ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಣೆ ಪರವಾನಗಿಗೆ ಒತ್ತಾಯ

ಕೊಪ್ಪ ತಾ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಆಗ್ರಹ
Last Updated 7 ಸೆಪ್ಟೆಂಬರ್ 2013, 6:04 IST
ಅಕ್ಷರ ಗಾತ್ರ

ಕೊಪ್ಪ: ಸರ್ಕಾರಿ ಕಾಮಗಾರಿಗಳು ಹಾಗೂ ಆಶ್ರಯ ಮನೆ ನಿರ್ಮಾಣಕ್ಕೆ ಅಗತ್ಯವಾದ ಮರಳು ಸರಬರಾಜು ಮಾಡಲು ಮರಳು ಸಾಗಣೆಗೆ ವಿಶೇಷ ಪರವಾನಿಗೆ ನೀಡಲು ಜಿಲ್ಲಾಡಳಿತವನ್ನು ಕೋರಲು ತಾ.ಪಂ. ಅಭಿವೃದ್ಧಿ ಪರಿಶೀಲನಾ ಸಭೆ ನಿರ್ಧರಿಸಿತು.

ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸೇರಿದ್ದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಉಪಾಧ್ಯಕ್ಷ ಬೆಳಗೊಳ ರಮೇಶ್, ಸದಸ್ಯ ಪೂರ್ಣಚಂದ್ರ ಮಾತನಾಡಿ, ರಾಯಲ್ಟಿ ಪಾವತಿಸಿದ ಮರಳನ್ನು ಸಾಗಿಸಲು ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿದೆ. ಸರ್ಕಾರಿ ಕಾಮಗಾರಿ ಹಾಗೂ ಬಡವರ ಮನೆ ನಿರ್ಮಾಣಕ್ಕೆ ಮರಳು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೂಡಲೆ ರಾಯಲ್ಟಿ ಪಾವತಿಸಿದ ಮರಳನ್ನು ಅಗತ್ಯ ಕಾಮಗಾರಿಗಳಿಗೆ ಪೂರೈಸಲು ಪರವಾನಗಿ ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್ ಎಸ್.ಎಸ್.ಪಾಟೀಲ್, ಜನರಿಂದ ಬರುವ ದೂರಿನ ಆಧಾರದಲ್ಲಿ ಪರವಾನಿಗೆ ಇಲ್ಲದ ಮರಳನ್ನು ವಶಪಡಿಸಿ ತಹಶೀಲ್ದಾರ್ ಅವರಿಗೆ ವರದಿ ಮಾಡಲಾಗುತ್ತದೆ ಪರವಾನಿಗೆ ಹೊಂದಿರುವುದು ಸಾಗಾಟಗಾರರ ಜವಾಬ್ದಾರಿ ಎಂದರು. ಗ್ರಾ.ಪಂ. ಪಿಡಿಒಗಳು ನಿರ್ದಿಷ್ಟ ಕಾಮಗಾರಿಗಳನ್ನು ನಮೂದು ಮಾಡಿ ಮರಳು ಸರಬರಾಜಿಗೆ ತಹಶೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ಪರವಾನಿಗೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಇಒ ಜಿ.ಸಿ. ತಿಪ್ಪೇಶಿ ಸಲಹೆ ನೀಡಿದರು.

ಕಂದಾಯ ಇಲಾಖೆ ಕೆಲಸಗಳನ್ನು ಗ್ರಾ.ಪಂ.ಗಳಿಗೆ ವಹಿಸುತ್ತಿರುವ ಬಗ್ಗೆ ಭುವನಕೋಟೆ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಅಂತ್ಯೋದಯ ಪಡಿತರ ಚೀಟಿಗಳನ್ನು ಬಿಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತಿಸಲು ಗ್ರಾ.ಪಂ.ಗಳು ನೆರವಾಗಬೇಕೆಂದು ಆಹಾರ ಇಲಾಖೆ ಅಧಿಕಾರಿ ಶ್ರೀಕಾಂತ್ ಕೋರಿಕೆ ಇಟ್ಟಾಗ ಪಿಡಿಒಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಗ್ರಾ.ಪಂ. ಪಿಡಿಒಗಳಿಗೆ ಕೊಳೆರೋಗ ಸಂತ್ರಸ್ಥರ ಅರ್ಜಿ ಸ್ವೀಕರಿಸಲು ತಹಶೀಲ್ದಾರ್ ಸೂಚಿಸಿರುವುದು ಸರಿಯಲ್ಲ. ಕಂದಾಯ ಇಲಾಖೆ ಸಿಬ್ಬಂದಿಗಳ ಮೂಲಕವೇ ಅರ್ಜಿ ಪಡೆಯಬಹುದಾಗಿತ್ತು. ತಾ.ಪಂ. ಗಮನಕ್ಕೆ ತರದೆ ಇಲಾಖೆಗೆ ಜವಾಬ್ದಾರಿ ವಹಿಸುವುದರ ವಿರುದ್ಧ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಇಒ ತಿಪ್ಪೇಶಿ ಅಸಮಾಧಾನ ವ್ಯಕ್ತಪಡಿಸಿದರು.

ಶಿಶು ಅಭಿವೃದ್ಧಿ ಇಲಾಖೆ ಅಂಗನವಾಡಿಗಳಿಗೆ ಸರಬರಾಜಾಗುವ ಪಡಿತರದ ಗುಣಮಟ್ಟ ಪರಿಶೀಲಿಸುವಲ್ಲಿ ವಿಫಲವಾಗಿದೆ. ಮುಗ್ಗುಲು ಹಾಗೂ ಕುಟ್ಟೆ ಹಿಡಿದ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಸದಸ್ಯ ಜಯಂತ್ ಆಗ್ರಹಿಸಿದರು. ನಮ್ಮ ಮನೆಗಳಿಗೆ ಧವಸಧಾನ್ಯ ಖರೀದಿಸುವಾಗ ತೋರಿಸುವ ಕಾಳಜಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ವಿಷಯದಲ್ಲೂ ಇರಲಿ ಎಂದು ಅಧ್ಯಕ್ಷೆ ಪದ್ಮಾವತಿ ರಮೇಶ್ ದನಿಗೂಡಿಸಿದರು.

ಮೆಸ್ಕಾಂ ಮುತ್ತಿನಕೊಪ್ಪ-ಕೊಪ್ಪ ವಿದ್ಯುತ್ ಮಾರ್ಗಕ್ಕೆ ಶೀಘ್ರ ಚಾಲನೆ ನೀಡಬೇಕು. ಜಯಪುರ ವಿಭಾಗದ ವಿದ್ಯುತ್ ಸಮಸ್ಯೆಗಳನ್ನು ನಿವಾರಿಸಲು ಗಮನ ಹರಿಸಬೇಕು. ಹೇರೂರು, ಶಾಂತಿಗ್ರಾಮ, ಕಾಳನಾಯಕನಕಟ್ಟೆ ಶಾಲಾ ಆವರಣದಲ್ಲಿರುವ ವಿದ್ಯುತ್ ಮಾರ್ಗ ಬದಲಾಯಿಸಿ ಶೃಂಗೇರಿಯ ಹೊಳೆಕೊಪ್ಪದಲ್ಲಿ ನಡೆದಂತಹ ದುರಂತ ಸಂಭವಿಸದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಸದಸ್ಯ ಜಯಂತ್ ಒತ್ತಾಯಿಸಿದರು.


ಕಂದಾಯ, ಲೋಕೋಪಯೋಗಿ, ಜಿ.ಪಂ. ಇಂಜಿನಿಯರಿಂಗ್, ಆರೋಗ್ಯ, ಪಶುಸಂಗೋಪನ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT