ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಊರಿಗೆ ಬಂದಿದ್ದೇ ದೊಡ್ಡದು!

Last Updated 5 ಜುಲೈ 2013, 5:55 IST
ಅಕ್ಷರ ಗಾತ್ರ

ರಾಯಚೂರು: `ಅಬ್ಬಾ! ಏನ್ ಹೇಳೋದು. ಆ ಭಗವಂತನ ಕುರುಣೆ. ಸುಸೂತ್ರವಾಗಿ ಮರಳಿ ಬಂದೆವು. ಆ ಮಳೆಯ ಆರ್ಭಟ. ಭೂಕುಸಿತ, ಪ್ರವಾಹದ ತೀವ್ರತೆ ಕಂಡು ಕೇಳಿ ಬೆಚ್ಚಿ ಬಿದ್ದೆವು. ಅನ್ನ ಆಹಾರ ಇಲ್ಲದೆಯೇ ಕಾಲ ಕಳೆದೆವು. ನಾವು ಬದುಕಿಕೊಂಡು ಮತ್ತೆ ನಮ್ಮ ಊರು, ನಮ್ಮ ಮನೆ ಮುಟ್ಟುತ್ತೇವಾ? ಎಂಬ ಅನುಮಾನ  ಬರಲಾರಂಭಿಸಿತ್ತು. ಈ ಅನುಮಾನ ಹುಟ್ಟಿಕೊಂಡ ಸಂದರ್ಭಕ್ಕೆ ನೆರವಿನ ಹಸ್ತವನ್ನು ಸೈನಿಕರು ಚಾಚಿ ಬಚಾವ್ ಮಾಡಿದರು'

ಬದರಿನಾಥ-ಕೇದಾರನಾಥ ಯಾತ್ರೆ ಸೇರಿದಂತೆ ಉತ್ತರ ಭಾರತ ಪ್ರವಾಸ ಕೈಗೊಂಡು ಪ್ರವಾಹ ಪ್ರತಾಪದ ಸಂಕಷ್ಟ ಅನುಭವಿಸಿ ಗುರುವಾರ ವಾಪಸಾದ ನಗರದ ಎನ್‌ಜಿಒ ಕಾಲೊನಿ ನಿವಾಸಿಗಳಾದ ಶ್ರೀನಿವಾಸ ಹಾಗೂ  ಪತ್ನಿ ಪುಷ್ಪಲತಾ ಅವರ ನುಡಿಗಳಿವು.

ಕಾಪಾಡಿದ ಸೈನಿಕರಿಗೆ ಹಾಗೂ ಅಲ್ಲಿಂದ ಇಲ್ಲಿಗೆ ತಲುಪಲು ವ್ಯವಸ್ಥೆ ಮಾಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಹೇಳಬೇಕು. ಧೋ ಎಂದು ಸುರಿಯುವ ಮಳೆ, ಮೈ ಕೊರೆಯುವಷ್ಟು ಚಳಿ, ಹಿಮಪಾತದ ಭೀತಿ. ಈ ಸ್ಥಿತಿಯಲ್ಲಿ ಕ್ಷಣ ಕ್ಷಣಕ್ಕೂ ಧೈರ್ಯ ತುಂಬಿದವರು ಸೈನಿಕರು. ತಮ್ಮ ಸ್ವೆಟರ್, ರಗ್ಗು, ಜಾಕೆಟ್ ಕೊಟ್ಟು ಧೈರ್ಯವಾಗಿ ಮತ್ತು ಬೆಚ್ಚಗೆ ಇರಿ, ಏನೂ ಆಗೊಲ್ಲ. ನಾವಿದ್ದೇವಲ್ಲ ಎಂದು ಹಗಲು-ರಾತ್ರಿ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಿದರು ಎಂದು ಭಾವಪರವಶರಾದರು.

ಶ್ರೀನಿವಾಸ ಜೋಶಿ ಅವರು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯಾಗಿದ್ದಾರೆ. ಅವರ ಪತ್ನಿ ಪುಷ್ಪಲತಾ ಅವರು ಜಹೀರಾಬಾದ್ ಶಾಲೆಯಲ್ಲಿ ಶಿಕ್ಷಕರು.

ಹೈದರಾಬಾದ್ ರಾಘವೇಂದ್ರ ಟ್ರಾವೆಲ್ಸ್‌ನಲ್ಲಿ 120 ಜನ  ಜೂನ್ 8ರಂದು ಉತ್ತರ ಭಾರತ ಪ್ರವಾಸ ಕೈಗೊಂಡೆವು. ಕಾಶಿ, ಪುರಿ ಜಗನ್ನಾಥ ದರ್ಶನದ ನಂತರ ಜೂನ್ 15ರಂದು `ಬದರಿ'ಗೆ ಆಗಮಿಸಿದೆವು. ನಂತರ ಜೂನ್ 16ರಂದು ಕೇದಾರನಾಥ್‌ಗೆ ತೆರಳುವವರಿದ್ದೇವು. ಮಳೆ ಆರ್ಭಟ, ಪ್ರವಾಹ ಸುದ್ದಿ ತಿಳಿದು ಪ್ರವಾಸ ರದ್ದುಗೊಳಿಸಿದೆವು. ಆದರೆ, ಮಳೆ, ಪ್ರವಾಹ ನಮ್ಮನ್ನು ಹೈರಾಣ ಮಾಡಿತು ಎಂದು ವಿವರಿಸಿದರು.

ಬದರಿನಾಥದಲ್ಲಿ ಉಡುಪಿಯ ಪೇಜಾವರಮಠದ ಶಾಖಾಮಠವಾದ `ಅನಂತಮಠ'ವಿತ್ತು. ಅಲ್ಲಿ ನಾಲ್ಕು ದಿನ ಅನ್ನ ಆಹಾರ ದೊರಕಿತು. ಬಳಿಕ ಆಹಾರ ಪದಾರ್ಥ,  ಅಡುಗೆ ಅನಿಲ ಖಾಲಿ. ಆಹಾರ ಪದಾರ್ಥ ದೊರೆಯದೇ ತೊಂದರೆ ಪಟ್ಟೆವು. ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ನಮ್ಮ ಔಷಧವೂ ಖಾಲಿಯಾಗಿ ಬಿಟ್ಟಿತ್ತು. ಆ ಸಂದರ್ಭಕ್ಕೆ ಸೈನಿಕರು ನೆರವಿಗೆ ಧಾವಿಸಿ ಬಂದರು. ಹೀಗಾಗಿ ಊರಿಗೆ ಬಂದೆವು ಎಂದು ಹೇಳಿಕೊಂಡರು.

ಕೈಗೆಟುವ ಎತ್ತರದಲ್ಲಿ ಮೋಡಗಳ ದಿಬ್ಬಣ, ಭಾರಿ ಗಾತ್ರದ ಹಿಮಗಡ್ಡೆಗಳು ದೃಶ್ಯಗಳು ಅಂಥ ಸಂಕಷ್ಟ ಸಂದರ್ಭದಲ್ಲೂ ನಮಗೆ ಆಕರ್ಷಣೀಯವಾಗಿ ಕಂಡವು ಎಂದು ಶಿಕ್ಷಕಿ ಪುಷ್ಪಲತಾ ಹೇಳಿಕೊಂಡರು.

ಮಕ್ಕಳ ನುಡಿ: ನಿತ್ಯ ತಂದೆ ತಾಯಿಗೆ ಮೊಬೈಲ್ ಕರೆ ಮಾಡುತ್ತಿದ್ದೆವು. ಕೆಲ ಬಾರಿ ಸಂಪರ್ಕ ಸಿಗುತ್ತಿರಲಿಲ್ಲ. ಇಂದು ಬರುತ್ತೇವೆ. ನಾಳೆ  ಬರುತ್ತೇವೆ ಎನ್ನುತ್ತ ನಮಗೆ ಸಮಾಧಾನ ಮಾಡುತ್ತಿದ್ದರು. ಆತಂಕ ಹೆಚ್ಚಾಗಿ ಕಣ್ಣೀರು ಸುರಿಸಿದ್ದೇವು. ಈಗ ತಂದೆ ತಾಯಿ ಬಂದಿದ್ದಾರೆ ಎಂದು ಶ್ರೀನಿವಾಸ ಜೋಶಿ ಹಾಗೂ ಪುಷ್ಪಲತಾ ಅವರ ಪುತ್ರಿಯರಾದ ಶ್ರುತಿ ಮತ್ತು ಪ್ರೀತಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT