ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ದಂಧೆಗೆ ಕಡಿವಾಣ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅಕ್ರಮವಾಗಿ ಮರಳು ತೆಗೆಯುವುದು ಮತ್ತು ಸಾಗಾಟ ಮಾಡುವ ದಂಧೆಯನ್ನು ತಡೆಯಲು ಕೊನೆಗೂ ರಾಜ್ಯ ಸರ್ಕಾರ ಒಂದು ಮರಳು ನೀತಿಯನ್ನು ಪ್ರಕಟಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಹಲವು ನದಿ ಮತ್ತು ಕೆರೆ ಕಟ್ಟೆಗಳ ಪ್ರದೇಶದಲ್ಲಿ ಗುತ್ತಿಗೆ ಪಡೆದು ಬೇಕಾಬಿಟ್ಟಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಹಲವು ನದಿ ತಟಗಳಲ್ಲಿ ವಿಪರೀತವಾಗಿ ಮರಳು ತೆಗೆದಿರುವುದರಿಂದ ಒಳ್ಳೆಯ ಮರಳಿನ ಕೊರತೆಯೂ ಉಂಟಾಗಿದೆ. ನದಿಗಳಲ್ಲಿನ ನೀರಿನ ಹರಿವು ಕಡಿಮೆ ಆಗುವುದು ಸೇರಿದಂತೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಎಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ತೆಗೆಯಬೇಕು ಎನ್ನುವ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ಈ ದಂಧೆ ನಡೆಯುತ್ತಿರುವುದರ ಹಿಂದೆ ರಾಜಕಾರಣಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಭ್ರಷ್ಟ ಅಧಿಕಾರಿಗಳ ಆಸರೆ ಇದೆ. ಈ ದಂಧೆಯಿಂದ ಬರುವ ಅಕ್ರಮ ಸಂಪಾದನೆಯನ್ನು ತಿಳಿದಿರುವ ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಮರಳು ಗಣಿಗಾರಿಗೆ ನಡೆಸುತ್ತಿರುವುದು ಸರ್ಕಾರಕ್ಕೆ ತಿಳಿಯದ ಸಂಗತಿಯೇನಲ್ಲ.

ಅಕ್ರಮ ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮ ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಆದಾಯ ನಷ್ಟದ ಬಗೆಗೆ ರಾಜ್ಯ ಸರ್ಕಾರ ಈಗಲಾದರೂ ಕಣ್ಣು ತೆರೆದಿರುವುದು ಒಳ್ಳೆಯ ಬೆಳವಣಿಗೆ. ತಮಿಳುನಾಡಿನ ಮಾದರಿಯಲ್ಲಿ ಹೊಸದೊಂದು ಮರಳು ನೀತಿ ರೂಪಿಸುತ್ತಿರುವುದರಿಂದ ಈಗ ಬರುತ್ತಿರುವ 11 ಕೋಟಿ ರೂಪಾಯಿ ಆದಾಯ ಇನ್ನುಮುಂದೆ 80 ಕೋಟಿಗೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಮರಳು ಗಣಿಗಾರಿಕೆಯ ನಿರ್ವಹಣೆಯ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ ವಹಿಸುವುದು ಸರಿ. ಮರಳು ತೆಗೆಯುವುದರಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ ಬಳಸುವ ಚಿಂತನೆ ಒಳ್ಳೆಯದೆ. ಆದರೆ ಈ ಉದ್ದೇಶಿತ ಯೋಜನೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಏಕೆಂದರೆ ಯಾವುದೇ ಕಾಯ್ದೆ ಕಾನೂನುಗಳನ್ನು ಮಾಡಿದರೂ, ಅದರಲ್ಲಿನ ಒಂದು ಸಣ್ಣ ಲೋಪವನ್ನು ಹುಡುಕಿ ಕಳ್ಳದಾರಿ ಹಿಡಿಯುವವರ ಸಂಖ್ಯೆಯೇ ಹೆಚ್ಚು. ಕೊನೆಗೆ ಅದೇ ರಾಜಮಾರ್ಗವಾಗಿ ಅದರ ವ್ಯವಹಾರದಲ್ಲಿ ತೊಡಗಿರುವವರು ಅಕ್ರಮ ಸಂಪಾದನೆಗೆ ಇಳಿಯುತ್ತಾರೆ. ಇಂತಹವರ ಜೊತೆ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ಕೈಜೋಡಿಸಿ ಮತ್ತೆ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುವ ಅಪಾಯವೂ ತಪ್ಪಿದ್ದಲ್ಲ. ಆದ್ದರಿಂದ ಇಂತಹ ದಂಧೆಯನ್ನು ಸರಿದಾರಿಗೆ ತರುವ ಬದ್ಧತೆ ಮತ್ತ ರಾಜಕೀಯ ಇಚ್ಛಾಶಕ್ತಿ ಸರ್ಕಾರಕ್ಕಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT