ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿದ ಭೀತಿ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬಾಸ್ಟನ್ ಮ್ಯಾರಥಾನ್ ಮುಕ್ತಾಯ ಹಂತದಲ್ಲಿದ್ದಾಗ ಎರಡು ಸಶಕ್ತ ಬಾಂಬ್‌ಗಳು ಸ್ಫೋಟಿಸಿದ ಪರಿಣಾಮವಾಗಿ ಮೂವರು ಸತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 117 ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ಅಮೆರಿಕದ ಮೆಸಾಚ್ಯುಸೆಟ್ಸ್ ರಾಜ್ಯದ ರಾಜಧಾನಿ ಬಾಸ್ಟನ್ ನಗರದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ ಮ್ಯಾರಥಾನ್‌ನಲ್ಲಿ ಈ ಸ್ಫೋಟಗಳು ಸಂಭವಿಸಿರುವುದು ವಿಷಾದನೀಯ. ಸುಮಾರು 26 ಮೈಲಿ ದೂರವನ್ನು ಕ್ರಮಿಸುವಂತಹ ಈ ಪ್ರತಿಷ್ಠಿತ ಮ್ಯಾರಥಾನ್‌ನಲ್ಲಿ ವಿಶ್ವದಾದ್ಯಂತ ಹಲವು ದೇಶಗಳ ಸುಮಾರು 27,000 ಮಂದಿ ಈ ಬಾರಿ ಪಾಲ್ಗೊಂಡಿದ್ದರು. ಈ ಓಟದಲ್ಲಿ ಪಾಲ್ಗೊಳ್ಳುವವರನ್ನು ಹುರಿದುಂಬಿಸುವ ಹುರುಪು, ಉತ್ಸಾಹ ರಸ್ತೆ ಬದಿಗಳಲ್ಲಿ ನಿಂತವರಲ್ಲಿರುತ್ತದೆ.

ನಿಜಕ್ಕೂ ಮ್ಯಾರಥಾನ್ ಎನ್ನುವುದು ಜನಸಮುದಾಯವನ್ನು ಒಗ್ಗೂಡಿಸುವಂತಹ ಕ್ರೀಡಾ ಸಂಭ್ರಮ. ಆದರೆ ಅದನ್ನು ಛಿದ್ರಗೊಳಿಸುವ ರೀತಿಯಲ್ಲಿ ಈ ಸ್ಫೋಟಗಳು ನಡೆದಿವೆ. ಈ ಸ್ಫೋಟಗಳ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಗ್ಧ ಜನರಲ್ಲಿ ಭೀತಿ ಹುಟ್ಟಿಸುವಂತಹ ಈ ಕೃತ್ಯ ಖಂಡನೀಯ. ಆದರೆ ಈ ದಾಳಿಗಳನ್ನು ಭಯೋತ್ಪಾದನಾ ಕೃತ್ಯಗಳೆಂದು ಅಮೆರಿಕ ಇನ್ನೂ ನೇರವಾಗಿ ಹೇಳಿಲ್ಲ. ಇವನ್ನು ಭಯೋತ್ಪಾದನಾ ಕೃತ್ಯಗಳೆಂದು ಉಲ್ಲೇಖಿಸದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು `ಅಪೂರ್ಣ ಮಾಹಿತಿಗಳಿಂದ ನಿರ್ಣಯಗಳಿಗೆ ತಲುಪಬಾರದೆಂದು' ಜನರಿಗೆ ಎಚ್ಚರಿಸಿದ್ದಾರೆ. ಈ  ಸ್ಫೋಟಗಳ ಪ್ರಕರಣದ ತನಿಖೆಯನ್ನು ಎಫ್‌ಬಿಐ ಹೊತ್ತುಕೊಂಡಿದೆ. `ಭಯೋತ್ಪಾದನೆಯ ಕುರಿತಾದ ತನಿಖೆಯಾಗಬಹುದಾದಂತಹ ಅಪರಾಧ ತನಿಖೆ ಇದು' ಎಂದು ಎಫ್‌ಬಿಐ ಸೂಚ್ಯವಾಗಿ ಹೇಳಿದೆ. ಆದರೆ ವಿವಿಧ ಸ್ಫೋಟಕ ಸಾಧನಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಎಸಗುವಂತಹ ದಾಳಿ ಭಯೋತ್ಪಾದನಾ ಕೃತ್ಯವೇ ಹೌದು ಎಂಬಂತಹ ಮಾತನ್ನ್ನೂ ಅಧಿಕಾರಿಗಳು ಹೇಳಿದ್ದಾರೆ. ತನಿಖೆಯಿಂದ ಈ ವಿಚಾರಗಳು ಸ್ಪಷ್ಟವಾಗಬೇಕು.

ಈ ದಾಳಿಗಳಿಗೆ ಪ್ರೇರಣೆ ಏನು ಎಂಬುದಕ್ಕಿನ್ನೂ ಉತ್ತರ ಸಿಕ್ಕಿಲ್ಲ. ಇದೊಂದು ಪ್ರತ್ಯೇಕ ಘಟನೆಯೇ ಅಥವಾ ಅಮೆರಿಕದ ಮೇಲೆ ಯೋಜಿತ ದಾಳಿಗಳ ಭಾಗವೇ ಎಂಬುದೂ ತನಿಖೆಯಿಂದ ಗೊತ್ತಾಗಬೇಕಿದೆ. ಈ ದಾಳಿಗಳ ಹಿಂದಿರುವವರು ವಿದೇಶಿಯರೇ ಅಥವಾ ದೇಶದೊಳಗೇ ಇರುವ ಉಗ್ರವಾದಿಗಳೇ ಎಂಬುದೂ ಪತ್ತೆಯಾಗಬೇಕು. ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳು ಹಾಗೂ ಪೆಂಟಗನ್ ಮೇಲೆ  2001ರ ಸೆಪ್ಟೆಂಬರ್ 11ರಂದು ನಡೆದ  ಭೀಕರ ದಾಳಿಗಳ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಈ ಬಗೆಯ ಬಾಂಬ್ ದಾಳಿ ಅಮೆರಿಕದಲ್ಲಿ ಈವರೆಗೆ ವರದಿಯಾಗಿರಲಿಲ್ಲ.

ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳನ್ನು ಧರೆಗುರುಳಿಸಿದ ವಿಮಾನಗಳು ಹೊರಟಿದ್ದು ಬಾಸ್ಟನ್ ನಗರದಿಂದಲೇ ಎಂಬುದನ್ನು  ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಈ ಬಾರಿಯೂ ಯಾವುದೇ ಸೂಚನೆ ಇಲ್ಲದೆ ನಡೆದಿರುವ ಈ ದಾಳಿಗಳ ಕುರಿತು ಯಾವ ಗೂಢಚರ್ಯೆ ಮಾಹಿತಿಗಳೂ ಇರಲಿಲ್ಲ. ವಿಶ್ವದ ದೊಡ್ಡಣ್ಣನನ್ನು ಮಣಿಸಲು ಯತ್ನಿಸುವ ಯೋಜಿತ ಕಾರ್ಯತಂತ್ರ ಹಿನ್ನೆಲೆಯಲ್ಲಿದೆಯೇ ಎಂಬ ಸಂಶಯಕ್ಕೆ ಇದು ಕಾರಣವಾಗುತ್ತದೆ. ಭಯೋತ್ಪಾದನಾ ದಾಳಿಗಳ ಭೀತಿಗಳಿಂದ ಅಮೆರಿಕವಿನ್ನೂ ಮುಕ್ತವಾಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನಂತೂ ಈ ದಾಳಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT