ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಜನ್ಮದ ನಿರೀಕ್ಷೆಯಲ್ಲಿ...

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬ್ರಿಟಿಷರ ಸೈನ್ಯವು ಭಾರತಕ್ಕೆ ಪರಿಚಯಿಸಿದ ಆಟ ಹಾಕಿ. ಆದರೆ ಆ ಹಾಕಿಯ ಕೌಶಲ್ಯವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಮೆರೆದ ಶ್ರೇಯ ಈ ನೆಲದ್ದು. ಆದರೆ ಅದು ಮೂರು ದಶಕಗಳ ಹಿಂದಿನ ಕಥೆ.

ಅದೇ ಇಂಗ್ಲಿಷರ ನೆಲದಲ್ಲಿ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿವೀರರು ಕಣಕ್ಕಿಳಿಯುವರೇ ಎಂಬುದು ಇಂದಿನ ವ್ಯಥೆ.  ಜಗತ್ತಿನ ಮಹಾಕ್ರೀಡಾಜಾತ್ರೆ ಒಲಿಂಪಿಕ್ಸ್ ಕೂಟದ ಹಾಕಿಯಲ್ಲಿ ಎಂಟು ಬಾರಿ ಚಿನ್ನದ ಪದಕ ಗೆದ್ದ ದಾಖಲೆ ಭಾರತ ಪುರುಷರ ತಂಡದ್ದು. ಆದರೆ ಕಳೆದ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪ್ರವೇಶ ಗಿಟ್ಟಿಸದೇ ದೇಶದ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು ರಾಷ್ಟ್ರೀಯ ಕ್ರೀಡೆ.

ಈ ಬಾರಿಯೂ ಅಂತಹ ಅಪಾಯದ ತೂಗುಗತ್ತಿ ಹಾಕಿ ತಂಡದ ಮೇಲಿದೆ. ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯುವ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಇಂಗ್ಲೆಂಡ್ ವಿಮಾನ ಹತ್ತುವ ಅವಕಾಶ ಸಿಗುತ್ತದೆ. ಹಾಕಿ ಸಂಸ್ಥೆಗಳ ಜಟಾಪಟಿಗಳು ಸ್ವಲ್ಪಮಟ್ಟಿಗೆ ಶಾಂತವಾಗಿ ಹಾಕಿ ಇಂಡಿಯಾ ಸಂಸ್ಥೆಗೆ ಅಂತರರಾಷ್ಟ್ರೀಯ ಹಾಕಿ ಸಂಸ್ಥೆಯು (ಐಎಚ್‌ಎಫ್) ಮಾನ್ಯತೆ ನೀಡಿದೆ. ಅರ್ಹತಾ ಟೂರ್ನಿ ಆಯೋಜನೆಯ ಹೊಣೆಯನ್ನೂ ಹಾಕಿ ಇಂಡಿಯಾಕ್ಕೆ ನೀಡಲಾಗಿದೆ.

ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಗೆದ್ದು ಬಂದ ಭಾರತದ ಪುರುಷರ ತಂಡವು ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸದಲ್ಲಿದೆ. ಹೊಸ ಪ್ರತಿಭೆಗಳ ಹುಮ್ಮಸ್ಸು ಯಾವ ರೀತಿ ಕೆಲಸ ಮಾಡುತ್ತದೆ ನೋಡಬೇಕು. ಆದರೆ ಧನರಾಜ್ ಪಿಳ್ಳೆಯಂತಹ ತಾರಾ ವರ್ಚಸ್ಸಿನ ಆಟಗಾರನಾಗಲಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್, ರೂಪಸಿಂಗ್, ಕೆ.ಡಿ. ಸಿಂಗ್ ಅವರಂತಹ ಅಪ್ರತಿಮ ಆಟಗಾರರು ತಂಡದಲ್ಲಿ ಇಲ್ಲದಿರಬಹುದು. ಆದರೆ ರಾಷ್ಟ್ರೀಯ ಕ್ರೀಡೆಗೆ ಮರುಜನ್ಮ ನೀಡುವ ಅವಕಾಶ ಈಗಿನ ಹೊಸ ಹುಡುಗರಿಗೆ ಇದೆ. ಆದರೆ ಅವರಿಗೆ ತಕ್ಕ ಪ್ರೋತ್ಸಾಹದ ಅಗತ್ಯವೂ ಇದೆ.

ಕ್ರಿಕೆಟಿಗರು ವಿಶ್ವಕಪ್ ಗೆದ್ದಾಗ ಕೋಟಿಗಟ್ಟಲೇ ಹಣ ನೀಡಲು ಮುಂದೆ ಬರುವ ಸರ್ಕಾರಗಳು, ಅದೇ ಹಾಕಿ ಆಟಗಾರರು ಏಷ್ಯಾ ಕಪ್ ಗೆದ್ದಾಗ ಕೇವಲ 25 ಸಾವಿರ ರೂಪಾಯಿ ಘೋಷಿಸುತ್ತವೆ. ಇದರಿಂದ ಆಡಳಿತದ ಚುಕ್ಕಾಣಿ ಹಿಡಿದವರು ಕ್ರೀಡಾಪ್ರೇಮಿಗಳು ಮತ್ತು    ಆಟಗಾರರ ಕೆಂಗಣ್ಣಿಗೂ ಗುರಿಯಾದ ಉದಾಹರಣೆಗಳು ಇವೆ.
ಹಾಕಿ ಆಟಗಾರರು ಮತ್ತು ಆಟದ ಉದ್ಧಾರದ ಬಗ್ಗೆ ಮಾತನಾಡುವ ಮುನ್ನ ಸರ್ಕಾರ, ಸಂಘ-ಸಂಸ್ಥೆಗಳು ಅದರ ಭವ್ಯ ಇತಿಹಾಸ ಮತ್ತು ಮಹತ್ವವನ್ನು ತಿಳಿದರೆ ಒಳಿತು. 1928 ರಿಂದ 1956ರವರೆಗೆ ಸತತ ಚಿನ್ನದ ವಿಜೇತರು ಭಾರತದ ಹಾಕಿವೀರರು. ಈ ಸಂದರ್ಭದಲ್ಲಿ ಭಾರತವು ಆಡಿದ ಒಟ್ಟು 24 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದಿತ್ತು. ಈ ಎಲ್ಲ ಪಂದ್ಯ ಗಳಿಂದ ಒಟ್ಟು 178 ಗೋಲುಗಳನ್ನು ದಾಖಲಿಸಿತ್ತು.  ನಂತರ 1964ರಲ್ಲಿ ಟೋಕಿಯೋ ಒಲಿಂಪಿಕ್ಸ್ ಮತ್ತು 1980ರ ಮಾಸ್ಕೋ     ಒಲಿಂಪಿಕ್ಸ್‌ನಲ್ಲಿ  ಬಂಗಾರ ಗೆದ್ದ ಭಾರತಕ್ಕೆ ನಂತರದ 31 ವರ್ಷಗಳಲ್ಲಿ ಸ್ವರ್ಣಸಾಧನೆ ಸಾಧ್ಯವಾಗಿಲ್ಲ. 

ಏಷ್ಯಾ ಕಪ್ ಗೆದ್ದು ಮತ್ತೊಮ್ಮೆ ಹಾಕಿ ಆಟ ಜೀವಂತವಾಗಿದೆ ಎಂದು ತೋರಿಸಿಕೊಟ್ಟಿರುವ ಹುಡುಗರು ಈಗ ಮತ್ತೊಮ್ಮೆ ಒಲಿಂಪಿಕ್ಸ್ ಪ್ರವೇಶ ಗಿಟ್ಟಿಸುವುದರ ಜೊತೆಗೆ ಈ ಆಟಕ್ಕೆ ಮರುಜನ್ಮ ನೀಡುವ ಒಂದೇ ಒಂದು ಅವಕಾಶ ಈಗ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ, ಗುರುವಾರ ಮೂರನೇ ಪಂದ್ಯವನ್ನು ಸೋತಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಶುಕ್ರವಾರ ನಡೆದ ನಾಲ್ಕನೇ ಪಂದ್ಯದಲ್ಲೂ ಭಾರತ ಗೆಲುವು ಪಡೆದು 3-1ರಲ್ಲಿ ಮುನ್ನಡೆ ಸಾಧಿಸಿದೆ. ಈ ಸರಣಿ ವಿಜಯವು ಭಾರತದ ಹುಡುಗರ ಮನೋಬಲವನ್ನು ಹೆಚ್ಚಿಸಿದೆ. ಹಳೆಯ ಕಹಿ ನೆನಪುಗಳನ್ನು ಮರೆತು ಮುನ್ನುಗ್ಗಿದರೆ   ಒಲಿಂಪಿಕ್ಸ್ ಪ್ರವೇಶದ ಸವಿಗನಸು ನನಸಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT