ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮರಾಠಿಗರ ಭಾಷಾಭಿಮಾನ ಕನ್ನಡಿಗರಲ್ಲೂ ಬೇಕು'

Last Updated 4 ಜೂನ್ 2013, 5:51 IST
ಅಕ್ಷರ ಗಾತ್ರ

ಮುಂಡರಗಿ: ಮಹಾರಾಷ್ಟ್ರದಲ್ಲಿ ಜರುಗುವ ಮರಾಠಿ ಸಾಹಿತ್ಯ ಸಮ್ಮೇಳನಗಳಿಗೆ ಮರಾಠಿಗರು ಕುಟುಂಬ ಪರಿವಾರದೊಂದಿಗೆ ಬುತ್ತಿ ಕಟ್ಟಿಕೊಂಡು ಸ್ವಂತ ಖರ್ಚಿನಲ್ಲಿ ತೆರಳಿ ಯಶಸ್ವಿಗೊಳಿಸುವರು. ಅಂಥ ವಾತಾವರಣ ಕನ್ನಡಿಗರಲ್ಲಿಯೂ ಸೃಷ್ಟಿಯಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ಪಾಟೀಲ ಹೇಳಿದರು.

ಗಾಂಧೀ ಭವನದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ತ್ರೀ ಸ್ವಸಹಾಯ ಹಾಗೂ ಮಹಿಳಾ ಗುಂಪುಗಳ ಸಭೆಯಲ್ಲಿ ಅವರು ಮಾತನಾಡಿದರು.

`ನೆರೆಯ ರಾಜ್ಯಗಳ ಜನತೆಯಲ್ಲಿ ಅಡಗಿರುವ ಭಾಷಾ ಮೋಹವನ್ನು ನಾವೆಲ್ಲ ಕಲಿತುಕೊಳ್ಳಬೇಕು. ಕೇವಲ ಭಾಷಣ ಮಾಡುವುದರಿಂದ ಯಾವ ಭಾಷೆಯೂ ಉದ್ಧಾರವಾಗುವುದಿಲ್ಲ. ರಾಜ್ಯದಲ್ಲಿ ಸದಾ ಒಂದಿಲ್ಲೊಂದು ಹಂತದಲ್ಲಿ ಕನ್ನಡ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿದ್ದು, ಕೇವಲ ಘೋಷಣೆಗಳಲ್ಲಿ ಮುಕ್ತಾಯವಾಗುತ್ತಿವೆ. ಅದಕ್ಕೆ ಬದಲಾಗಿ ಜನರ ಮನಸ್ಸಿನಲ್ಲಿ ನೆಲೆಗೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ತಿಳಿಸಿದರು.

ಐದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮುಂಡರಗಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ತಾಲ್ಲೂಕು ಹಾಗೂ ಜಿಲ್ಲೆಯ ಮಹಿಳೆಯರು ಸಾಹಿತ್ಯ ಸಮ್ಮೇಳನವು ಮನೆಯ ಸಮಾರಂಭವೆಂದು ಭಾವಿಸಿ ಪಾಲ್ಗೊಳ್ಳಬೇಕು. ವಿವಿಧ ಕಾರ್ಯಕ್ರಮಗಳಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಪ್ರತಿಭಾ ಹೊಸಮನಿ ಮನವಿ ಮಾಡಿದರು.

ಉಪನ್ಯಾಸಕ ಆರ್.ಎಲ್. ಪೊಲೀಸ್‌ಪಾಟೀಲ, ನಿವೃತ್ತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ, ಸಿಡಿಪಿಒ ಶಾಂತಾದೇವಿ ವಾರದ, ಡಿ.ಜಿ. ಹಿರೇಮಠ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಇನಾಮತಿ ಹಾಗೂ ಬಸವರಾಜ ನವಲಗುಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT