ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಮಿ ಕಥಕ್‌ ಪ್ರಯೋಗಶಾಲೆ

Last Updated 5 ಜನವರಿ 2014, 20:34 IST
ಅಕ್ಷರ ಗಾತ್ರ

ಬಾಲ್ಯದಿಂದಲೂ ನೃತ್ಯದ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿರುವ ಮರಾಮಿ ಮೇಧಿ ಮೂಲತಃ ಅಸ್ಸಾಂನವರು. ಅಪ್ಪ–ಅಮ್ಮನ ಬೆಂಬಲದಿಂದ ಚಿಕ್ಕವರಿರುವಾಗಲೇ ವಿಭಿನ್ನ ಬಗೆಯ ನೃತ್ಯ ಕಲಿತಿದ್ದರೂ ಅವರಿಗೆ ಕಥಕ್‌ ನೃತ್ಯದ ಪರಿಚಯವಾಗಿದ್ದು ಸಿನಿಮಾ ಮೂಲಕ. ಸಿನಿಮಾಗಳಲ್ಲಿ ನಾಯಕಿಯರು ಕಥಕ್ ಮಾಡುತ್ತಿದ್ದುದನ್ನು ಕಂಡು ಮರಾಮಿ ತಾವು ಈ ನೃತ್ಯದಲ್ಲಿ ಪಳಗಬೇಕು ಎಂದುಕೊಂಡರಂತೆ. ಆ ನಿಟ್ಟಿನಲ್ಲಿ ತಯಾರಾದ ಅವರು ಇಂದು ಕಥಕ್‌ನಲ್ಲಿಯೇ ತಮ್ಮ ಅಸ್ಮಿತೆಯನ್ನು ಕಂಡುಕೊಂಡಿದ್ದಾರೆ. ಇವರ ಮಗಳು ಮೇಘ ರಂಜನಿ ಕೂಡ ತಾಯಿಯ ಹಾದಿಯನ್ನೇ ಹಿಡಿದಿದ್ದಾರೆ.
ಇತ್ತೀಚೆಗಷ್ಟೇ ನಗರದಲ್ಲಿ ಅಮ್ಮ– ಮಗಳು ಕಥಕ್‌ ನೃತ್ಯದ ರಸದೌತಣ ಉಣಬಡಿಸಿದರು. ಈ ಸಂದರ್ಭದಲ್ಲಿ ಮರಾಮಿ ‘ಮೆಟ್ರೊ’ ಜತೆ ಮಾತನಾಡಿದರು.

ಕಥಕ್‌ನಲ್ಲಿ ಒಲವು ಮೂಡಿದ್ದು ಯಾವಾಗ?
ಬಾಲ್ಯದಿಂದಲೇ ನನಗೆ ನೃತ್ಯದ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ನೃತ್ಯದಲ್ಲಿ ತೊಡಗಿಕೊಂಡರೆ ನನಗೆ ಯಾವುದರ ಅರಿವೂ ಇರುತ್ತಿರಲಿಲ್ಲ. ಸಿನಿಮಾಗಳಲ್ಲಿ ನಟಿಯರು ಕಥಕ್‌ ಮಾಡುವುದನ್ನು ನೋಡಿ ಪುಳಕಿತಳಾಗುತ್ತಿದ್ದೆ. ಅದೇ ಸ್ಫೂರ್ತಿಯಿಂದ ಕಥಕ್‌ ಕಲಿಯಲು ಶುರುಮಾಡಿದ್ದೆ. ಅದೇ ಇಂದು ನನ್ನ ಬದುಕಿಗೆ ದಾರಿಯಾಯಿತು.

ನಿಮ್ಮ ನೃತ್ಯಾಭ್ಯಾಸದ ಪ್ರೀತಿಗೆ  ಮನೆಯವರ ಪ್ರತಿಕ್ರಿಯೆ ಹೇಗಿತ್ತು?
ನಾನು ಹಾಕುತ್ತಿದ್ದ ಹೆಜ್ಜೆಗೆ, ನೃತ್ಯದಲ್ಲಿ ನಾನು ತೋರಿಸುತ್ತಿದ್ದ ವಿವಿಧ ಹಾವಭಾವಕ್ಕೆ ಅಮ್ಮ–ಅಪ್ಪ ಇಬ್ಬರೂ ಖುಷಿಪಡುತ್ತಿದ್ದರು. ಇದರಲ್ಲಿಯೇ ಮುಂದುವರಿಯಲು ಪ್ರೋತ್ಸಾಹ ನೀಡಿದರು. ಮದುವೆಯ ನಂತರ ಗಂಡನ ಬೆಂಬಲ ಧಾರಾಳವಾಗಿ ಸಿಕ್ಕಿತು. ಅವರು ಕೂಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ವೇದಿಕೆಯ ಮೇಲೆ ನಾನು ಹೆಜ್ಜೆ ಹಾಕಿದರೆ ಅದಕ್ಕೆ ದನಿಯಾಗುತ್ತಿದ್ದವರು ನನ್ನ ಗಂಡ. ನನ್ನ ಕುಣಿತ, ಅವರ ಸಂಗೀತ ಸಂಯೋಜನೆಯಿಂದ ವೇದಿಕೆ ರಂಗುಕಟ್ಟುತ್ತಿತ್ತು.

ನೃತ್ಯದೆಡೆಗಿನ ನಿಮ್ಮ ಪ್ರೀತಿಗೆ ದಾರಿ ತೋರಿಸಿದ ಗುರು ಯಾರು?
ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಧನೆ ಸುಲಭ. ಅಸ್ಸಾಂನ ಚಾರು ಬೋರ್ದೋಲಿ, ನಂತರ ಲಖನೌದ ಸುರೇಂದ್ರ ಸೈಕಿಯಾ, ಈಗ ಪಂಡಿತ್‌ ಬಿರ್ಜು ಮಹಾರಾಜ್ ಅವರ ಬಳಿ ಕಥಕ್‌ ಕಲಿಯುತ್ತಿದ್ದೇನೆ.

ನಿಮ್ಮ ಪಾಲಿಗೆ ಕಥಕ್‌ ಎಂದರೆ ಏನು?
ಕಥಕ್‌ ಎಂದರೆ ನನಗೆ ಜೀವನ. ಸ್ವಲ್ಪ ದಿನ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲೆ. ಆದರೆ ಕಥಕ್‌ ಇಲ್ಲದ ಬದುಕು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ನೃತ್ಯ ಮಾಡುವಾಗ ನಿಮ್ಮ ಮನಸ್ಥಿತಿ ಹೇಗಿರುತ್ತದೆ?
ನೃತ್ಯಾಭ್ಯಾಸದಿಂದ ದೇಹ ಫಿಟ್‌ ಆಗುತ್ತದೆ. ಜತೆಗೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

ನಿಮ್ಮ ಯಶಸ್ಸಿನ ಗುಟ್ಟೇನು?
ಯಶಸ್ವಿ ನೃತ್ಯಗಾರ್ತಿ ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ. ಯಶಸ್ಸು ಎಂದರೆ ಎಲ್ಲವನ್ನೂ ದಕ್ಕಿಸಿಕೊಂಡಿದ್ದೇವೆ ಎಂದರ್ಥ. ಆದರೆ ನೃತ್ಯ ನಿಜಕ್ಕೂ ಮುಗಿಯದ ಕಲಿಕೆ ಇದ್ದಂತೆ. ಸದಾ ಸಾಧನೆ ಮಾಡುತ್ತಲೇ ಇರಬೇಕೆಂಬುದು ನನ್ನ ಬಯಕೆ.

ಗುರುವಾಗಿ ನಿಮ್ಮ ವಿಶೇಷತೆ ಏನು?
ನನ್ನ ಗುರುಗಳು ಏನು ಕಲಿಸಿದ್ದಾರೋ ಅದನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತೇನಷ್ಟೆ. ಇದರಲ್ಲಿ ವಿಶೇಷವೇನೂ ಇಲ್ಲ. 

ನೃತ್ಯಗಾರರಿಗೆ ಇರಬೇಕಾದ ಮುಖ್ಯ ಗುಣ ಯಾವುದು?
ದೈಹಿಕವಾಗಿ, ಮಾನಸಿಕವಾಗಿ ಅವರು ಫಿಟ್‌ ಆಗಿರಬೇಕು. ನೆನಪಿನ ಶಕ್ತಿಯ ಜತೆಗೆ ನೃತ್ಯದ ಮೇಲೆ ಪ್ರೀತಿ ಇರಬೇಕು. ಕಲಿಯುವ ಆಸಕ್ತಿ ಇರಬೇಕು.

ನೃತ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಬದುಕಿನ ಖುಷಿಯ ಕ್ಷಣ ಯಾವುದು?
ಪ್ರದರ್ಶನವೊಂದರಲ್ಲಿ ವೇದಿಕೆಯ ಮೇಲೆ ನನ್ನ ಕುಟುಂಬವೇ ಇತ್ತು. ನನ್ನ ಮತ್ತು ಮಗಳ ಜುಗಲ್‌ ಬಂದಿ, ಗಂಡನ ಸಂಗೀತವಿತ್ತು. ಮಗ ಪಿಯಾನೋ ನುಡಿಸುತ್ತಿದ್ದ. ನಿಜಕ್ಕೂ ನನಗೆ ಆ ಕ್ಷಣ ತುಂಬಾ ಖುಷಿ ನೀಡಿತ್ತು. ಮನೆಯವರೆಲ್ಲಾ ಜತೆಗಿದ್ದಾಗ ನನಗೆ ನೃತ್ಯದಲ್ಲಿ ಏಕಾಗ್ರತೆ ಹೆಚ್ಚುತ್ತದೆ.

ಶಿವ ಮತ್ತು ರಾಮನ ಹಾಡಿಗಿಂತ ಶ್ರೀಕೃಷ್ಣನಿಗೆ ಸಂಬಂಧಿಸಿದ ಹಾಡುಗಳನ್ನೇ ನೀವು ನೃತ್ಯಕ್ಕೆ ಹೆಚ್ಚು ಅಳವಡಿಸಿರುವುದು ಯಾಕೆ?
ನನ್ನ ಪ್ರಕಾರ ಕಥಕ್‌ ನೃತ್ಯದ ಇನ್ನೊಂದು  ಹೆಸರು ನಟವರಿ ನೃತ್ಯ. ನಟವರ ಎಂಬುದು ಕೃಷ್ಣನ ಹೆಸರು. ನೃತ್ಯದ ಅನೇಕ ಭಂಗಿಗಳು ಕೃಷ್ಣನ ನೃತ್ಯದಿಂದಲೇ ಹುಟ್ಟಿದಂಥವು.

ಠುಮ್ರಿ ಸಂಗೀತ ಕಥಕ್‌ ನೃತ್ಯದಲ್ಲಿ ಯಾವಾಗ ಸೇರಿತು?
ಮೊಘಲ್ ಚಕ್ರವರ್ತಿಗಳನ್ನು ಸಂತೋಷ ಪಡಿಸುವುದಕ್ಕಾಗಿ ಆಸ್ಥಾನದಲ್ಲಿ ಕಥಕ್‌ ನೃತ್ಯವನ್ನು ಪರಿಚಯಿಸಲಾಯಿತು. ಅದೇ ಸಂದರ್ಭದಲ್ಲಿ ಕಥಕ್‌ ನೃತ್ಯವನ್ನು ಇನ್ನಷ್ಟು ಶ್ರೀಮಂತ ಹಾಗೂ ಮನರಂಜನಿಯ ಮಾಧ್ಯಮವನ್ನಾಗಿ ಮಾಡಲು ಠುಮ್ರಿಯನ್ನು ಸೇರಿಸಿದರು ಎಂದು ನಾನು ಭಾವಿಸಿದ್ದೇನೆ.

ಯುವ ನೃತ್ಯಪಟುವಿಗೆ ನಿಮ್ಮ ಸಲಹೆ ಏನು?
ಶಾಸ್ತ್ರೀಯ ನೃತ್ಯ ದೇವರನ್ನು ತಲುಪುವ ಮಾಧ್ಯಮ. ತಾಳ್ಮೆ ಮತ್ತು ಕಲಿಯುವ ಮನಸ್ಸು ಇರಬೇಕು. ದಯವಿಟ್ಟು ನಮ್ಮ ಸಂಸ್ಕೃತಿಯ ಕುರಿತು ಚೆನ್ನಾಗಿ ತಿಳಿದುಕೊಳ್ಳಿ ಮತ್ತು ಅದನ್ನು ಇನ್ನೊಬ್ಬರಿಗೂ ಕಲಿಸಿಕೊಡಿ.

ನಿಮ್ಮ ಮುಂದಿನ ಯೋಜನೆ ಏನು?
ನೃತ್ಯ ಎಂದಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಕಥಕ್‌ ಹಾಗೂ ಅಸ್ಸಾಂನ ಸತ್ರಿಯಾ ನೃತ್ಯವನ್ನು ಸೇರಿಸಿ ಒಂದು ಪ್ರಯೋಗ ಮಾಡಿದ್ದೇನೆ. ಮುಂದಿನ ಯೋಜನೆ ಪ್ರಕಾರ ಅಸ್ಸಾಂನ ಜನಪದ ನೃತ್ಯ ಬಿಹುವಿನೊಂದಿಗೆ ಕಥಕ್‌ ಪ್ರಕಾರವನ್ನು ಜೋಡಿಸಿ ಕಾರ್ಯಕ್ರಮ ಹೆಣೆಯುತ್ತಿದ್ದೇನೆ.

ಬೆಂಗಳೂರಿನಲ್ಲಿ ನಿಮ್ಮ ಅನುಭವ ಹೇಗಿದೆ?
ತುಂಬಾ ಖುಷಿಯಾಯಿತು. ಬೆಂಗಳೂರು ದಕ್ಷಿಣ ಭಾರತದಲ್ಲಿರುವುದರಿಂದ  ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ  ನೃತ್ಯಗಾರರು ಮಾತ್ರ ಇದ್ದಾರೆ ಎಂದು ತಪ್ಪಾಗಿ ಭಾವಿಸಿದ್ದೆ. ಆದರೆ ಕಥಕ್‌ನಲ್ಲೂ ಸಾಧನೆ ಮಾಡಿದವರು ಇಲ್ಲಿದ್ದಾರೆ. ಕೆಲವರನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು.

ಅಪ್ಪ ಅಮ್ಮನ ಹಾದಿಯಲ್ಲಿ ಮಕ್ಕಳು ಆಸಕ್ತಿ ತೋರಿಸದೇ ಇರುವ ಸಾಧ್ಯತೆಯೇ ಹೆಚ್ಚು. ನಿಮ್ಮ ಮತ್ತು ಮಗಳ ಸಾಧನೆ ಹೇಗೆ ಸಾಧ್ಯವಾಯಿತು?
ಕಲಾವಿದರಾದ ತಂದೆ–ತಾಯಿಗೆ ತಮ್ಮ ಮಕ್ಕಳು ಕಲೆಯನ್ನು ಒಗ್ಗಿಸಿಕೊಳ್ಳಲಿ ಎಂಬ ಆಸೆ ಇರುತ್ತದೆ. ಆದರೆ ಅವರನ್ನು ಒತ್ತಾಯ ಮಾಡುವುದು ಸರಿಯಲ್ಲ. ನನ್ನ ಮಗಳು ಚಿಕ್ಕವಳಿರುವಾಗಲೇ ನೃತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದಳು. ಎರಡೂವರೆ ವರ್ಷಕ್ಕೇ ಅವಳು ನೃತ್ಯ ಕಲಿಯಲು ಶುರುಮಾಡಿದಳು. ಐದನೇ ವರ್ಷಕ್ಕೆ ಕಾರ್ಯಕ್ರಮ ನೀಡಲು ಆರಂಭಿಸಿದಳು. ನಾನು ಅವಳಿಗೆ ಕಲಿಸಲಿಲ್ಲ. ಅವಳೇ ಕಲಿಯಲು ಪ್ರಯತ್ನ ಮಾಡಿದಳು. ಅವಳು ಬೆಳೆದಂತೆ ನಾನು ಕಲಿಸಲು ಪ್ರಾರಂಭಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT