ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳೇ ನನ್ನ ಮಕ್ಕಳು: ತಿಮ್ಮಕ್ಕ

ಮತ್ತಿಕೆರೆ ಶೆಟ್ಟಿಹಳ್ಳಿಯಲ್ಲಿ ಪರಿಸರ ದಿನಾಚರಣೆ ್ಞ ಶಾಸಕರಿಗೆ ಸನ್ಮಾನ
Last Updated 2 ಜುಲೈ 2013, 6:09 IST
ಅಕ್ಷರ ಗಾತ್ರ

ಚನ್ನಪಟ್ಟಣ: `ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು' ಎಂದು ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಕರೆ ನೀಡಿದರು.

ತಾಲ್ಲೂಕಿನ ಮತ್ತಿಕೆರೆ ಶೆಟ್ಟಿಹಳ್ಳಿ ಸಾರ್ವಜನಿಕ ಪ್ರೌಢಶಾಲೆ ಆವರಣದಲ್ಲಿ ಗ್ರಾಮದ ಇತ್ತೀಚೆಗೆ ನಡೆದ `ವಿಶ್ವ ಪರಿಸರ ದಿನಾಚರಣೆ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಮಾರಂಭವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

`ಮಕ್ಕಳಿಲ್ಲದೆ ಕೊರಗುತ್ತಿದ್ದ ನಾನು ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನೇ ಮಕ್ಕಳೆಂದು ಭಾವಿಸಿ ಪ್ರತಿದಿನ ಅವುಗಳಿಗೆ ನೀರು ಹಾಕಿ ಮರಗಳನ್ನಾಗಿ ಬೆಳೆಸಿದ್ದಕ್ಕೆ ಇಂದು ನನ್ನನ್ನು ರಾಷ್ಟ್ರಿಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ನಾನು ಬೆಳೆಸಿದ ಮರಗಳು ಇಂದು ಹಲವಾರು ಪ್ರಾಣಿ ಪಕ್ಷಿಗಳಿಗೆ ಮತ್ತು ದಾರಿಹೋಕರಿಗೆ ನೆರಳು ನೀಡುತ್ತಿವೆ. ಇದರಿಂದ ನನ್ನ ಜನ್ಮ ಸಾರ್ಥಕವಾದಂತಾಗಿದೆ' ಎಂದು ತಿಮ್ಮಕ್ಕ ಭಾವುಕರಾಗಿ ತಿಳಿಸಿದರು.

`ಇತ್ತೀಚಿನ ಸಿನಿಮಾ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಮಹಿಳೆಯರು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದು ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿದೆ. ಆದ್ದರಿಂದ ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯನ್ನು ಬಿತ್ತುವ ಬೋಧನೆ ಮಾಡಬೇಕು. ಹಾಗೆಯೇ ಬಾಲಕಿಯರು ಧರಿಸುವ ಉಡುಪುಗಳ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು' ಎಂದು ತಿಮ್ಮಕ್ಕ ತಿಳಿಸಿದರು.

ಈ ಸಂದರ್ಭದಲ್ಲಿ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಟ್ರಸ್ಟ್‌ನ ಎಂ.ಎಲ್.ಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿವೈಎಸ್ಪಿ ಎಚ್.ಅರ್.ಧರಣೇಂದ್ರ, ತಹಶೀಲ್ದಾರ್ ದಯಾನಂದ, ಕರ್ನಾಟಕ ಜನಪರ ವೇದಿಕೆಯ ರಮೇಶ್, ತಾ.ಪಂ.ಸದಸ್ಯ ಹನುಮಂತಯ್ಯ, ಮಾಜಿ ತಾ.ಪಂ.ಸದಸ್ಯ ಎಸ್.ಅರ್.ಪ್ರಮೋದ್, ಶಾಲೆಯ ಮುಖ್ಯ ಶಿಕ್ಷಕ ಬಿ.ಸುರೇಶ್, ನಿವೃತ್ತ ಶಿಕ್ಷಕ ಪುಟ್ಟಮಾದೇಗೌಡ, ಕಾಮಧೇನು ಸಂಸ್ಥೆಯ ಕೆಂಡಶೆಟ್ಟಿ, ಟ್ರಸ್ಟ್‌ನ ಕಾರ್ಯದರ್ಶಿ ಸಿದ್ದರಾಮು, ಮುಖಂಡ ಮಲ್ಲೇಶ್ ದ್ಯಾವಪಟ್ಟಣ, ಶಿಕ್ಷಕ ವಿಷಕಂಠ ಮುಂತಾದವರು ಭಾಗವಹಿಸಿದ್ದರು. ಪ್ರಜ್ಞಾ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಕಾರ್ಯಕ್ರಮ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT