ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿನ ಬದಲು ಕಟ್ಟಡ ಅವಶೇಷ ಬಳಸಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಸಲಹೆ
Last Updated 13 ಡಿಸೆಂಬರ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ನದಿ ಮರಳಿನ ಬದಲಿಗೆ ಕಟ್ಟಡಗಳ ಅವಶೇಷ­ವನ್ನು ಬಳಸಲು ಎಲ್ಲ ಉದ್ಯಮಗಳು ವಿಶೇಷವಾಗಿ ಸಿಮೆಂಟ್‌ ಮತ್ತು ಕಬ್ಬಿಣ ಉದ್ಯಮಗಳು ಮುಂದಾಗಬೇಕು’ ಎಂದು  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇಂಡಿಯನ್‌ ಕಾಂಕ್ರೀಟ್‌ ಇನ್‌ಸ್ಟಿಟ್ಯೂಟ್‌ ನಗರದಲ್ಲಿ ಶುಕ್ರ­ವಾರ ಆಯೋಜಿಸಿದ್ದ ‘ನದಿ ಮರಳು ಬಳಕೆಗೆ ಪರ್ಯಾಯ­ಗಳು– ಒಂದು ಸುಸ್ಥಿರ ಚಿಂತನೆ’ ಕುರಿತು ವಿಚಾರ ಸಂಕಿರಣ­ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಈಗ ಕಟ್ಟಡ ನಿರ್ಮಾಣ ಮಾಡುವುದರ ಜತೆಗೆ ಕಟ್ಟಡ­ಗಳನ್ನು ನೆಲಸಮ ಮಾಡುವ ಪ್ರಕ್ರಿಯೆಯು ನಡೆಯು­ತ್ತಿದೆ. ಆದ್ದರಿಂದ, ಕಟ್ಟಡ ನಿರ್ಮಾಣ ಮತ್ತು ನೆಲಸಮ ಹಂತದಲ್ಲಿ ಬರುವ ಕಟ್ಟಡದ ಅವಶೇಷ­ವನ್ನು ಮರುಬಳಕೆ ಮಾಡಿಕೊಳ್ಳ­ಬೇಕು’ ಎಂದರು.

‘ರಾಯಚೂರಿನ 1470 ಮೆಗಾವಾಟ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಮತ್ತು ಉಡುಪಿಯ ಎಲ್ಲೂರಿನಲ್ಲಿನ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಸ್ಥಾವರಗಳ ಹಾರುಬೂದಿ­ಯನ್ನು ಸಿಮೆಂಟ್ ಕಾರ್ಖಾನೆಗಳು ಬಳಸುತ್ತಿವೆ’ ಎಂದು ತಿಳಿಸಿದರು.
‘ಬೆಳಗಾವಿಯಲ್ಲಿನ ಹಿಂಡಾಲ್ಕೋ ಅಲ್ಯುಮಿನಿಯಂ ಉದ್ದಿಮೆಯಿಂದ ಹೊರಬರುವ ಕೆಂಪು ಮಣ್ಣು ಸಹ ಈಗ ಅತ್ಯಂತ ಉಪಯುಕ್ತವೆಂದು ಸಾಬೀತಾಗಿದೆ’ ಎಂದು ಹೇಳಿದರು.

‘ನಾಡಿನ ಎಲ್ಲ ಉದ್ಯಮಗಳೂ ಹೀಗೆ ತಮ್ಮೆಲ್ಲ ಘನತ್ಯಾಜ್ಯ­ವನ್ನು ನಿರ್ಮಾಣ ಕಾಮಗಾರಿಗೆ ಬಳಸ­ಬೇಕು. ಪ್ರತಿಯೊಂದು ಉದ್ಯಮವು ಹೀಗೆ ಹತ್ತಿರದ ನಿರ್ಮಾಣ ಕಾಮಗಾರಿಯ ಜತೆಗೆ ಕೈಗೂಡಿಸಬೇಕು. ಇದರಿಂದ ಎಲ್ಲರಿಗೂ ಲಾಭವಿದೆ’ ಎಂದರು.

‘ಘನತ್ಯಾಜ್ಯವನ್ನು ನಿರ್ಮಾಣ ಕಾಮಗಾರಿಗೆ ಬಳಸು­ವುದರಿಂದ, ತ್ಯಾಜ್ಯ ನಿರ್ವಹಣೆಯ ವೆಚ್ಚವೂ ಕುಸಿಯುತ್ತದೆ. ತ್ಯಾಜ್ಯಕ್ಕೂ ಬೆಲೆ ಸಿಗುತ್ತದೆ. ನಿರ್ಮಾಣಕ್ಕೂ ಅನುಕೂಲವಾಗು­ತ್ತದೆ. ಈ ಬಳಕೆ­ಯಿಂದ ನದಿ ಮರಳಿನ ಮೇಲೆ ಈಗ ಇರುವ ಅತಿ­ಯಾದ ಅವಲಂಬನೆ ತಪ್ಪುತ್ತದೆ’ ಎಂದು ಹೇಳಿದರು.

ಸಿವಿಲ್‌–ಏಡ್‌ ಟೆಕ್ನಾಲಜೀಸ್‌ ಸಂಸ್ಥೆಯ ಅಧ್ಯಕ್ಷ ಸಿ.ಎಸ್‌.­ವಿಶ್ವನಾಥ ‘ನದಿ ಮರಳಿಗೆ ಪರ್ಯಾಯ­ವಾದ ಕೃತಕ ಮರಳಿನ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ, ನದಿ ಮರಳಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಸ್ವೀಡನ್‌, ನಾರ್ವೆ­ಯಲ್ಲಿನ ಸರ್ಕಾರವು  ನೈಸರ್ಗಿಕ ಮರಳಿನ ಬಳಸುವಿಕೆ­ಯನ್ನು ನಿಷೇಧಿಸಿ ಕೃತಕ ಮರಳು ಬಳಕೆಗೆ ಆದೇಶವನ್ನು ನೀಡಿದೆ’ ಎಂದರು.

‘ಈಗಾಗಲೇ ಖಾಸಗಿ ಕಂಪೆನಿಗಳಲ್ಲಿ ಕೃತಕ ಮರಳು ಬಳಕೆ ಮಾಡಲಾಗುತ್ತಿದೆ. ನೈಸರ್ಗಿಕ ಮರಳಿನಲ್ಲಿ ಸಲ್ಪೇಟ್‌ ಮತ್ತು ಕ್ಲೋರೈಡ್‌ ಅಂಶಗಳಿರುತ್ತವೆ. ಇದರಿಂದ, ವರ್ಷಗಳ ನಂತರ ಕಟ್ಟಡಗಳ ಗೋಡೆಗಳು ಬಿರುಕು ಬಿಡುವ ಸಾಧ್ಯತೆಯಿದೆ. ಆದರೆ, ಕೃತಕ ಮರಳಿನಲ್ಲಿ ಈ ಅಂಶಗಳು ಇರುವುದಿಲ್ಲ.  ಇದ­ರಿಂದ, ಕೃತಕ ಮರಳಿನ ಬಳಕೆಯಿಂದ ಯಾವುದೇ ಹಾನಿಯಿಲ್ಲ’ ಎಂದು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್ ವಿಭಾಗದ ಪ್ರೊ. ವೆಂಕಟರಾಮ ರೆಡ್ಡಿ ಮಾತನಾಡಿ, ‘ವಿಶ್ವ­ವ್ಯಾಪಿ­ಯಾಗಿ ಮನುಷ್ಯನ ಅತಿ ಬಳಕೆಯಿಂದ ನದಿ ಮರಳಿನ ಕೊರತೆ ಕಂಡುಬಂದಿದೆ. ಇಂದಿನ ಆಧುನಿಕ ಕಾಲದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಬಳಸಲಾಗುತ್ತಿದೆ’ ಎಂದು ತಿಳಿಸಿದರು.
‘ನದಿ ಮರಳಿಗಿಂತ ಕೃತಕ ಮರಳಿನ ಗುಣಮಟ್ಟವು ಉತ್ತಮವಾಗಿಯೇ ಇರುತ್ತದೆ. ಆದ್ದರಿಂದ ಕೃತಕ ಮರಳನ್ನು ಬಳಸುವುದಕ್ಕೆ ಹಿಂಜರಿಕೆ ಬೇಡ’ ಎಂದು ಅವರು ತಿಳಿಸಿದರು.

‘ಚಿಕ್ಕಮಗಳೂರಿನ ಲಕ್ಯಾ ಅಣೆಕಟ್ಟಿನಲ್ಲಿ ಮತ್ತು ಕೆಜಿಎಫ್‌ನ ಚಿನ್ನದ ಗಣಿಯ ಪ್ರದೇಶದಲ್ಲಿ ಸಂಗ್ರಹವಾಗಿರುವ ಗಣಿ ತ್ಯಾಜ್ಯಗಳೂ ನದಿ ಮರಳಿಗೆ ಪರ್ಯಾಯವಾಗುತ್ತವೆ’ ಎಂದು ಅವರು ಉದಾಹರಿಸಿದರು.

ಚೆನ್ನೈನ ಏಸ್‌ಟೆಕ್‌ನ ವಿಜ್ಞಾನಿ ಮೋಹನ್ ರಾಮನಾಥನ್‌, ‘ದೇಶದಲ್ಲಿ ಈಗ ಕಟ್ಟಡ ನಿರ್ಮಾಣ ಮತ್ತು ನೆಲಸಮ ಕಟ್ಟಡಗಳ ತ್ಯಾಜ್ಯದ ಬಳಕೆಯ ಬಗ್ಗೆ ಜಾಗೃತಿ ಉಂಟಾಗುತ್ತಿದೆ. ಕೇಂದ್ರ ಸರ್ಕಾರವು ಸದ್ಯದಲ್ಲೇ ಈ ಕುರಿತು ಶಾಸನವನ್ನು ರೂಪಿಸುತ್ತಿದೆ’ ಎಂದು ತಿಳಿಸಿದರು.

‘ಕಟ್ಟಡಗಳನ್ನು ಕೆಡವಿದ್ದರಿಂದ ಬರುವ ವಸ್ತುಗಳು ತ್ಯಾಜ್ಯವಲ್ಲ, ಮರಳಿಗೆ ಪರ್ಯಾಯವಾದ ಸಂಪನ್ಮೂಲ­ವಾಗಿದೆ. ಹೀಗೆ ತ್ಯಾಜ್ಯವನ್ನು ಮರುಬಳಕೆ ಮಾಡುವ ಘಟಕ­ಗಳಿಗೆ ಸರ್ಕಾರವು ಐದು ವರ್ಷಗಳು ತೆರಿಗೆ ವಿನಾಯಿತಿಯನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ವಿದೇಶಗಳಲ್ಲಿ ಈಗಾಗಲೇ ತ್ಯಾಜ್ಯ ಅಧ್ಯಯನದ ಕೋರ್ಸುಗಳೇ ಆರಂಭವಾಗಿವೆ’ ಎಂದರು.
ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ  ಪ್ರಧಾನ ವ್ಯವಸ್ಥಾಪಕ ಎಸ್ ಎಂ ಆರ್ ಪ್ರಸಾದ್‌ ಮಾತನಾಡಿ, ‘ಉಕ್ಕು ಘಟಕದಲ್ಲಿ ಸ್ಫೋಟಗೊಳ್ಳುವ ಕುಲುಮೆಯಿಂದ ಉತ್ಪಾದನೆಯಾಗುವ  ಕಿಟ್ಟವನ್ನು (ಸ್ಲಾಗ್‌) ಸಹ ಮರಳಾಗಿ ಪರಿವರ್ತಿಸಬಹುದು’ ಎಂದು ನಿರೂಪಿಸಿದರು.

‘ಕೃತಕ ಮರಳು ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಿದೆ. ಈಗ ನದಿಯ ಮರಳಿಗಿಂತ, ಕೃತಕ ಮರಳನ್ನು ಬಳಸಲು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎಂದರು.

ಪರ್ಯಾಯ ಬಳಕೆ
ಬೆಂಗಳೂರಿನಲ್ಲಿ ಪ್ರತಿದಿನ 300 ರಿಂದ 400 ಲಾರಿಗಳಷ್ಟು ಕಟ್ಟಡಗಳ ಅವಶೇಷ್ಯ ಸಂಗ್ರಹಣೆಯಾಗು­ತ್ತದೆ. ಇದನ್ನು ಮಲ್ಲಸಂದ್ರ ಮತ್ತು ಹೆಸರಘಟ್ಟದ 20 ಎಕರೆ ಜಾಗದಲ್ಲಿ ಸುರಿಯಲಾಗುತ್ತಿದೆ. ಇದನ್ನು ಉದ್ಯಮ­ಗಳು ನದಿ ಮರಳಿಗೆ ಪರ್ಯಾಯವಾಗಿ ಬಳಸಬೇಕು.
– ಡಾ.ವಾಮನ ಆಚಾರ್ಯ, ಅಧ್ಯಕ್ಷ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT