ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿ ಟೈಗರ್‌ನ ಇಮೇಜಿನ ಸುತ್ತ

ಚಿತ್ರ: ಗಜೇಂದ್ರ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕರು: ಎಲ್.ಎನ್. ಗೌಡ, ಮೇಕಪ್ ಬಸವರಾಜು, ನಿರ್ದೇಶಕ: ಜೆ.ಜಿ. ಕೃಷ್ಣ, ತಾರಾಗಣ: ವಿನೋದ್ ಪ್ರಭಾಕರ್, ಡೈಸಿ ಷಾ, ಸ್ವಾತಿ, ಜಿ.ಕೆ. ಗೋವಿಂದರಾವ್, ಎಂ.ಎನ್. ಲಕ್ಷ್ಮೀದೇವಿ, ಶರತ್ ಲೋಹಿತಾಶ್ವ, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಗುರುರಾಜ್ ಹೊಸಕೋಟೆ ಇತರರು.

ನಟ ಅಂಬರೀಷರಿಗೆ ಸಾಕಷ್ಟು ಹೆಸರು ತಂದದ್ದು 1985ರಲ್ಲಿ ಬಿಡುಗಡೆಯಾದ `ಗಜೇಂದ್ರ'. ಅದೇ ಹೆಸರನ್ನು ಹೊತ್ತ ಮತ್ತೊಂದು ಚಿತ್ರ ಈ ವಾರ ತೆರೆಕಂಡಿದೆ. ಎರಡರ ಕತೆ ಭಿನ್ನವಾಗಿದ್ದರೂ ಹೊಸ `ಗಜೇಂದ್ರ' ತನ್ನ ಪೂರ್ವಿಕನ ಹಾದಿಯನ್ನು ಮರೆಯುವುದಿಲ್ಲ. ಇಬ್ಬರೂ ನಾಯಕರ ಆಶಯಗಳಲ್ಲಿ ಸಾಮ್ಯತೆ ಉಂಟು. ಅವರು ಸಮಾಜಮುಖಿಗಳು, ಪರೋಪಕಾರಿಗಳು.

ನಟ ವಿನೋದ್ ಪ್ರಭಾಕರ್ ಅವರನ್ನು ವಿಜೃಂಭಿಸಲೆಂಬಂತೆ ಕತೆಯ ಹೆಣಿಗೆ ಇದೆ. ಹೀಗಾಗಿ ಹೊಸ ಪ್ರಯೋಗದತ್ತ ಅದೇನೂ ಮನಸ್ಸು ಮಾಡುವುದಿಲ್ಲ. ರಾಜಕೀಯ ವ್ಯವಸ್ಥೆ, ಸಾಮಾಜಿಕ ಕಾಳಜಿ, ಪ್ರೀತಿ- ಪ್ರೇಮ, ಕೌಟುಂಬಿಕ ಬಾಂಧವ್ಯದ ಸುತ್ತ ಅದು ಸುತ್ತುತ್ತದೆ. ಆದರೆ ಚಿತ್ರವಾಗುವ ಕ್ರಿಯೆಯಲ್ಲಿ `ಗಜೇಂದ್ರ' ಯಶಸ್ವಿಯಾಗುತ್ತಾನೆ. ವಿನೋದ್ ಅವರ ಹಿಂದಿನ ಚಿತ್ರಗಳಿಗಿಂತಲೂ ಇದು ಸಾಕಷ್ಟು ಸುಧಾರಿತ. ರಸಭರಿತ.

ಅಭಿನಯದಲ್ಲಿ ಮಾರ್ಪಾಡು ಆಗದಿದ್ದರೂ ವಿನೋದ್‌ರನ್ನು ಚಿತ್ರಿಸಿರುವ ರೀತಿ ನೋಡುಗರಿಗೆ ಇಷ್ಟವಾಗಬಲ್ಲದು. ಸಾಹಸ ಹಾಗೂ ನೃತ್ಯಕ್ಕೆ ಅವರ ಗಮನ ಹೆಚ್ಚು ಕೇಂದ್ರೀಕೃತ. ಟೈಗರ್ ಪ್ರಭಾಕರ್‌ರನ್ನು ನೆನಪಿಸುವ ದೃಶ್ಯಗಳು ಮನರಂಜನೆಗೆ ಪೂರಕ. ಅವರಂತೆಯೇ ವಿನೋದ್ ಕೂಡ ಗರ್ಜಿಸುತ್ತಾರೆ. ಆ ಇಮೇಜ್‌ನೊಳಗೆ ಅವಿತುಕೊಳ್ಳುವುದರಲ್ಲಿ ಅವರಿಗೆ ಹೆಚ್ಚು ಸುಖ ಇದ್ದಂತಿದೆ. ಈ ಬಾರಿ ಪ್ರಭಾಕರ್ ಅವರೊಂದಿಗೆ ಅಂಬರೀಷ್ ಕೂಡ ಜೊತೆಯಾಗಿದ್ದಾರೆ. ಅದಕ್ಕೆ ಸಾಕ್ಷಿಯಾಗಿ 85ರ `ಗಜೇಂದ್ರ'ದ ಹಾಡು ಇಣುಕಿ ಹೋಗಿದೆ. ಆದರೆ ಅಂಬರೀಷರನ್ನೇ ನೇರವಾಗಿ ನಟನೆಗೆ ಆಹ್ವಾನಿಸಬಹುದಿತ್ತಲ್ಲ ಎಂಬ ಪ್ರಶ್ನೆ, ಉತ್ತರ ಕಳೆದುಕೊಂಡಿದೆ.

ಚಿತ್ರದಲ್ಲಿ ಹೆಚ್ಚು ಲವಲವಿಕೆಯಿಂದ ಗಮನ ಸೆಳೆಯುವುದು ನಟಿ ಡೈಸಿ ಷಾ. ಖುಷಿಯಾದಾಗ ತಲೆ ಕುಣಿಸುವ ಮುಗ್ಧ ಹುಡುಗಿಯಾಗಿ ಅವರ ಅಭಿನಯ ಇಷ್ಟವಾಗುತ್ತದೆ. ಅಕ್ಷರ ಕಲಿಸುವ ಟೀಚರಮ್ಮನಾಗಿ ಸ್ವಾತಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯ ಉಣಬಡಿಸುವುದರಲ್ಲಿ ಇಬ್ಬರೂ ನಾ ಮುಂದು ತಾ ಮುಂದು. ಇವರ ಜೊತೆಗೆ ಐಟಂ ಗೀತೆಯೂ ಸ್ಪರ್ಧೆಗಿಳಿಯುವುದು ಮತ್ತೊಂದು ವಿಶೇಷ. ಎಂ.ಎನ್. ಲಕ್ಷ್ಮೀದೇವಿ ಹೊಸ ಪೋಷಾಕಿನಲ್ಲಿ ನಲಿಯುತ್ತಾರೆ. ಅಜ್ಜಿಯಾದರೂ ಟೀಷರ್ಟ್ ತೊಟ್ಟ, ಬಾಬ್‌ಕಟ್ ಮಾಡಿದ, ಇಂಗ್ಲಿಷ್ ಮೆಲ್ಲುವ ಅವರ ಪಾತ್ರ ರುಚಿಕರ.

ಚಿತ್ರ ನೋಡುತ್ತಿರುವಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ನೋಡುಗರ ಕಣ್ಣಮುಂದೆ ಹಾದು ಹೋಗುವುದುಂಟು. ಆದರೆ ಎಲ್ಲೂ ಅವು ಅತಿರೇಕಕ್ಕೆ ಹೋಗಿಲ್ಲ ಎಂಬುದನ್ನು ಗಮನಿಸಬೇಕು. ಕೆಲವು ವಿಷಯಗಳನ್ನು ಮುಟ್ಟಿಯೂ ಮುಟ್ಟದಂತೆ ಎಚ್ಚರ ವಹಿಸಲಾಗಿದೆ. ಮೇಷ್ಟ್ರಾಗಿ ಜಿ.ಕೆ. ಗೋವಿಂದರಾವ್, ಋಣಾತ್ಮಕ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ಶೋಭರಾಜ್ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಹೊನ್ನವಳ್ಳಿ ಕೃಷ್ಣ, ಗುರುರಾಜ್ ಹೊಸಕೋಟೆ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಕತೆ, ಚಿತ್ರಕತೆ, ನಿರ್ದೇಶನದ ಜೊತೆಗೆ ಜೆ.ಜಿ. ಕೃಷ್ಣ ಕ್ಯಾಮೆರಾ ಆಡಿಸಿದ್ದಾರೆ. ಅವರ ಛಾಯಾಗ್ರಹಣದಲ್ಲಿ ಹಾಡುಗಳು ಸೊಗಸಾಗಿ ಮೈದಳೆದಿವೆ. ರಾಜೇಶ್ ರಾಮನಾಥ್ ಸಂಗೀತದಲ್ಲಿ ಹೊಸತನ ಹುಡುಕಲು ಸಾಧ್ಯವಿಲ್ಲ. ಆದರೆ ಇಂಪಿಗೆ ಕೊರತೆ ಇಲ್ಲ. ಎಂದಿನಂತೆ ಹೊಡೆದಾಟದ ದೃಶ್ಯಗಳಲ್ಲಿ ಥ್ರಿಲ್ಲರ್ ಮಂಜು `ಸಾಹಸ' ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT