ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿ ಮೊಮ್ಮಗನನ್ನು ಭೇಟಿಯಾದ ರಾಣಿ

Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ರಾಜಮನೆತನದ ಹೊಸ ಕುಡಿ, ತಮ್ಮ ಮರಿ ಮೊಮ್ಮಗನನ್ನು ಕೆನ್ಸಿಂಗ್ಟನ್ ಅರಮನೆಯಲ್ಲಿ ಬುಧವಾರ ಭೇಟಿ ಮಾಡಿದರು.

ಗಾಢ ಹಸಿರು ಬಣ್ಣದ ಬೆಂಟ್ಲಿ ಕಾರಿನಲ್ಲಿ ತಮ್ಮ ಬಕಿಂಗ್‌ಹ್ಯಾಮ್ ಅರಮನೆಯಿಂದ ಸೆಂಟ್ರಲ್ ಲಂಡನ್‌ನಲ್ಲಿರುವ ರಾಜಕುಮಾರ ವಿಲಿಯಮ್ಸ ಮತ್ತು ಕೇಟ್ ಮಿಡ್ಲ್‌ಟನ್ ಅವರು ವಾಸವಿರುವ ಅರಮನೆಗೆ ರಾಣಿ ತೆರಳಿ ಮರಿ ಮೊಮ್ಮಗನನ್ನು ಕಂಡರು.

ಸುಮಾರು 34 ನಿಮಿಷಗಳ ಕಾಲ ಅವರು ಮಗುವಿನೊಂದಿಗೆ ಕಾಲ ಕಳೆದರು. ರಾಣಿ ಎಲಿಜಬೆತ್ ಅವರು ಬೇಸಿಗೆ ವಿಶ್ರಾಂತಿಗಾಗಿ ಶುಕ್ರವಾರ ಸ್ಕಾಂಟ್ಲೆಂಡ್‌ನ ಬಲ್‌ಮೊರಾಲ್‌ಗೆ ತೆರಳಲಿದ್ದು, ಅದಕ್ಕೂ ಮುನ್ನ ಮರಿ ಮೊಮ್ಮಗನನ್ನು ಭೇಟಿ ಮಾಡಿದರು.

`ಗಂಡು ಮಗು ಜನಿಸಿರುವುದು ನನಗೆ ರೋಮಾಂಚನ ತಂದಿದೆ' ಎಂದು ಮಂಗಳವಾರ ಸಂಜೆ ಏರ್ಪಡಿಸಿದ್ದ ಔತಣಕೂಟದಲ್ಲಿ ರಾಣಿ ಹೇಳಿರುವುದಾಗಿ ಅರಮನೆಯ ಹೇಳಿಕೆ ತಿಳಿಸಿದೆ.

ವೆಬ್‌ಸೈಟ್‌ಗಳಿಗೆ ಸುದ್ದಿಯ ಸುಗ್ಗಿ:  ಕೇಟ್ ಮಿಡ್ಲ್‌ಟನ್ ಗಂಡು ಮಗುವಿಗೆ ಜನ್ಮ ನೀಡಿರುವ ಸುದ್ದಿ ಬ್ರಿಟನ್‌ನ ದಿನಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಿಗೆ ಇದುವರೆಗೆ ಈ ವರ್ಷದ ಭಾರಿ ಮಹತ್ವದ ಸುದ್ದಿಯಾಗಿದೆ.

ಸುದ್ದಿ ಬಹಿರಂಗಗೊಳಿಸಿದ್ದು ಭಾರತದ ಛಾಯಾಗ್ರಾಹಕ: ಕೇಟ್ ಮಿಡ್ಲ್‌ಟನ್ ಅವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನು ಮೊದಲು ಬಹಿರಂಗ ಮಾಡಿದ್ದು ಭಾರತ ಮೂಲದ ಛಾಯಾಗ್ರಾಹಕ ಜೇಸಲ್ ಪರ್‌ಷೋತ್ತಮ್.

ಸೇಂಟ್ ಮೇರಿ ಆಸ್ಪತ್ರೆಯ ಮುಂಭಾಗದಲ್ಲಿ ಸೇರಿದ್ದ ಛಾಯಾಗ್ರಾಹಕರ ತಂಡದಲ್ಲಿ 24 ವರ್ಷದ ಜೇಸಲ್ ಕೂಡ ಇದ್ದರು. ವಿಲಿಯಮ್ಸ ದಂಪತಿ ಸೋಮವಾರ ಬೆಳಿಗ್ಗೆ ಹಿಂಬಾಗಿಲಿನ ಮೂಲಕ ಆಸ್ಪತ್ರೆಯ ಖಾಸಗಿ ಲಿಂಡೊ ವಿಂಗ್ ಘಟಕಕ್ಕೆ ತೆರಳಿತ್ತಿದ್ದುದನ್ನು ಮೊದಲು ಜೇಸಲ್ ನೋಡಿದ್ದರು.

ಅದಾದ ಕೆಲವೇ ಕ್ಷಣಗಳಲ್ಲಿ ಜೇಸಲ್ ತನ್ನ ಟ್ವಿಟರ್ ಪುಟದಲ್ಲಿ `ಕೇಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಬರೆಯುವ ಮೂಲಕ ಸುದ್ದಿಯನ್ನು ಬಹಿರಂಗಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT