ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಲಾರಿ ವಶ: ಎಫ್‌ಐಆರ್ ದಾಖಲೆಯೋ? ದಂಡ ಶುಲ್ಕವೋ?

Last Updated 7 ಸೆಪ್ಟೆಂಬರ್ 2013, 6:51 IST
ಅಕ್ಷರ ಗಾತ್ರ

ಕೋಲಾರ:  ಮರಳು ಸಾಗಣೆ ಲಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೋ ಅಥವಾ ದಂಡ ಶುಲ್ಕವನ್ನು ವಿಧಿಸಬೇಕೋ?
- ವಶಕ್ಕೆ ಪಡೆದ ಮರಳು ಸಾಗಣೆ ಲಾರಿಗಳ ಸಮ್ಮುಖದಲ್ಲೇ ಅಧಿಕಾರಿಗಳು ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗಂಟೆಗಟ್ಟಲೆ ಕಾದ ಘಟನೆ ಶುಕ್ರವಾರ ನಡೆದಿದೆ.

ಮುಳಬಾಗಲು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮರಳು ಸಾಗಣೆಯ 43 ಲಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್ ನೇತೃತ್ವದಲ್ಲಿ ಶುಕ್ರವಾರ ಬೆಳಗಿನ ಜಾವವೇ ವಶಕ್ಕೆ ಪಡೆದರೂ, ಅವುಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಂಜೆಯಾದರೂ ನಿರ್ಧಾರವೇ ಆಗಿರಲಿಲ್ಲ.

ಕೋಲಾರ- ಮುಳಬಾಗಲು ರಸ್ತೆಯ ಹನುಮನಹಳ್ಳಿ ಸಮೀಪ ಬೆಳಗಿನ ಜಾವ 3ರ ವೇಳೆಗೆ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಪಡಿಸಿಕೊಳ್ಳಲಾಯಿತು. ಬಹುತೇಕ ಲಾರಿಗಳು ಮರಳು ಸಾಗಿಸುವ ಪರವಾನಗಿಯನ್ನು ಪಡೆದಿರಲಿಲ್ಲ. ಆಂಧ್ರಪ್ರದೇಶದ ಕಡೆಯಿಂದ ಬಂದ ಒಂದೆರಡು ಲಾರಿಗಳಲ್ಲಿ ಮಾತ್ರ ಪರವಾನಗಿ ಇದೆ ಎನ್ನಲಾದರೂ, ಪರವಾನಗಿ ಪತ್ರವನ್ನು ಮುಳಬಾಗಲು ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ಚಾಲಕರು ಹೇಳಿದ್ದು ಕೂಡ ಅಧಿಕಾರಿಗಳ ತಲೆ ಬಿಸಿ ಮಾಡಿತ್ತು.

ಟೋಲ್‌ಗೇಟ್ ಸಮೀಪ ಹೆದ್ದಾರಿ ಬದಿಯಲ್ಲೇ ನಿಲ್ಲಿಸಲಾಗಿದ್ದ ಲಾರಿಗಳನ್ನು ಸಂಜೆಯಾದರೂ ಸ್ಥಳಾಂತರಿಸುವ ಕೆಲಸ ಆಗಿರಲಿಲ್ಲ. ಲಾರಿಗಳನ್ನು ಮುಳಬಾಗಲು ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆ? ಅಥವಾ ದಂಡ ಶುಲ್ಕ ವಿಧಿಸಿ ಬಿಟ್ಟುಬಿಡಬೇಕೆ? ಎಂಬ ವಿಷಯ ಸಂಜೆಯಾದರೂ ಇತ್ಯರ್ಥವಾಗಿರಲಿಲ್ಲ.

ಎಲ್ಲ ಲಾರಿ ಮಾಲಿಕರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಡಿ.ಕೆ.ರವಿ, ನಂತರ ತಾವು ಹೇಳುವವರೆಗೂ ಯಾವುದೇ ಕ್ರಮ ಕೈಗೊಳ್ಳುವುದು ಬೇಡ. ಸ್ವಲ್ಪ ಸಮಯ ಕಾಯಿರಿ ಎಂದು ಹೇಳಿದ್ದರಿಂದ ಸಂಜೆ 5 ಗಂಟೆಯಾದರೂ ಲಾರಿಗಳ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ.
ಹತ್ತಾರು ಲಾರಿಗಳನ್ನು ಠಾಣೆಗೆ ಸಾಗಿಸುವ ಕೆಲಸ ಮಾತ್ರ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT