ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಗಿದ ಹುಬ್ಬಳ್ಳಿ-ಧಾರವಾಡ

Last Updated 3 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮಧುರಾ ಎಸ್ಟೇಟ್‌ನ ಆ 31ನೇ ನಂಬರ್ ಮನೆಯಲ್ಲಿ ಇದೀಗ ಸಂಪೂರ್ಣ ಮೌನ ಆವರಿಸಿದೆ. ಮನೆ ಒಡೆಯನ `ಜೀವಮಾನದ ಕನಸು~ ನನಸಾಗದ ನೋವು ಅಲ್ಲಿ ತುಂಬಿದ್ದು, ಎರಡೂವರೆ ದಶಕದ ರಾಜಕೀಯ ಹೋರಾಟ ಈಗಲೂ `ಸಿಎಂ~ ಪಟ್ಟವನ್ನು ತಂದು ಕೊಡಲಿಲ್ಲ ಎಂಬ ವಿಷಾದ ಎದ್ದು ಕಾಣುತ್ತಿದೆ.

ಈ ಮನೆಯ ಒಡೆಯರಾದ ಜಗದೀಶ ಶೆಟ್ಟರ ಅವರನ್ನು ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಲು `ಕ್ಯಾತೆ~ ತೆಗೆದಾಗಲೂ ಇದೇ ನೋವು ಅಲ್ಲಿ ಮೂರು ವರ್ಷಗಳ ಹಿಂದೆ ತುಂಬಿತ್ತು. ಆಗ ಹೈಕಮಾಂಡ್ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿಬಂದಿದ್ದ ಶೆಟ್ಟರ, `ನಾನು ಸ್ಪೀಕರ್ ಆಗಲು ಸಿದ್ಧ~ ಎಂದು ಘೋಷಿಸಿದಾಗಲೂ ಮೌನವೇ ಈ ಮನೆಯ ಮಾತಾಗಿತ್ತು.

ಈ ಮನೆಯಲ್ಲಿ ಮಾತ್ರವಲ್ಲ; ಇಡೀ ಹುಬ್ಬಳ್ಳಿಯಲ್ಲಿ ಈಗ ವಿಷಾದದ ವಾತಾವರಣ ಕಂಡು ಬರುತ್ತಿದೆ. `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ~ ಎಂದು ಅವರ ಬೆಂಬಲಿಗರು ನೋವು ತೋಡಿಕೊಳ್ಳುತ್ತಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ವಿಭಜನಾ ಪೂರ್ವ ಧಾರವಾಡ ಜಿಲ್ಲೆಯ ಶಾಸಕರು ನಡೆದುಕೊಂಡ ರೀತಿಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

`ಯಡಿಯೂರಪ್ಪ ಅವರಿಂದ ಶೆಟ್ಟರ್‌ಗೆ ಏಟು ಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಚಿವ ಸ್ಥಾನವನ್ನು ತಪ್ಪಿಸಿದ್ದಲ್ಲದೆ `ಉತ್ಸವ ಮೂರ್ತಿ~ಯಾಗಿ ಸ್ಪೀಕರ್ ಹುದ್ದೆಯಲ್ಲಿ ಕೂಡಿಸಿದ್ದನ್ನು ನಾವು ಮರೆತಿಲ್ಲ. ಈಗ ಮತ್ತೆ ಅದೇ ದ್ವೇಷದ ಕ್ರಮವನ್ನು ಯಡಿಯೂರಪ್ಪ ತೆಗೆದುಕೊಂಡಿದ್ದಾರೆ~ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

`ಮುಖ್ಯಮಂತ್ರಿಯಾಗಿದ್ದ ಯಡಿ ಯೂರಪ್ಪ ಅವರಿಗೆ ಮೂರು ಬಾರಿ ಕಂಟಕ ತಂದಿದ್ದರು ಶೆಟ್ಟರ. ಅದರ ಫಲವೇ ಇಂದಿನ ಸೋಲು. ಇಲ್ಲದಿದ್ದರೆ ಅವರೇ ಮುಖ್ಯಮಂತ್ರಿ ಆಗುತ್ತಿದ್ದರು~ ಎಂದು ಶೆಟ್ಟರ ವಿರೋಧಿ ಬಣದಲ್ಲಿದ್ದ ನಾಯಕರೊಬ್ಬರು ತಿಳಿಸುತ್ತಾರೆ.

`ಅತ್ಯಂತ ಸೌಮ್ಯ ಸ್ವಭಾವದ ಜಗದೀಶ ಶೆಟ್ಟರ ಯಾವಾಗಲೂ ತೆರೆಮರೆಯಲ್ಲೇ ಇರುತ್ತಿದ್ದ ಹುಡುಗ. ರಾಜಕೀಯ ಕ್ಷೇತ್ರಕ್ಕೆ ಒಗ್ಗುವಂತಹ ವ್ಯಕ್ತಿತ್ವವನ್ನು ನಾವೆಂದಿಗೂ ಅವರಲ್ಲಿ ಕಂಡಿಲ್ಲ. ಈಗ ಮುಖ್ಯಮಂತ್ರಿ ಆಗುತ್ತಾರೆ ಎನ್ನುವಾಗಲೇ ಹಿಂದೆ ಉಳಿದುಬಿಟ್ಟರು. ಅವರು ಆ ಹುದ್ದೆಗೆ ಏರಿದ್ದರೆ ತುಂಬಾ ಸಂತೋಷವಾಗುತ್ತಿತ್ತು~ ಎಂದು ಅವರ ನೆಚ್ಚಿನ ಗುರುಗಳಾದ ನಿರಂಜನ ವಾಲಿಶೆಟ್ಟರ ಹಾಗೂ ಪ್ರೊ.ಎಂ.ಎಸ್. ಬಂಡಾರಗಲ್ ಹೇಳುತ್ತಾರೆ.

ಮಧುರಾ ಎಸ್ಟೇಟ್‌ಗೆ ಸ್ಥಳಾಂತರವಾಗುವ ಮುನ್ನ ಶೆಟ್ಟರ್ ಅವರ ಮನೆ ಇದ್ದದ್ದು ಹುಬ್ಬಳ್ಳಿಯ ತಾಡಪತ್ರಿ ಗಲ್ಲಿಯಲ್ಲಿ. ಅಲ್ಲಿಯ ಬೀದಿಯಲ್ಲಿ ಶೆಟ್ಟರ ಜೊತೆ ಕಬಡ್ಡಿ, ಚಿಣಿ-ಫಣಿ, ಗೋಲಿ ಆಟವಾಡಿದ ಸದಾನಂದ ಹಾಸಲಗೇರಿಗೆ ಈಗ ತಾವೇ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಷ್ಟು ನೋವು. 

`ಸಣ್ಣವರಿದ್ದಾಗ ಮನೆ ಮುಂದೆ ಬೇಕಾದಷ್ಟು ಆಟ ಆಡುತ್ತಿದ್ದೆವು. ಬಳಿಕ ಆರ್‌ಎಸ್‌ಎಸ್ ಸೇರಿದೆವು. ಅಲ್ಲಿಯೂ ಗಣವೇಷ ಧರಿಸಿ ಶಾಖೆಗೆ ತೆರಳುತ್ತಿದ್ದೆವು. ಅವರ ಗೆಳೆತನ ನನಗೆ ಸಾಕಷ್ಟು ಖುಷಿ ಕೊಟ್ಟಿತ್ತು. ಅವರು ಮುಖ್ಯಮಂತ್ರಿ ಆಗಿದ್ದರೆ ಅದರ ಮಜಾನೇ ಬೇರೆಯಾಗಿತ್ತು~ ಎಂದು ಅವರು ಹೇಳುತ್ತಾರೆ.

ಶೆಟ್ಟರ ಮುಖ್ಯಮಂತ್ರಿ ಆಗಬೇಕು ಎಂಬ ತೀವ್ರ ಹಂಬಲ ವ್ಯಕ್ತಪಡಿಸುತ್ತಿದ್ದ ಅವರ ತಂದೆ ಶಿವಪ್ಪ ಈಗಿಲ್ಲ. ಆದರೆ, ರಾಜಧಾನಿಯಲ್ಲಿ ನಡೆದ ಬೆಳವಣಿಗೆಗಳನ್ನು ಟಿವಿ ಮುಂದೆ ಕುಳಿತು ಕುತೂಹಲದಿಂದ ಗಮನಿಸಿದವರು ಶೆಟ್ಟರ ಅವರ ತಾಯಿ ಬಸವಣ್ಣೆಮ್ಮ . `ದೇವರು ಮಾಡಿದಂತೆ ಆಗುತ್ತದೆ. ಅದನ್ನು ತಡೆಯುವುದಕ್ಕೆ ಆಗುವುದಿಲ್ಲ. ಹೀಗಾಗಿ ಮಗನಿಗೆ ಹುದ್ದೆ ತಪ್ಪಿದ್ದಕ್ಕೆ ಬೇಜಾರಿಲ್ಲ~ ಎಂದು ವಿವರಿಸುತ್ತಾರೆ.

`ಸಿಕ್ಕ ಅವಕಾಶದಲ್ಲಿ ಜನಸೇವೆ ಮಾಡಬೇಕು~ ಎಂದು ತಮ್ಮ ಮಗನಿಗೆ ಸಲಹೆ ನೀಡುತ್ತಾರೆ.
ಶೆಟ್ಟರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ 1994ರಲ್ಲಿ ಮೊದಲ ಸಲ ಆಯ್ಕೆಯಾಗಿದ್ದರು. ಅಲ್ಲಿಂದ ಈವರೆಗೆ ಸತತ ನಾಲ್ಕು ಸಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಅವರದು. `ಸಂಘರ್ಷ~ದ ಬದಲು `ಸಹಮತ~ದ ರಾಜಕಾರಣ ಶೆಟ್ಟರ ಅವರ ವಿಶೇಷ ಗುಣವಾಗಿದೆ. ಮುಖ್ಯಮಂತ್ರಿ ಹುದ್ದೆ ಶೆಟ್ಟರ ಕೈಯಿಂದ ಜಾರುವಲ್ಲಿ ಅವರ ಈ ಗುಣವೇ ಪ್ರಧಾನ ಕಾರಣ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT