ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಬಂದ ಅಜ್ಜಿ

ಚಂದಪದ್ಯ
Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಮಕ್ಕಳು ಪುಟ್ಟಜ್ಜಿ ಮನೆಗೆ ಬಂದಾಗ ಅವಳ ಮನೆ ಜಗಲಿಯ ಮೇಲೆ ಒಂದು ಬ್ಯಾಗು ಕುಳಿತಿತ್ತು. ಅಜ್ಜಿ ಏನೋ ಗಡಿಬಿಡಿಯಲ್ಲಿ ಇದ್ದಳು.

‘ಅಜ್ಜಿ, ಊರಿಗೆ ಹೋಗತೀರಾ?’ ಎಂದು ಕೇಳಿದಳು ಗಿರಿಜಾ. ಉಳಿದ ಮಕ್ಕಳು ಅಜ್ಜಿಯ ಉತ್ತರಕ್ಕಾಗಿ ಕಾದವು. ಅವುಗಳಿಗೆ ಏನೋ ಬೇಸರ. ಈ ಅಜ್ಜಿ ಊರಿಗೆ ಹೋದರೆ ಕತೆ ಹೇಳುವವರಾರು? ಎಂಬ ಚಿಂತೆ.

‘ಹೌದು ಕಣ್ರೇ, ನನ್ನ ಹಿರಿ ಮಗನ ಮನೆಗೆ ಹೋಗಿ ಬರತೀನಿ’
‘ಮತ್ತೆ ನಮಗೆ ಇಲ್ಲಿ ಕತೆ ಹೇಳೋರು?’ ಎಂದು ಕೇಳಿಯೇ ಬಿಟ್ಟ ದೊಣ್ಣೆ ಸಿದ್ದರಾಮ.

‘ನನಗೆ ಎಲ್ಲಿ ಹೋದರೂ ಕತೆ ಹೇಳುವ ಕೆಲಸ. ನೀವು ಎಂಟು ದಿನ ಕಾದಿರಿ, ಮತ್ತೆ ಬಂದು ಕತೆ ಹೇಳತೇನೆ’ ಎಂದಳು ಅಜ್ಜಿ. ಹಾಗೇ ನೆನಪು ಮಾಡಿಕೊಂಡು– ‘ಅಲ್ಲಿ ಐದು ಮೊಮ್ಮಕ್ಕಳಿವೆ ಕತೆ ಕೇಳಲಿಕ್ಕೆ... ದೊಡ್ಡವನು ಸುಪ್ರೀತ, ಅವನಿಗೆ ರಾಜರಾಣಿ ಕತೆ ಅಂದರೆ ಇಷ್ಟ; ಎರಡನೆಯೋಳು ಮಮತ, ಇವಳಿಗೆ ಕಾಗೆ ಗುಬ್ಬಿ ಕತೆ; ಮೂರನೆಯವ ಸಂಜೀವ, ಇವನಿಗೆ ಹಾಡ್ಗತೆ ಅಂದ್ರೆ ಇಷ್ಟ; ನಾಲ್ಕನೆಯವಳು ಯಶೋದ, ಇವಳಿಗೆ ಮಾಂತ್ರಿಕನ ಕತೆ ಇಷ್ಟ; ಐದನೆಯೋನೇ ಚಿನ್ನಾರಿ, ಇವನಿಗೆ ತಮಾಷೆ ಕತೆ ಅಂದ್ರೆ ಆಸೆ... ಇವರೆಲ್ಲ ನನ್ನ ದಾರಿ ಕಾಯತಿರತಾರೆ... ಹೋದ ತಕ್ಷಣ ಕತೆ ಕತೆ ಅಂತ ಬೆನ್ನು ಹತ್ತುತ್ತಾರೆ. ಹೋದ ಸಾರಿ ಇವರಿಗೆಲ್ಲ ಕತೆ ಹೇಳಿ ನನಗೆ ಸಾಕು ಸಾಕಾಯ್ತು’ ಅಂದಳು ಪುಟ್ಟಜ್ಜಿ. ಮಕ್ಕಳಿಗೆ ಅಜ್ಜಿಯ ಮಾತು ಕೇಳಿ ಬೇಸರವಾಯಿತು, ಆ ಮಕ್ಕಳ ಅದೃಷ್ಟ ನೆನೆದು ಹೊಟ್ಟೆಕಿಚ್ಚು ಆಯಿತು. ಆದರೂ ಮಕ್ಕಳು ‘ಬೇಗ ಬಾ ಅಜ್ಜಿ’ ಎಂದು ಕೇಳಿಕೊಂಡವು.

ಅಜ್ಜಿಯ ಬ್ಯಾಗನ್ನ ಡುಮ್ಮಣ್ಣ ಹೊತ್ತ. ಹಳ್ಳಿಯ ರಂಗಪ್ಪನ ಅಂಗಡಿಯವರೆಗೆ ಅವಳನ್ನ ಕರೆದೊಯ್ದು, ಅಲ್ಲಿಗೆ ಬಂದ ಗಜಾನನ ಬಸ್ಸಿನಲ್ಲಿ ಅಜ್ಜಿಯನ್ನ ಕೂರಿಸಿ ಮಕ್ಕಳು ‘ಬಾಯ್’ ಹೇಳಿ ಬಂದವು. ಸಪ್ಪೆಮೋರೆ ಹಾಕಿಕೊಂಡು ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹಿಂತಿರುಗಿದವು.

* * *
ಅಜ್ಜಿ ನಗರಕ್ಕೆ ಹೋಗಿ ಎರಡು ದಿನ ಆಗಿಲ್ಲ, ಬ್ಯಾಗ್ ಹಿಡಿದು ಹಳ್ಳಿಗೆ ಬಂದಳು. ಅವಳನ್ನ ಮೊದಲು ನೋಡಿದವ ದೊಣ್ಣೆ ಸಿದ್ದ.

‘ಅಜ್ಜಿ ಬಂದ್ಲು, ಅಜ್ಜಿ ಬಂದ್ಲು’ ಎಂದವನು ಹಳ್ಳಿಗೆಲ್ಲ ಹೇಳಿ ಬಂದ. ಹಳ್ಳಿ ಮಕ್ಕಳೆಲ್ಲ ಹೋ ಎಂದು ಕೂಗುತ್ತ ಅಜ್ಜಿ ಮನೆ ಅಂಗಳದಲ್ಲಿ ಸೇರಿದರು.

‘ಅಜ್ಜಿ ಎಂಟು ದಿನ ಅಂತ ಹೇಳತಿದ್ದೀ....?’ ರಾಗ ಎಳೆದ ಡುಮ್ಮಣ್ಣ.

‘ಅಯ್ಯೋ ಅದೊಂದು ಕತೆ’ ಎಂದು ರಾಗ ಎಳೆದಳು ಅಜ್ಜಿ.

‘ಅದನ್ನೇ ಹೇಳು ಹಾಗಾದರೆ’ ಎಂದು ಮಕ್ಕಳು ಅಜ್ಜಿ ಮನೆ ಅಂಗಳದಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತವು. ಅಜ್ಜಿ ಗಂಟಲು ಸರಿಪಡಿಸಿಕೊಂಡಳು.
ಮಕ್ಕಳಿಗೆಲ್ಲ ಕತೆ ಹೇಳಲಿಕೆಂದು
ಪಟ್ಟಣ ಸೇರಿದೆ ನಾನು
ಕತೆಗಳನೆಲ್ಲ ನೆನಪಿಸಿಕೊಂಡೆ,
ಅವುಗಳೋ ಇದ್ದವು ನೂರು

ಸುಪ್ರೀತನಿಗೊಂದು, ಮಮತೆಗೆ ಒಂದು,
ಸಂಜೀವನಿಗೋ ಹಾಡ್ಗತೆಯು
ಯಶೋದೆ, ಚಿನ್ನಾರಿಗೆ ಒಂದೊಂದು ಕತೆ
ಎಂದೂ ಅವರ ಮೆಚ್ಚುಗೆಗೆ

ನನ್ನಯ ನಾಲಿಗೆ ಮಿಡುಕಾಡುತ್ತಿರೆ
ಕತೆ ಹೇಳುವ ಕಾತುರ ಎಲ್ಲ
ಮಕ್ಕಳೆಲ್ಲರು ಮನೆಯಲಿ ಕೂತಿರೆ
ಯಾರಲ್ಲೂ ಉತ್ಸಾಹವು ಇಲ್ಲ

ಏನಾಯಿತು ಇವರಿಗೆ ಎಂದು ನಾ ನೋಡುತಿರೆ
ಯಾರೂ ಎದ್ದು ಬರಲಿಲ್ಲ
ಅಜ್ಜಿ ಅನ್ನುತ ಧಾವಿಸಿ ಬಂದು
ಕತೆ ಕೇಳುವ ಆತುರ ತೋರಿಸಲಿಲ್ಲ.

ಸುಪ್ರೀತನ ಕಿವಿಯಲಿ ಒಂದು ಯಂತ್ರವಿರೆ
ಅವ ಅದರಲ್ಲಿ ಮುಳುಗಿದ್ದ
ಕಣ್ಣು ಮುಚ್ಚಿ ಅವ ಬೇರೆ ಲೋಕದಲಿ
ತೇಲಿ ತೇಲಿ ಹೋಗಿದ್ದ. 
 
ಮಮತಳು ತನ್ನಯ ತೊಡೆಯ ಮೇಲಿನ
ಲ್ಯಾಪ್‌ಟಾಪಿನೊಳು ಮಗ್ನ.
ಹೊರಗಿನ ಲೋಕದ ಅರಿವೇ ಇಲ್ಲದೆ
ಅವಳಾಗಿದ್ದಳು ಅರೆ ನಗ್ನ. 

ಸಂಜೀವನೊ ಪಾಪ ಟೀವಿಯ ಮುಂದೆ
ಅದರಲ್ಲಿಯೇ ಮೈ ಮರೆತಿದ್ದ.
ಪರದೆಯಲ್ಲಿನ ಪಾತ್ರದ ಜೊತೆಗೆ
ಮಾತನಾಡುವುದರಲಿ ತೊಡಗಿದ್ದ
 
ಯಶೋದೆ– ಚಿನ್ನಾರಿಯರ ಕೈಲಿತ್ತು
ಅಂಗೈ ಅಗಲದ ಟ್ಯಾಬು
ಅವರು ಅದರಲಿ ಮುಳುಗಿ ತೇಲಲು
ಹೊರಗೆ ಎಳೆಯುವವರಾರು?
       
ಅಜ್ಜಿ ಬಂದಳು ಎಂಬ ಸಂಭ್ರಮ
ಮನೆಯಲಿ ಎಲ್ಲಿಯು ಇರಲಿಲ್ಲ
ಕತೆಗಳ ಕೇಳುವ ಹಿಂದಿನ ಸಡಗರ
ಕಣ್ಣಿಗೆ ಅಲ್ಲಿ ಕಾಣಿಸಲಿಲ್ಲ
 
ಇಲ್ಲಿಂದಲ್ಲಿಗೆ ಹೋದುದು ಏಕೆ
ಅನಿಸಿತು ನನಗಾಗ
ಎರಡೇ ದಿನಗಳ ಅಲ್ಲಿ ಕಳೆದು ನಾ
ಹತ್ತಿದೆ ಹಳ್ಳಿಯ ಬಸ್ಸನ್ನ

ಪೇಟೆಯ ಮಕ್ಕಳಿಗಿಲ್ಲವು ಆಟ
ಜೊತೆಜೊತೆಯಲಿ ಹಾರಾಟ
ಕತೆಯನು ಕೇಳುವ ಹುರುಪೇ ಇಲ್ಲ
ಬೇಕಿಲ್ಲವು ಅವರಿಗೆ ಮೋಜಾಟ

ಮೊಬೈಲು, ಇಯರ್ ಫೋನ್, ಟ್ಯಾಬ್ಲೆಟ್ಟು
ಅಬ್ಬ ಅಂದರೆ ಲ್ಯಾಪ್‌ಟಾಪು
ಇವಿಷ್ಟೇ ಇವರ ವಿಶ್ವವಾಗಿದೆ
ಅಲ್ಲಿ ಅಜ್ಜಿಗೆ ಏನು ಕೆಲಸವಿದೆ?

ಅಜ್ಜಿ ತುಸು ಬೇಸರದಿಂದ ಇದನ್ನ ಹೇಳಿದಳು. ‘ಹೀಗಾಗಿ ಎರಡು ದಿನ ಇದ್ದು ನಾನು ತಿರುಗಿ ಬಂದೆ. ಇನ್ನು ನಿಮಗೆ ಕತೆ ಹೇಳುವ ಅವಕಾಶ ನನಗೆ ಉಂಟಲ್ಲ’ ಎಂದು ಪುಟ್ಟಜ್ಜಿ ಕತೆ ಮುಗಿಸಿದಳು. ಮಕ್ಕಳು ಸಂತಸದಿಂದ ಹೋ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT