂಬರ್‌ನಿಂದ ಮುಚ್ಚಿ ಮರಗಳನ್ನು ಕೊಲ್ಲಲಾಗುತ್ತಿದೆ.

ನಗರದ ಅನೇಕ ಕಡೆಗಳಲ್ಲಿ ರಸ್ತೆ ಬದಿಯ ಮರಗಳ ಬುಡಕ್ಕೆ ಡಾಂಬರ್ ಮತ್ತು ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ಮೇಖ್ರಿ ವೃತ್ತ, ರೆಸಿಡೆನ್ಸಿ ರಸ್ತೆ, ನಂದಿನಿ ಬಡಾವಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಮರಗಳ ಬುಡಕ್ಕೆ ಡಾಂಬರು ಹಾಕಿ, ಅದರ ಮೇಲೆ ಬುಲ್ಡೋಜರ್ ಹರಿಸಿ ಮಟ್ಟ ಮಾಡಲಾಗಿದೆ. ಇದರಿಂದ ಮರದ ಬೇರುಗಳಿಗೆ ನೀರು ಹಾಗೂ ಪೋಷಕಾಂಶಗಳನ್ನು ಹೀರುವ ಅವಕಾಶ ಸಿಗುವುದಿಲ್ಲ. ಜತೆಗೆ ಮರದ ಬೆಳೆವಣಿಗೆಗೂ ಇದು ಅಡ್ಡಿಯಾಗುತ್ತಿದೆ.

`ಮರಗಳ ಬೆಳವಣಿಗೆಗೆ ಪೂರಕವಾಗಿ ಬೇರುಗಳಿಗೆ ನೀರು ಮತ್ತು ಪೋಷಕಾಂಶಗಳ ಅಗತ್ಯವಿರುತ್ತದೆ. ಹೊಸದಾಗಿ ಬೆಳೆಯುತ್ತಿರುವ ಮರಗಳ ಬೇರುಗಳು ನೆಲದಾಳಕ್ಕೆ ಹೋಗಿರುವುದಿಲ್ಲ. ಹೀಗಾಗಿ ಬೆಳವಣಿಗೆಯ ಹಂತದಲ್ಲಿರುವ ಮರಗಳು ಬುಡದ ಭಾಗದಿಂದಲೇ ನೀರನ್ನು ಹೀರುತ್ತವೆ. ಇಂಥ ಮರಗಳ ಬುಡವನ್ನು ಸಂಪೂರ್ಣವಾಗಿ ಡಾಂಬರ್ ಅಥವಾ ಕಾಂಕ್ರೀಟ್‌ನಿಂದ ಮುಚ್ಚಿದರೆ ಬೇರುಗಳಿಗೆ ನೀರು ಸಿಗದೇ ಮರಗಳು ಸಾಯುತ್ತವೆ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಟಿ.ಜೆ.ರೇಣುಕಾ ಪ್ರಸಾದ್ ತಿಳಿಸಿದರು.

`ಹಳೆಯ ಮರಗಳ ಬೇರುಗಳು ನೆಲದಾಳದಲ್ಲಿ ತೇವಾಂಶವಿರುವ ಕಡೆಗೆ ಬೆಳವಣಿಗೆ ಹೊಂದಿರುತ್ತವೆ. ಮರದ ರೆಂಬೆಗಳು ಬೆಳಕಿನ ಕಡೆಗೆ ಸಾಗುವ ರೀತಿಯಲ್ಲಿ ಬೇರುಗಳು ತೇವಾಂಶವಿರುವ ಕಡೆಗೆ ಬೆಳೆಯುತ್ತವೆ. ಹೀಗಾಗಿ ಹಳೆಯ ಮರಗಳು ಬುಡದ ಭಾಗದಿಂದಲೇ ನೀರು ಹೀರಿಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ, ಮರ ಅಡ್ಡಡ್ಡ ಬೆಳೆಯಲು ಹಾಗೂ ಕಾಂಡದ ಬೆಳವಣಿಗೆಗಾಗಿ ಮರದ ಬುಡದಲ್ಲಿ ಜಾಗ ಬಿಡುವುದು ಅಗತ್ಯ. ಹೀಗಾಗಿ ಯಾವುದೇ ಮರದ ಬುಡಕ್ಕೆ ಡಾಂಬರ್ ಅಥವಾ ಕಾಂಕ್ರೀಟ್ ಹಾಕುವುದು ಮರಗಳ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ' ಎಂದು ಅವರು ಹೇಳಿದರು.

`ಮರಗಳ ಬುಡವನ್ನು ಮುಚ್ಚುವುದರಿಂದ ಆಗುವ ಹಾನಿಯ ಬಗ್ಗೆ ಸಾರ್ವಜನಿಕರು, ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಬೇಕು. ಈಗಾಗಲೇ ಮುಚ್ಚಲಾಗಿರುವ ಮರಗಳ ಬುಡಗಳಿಂದ ಕಾಂಕ್ರೀಟ್ ಹಾಗೂ ಡಾಂಬರ್ ಅನ್ನು ತೆಗೆಸುವ ಕಾರ್ಯಕ್ಕೆ ಬಿಬಿಎಂಪಿ ಕೂಡಲೇ ಮುಂದಾಗಬೇಕು' ಎಂದು ಅವರು ಒತ್ತಾಯಿಸಿದರು.

`ಕಟ್ಟಡಗಳು ಹಾಗೂ ರಸ್ತೆಗಳ ಕಾರಣದಿಂದ ನಗರದ ರಸ್ತೆ ಬದಿಯಲ್ಲಿರುವ ಮರಗಳ ಬೇರುಗಳು ಹೆಚ್ಚು ಅಗಲ ಮತ್ತು ಆಳಕ್ಕೆ ಬೆಳೆಯಲು ಅವಕಾಶವಿಲ್ಲ. ಮರದ ಬೇರುಗಳು ಬೆಳೆಯಲು ಮಣ್ಣು ತೇವಗೊಂಡು ಸಡಿಲವಾಗಬೇಕಾದ್ದು ಅಗತ್ಯ. ಮರದಿಂದ ಉದುರಿದ ಎಲೆಗಳು ಮರದ ಕೆಳಗೆ ಸಂಸ್ಕರಣೆಗೊಂಡು ಗೊಬ್ಬರವಾಗಿ ಮರಕ್ಕೆ ಪೋಷಕಾಂಶ ಸಿಗುತ್ತದೆ. ಆದರೆ, ಸದ್ಯ ನಗರದಲ್ಲಿ ಅದಕ್ಕೆ ಅವಕಾಶವೇ ಇಲ್ಲ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಅಂಬಿಕಾ ತಿಳಿಸಿದರು.

`ನಗರದ ರಸ್ತೆ ಬದಿ ಮರಗಳ ಬುಡಗಳಿಗೆ ಹಾಕಿರುವ ಡಾಂಬರ್ ಮತ್ತು ಕಾಂಕ್ರೀಟ್ ತೆಗೆಸಬೇಕು. ಮರಗಳ ಸುತ್ತ ಕನಿಷ್ಠ ಒಂದು ಅಡಿ ಜಾಗದಲ್ಲಿ ಮರಳನ್ನು ಹಾಕುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಬೇಕು. ಮರಗಳ ರಕ್ಷಣೆಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಒಟ್ಟಾಗಿ ಈ ಪ್ರಯತ್ನ ಆರಂಭಿಸಬೇಕು' ಎಂದು ಅವರು ಹೇಳಿದರು.

`ನಗರದಲ್ಲಿ ವಿದ್ಯುತ್ ತಂತಿಗಳಿಗೆ ಮತ್ತು ಕಟ್ಟಡಗಳಿಗೆ ರೆಂಬೆಗಳು ತಾಗುತ್ತವೆ ಎಂಬ ಕಾರಣಕ್ಕೆ ಮರಗಳ ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಮರದ ಬುಡದಲ್ಲಿರುವ ಮಣ್ಣು ಸುತ್ತಮುತ್ತ ಹರಡುತ್ತದೆ ಎಂಬ ಕಾರಣದಿಂದ ಮನೆ ಮುಂದಿನ ಮರಗಳಿಗೆ ಜನರು ಕಾಂಕ್ರೀಟ್ ಹಾಕಿ ಮುಚ್ಚುತ್ತಾರೆ. ಇನ್ನು, ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕರು ತಿಳಿವಳಿಕೆ ಇಲ್ಲದೇ ಮರಗಳ ಬುಡವನ್ನು ಡಾಂಬರ್‌ನಿಂದ ಮುಚ್ಚುತ್ತಾರೆ. ಹೀಗೆ ದಿನವೂ ಮರಗಳಿಗೆ ತೊಂದರೆ ಇದ್ದೇ ಇದೆ' ಎಂದು ಸ್ಯಾಂಕಿ ಕೆರೆ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎ.ಆರ್.ಆನಂದ್ ಕಳವಳ ವ್ಯಕ್ತಪಡಿಸಿದರು.

`ಹಿಂದೆ ಸಿದ್ದಯ್ಯ ಬಿಬಿಎಂಪಿ ಆಯುಕ್ತರಾಗಿದ್ದಾಗ ಮಲ್ಲೇಶ್ವರ ಸೇರಿದಂತೆ ನಗರದ ಕೆಲವು ರಸ್ತೆಗಳ ಬದಿಯ ಮರಗಳ ಬುಡಕ್ಕೆ ಹಾಕಿದ್ದ ಡಾಂಬರ್ ತೆಗೆಸಿದ್ದರು. ಆದರೆ ನಗರದ ಅನೇಕ ಕಡೆ ಇನ್ನೂ ಮರಗಳ ಬುಡಕ್ಕೆ ಡಾಂಬರ್ ಹಾಕಿ ಮುಚ್ಚುವ ಕೆಲಸ ನಡೆದೇ ಇದೆ. ಇದನ್ನು ತಪ್ಪಿಸಲು ಬಿಬಿಎಂಪಿ ನಿಯಮ ರೂಪಿಸುವುದು ಅಗತ್ಯ. ಇಲ್ಲವಾದರೆ ನಗರದ ಮರಗಳು ಕ್ರಮೇಣ ನಶಿಸುತ್ತಾ ಹೋಗುತ್ತವೆ' ಎಂದು ಅವರು ಹೇಳಿದರು.

ಮಳೆ ನೀರು ಇಂಗಿಸಬೇಕು

`ಕೇವಲ ಮರದ ಬುಡದಲ್ಲಿ ಮಾತ್ರ ಜಾಗ ಬಿಟ್ಟರೆ ಸಾಲದು. ಮಳೆ ನೀರು ನೆಲದಾಳಕ್ಕೆ ಇಂಗುವಂತೆ ಮಾಡಲು ಪಾದಚಾರಿ ಮಾರ್ಗಗಳಲ್ಲಿ ಸಿಮೆಂಟ್‌ನ ಬಳಕೆಯನ್ನು ತಗ್ಗಿಸಿ ಕೇವಲ ಮರಳಿನ ಮೇಲೆಯೇ ಸಿಮೆಂಟ್ ಸ್ಲ್ಯಾಬ್‌ಗಳನ್ನು ಅಳವಡಿಸಲು ಕ್ರಮ ಕೈ ಗೊಳ್ಳಬೇಕು. ಮಳೆ ನೀರು ಹರಿಯುವ ಚರಂಡಿಗಳ ತಳಭಾಗಕ್ಕೆ ಕಾಂಕ್ರೀಟ್ ಹಾಕುವ ಬದಲು ಜಲ್ಲಿ ಕಲ್ಲು ಹಾಕಿ, ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಉದ್ಯಾನ (ಗಾರ್ಡನಿಂಗ್) ನಿರ್ಮಾಣವನ್ನು ಕಡ್ಡಾಯಗೊಳಿಸಬೇಕು. ಈ ಎಲ್ಲ ಕ್ರಮಗಳಿಂದ ಮಳೆ ನೀರು ಭೂಮಿಗೆ ಇಂಗಲು ಅವಕಾಶವಾಗುತ್ತದೆ. ಇದರಿಂದ ನೆಲದಾಳದಲ್ಲಿ ತೇವಾಂಶ ಹೆಚ್ಚಾಗಿ ಮರಗಳಿಗೆ ಅನುಕೂಲವಾಗುತ್ತದೆ'
-ಡಾ.ಟಿ.ಜೆ.ರೇಣುಕಾ ಪ್ರಸಾದ್, ಬೆಂಗಳೂರು ವಿ.ವಿ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು

ಅಗತ್ಯವಿದ್ದರೆ ಕಾನೂನು ರಚನೆ

`ಮರಗಳ ಬುಡಕ್ಕೆ ಹಾಕಿರುವ ಕಾಂಕ್ರೀಟ್ ಮತ್ತು ಡಾಂಬರ್ ತೆಗೆಸಲು ಈಗಾಗಲೇ ನಿರ್ದೇಶನ ನೀಡಿದ್ದೇನೆ. ನಗರದ ಎಲ್ಲ ಮರಗಳ ಬುಡವನ್ನು ಬಿಡಿಸಿ ಮರಗಳ ಬೆಳವಣಿಗೆಗೆ ಅವಕಾಶ ಮಾಡಲಾಗುವುದು. ಮರಗಳು ಒಣಗಿರುವ ಕಡೆಗಳಲ್ಲಿ ಹೊಸದಾಗಿ ಗಿಡ ನೆಡುವ ಕಾರ್ಯವನ್ನು ಆರಂಭಿಸಲಾಗುವುದು. ಮರಗಳ ಬುಡಕ್ಕೆ ಕಾಂಕ್ರೀಟ್ ಮತ್ತು ಡಾಂಬರ್ ಹಾಕದಂತೆ ಮತ್ತು ಬುಡದಲ್ಲಿ ಎಷ್ಟು ಜಾಗ ಖಾಲಿ ಬಿಡಬೇಕು ಎಂಬ ಬಗ್ಗೆ ಅಗತ್ಯವಿದ್ದರೆ ನಿಯಮ ರೂಪಿಸಲು ಪಾಲಿಕೆ ಸಿದ್ಧವಿದೆ'
-ಸಿದ್ದಯ್ಯ, ಬಿಬಿಎಂಪಿ ಆಯುಕ್ತ

ಸಮರ್ಪಕವಾದ ಕಾನೂನಿಲ್ಲ

`ಮರಗಳ ಬೇರುಗಳು ನೆಲಮಟ್ಟದಿಂದ ಸುಮಾರು ನಲವತ್ತು ಅಡಿಗಳವರೆಗೆ ಕೆಳಗಿರುತ್ತವೆ. ಕಾಂಕ್ರೀಟ್ ಅಥವಾ ಡಾಂಬರ್ ಹಾಕಿ ಬುಡವನ್ನು ಮುಚ್ಚಿದರೂ ಮರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಮರಗಳ ಬುಡದ ಸುತ್ತ ಇಂತಿಷ್ಟೇ ಜಾಗ ಬಿಡಬೇಕೆಂದು ಸದ್ಯ ಯಾವುದೇ ನಿಯಮವಿಲ್ಲ. ಈ ಬಗ್ಗೆ ಕಾನೂನು ರೂಪಿಸಿದರೂ  ಅನುಷ್ಠಾನಕ್ಕೆ ತರುವುದು ಕಷ್ಟ. ಜನರಲ್ಲಿ ಈ ಬಗ್ಗೆ ಅರಿವು ಮೂಡಬೇಕು'
-ಬ್ರಿಜೇಶ್ ಕುಮಾರ್,
ಬಿಬಿಎಂಪಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT