ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿದ ವಿಜಯನಗರ ವೈಭವ

Last Updated 6 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಕ್ಷರಶಃ ಪಾತ್ರಗಳು ಅಲ್ಲಿ ಕಾಣುತ್ತಿರಲಿಲ್ಲ, ಆದರೆ ಅವುಗಳ ಭಾವ ಮತ್ತು ಆ ಕ್ಷಣದ ಸ್ಥಿತಿಯನ್ನು ಧ್ವನಿಯ ಮೂಲಕ ಅರಿತುಕೊಳ್ಳಬಹುದಿತ್ತು. ಭಾರಿ ಯುದ್ಧದ ದರ್ಶನ ಆಗುತ್ತಿರಲಿಲ್ಲ, ಆದರೆ ಸೈನಿಕರ ದಂಡು ಮತ್ತು ಸಮರದ ಭೀಕರತೆ ಬೆಳಕಿನ ಮೂಲಕ ವ್ಯಕ್ತವಾಗುತಿತ್ತು.ವ್ಯಾಪಾರ-ವಹಿವಾಟು, ಪ್ರೇಮ ಸಲ್ಲಾಪ, ಸೇಡು-ಆಕ್ರೋಶ, ರಾಜನ ಗಾಂಭೀರ್ಯತೆ-ಜನರ ಮುಗ್ಧತೆ ಎಲ್ಲವೂ ಅಲ್ಲಿತ್ತು. ಇವೆಲ್ಲವನ್ನೂ ಅಭಿನಯದ ಮೂಲ ತೋರಿಸಲು ಅಲ್ಲಿ ಕಲಾವಿದರು ಇರಲಿಲ್ಲ, ಜನದಟ್ಟಣೆಯೂ ಇರಲಿಲ್ಲ. ಕ್ಷಣಕ್ಷಣದ ಘಟನೆಗಳನ್ನು ವಿವರಿಸಲು ಮತ್ತು ವಾತಾವರಣದ ಚಿತ್ರಣ ನೀಡಲು ಇದ್ದದ್ದು ಎರಡೇ ಅಂಶ ಧ್ವನಿ ಮತ್ತು ಬೆಳಕು.

ಸುಮಾರು ಒಂದು ಗಂಟೆ ಕಾಲ ವಿಜಯನಗರ ಸಾಮ್ರಾಜ್ಯದ ಪ್ರಮುಖ ಚಿತ್ರಣಗಳ ವಿವರಣೆ ಧ್ವನಿ ಮತ್ತು ಬೆಳಕಿನ ಮೂಲಕ ನೆರವೇರಿತು. ಸಾಮ್ರಾಜ್ಯದ ಅರಸ ಕೃಷ್ಣದೇವರಾಯ ಜನ್ಮ ತಳೆದಿದ್ದು, ಪಟ್ಟಾಭಿಷೇಕ, ವಿವಾಹ, ಬ್ರಿಟಿಷರ ಸ್ನೇಹ, ಇತರ ರಾಜವಂಶಸ್ಥರ ಸಿಟ್ಟು-ಸೆಡವು... ಎಲ್ಲವೂ ವ್ಯಕ್ತವಾಗಿದ್ದು ಬಗೆಬಗೆಯ ಧ್ವನಿ ಮತ್ತು ಬಣ್ಣಬಣ್ಣದ ದೀಪಗಳಿಂದ.
ಇವೆಲ್ಲವೂ ಅನಾವರಣಗೊಂಡಿದ್ದು ಶನಿವಾರ ರಾತ್ರಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ.

ವಿಜಯನಗರ ಸಾಮ್ರಾಜ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಆಯೋಜಿಸಿದ್ದ ‘ಧ್ವನಿ ಮತ್ತು ಬೆಳಕು’ ಕಾರ್ಯಕ್ರಮ ಎಲ್ಲರ ಮನಸೊರೆಗೊಂಡಿತು. ವಿಜಯನಗರ ಸಾಮ್ರಾಜ್ಯದ ಗತವೈಭವ ಮತ್ತು ಕೃಷ್ಣದೇವರಾಯರ ಜೀವನ ಚರಿತ್ರೆ ಕುರಿತು ಪರಿಚಯ ಮಾಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಹಿರಿಯರು-ಕಿರಿಯರೆನ್ನದೇ ಎಲ್ಲರೂ ವೀಕ್ಷಿಸಿದರು.

ಸ್ಮಾರಕಗಳ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ದೀಪಗಳು ಧ್ವನಿಯ ಜೊತೆಗೆ ಬದಲಾಗುತ್ತಿದ್ದವು. ಭೀಕರತೆಗೆ ಕೆಂಪು ದೀಪ ಹೊತ್ತಿಕೊಂಡರೆ, ಸಂತೋಷ-ಸಂಭ್ರಮಕ್ಕೆ ಹಳದಿ ದೀಪ ಹೊತ್ತಿಕೊಳ್ಳುತಿತ್ತು. ಆಯಾ ಸಂದರ್ಭ ಮತ್ತು ಘಟನೆಗಳ ಅನುಸಾರವಾಗಿ ದೇವಾಲಯ, ಕಲ್ಲಿನ ರಥ, ಉಗ್ರನರಸಿಂಹ ಸ್ಮಾರಕವನ್ನು ಬೆಳಕು ಮೂಲಕ ತೋರಿಸಲಾಯಿತು. ಆಗಿನ ಕಾಲದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡಲಾಯಿತು.

ವಿಠಲನ ದೇವಸ್ಥಾನ, ಕಮಲ ಮಹಲ್, ಕಡಲೇಕಾಳು ಗಣೇಶ, ಸಾಸಿವೆಕಾಳು ಗಣೇಶ, ವಿರೂಪಾಕ್ಷ ದೇವಾಲಯ, ಹಂಪಿ ಬಜಾರ್, ಆನೆಗಳ ಲಾಯ, ಅಂಜನಾದ್ರಿ ಬೆಟ್ಟ, ಅಕ್ಕತಂಗಿ ಬಂಡೆ ಸ್ಮಾರಕಗಳು ಗಮನ ಸೆಳೆದವು. ಕಾರ್ಯಕ್ರಮಕ್ಕೆ ಧ್ವನಿ ನೀಡಿದವರಲ್ಲಿ ಮುರಳಿ, ಕೆ.ಎಸ್.ರವೀಂದ್ರನಾಥ, ಅನುಪ್ರಭಾಕರ, ಸುಧಾರಾಣಿ, ಚಂಪಾ ಶೆಟ್ಟಿ, ಟಿ.ಎಸ್.ನಾಗಾಭರಣ, ಶರತ್ ಲೋಹಿತಾಶ್ವ, ಬಿ.ವಿ.ರಾಜಾರಾಂ, ಕಲಾಗಂಗೋತ್ರಿ ಕಟ್ಟಿ ಮುಂತಾದವರು ಪ್ರಮುಖರಾಗಿದ್ದಾರೆ. ಹಿನ್ನೆಲೆಗಾಯಕರಾದ ರಾಜೇಶಕೃಷ್ಣ, ಹೇಮಂತ್‌ಕುಮಾರ್, ಚೇತನ್ ಮತ್ತು ನಂದಿತಾ ಅವರು ಗೀತೆಗಳು ಇಂಪಾಗಿತ್ತು.

ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ನಾಗರಾಜ, ತಹಶೀಲ್ದಾರ ಪೂರ್ಣಿಮಾ, ಉಪವಿಭಾಗಾಧಿಕಾರಿ ಪಿ.ವಸಂತ್‌ಕುಮಾರ್, ಕಾರ್ಯಕ್ರಮದ ಯೋಜನಾ ನಿರ್ದೇಶಕ ಕೃಷ್ಣಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT