ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳುಗಾಡಿನಲಿ, ‘ಇಂಡಿಯನ್’ ಜೊತೆಯಲಿ...

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಇನ್‌ಕ್ರೆಡಿಬಲ್ ಇಂಡಿಯಾದಲ್ಲೊಂದು ಇಂಪಾಸಿಬಲ್ ಜರ್ನಿ’- ಇದು ಈಟೀವಿ ಕನ್ನಡದ ‘ಇಂಡಿಯನ್’ ರಿಯಾಲಿಟಿ ಶೋನ ಅಡಿಬರಹ. ಈ ಧ್ಯೇಯವಾಕ್ಯಕ್ಕೆ ತಕ್ಕಂತೆ ಈ ಪಯಣದಲ್ಲಿ ಪ್ರಾಣವನ್ನೇ ಪಣಕ್ಕಿಡುವ ಭೀಕರ ಆಟಗಳಿವೆ. ಜೀವನದ ಮೇಲಿನ ಹಂಗು ತೊರೆದು ಕಾರ್ಯಕ್ರಮದ ಯಶಸ್ಸಿಗೆ ನಿಂತವರು ಸ್ಪರ್ಧಿಗಳಷ್ಟೇ ಅಲ್ಲ, ಅವರೊಂದಿಗೆ ಎಲ್ಲದಕ್ಕೂ ಸೈ ಎಂದು ಜೊತೆ ನಿಂತ ಇಡೀ ತಂಡದ ಬದುಕು ಕತ್ತಿಯಂಚಿನ ಮೇಲಿನ ನಡಿಗೆಯಂತಿದೆ.

ಹೆಜ್ಜೆ ಹೆಜ್ಜೆಗೂ ರೋಚಕ ಎನಿಸಬಹುದಾದ ಕ್ಷಣಗಳ ನಡುವೆಯೇ ಎದೆ ನಡುಗಿಸುವ ಭಯಾನಕ ಸಂಗತಿಗಳೂ ಇಲ್ಲಿ ನಡೆಯುತ್ತವೆ. 7 ರಾಜ್ಯಗಳಲ್ಲಿ 14 ವಾರಗಳ ಕಾಲ ನಡೆಯುವ ಪಯಣದಲ್ಲಿ ಈ ತಂಡ ಎದುರಿಸುತ್ತಿರುವ ಕಠಿಣ ಸವಾಲುಗಳ ಕಿರುನೋಟ ಇಲ್ಲಿದೆ.

ಆಗಸ್ಟ್‌ ತಿಂಗಳಲ್ಲಿ ಲೇಹ್ ಲಡಾಕ್‌ನಿಂದ ‘ಇಂಡಿಯನ್’ನ ಇಂಪಾಸಿಬಲ್ ಜರ್ನಿ ಆರಂಭವಾಗಿತ್ತು. ಅಲ್ಲಿಂದ ಪಂಜಾಬ್, ನಂತರ ರಾಜಸ್ತಾನದ ಜೈಸಲ್ಮೇರ್ ಕಡೆಗೆ ಪಯಣ ಸಾಗಿತ್ತು. ಈ ಸಮಯದಲ್ಲೇ ಚಿತ್ರೀಕರಣ ನಡೆಯುವ ಜೈಸಲ್ಮೇರ್‌ನ ಮರುಭೂಮಿಗೆ ಭೇಟಿ ನೀಡುವ ಅವಕಾಶ ಮಾಧ್ಯಮದವರಿಗೆ ದೊರೆಯಿತು. ಜೈಸಲ್ಮೇರ್‌ನಿಂದ 45 ಕಿ.ಮೀ. ದೂರವಿರುವ ‘ಕನೋಯಿ’ ಎನ್ನುವ ಗ್ರಾಮದ ಬಳಿ ಇದ್ದ ತೆರೆದ ಜೀಪ್‌ನಲ್ಲಿ ಚಿತ್ರೀಕರಣ ನಡೆಯುವ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ಚಿತ್ರೀಕರಣದ ಸ್ಥಳಕ್ಕೆ ಸಮೀಪಿಸುತ್ತಿದ್ದಂತೆ ಕ್ಯಾಮೆರಾ ಹಿಡಿದ ಮುಸುಕುಧಾರಿಗಳ ಗುಂಪೊಂದು ಕಣ್ಣಿಗೆ ಬಿತ್ತು. ಒಂದು ಕ್ಷಣ ದಾರಿ ತಪ್ಪಿ ಬೇರೆ ಕಡೆ ಬಂದೆವೇನೋ ಎನ್ನುವ ಸಂಶಯ. ಅಷ್ಟರಲ್ಲಿ ಕಾರ್ಯಕ್ರಮದ ನಿರ್ದೇಶಕ ರಾಘವೇಂದ್ರ ಹುಣಸೂರು ಮುಖಕ್ಕೆ ಸುತ್ತಿದ್ದ ಬಟ್ಟೆಯನ್ನು ತೆಗೆದು ನಮ್ಮತ್ತ ನಗೆ ಬೀರಿದರು. ಮುಸುಕಿನ ರಹಸ್ಯ ಕೇಳಿದಕ್ಕೆ ಅವರಿಂದ ಬಂದ ಉತ್ತರ– ‘ನೀವು ಬೇಗನೆ ಮುಖಕ್ಕೆ ಬಟ್ಟೆ ಸುತ್ತಿಕೊಳ್ಳಿ, ಇಲ್ಲವಾದರೆ ಕಿವಿ, ಬಾಯಿ, ಕಣ್ಣಿನ ಒಳಗೆಲ್ಲ ಮರಳು ತುಂಬುತ್ತದೆ’.

ಒಂಟೆಗಳಿಗೆ ಚುಂಬನ!
ಒಂದು ಕಡೆ ಉರಿಯುವ ಬಿಸಿಲು, ಮತ್ತೊಂದೆಡೆ ಗಾಳಿಯಿಂದ ಬದಲಾಗುವ ಮರಳುಗಾಡಿನ ವಾತಾವರಣ. ಇಂತಹ ಪರಿಸ್ಥಿತಿಯಲ್ಲಿ ತಂಡದ ಪ್ರತಿಯೊಬ್ಬರೂ ಇಡೀ ದಿನ ಅಲ್ಲಿ ಕೆಲಸ ಮಾಡುತ್ತಿದ್ದರು. ಗಾಳಿಗೆ ತಕ್ಕಂತೆ ಚಿತ್ರೀಕರಣದ ದಿಕ್ಕನ್ನು ಕೆಲವೇ ನಿಮಿಷಗಳಲ್ಲಿ ಬದಲಾಯಿಸಲಾಗುತಿತ್ತು. ಕೇವಲ 10 ನಿಮಿಷಗಳ ಚಿತ್ರೀಕರಣಕ್ಕೆ ಗಂಟೆಗಳ ಕಾಲ ಇಂಡಿಯನ್ ತಂಡ ಶ್ರಮ ಪಡಬೇಕಿತ್ತು.  

ಇದನ್ನೆಲ್ಲ ನೋಡುತ್ತಿರುವಂತೆ ಪಕ್ಕಾ ರಾಜಾಸ್ತಾನಿ ಪೋಷಾಕಿನಲ್ಲಿ ಒಂಟೆ ಹಿಡಿದ ಸ್ಪರ್ಧಿಗಳು ಹಾಗೂ ನಿರೂಪಕ ಅಕುಲ್ ಬಾಲಾಜಿ ಚಿತ್ರೀಕರಣದ ಸ್ಥಳಕ್ಕೆ ಬಂದರು. ಅಂದಿನ ಸ್ಪರ್ಧೆಯಂತೆ ಸ್ಪರ್ಧಿಗಳು ಒಂಟೆಗಳಿಗೆ ಹಲ್ಲು ಉಜ್ಜಿಸಿ, ಸ್ನಾನ ಮಾಡಿಸಿ, ಸಿಂಗಾರ ಮಾಡಬೇಕಿತ್ತು. ಜೀವನದಲ್ಲಿ ಹತ್ತಿರದಿಂದ ಒಂಟೆಯನ್ನೇ ನೋಡದ ಅವರು ಒಂಟೆಗಳಿಗೆ ಹಲ್ಲುಜ್ಜಿಸಿ, ಸ್ನಾನ ಮಾಡಿಸಿ, ನಂತರ ಸಿಂಗಾರ ಮಾಡಿದರು.

ಸ್ಪರ್ಧಿಗಳು ಒಂಟೆಗಳನ್ನು ಚುಂಬಿಸುವ ಸ್ಪರ್ಧೆಯನ್ನೂ ಏಪರ್ಡಿಸಲಾಗಿತ್ತು. ಸ್ಪರ್ಧಿಗಳನ್ನು ಕೆಂಪು ಹಾಗೂ ನೀಲಿ ತಂಡಗಳಾಗಿ ವಿಭಾಗಿಸಲಾಗಿದ್ದು, ಈ ತಂಡದಲ್ಲಿ ಯಾರು ಅತಿ ಹೆಚ್ಚು ಸಮಯದವರೆಗೆ ಒಂಟೆಯ ತುಟಿಗಳನ್ನು ಚುಂಬಿಸುತ್ತಾರೋ ಆ ತಂಡ ಜಯಗಳಿಸಿದಂತೆ. ಚುಂಬಿಸಲು ನೀಲಿ ತಂಡಕ್ಕೆ ಸಹಕರಿಸಿದ ಒಂಟೆಗಳು ಕೆಂಪು ತಂಡಕ್ಕೆ ಸಹಕರಿಸಲಿಲ್ಲ. ಇದರಿಂದಾಗಿ ಕೆಂಪು ತಂಡ ಅಂದಿನ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು.

ಚೇಳುಗಳ ಚುಂಬನವೂ...
ಒಂಟೆಗಳೊಂದಿಗಿನ ಸಲ್ಲಾಪಕ್ಕೂ ಮುನ್ನ ನಡೆದ ಸ್ಪರ್ಧೆಯೊಂದರಲ್ಲಿ ಸ್ಪರ್ಧಿಯೊಬ್ಬರಿಗೆ ಮರಳುಗಾಡಿನಲ್ಲಿದ್ದ ಚೇಳುಗಳು ಕಚ್ಚಿದ್ದವು. ಆದರೆ ಆ ಸ್ಪರ್ಧಿ ಚಿತ್ರೀಕರಣದಿಂದ ದೂರವುಳಿಯಲಿಲ್ಲ. ಬದಲಾಗಿ ಯಶಸ್ವಿಯಾಗಿ ತನ್ನ ಕಾರ್ಯವನ್ನು ಮುಗಿಸಿದ್ದರು. ತಕ್ಷಣವೇ ಅವರಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಇದರಿಂದ ಆಗಬಹುದಾಗಿದ್ದ ಅನಾಹುತ ಒಂದು ತಪ್ಪಿದಂತಾಯಿತು ಎಂದು ಅಕುಲ್ ತಿಳಿಸಿದರು.

ರಾಜಸ್ತಾನಕ್ಕೆ ಬರುವ ಮೊದಲು ವಿಮಾನ ಪ್ರಯಾಣದಲ್ಲಿಯೇ ಇಂಡಿಯನ್ ತಂಡಕ್ಕೆ ಗಂಡಾಂತರ ಕಾದಿತ್ತು. ಆದರೆ ಅದೃಷ್ಟ ಚೆನ್ನಾಗಿತ್ತು. ಪಂಜಾಬ್‌ನಿಂದ ರಾಜಸ್ತಾನದ ಜೋದ್‌ಪುರ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನ ತಾಂತ್ರಿಕ ತೊಂದರೆಯಿಂದ ಕೆಳಗೆ ಇಳಿದ 25 ನಿಮಿಷಗಳವರೆಗೆ ನಿಲ್ಲಲೇ ಇಲ್ಲ. ಆಗ ನಿಜಕ್ಕೂ ಸಾವಿನ ಬಾಗಿಲು ತಟ್ಟಿದಂತಾಯಿತು ಎಂದು ಅಕುಲ್‌ ಹೇಳಿದರು.

ಲಡಾಕ್‌ನಲ್ಲಿ ಕೂಡ ‘ಇಂಡಿಯನ್‌’ ತಂಡ ಕಹಿ ಘಟನೆಗಳನ್ನು ಎದುರಿಸಿದೆ. ಲಡಾಕ್‌ನ ಭಯಾನಕ ಚಳಿ ಹಾಗೂ ಅಲ್ಲಿನ ವಾತಾವರಣದಲ್ಲಿನ ಆಮ್ಲಜನಕದ ಕೊರತೆಯಿಂದ ಎಲ್ಲರೂ ಉಸಿರಾಟದ ತೊಂದರೆ ಎದುರಿಸಿದ್ದರಂತೆ. ಸ್ಪರ್ಧಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ತನಕ ಮೊದಲ ಮೂರು ದಿನಗಳ ಕಾಲ ಲೇಹ್‌ನಲ್ಲಿ ನಡೆಯಬೇಕಿದ್ದ ಚಿತ್ರೀಕರಣ ನಿಲ್ಲಿಸಬೇಕಾಯಿತು. ಅಷ್ಟು ಹೊತ್ತಿಗಾಗಲೆ ಸ್ಪರ್ಧಿಗಳು ಧೈರ್ಯ ಕಳೆದುಕೊಂಡಿದ್ದರು.

ಚಿತ್ರೀಕರಣ ಪ್ರಾರಂಭಿಸುವ ಮುನ್ನ ಸ್ಪರ್ಧಿಗಳಲ್ಲಿ ಧೈರ್ಯವನ್ನು ತುಂಬಿ ಅವರನ್ನು ಚಿತ್ರೀಕರಣಕ್ಕೆ ತಯಾರು ಮಾಡುವುದು ತಂಡಕ್ಕೆ ದೊಡ್ಡ ಸವಾಲಾಗಿತ್ತು.

ಲಡಾಕಿನ ಜನರಂತೆ ಸ್ಪರ್ಧಿಗಳು ಅಲ್ಲಿ ಜೀವಿಸಬೇಕಾಯಿತು. ಅದರಲ್ಲೂ ಪ್ರವೇಶ ನಿಷಿದ್ಧವಾಗಿದ್ದ ಅಪಾಯಕಾರಿ ಸ್ಥಳಗಳಲ್ಲಿ ಕೊರೆಯುವ ಚಳಯಲ್ಲಿ ಹಳೇ ಕಾಲದ ಬುಲೆಟ್ ರೈಡಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಜೀವ ಉಳಿದದ್ದೇ ಹೆಚ್ಚು ಎಂದು ಕೆಲವು ಸ್ಪರ್ಧಿಗಳಿಗೆ ಅನ್ನಿಸಿತಂತೆ.

‘ಸ್ಪರ್ಧಿಗಳಿಗೆ ಬುಲೆಟ್ ರೈಡಿಂಗ್ ಮಾಡಿಸುವ ಮೊದಲು ಸ್ಟಂಟ್ ತಂಡದವರು ಹಾಗೂ ನಾನು ಬುಲೆಟ್ ರೈಡ್ ಮಾಡಿದೆವು. ಆಗ ಅಲ್ಲಿ ನಡೆದ ಘಟನೆಗಳಿಂದ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡೆವು. ಇದು ಇಂಡಿಯನ್ ಪಯಣದಲ್ಲಿ ಮೊದಲ ಬಾರಿಗೆ ಸಾವಿನ ದವಡೆಗೆ ಹೋಗಿ ಬಂದ ಅನುಭವ' ಎಂದು ಅಕುಲ್ ವಿವರಿಸಿದರು.

ಲಡಾಕ್‌ನಲ್ಲಿ ಚಳಿಯಿಂದ ನಡುಗಿದ ನಂತರ ಪಯಣ ಪಂಜಾಬ್‌ನತ್ತ ಸಾಗಿತ್ತು. ಅಲ್ಲಿ ಮೈ ಕೊರೆಯುವ ಚಳಿ ಇರಲಿಲ್ಲ. ಆದರೆ ಮೈ ಸುಡುವ ಬಿಸಿಲು! ಬೆಳಗಿನ ಜಾವದಲ್ಲೂ ಬಟ್ಟೆ ಒದ್ದೆಯಾಗುವಷ್ಟು ತಾಪಮಾನ. 15 ದಿನಗಳ ಕಾಲ ಈ ವಾತಾವರಣಕ್ಕೆ ಹೊಂದಿಕೊಂಡು ಇಲ್ಲಿನ ಜನರಂತೆ ಜೀವನ ನಡೆಸುವುದು ದೊಡ್ಡ ಸವಾಲಾಗಿತ್ತು ಎಂದು ನಿರ್ದೇಶಕ ರಾಘವೇಂದ್ರ ಹುಣಸೂರು ತಿಳಿಸಿದರು.

ಲಡಾಕ್‌ನಿಂದ ಪ್ರಾರಂಭವಾದ ‘ಇಂಡಿಯನ್‌’ ಪಯಣ ಪಂಜಾಬ್, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಕೇರಳ ಹಾಗೂ ಕನ್ಯಾಕುಮಾರಿಗೆ ತೆರಳಿ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ. 7 ರಾಜ್ಯಗಳಲ್ಲಿ 14 ವಾರಗಳ ಕಾಲದ ಪಯಣದಲ್ಲಿ ಕನ್ನಡಿಗ ಸ್ಪರ್ಧಿಗಳು ಸಂಪೂರ್ಣ ಭಾರತೀಯರಾಗಿ ಹಿಂತಿರುಗಬೇಕು ಎನ್ನುವುದು ಈ ರಿಯಾಲಿಟಿ ಶೋ ಉದ್ದೇಶ.

ಶಾಪಗ್ರಸ್ತ ಊರಿನಲ್ಲಿ...
ರಾಜಸ್ತಾನದ ಜೈಸಲ್ಮೇರ್‌ನಲ್ಲಿನ ಕುಲ್‌ದರ ಒಂದು ಶಾಪಗ್ರಸ್ಥ ಗ್ರಾಮ. ಅಲ್ಲಿ ಬಹಳ ಹಿಂದೆ ಬ್ರಾಹ್ಮಣರ ಕುಟುಂಬಗಳು ವಾಸವಿದ್ದವು. ಅಲ್ಲಿನ ರಾಜ ಬ್ರಾಹ್ಮಣ ಯುವತಿಯನ್ನು ವಿವಾಹವಾಗುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಗಡುವು ನೀಡಿದ್ದನಂತೆ. ಮದುವೆಗೆ ಒಪ್ಪದ ಗ್ರಾಮಸ್ಥರು ರಾತ್ರೋರಾತ್ರಿ ಗ್ರಾಮವನ್ನೇ ಬಿಟ್ಟು ಹೋದರು. ಹೋಗುವಾಗ ಈ ಜಾಗದಲ್ಲಿ ಯಾರೇ ವಾಸಿಸಲು ಬಂದರೂ ಅವರ ವಿನಾಶ ಖಂಡಿತ ಎಂದು ಶಪಿಸಿದ್ದರಂತೆ.

ಹೀಗಾಗಿ ದಶಕಗಳೇ ಕಳೆದರೂ ಇಲ್ಲಿ ಯಾರೂ ವಾಸಿಸುವುದಿಲ್ಲ. ಇಲ್ಲಿ ಸಂಜೆ 6 ಗಂಟೆ ನಂತರ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂತಹ ಪ್ರದೇಶದಲ್ಲಿ ರಾತ್ರಿ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ‘ಇಂಡಿಯನ್‌’ ತಂಡ ಸ್ಪರ್ಧಿಗಳ ಧೈರ್ಯವನ್ನು ಪರೀಕ್ಷಿಸುವ ಸ್ಪರ್ಧೆಯನ್ನು ನಡೆಸಲಿದೆ.

115 ಮಂದಿ ಬೆಂಗಳೂರಿಗರು
ಇಂಡಿಯನ್ ತಂಡದಲ್ಲಿ ಒಟ್ಟು 200 ಮಂದಿ ಕೆಲಸ ಮಾಡುತ್ತಾರೆ. 115 ಮಂದಿ ಬೆಂಗಳೂರಿನವರು, 80 ಮಂದಿ ಬಾಂಬೆಯಿಂದ ಬಂದಿರುವ ತಾಂತ್ರಿಕ ಸಿಬ್ಬಂದಿ. ಹೋದ ಸ್ಥಳಗಳಲ್ಲಿ ಅಲ್ಲಿನ ಜನರು ತಂಡಕ್ಕೆ ಸೇರಿಕೊಳ್ಳುವುದಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ೧೪ ಸ್ಪರ್ಧಿಗಳಿದ್ದಾರೆ, ಚಿತ್ರೀಕರಣಕ್ಕಾಗಿ 12 ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಎರಡು ಪಾಳಿಯಲ್ಲಿ ಕ್ಯಾಮರಾ ಸಿಬ್ಬಂದಿ ದಿನವಿಡೀ ಕೆಲಸ ಮಾಡುತ್ತದೆ. ಓರ್ವ ವೈದ್ಯ ಹಾಗೂ ಆಂಬುಲೆನ್ಸ್‌ ಚಿತ್ರೀಕರಣದ ಸ್ಥಳದಲ್ಲಿ ಇರುತ್ತದೆ. ಚಿತ್ರೀಕರಣ ನಡೆಯುವ ಸ್ಥಳಕ್ಕೆ ಎರಡು ದಿನ ಮೊದಲೇ ಭೇಟಿ ನೀಡುವ ಅಕುಲ್ ಬಾಲಾಜಿ ಎಲ್ಲ ತಯಾರಿಯನ್ನು ನೋಡಿಕೊಳ್ಳುತ್ತಾರೆ. ಸ್ಥಳೀಯರ ನೆರವಿನಿಂದ ಅಲ್ಲಿ ಮಾಡಬಹುದಾದ ಸ್ಪರ್ಧೆಗಳ ಬಗ್ಗೆ ಯೋಜನೆ ರೂಪಿಸಲಾಗುತ್ತದೆ. ನಂತರ ಸೆಟ್ ಹಾಕಿ ಚಿತ್ರೀಕರಣ ಪ್ರಾರಂಭಿಸಲಾಗುತ್ತದೆ.
- ರಾಘವೇಂದ್ರ ಹುಣಸೂರು, ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT