ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮರಳು ಮಾಫಿಯಾ ವಿರುದ್ಧ ಕ್ರಮ'

`ಪ್ರಜಾವಾಣಿ' ಲೇಖನ ಮಾಲೆ ಗಮನಿಸಿದ್ದೇನೆ: ಮಹದೇವಪ್ಪ
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  `ರಾಜ್ಯದಾದ್ಯಂತ ಮರಳು ಮಾಫಿಯಾ ವ್ಯಾಪಿಸಿದ್ದು, ಮರಳು ಲೂಟಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೂ ಸೇರಿದಂತೆ ದೊಡ್ಡ ಕೂಟವೇ ಭಾಗಿಯಾಗಿದೆ. ಅದನ್ನೆಲ್ಲ ಮಟ್ಟ ಹಾಕಲು ರಾಜ್ಯ ಸರ್ಕಾರ ಮರಳು ನೀತಿ ಜಾರಿಯೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಿದೆ' ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.

`ಪ್ರಜಾವಾಣಿ'ಯಲ್ಲಿ ಪ್ರಕಟವಾದ ವಿಶೇಷ ವರದಿಗಳ ಸರಣಿ ಲೇಖನ ಮಾಲೆಯನ್ನು ಉಲ್ಲೇಖಿಸಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

`ಮನೆ ನಿರ್ಮಾಣವೂ ಸೇರಿದಂತೆ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಮರಳು ಬೇಕೇಬೇಕು. ಅಭಿವೃದ್ಧಿ ಚಟುವಟಿಕೆಗಳಿಗೆ ಅಡಚಣೆ ಆಗದಂತೆ ಪರಿಸರದ ರಕ್ಷಣೆಯನ್ನೂ ಗಮನದಲ್ಲಿ ಇಟ್ಟುಕೊಂಡು ಮರಳು ಗಣಿಗಾರಿಕೆ ನಡೆಸಬೇಕಿದೆ. ರಾತ್ರಿ ಮರಳು ತೆಗೆಯಬಾರದು ಎನ್ನುವ ನಿಯಮ ಇದ್ದರೂ ಅದೇ ವೇಳೆಯಲ್ಲಿ ಅಧಿಕ ಪ್ರಮಾಣದ ಮರಳು ಗಣಿಗಾರಿಕೆ ನಡೆಯುತ್ತಿದೆ. ನದಿ ಪಾತ್ರಗಳಿಗೂ ಧಕ್ಕೆಯಾಗುತ್ತಿದೆ. ಶೀಘ್ರವೇ ಇದಕ್ಕೆಲ್ಲ ಕಡಿವಾಣ ಹಾಕಲಾಗುತ್ತದೆ' ಎಂದು ವಿವರಿಸಿದರು.

`ಈಗಾಗಲೇ ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆಯಾಗಿದ್ದು, ಶೀಘ್ರವೇ ಮರಳು ನೀತಿ ಕರಡು ಸಿದ್ಧಪಡಿಸಲಿದ್ದೇವೆ. ಹಾಲಿ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಇದ್ದು, ಆ ಸಮಿತಿಯೇ ಅಕ್ರಮ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ' ಎಂದು ಸ್ಪಷ್ಟಪಡಿಸಿದರು.

`ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 300 ಪ್ರಕರಣ ದಾಖಲು ಮಾಡಿಕೊಂಡು, ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು. `ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ನಾನೂ ಗಮನಿಸಿದ್ದೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT