ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಸಾಗಣೆ: ತನಿಖಾಠಾಣೆ ಸ್ಥಾಪನೆ

Last Updated 17 ಸೆಪ್ಟೆಂಬರ್ 2013, 8:21 IST
ಅಕ್ಷರ ಗಾತ್ರ

ಮೂಡಿಗೆರೆ:  ತಾಲ್ಲೂಕಿನಾದ್ಯಂತ ಅಕ್ರಮ ಮರಳು ಸಾಗಾಟವನ್ನು ತಡೆ­ಯಲು ಆಯಕಟ್ಟಿನ ಪ್ರದೇಶಗಳಲ್ಲಿ ಮರಳು ತನಿಖಾ ಠಾಣೆಗಳನ್ನು ತೆರೆಯಲಾಗಿದೆ. ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಏಳು ಮರಳು ತನಿಖಾ ಠಾಣೆಗಳನ್ನು ತೆರೆಯಲಾಗಿತ್ತು. 

ಈ ತನಿಖಾ ಠಾಣೆ­ಗಳಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಇಲಾಖೆಯ ಸಿಬ್ಬಂದಿಯನ್ನು ನೇಮಕ­ಗೊಳಿಸಿದ್ದರೂ, ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿ­ಯಿಂದಾಗಿ ಅಕ್ರಮ ಮರಳು ಸಾಗಾಟ ಯಾವುದೇ ಅಡೆತಡೆಗಳಿಲ್ಲದೇ ರಾಜಾ­ರೋಷವಾಗಿಯೇ ಸಾಗುತ್ತಿತ್ತು ಎಂಬುದು ಸಾರ್ವಜನಿಕರ ಆರೋಪ­ವಾಗಿತ್ತು.

ತನಿಖಾ ಠಾಣೆಗಳಿರುವ ಸ್ಥಳಗಳನ್ನು ತಪ್ಪಿಸಿ ಬೇರೆ ರಸ್ತೆಯಲ್ಲಿ ಸಾಗಿ ಬರಲು ಅವಕಾಶವಿದ್ದಿದ್ದರಿಂದ, ಬದಲಿ ರಸ್ತೆಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿತ್ತು. ಈಗ ಅಂತಹ ಮರಳು ತನಿಖಾ ಠಾಣೆಗಳನ್ನು ಸ್ಥಳಾಂತರಿಸಿ, ಬಳಸು ಮಾರ್ಗಗಳು ಕೂಡುವ ರಸ್ತೆಗಳಲ್ಲಿಯೇ ಮರಳು ತನಿಖಾ ಠಾಣೆಯನ್ನು ನಿರ್ಮಿಸಲಾಗಿದೆ. ಅಲ್ಲದೇ ತಾಲ್ಲೂಕಿನಲ್ಲಿ ಹರಿಯುವ ನದಿ ತೀರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ­ಲ್ಲಿಯೂ ಮರಳು ತನಿಖಾ ಠಾಣೆಯನ್ನು ತೆರೆಯಲಾಗಿದೆ. ಜೊತೆಗೆ ತಾಲ್ಲೂಕಿ ಗಡಿ ಭಾಗಗಳಲ್ಲಿಯೂ ತನಿಖಾ ಠಾಣೆ­ಗಳನ್ನು ತೆರೆಯಲಾಗಿದ್ದು, ಇವುಗಳು ಸಮರ್ಪಕ­ವಾಗಿ ಕಾರ್ಯ­ನಿರ್ವಹಿಸಿ­ದರೆ, ಅಕ್ರಮ ಮರಳು ಸಾಗಣೆ­ಯನ್ನು ತಡೆಯುವಲ್ಲಿ ಯಶಸ್ವಿ­ಯಾಗಬಹುದು ಎಂಬುದು ಸಾರ್ವಜ­ನಿಕರ ನಿರೀಕ್ಷೆ.

ನಿಲ್ಲದ ಅಕ್ರಮ ಮರಳು ಸಾಗಣೆ: ಸರ್ಕಾರ ಅಕ್ರಮ ಮರಳು ಸಾಗಣೆ­ಯನ್ನು ತಡೆಯಲು ಎಷ್ಟೇ ಬಿಗಿ ನಿಲುವು ಕೈಗೊಂಡರೂ, ತಾಲ್ಲೂಕಿನಾದ್ಯಂತ ಅಕ್ರಮ ಮರಳು ಸಾಗಣೆ ಮಾತ್ರ ನಿರಂತರ­ವಾಗಿದೆ ಎಂದು ಸಾರ್ವಜ­ನಿಕರು ದೂರಿದ್ದಾರೆ. ಕತ್ತಲಾಗುತ್ತಿದ್ದಂತೆ ಬಡವನದಿಣ್ಣೆ, ಕಿತ್ತಲೆಗಂಡಿ, ಹೊರಟ್ಟಿ, ಗೋಣಿಬೀಡು, ಬೆಟ್ಟದಮನೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಣೆ ಪ್ರಕ್ರಿಯೆ ಪ್ರಾರಂಭವಾಗಿ, ಲಾರಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮುಂಜಾವಿ­ನ­ವರೆಗೂ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಸಾಗಾಟ ಮಾಡಲಾ­ಗುತ್ತಿದ್ದು, ರಸ್ತೆ ಇಕ್ಕೆಲದ ನಿವಾಸಿಗಳಿಗೆ ಲಾರಿ ಮತ್ತು ಟ್ರ್ಯಾಕ್ಟರ್ ಶಬ್ದಗಳಿಂದ ಕಿರಿಕಿರಿ­ಯಾಗುತ್ತಿದೆ ಎಂದು ಆರೋಪಿಸಿ­ದ್ದಾರೆ.

ಅಕ್ರಮವಾಗಿ ಮರಳು ಸಾಗಾಟ ಮಾಡುವ ವಾಹನಗಳು ಪ್ರಮುಖ ರಸ್ತೆಯನ್ನು ಬದಲಿಸಿ, ಬಾಲಕೀಯರ ಕಾಲೇಜು ರಸ್ತೆಯ ಮೂಲಕ ಬೀಜವಳ್ಳಿ ಮಾರ್ಗಕ್ಕೂ, ಜೆ.ಎಂ. ರಸ್ತೆಯ ಮೂಲಕ ಕ್ರೀಡಾಂಗಣ ಮಾರ್ಗವಾಗಿ ಪಟ್ಟಣ ಮತ್ತು ಬಿಳಗುಳ, ಹೆಸ್ಗಲ್‌ನತ್ತ ನಿರಂತವಾಗಿ ಸಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದ್ದು, ತಕ್ಷಣವೇ ಅಕ್ರಮ ಮರಳು ಸಾಗಣೆ ನಿಯಂ­ತ್ರಿಸದಿದ್ದರೆ, ರಸ್ತೆ ಇಕ್ಕೆಲದ ನಿವಾಸಿ­ಗಳೇ ರಾತ್ರಿ ವೇಳೆ ಆಯಾ ರಸ್ತೆ­ಗಳನ್ನು ಬಂದ್‌ಗೊಳಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT