ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣದಂಡನೆಯಿಂದ ಅತ್ಬಿರ್ ಪಾರು: ಕ್ಷಮಾದಾನ ಅರ್ಜಿ ಪುರಸ್ಕರಿಸಿದ ರಾಷ್ಟ್ರಪತಿ ಪ್ರಣವ್

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮರಣದಂಡನೆಗೆ ಗುರಿಯಾಗಿದ್ದ ದೆಹಲಿಯ ಅತ್ಬಿರ್ ಎಂಬ ಕೈದಿ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮರಣದಂಡನೆ ರದ್ದುಗೊಳಿಸಿದ್ದಾರೆ. 

ಪ್ರಣವ್ ರಾಷ್ಟ್ರಪತಿಯಾಗಿ ಅಧಿಕಾರಿ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಪುರಸ್ಕರಿಸಿದ ಕ್ಷಮಾದಾನ ಅರ್ಜಿ ಇದಾಗಿದೆ. ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಜೀವಂತವಾಗಿ ಸೆರೆ ಹಿಡಿಯಲಾಗಿದ್ದ ಅಜ್ಮಲ್ ಕಸಾಬ್ ಸಲ್ಲಿಸಿದ್ದ ಅರ್ಜಿಯನ್ನು ಅವರು ಈ ಮೊದಲು ತಿರಸ್ಕರಿಸಿದ್ದರು. ಇದರಿಂದಾಗಿ ಕಸಾಬ್‌ನನ್ನು ನೇಣಿಗೆ ಏರಿಸಲಾಗಿತ್ತು.

ಹಿನ್ನೆಲೆ: ಕುಟುಂಬದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿ, ಮಲಸಹೋದರ ಮತ್ತು ಮಲಸಹೋದರಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ದೆಹಲಿ ನ್ಯಾಯಾಲಯ ಅತ್ಬಿರ್‌ನಿಗೆ 2004ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ 2010ರಲ್ಲಿ ಈ ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಇದೇ ಜೂನ್‌ನಲ್ಲಿ ಅತ್ಬಿರ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ಕಾರ್ಯಾಲಯಕ್ಕೆ ರವಾನಿಸಿತ್ತು.

ಅತ್ಬಿರ್‌ಗೆ ವಿಧಿಸಲಾಗಿದ್ದ ಮರಣದಂಡನೆ ರದ್ದು ಮಾಡಿ ಪ್ರಣವ್ ಮುಖರ್ಜಿ ನವೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಅತ್ಬಿರ್ ಮರಣದಂಡನೆ ಈಗ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಯಾಗಿದೆ. ಈ ಕುರಿತಾದ ಆದೇಶದ ಪ್ರತಿಯನ್ನು ರಾಷ್ಟ್ರಪತಿ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ.

ನಾಟಿಕಾರ್ ಅರ್ಜಿ ಬಾಕಿ
ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮಹಮ್ಮದ್ ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಸೇರಿದಂತೆ 9 ಅರ್ಜಿಗಳನ್ನು ರಾಷ್ಟ್ರಪತಿ ಕಚೇರಿ, ಗೃಹ ಸಚಿವಾಲಯದ ಮರು ಪರಿಶೀಲನೆಗೆ ಕಳಿಸಿದೆ.

ಪತ್ನಿ ಮತ್ತು ಪುತ್ರಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಒಳಗಾಗಿರುವ ಕರ್ನಾಟಕದ ಸಾಯಿಬಣ್ಣಾ ನಿಂಗಪ್ಪ ನಾಟಿಕಾರ್ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಮಾತ್ರ ಇತ್ಯರ್ಥಕ್ಕಾಗಿ ರಾಷ್ಟ್ರಪತಿ ಮುಂದಿದೆ. 2005ರಲ್ಲಿ ಸುಪ್ರೀಂಕೋರ್ಟ್ ಕೂಡ ಸಾಯಿಬಣ್ಣ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.  ನವೆಂಬರ್ 5ರಂದು ಗೃಹ ಸಚಿವಾಲಯ ಸಾಯಿಬಣ್ಣಾ ಅರ್ಜಿಯನ್ನು ರಾಷ್ಟ್ರಪತಿ ಕಚೇರಿಗೆ ಕಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT