ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವಿಲ್ಲದ ಊರಲ್ಲಿ ದಿಮ್ಮಿ ವಹಿವಾಟು

Last Updated 19 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಧ್ಯ ಕರ್ನಾಟಕದ, ಬಯಲುಸೀಮೆಯ ವಾಣಿಜ್ಯನಗರಿ ದಾವಣಗೆರೆಯಲ್ಲಿ ಮರದ ದಿಮ್ಮಿ ವ್ಯಾಪಾರ ಸದ್ದಿಲ್ಲದೇ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಕಟ್ಟಡಗಳ ಬಳಕೆಗೆ ಬೇಕಾಗುವ ಮೋಪು, ಮರದ ಸಾಮಗ್ರಿಗಳ ವಹಿವಾಟು ಸಮೃದ್ಧವಾಗಿದೆ.

ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಜಿಲ್ಲೆಯಲ್ಲಿ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಜಿಲ್ಲೆಯಲ್ಲಿರುವುದು ಕೇವಲ ಶೇ. 12 ಮಾತ್ರ. ಅದೂ ಕುರುಚಲು ಗಿಡಗಳು, ರಸ್ತೆ ಬದಿ ಒಂದಿಷ್ಟು ಬೇವು, ಹುಣಸೆ ಮರ ಬಿಟ್ಟರೆ ಗಣನೀಯವಾಗಿ ಏನೂ ಇಲ್ಲ. ಜವಳಿ ಉದ್ದಿಮೆ ದಾವಣಗೆರೆಯ ದಂತಕಥೆ. ಉಳಿದದ್ದು ಇಷ್ಟೇ.. ಅಕ್ಕಿ ಗಿರಣಿ, ಒಂದೆರಡು ಸ್ಟೀಲ್ ಉದ್ಯಮ, ಮಂಡಕ್ಕಿ ಬಟ್ಟಿಗಳು...

ದಾವಣಗೆರೆಯ ಬಂಬೂ ಬಜಾರ್ ಪರಿಸರವನ್ನೊಮ್ಮೆ ಹೊಕ್ಕರೆ ಸಾಕು. ಬೃಹತ್ ರಾಶಿ ಬಿದಿರಿನ ಬೊಂಬು, ಅಡಿಕೆ ಮರಗಳ ರಾಶಿ, ಅಕೇಶಿಯಾ, ನೀಲಗಿರಿ, ಗಾಳಿ ಮರದ ಉದ್ದನೆಯ ಕಂಬಗಳು ಲಕ್ಷ ಸಂಖ್ಯೆಯಲ್ಲಿವೆ. ಹತ್ತಾರು ಎಕರೆ ಪ್ರದೇಶದಲ್ಲಿ ಮರದ ಬೃಹತ್ ದಿಮ್ಮಿಗಳು ಹರಡಿರುವುದನ್ನು ಕಾಣಬಹುದು.

ಇಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಅಷ್ಟೇ ಪ್ರಮಾಣದ ವಹಿವಾಟು ಕೂಡಾ ನಡೆಯುತ್ತಿದೆ. ಅಲ್ಲಿಯೇ ಸ್ವಲ್ಪ ಅಕ್ಕಪಕ್ಕ ಕಣ್ಣು ಹಾಯಿಸಿದರೆ ಸಾಕು ಕಿರ್ರನೆ ಸದ್ದು ಕೇಳಿಸುತ್ತದೆ. ಬೃಹತ್ ದಿಮ್ಮಿ ಸೀಳಾಗುತ್ತಾ ಬೇಕಾದ ಆಕಾರಕ್ಕೆ ರೂಪಾಂತರ ಹೊಂದುತ್ತದೆ. ಅದೇ ರೀತಿ ರೂಪುಗೊಂಡ ಮೋಪು, ಹಲಗೆಗಳು ಪಕ್ಕದ ನಿಲುವಿನಲ್ಲಿ(ರ್ಯಾಕ್) ಗ್ರಾಹಕನನ್ನು ನಿರೀಕ್ಷಿಸುತ್ತಾ ಸಾಲಾಗಿ ಮಲಗಿರುತ್ತವೆ.

ದಾವಣಗೆರೆಯಲ್ಲಿ ಒಟ್ಟು ಸುಮಾರು 30 ಮರ ಕೊಯ್ಯುವ ಮಿಲ್‌ಗಳಿವೆ. 20 ಗ್ರಾಹಕರಿಗೆ ನೇರ ಮರ ಮಾರಾಟ ಮಾಡುವ ಸಂಸ್ಥೆಗಳಾದರೆ (ಇವೂ ಜಾಬ್‌ವರ್ಕ್ ಮಾಡುತ್ತವೆ), ಉಳಿದ 10 ಮಿಲ್‌ಗಳು ತಂದುಕೊಟ್ಟ ಮರವನ್ನು ಕೊಯ್ಯುವ ಕೆಲಸ (ಜಾಬ್‌ವರ್ಕ್) ಮಾತ್ರ ಮಾಡುತ್ತವೆ.ಆಯಾ ಮರ, ಗಾತ್ರ ಆಧರಿಸಿದಂತೆ ಶುಲ್ಕ ಪಡೆಯುತ್ತಾರೆ. ಹೊಸದಾಗಿ ಖರೀದಿಸುವ ಗ್ರಾಹಕನಾದರೆ ನಿರ್ದಿಷ್ಟ ಜಾತಿಯ ಮರಕ್ಕೆ ಪ್ರತಿ ಘನ ಅಡಿಗೆ ಅಂದಿನ ಮಾರುಕಟ್ಟೆ ದರದ ಪ್ರಕಾರ ಮಾರಾಟ ಮಾಡುತ್ತಾರೆ. ಪ್ರತಿ ಮಿಲ್ ವರ್ಷಕ್ಕೆ ಸುಮಾರು 150 ಲೋಡ್‌ನಷ್ಟು ಮರ ತರಿಸುತ್ತದೆ.

ಎಲ್ಲಿಂದ ಬರುತ್ತವೆ?
ಚೆನ್ನೈ, ಟ್ಯುಟಿಕೋರಿನ್, ಮಂಗಳೂರು ಮತ್ತು ಕಾರವಾರದ ಬಂದರಿನಿಂದ ಹರಾಜಿನಲ್ಲಿ ಕೊಂಡು ಮರ ತರಲಾಗುತ್ತದೆ. ಎಲ್ಲವೂ ವಿದೇಶಿ ಮರಗಳು. ತೇಗ, ಹೊನ್ನೆ, ಸಾಗವಾನಿ, ಓಕ್, ಬೀಟೆ ಇತ್ಯಾದಿ. ಕಾರಣವೆಂದರೆ ವಿದೇಶದಿಂದ ಆಮದಾಗುವ ಮರಗಳು ದುಂಡಗಿರುತ್ತವೆ.

 ಕತ್ತರಿಸಿ ಸೂಕ್ತ ಆಕಾರ ನೀಡಲು ಸುಲಭ. ಅರಣ್ಯ ಇಲಾಖೆಯೂ ಪ್ರತಿ ವರ್ಷ ಮರಗಳ ಹರಾಜು ಹಾಕುತ್ತದೆಯಾದರೂ ಅಲ್ಲಿ ನಿರೀಕ್ಷಿತ ಪ್ರಮಾಣ ಮತ್ತು ಗುಣಮಟ್ಟದ ಮರಗಳು ಸಿಗುತ್ತಿಲ್ಲ ಎಂಬುದು ದಾವಣಗೆರೆ ಸಾ ಮಿಲ್ ಅಸೋಸಿಯೇಷನ್ ಅಧ್ಯಕ್ಷ ದಾಮೋದರ ಪಟೇಲ್ ಅವರ ಅಭಿಮತ.
ದರ ಏರಿಕೆ, ಪರ್ಯಾಯ ವಸ್ತುಗಳ (ಪ್ಲೈವುಡ್, ಫೈಬರ್, ಅಲ್ಯೂಮೀನಿಯಂ) ಪೈಪೋಟಿಯಿಂದ ಈ ಉದ್ಯಮವೂ ಸಾಕಷ್ಟು ವೈಪರೀತ್ಯಗಳನ್ನು ಕಾಣುತ್ತಿದೆ ಎನ್ನುತ್ತಾರೆ ಅವರು. ವಿದೇಶಿ ಮರ ಬಳಸಿದರೆ ನಮ್ಮ ದೇಶದ ಕಾಡು ಉಳಿಸಬಹುದು ಎಂಬ ಮನೋಭಾವ ಇಲ್ಲಿನ ಗ್ರಾಹಕರಲ್ಲಿ ಇದೆ.

ಇನ್ನೊಂದು ಮುಖ
ಸ್ಥಳೀಯ ಮೂಲಗಳು ಹೇಳುವ ಪ್ರಕಾರ, ಇಲ್ಲಿ ಹಳ್ಳಿಗಳಿಂದ ಬರುವ ಮರಗಳನ್ನು ಕಡಿಮೆ ದರಕ್ಕೆ ಖರೀದಿಸಿ ಮಾರಾಟ ಮಾಡುವುದೂ ನಡೆಯುತ್ತದೆ. ಇವುಗಳ ಹಿಂದೆ ಸಾಕಷ್ಟು ಮಧ್ಯವರ್ತಿಗಳು, ಏಜೆಂಟರೂ ಇದ್ದಾರೆ. ಬಯಲುಸೀಮೆ ಆಗಿರುವುದರಿಂದ ಅರಣ್ಯ ಇಲಾಖೆಯೂ ಅಷ್ಟೊಂದು ಕಟ್ಟುನಿಟ್ಟಾಗಿಲ್ಲ ಎನ್ನುತ್ತವೆ ಮೂಲಗಳು.

ತಂತ್ರಜ್ಞಾನದ ಕೊರತೆ
ಅಸೋಸಿಯೇಷನ್ ಪದಾಧಿಕಾರಿಗಳು ಹೇಳುವ ಪ್ರಕಾರ, ಮರ ಸೀಳುವ ಯಾಂತ್ರಿಕ ಗರಗಸದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿಲ್ಲ. ಕೆಲವು ವಿದೇಶಗಳಲ್ಲಿ ಇದೆಯಾದರೂ ಭಾರತದ ಮರಗಳಿಗೆ ಅಂಥ ತಂತ್ರಜ್ಞಾನ ಅಳವಡಿಸುವುದು ಕಷ್ಟ. ನಾವಿನ್ನೂ ಅಪ್‌ಡೇಟ್ ಆಗಬೇಕಿದೆ ಎನ್ನುತ್ತಾರೆ.

ಪೂರಕ ಉದ್ದಿಮೆ
ಇದೇ ಪರಿಸರಲ್ಲಿ ಪೀಠೋಪಕರಣ ತಯಾರಿಸುವ, ಬಾಗಿಲು ವಿನ್ಯಾಸಗೊಳಿಸುವ, ಕರಕುಶಲ ಕೆತ್ತನೆ ಕಾರ್ಯ ನಡೆಸುವ ನೂರಾರು ಸಣ್ಣಪುಟ್ಟ ಘಟಕಗಳಿವೆ. ಅಲ್ಲಿನ ಮಂದಿ ಈ ಮಿಲ್‌ಗಳಿಗೆ ಬರುವ ಮೆದು ಜಾತಿಯ ಮರವನ್ನು ಬಯಸುತ್ತಾರೆ. ಎರಡೂ ಉದ್ದಿಮೆಗಳು ಒಂದನ್ನೊಂದು ಬೆಸೆದಿವೆ. ಆದರೆ, ಒಟ್ಟಾರೆ ಈ ಉದ್ಯಮ ಕ್ಷೇತ್ರ ನಡೆಸುವ ವಹಿವಾಟು ಎಷ್ಟು ಕೇಳಿದರೆ ಇಲ್ಲಿನ ಮಂದಿ ಗುಟ್ಟು ಬಿಟ್ಟುಕೊಡುವುದಿಲ್ಲ.

ಸಮಸ್ಯೆಗಳು
ಮಳೆಗಾಲದಲ್ಲಿ ಈ ವ್ಯವಹಾರ ಅಷ್ಟಾಗಿ ನಡೆಯುವುದಿಲ್ಲ. ಇಲ್ಲಿ ಟಿಂಬರ್ ಯಾರ್ಡ್ ಅಥವಾ ಮರದ ಮಿಲ್‌ಗಳಿಗೆ ಪ್ರತ್ಯೇಕ ಸ್ಥಳಾವಕಾಶ ಬೇಕಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಪ್ರತ್ಯೇಕ ವಿವರಣೆ ಬೇಡ. ಕಾರ್ಮಿಕರ ಕೊರತೆಯಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT