ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಜೀವ ಪಡೆಯದ ಪುಷ್ಕರಣಿಗಳು ಬಣ ಬಣ

ಭರವಸೆಯಾಗಿಯೇ ಉಳಿದ ಸರ್ಕಾರದ ನಿರ್ಣಯ
Last Updated 4 ಜುಲೈ 2013, 10:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ವರ್ಷ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿರುವ ಪುಷ್ಕರಣಿಗಳಿಗೆ ಮರುಜೀವ ಕೊಡುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವಿವಿಧೆಡೆ ವಿಶಾಲವಾದ ಮತ್ತು ಪುಟ್ಟದಾದ ಪುಷ್ಕರಣಿಗಳಿದ್ದು, ಎಲ್ಲದ್ದಕ್ಕೂ ಕಾಯಕಲ್ಪ ದೊರೆಯಲಿದೆ ಎಂದು ಭಾವಿಸಲಾಗಿತ್ತು.

ತಮ್ಮದೇ ಆದ ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವ ಹೊಂದಿರುವ ಪುಷ್ಕರಣಿಗಳು ಮತ್ತೆ ನೀರಿನಿಂದ ಕಂಗೊಳಿಸುತ್ತಿವೆ ಎಂಬ ನಿರೀಕ್ಷೆ ಬಹುತೇಕ ಜನರಲ್ಲಿ ಮೂಡಿತ್ತು. ಪುಷ್ಕರಣಿಗಳಿಗೆ ಮರುಜೀವ ನೀಡುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಸಂಘಸಂಸ್ಥೆಗಳು ಸಹ ತಿಳಿಸಿದ್ದವು. ಆದರೆ ಒಂದು ಸರ್ಕಾರದ ಅವಧಿ ಪೂರ್ಣಗೊಂಡು ಮತ್ತೊಂದು ಸರ್ಕಾರ ಅಸ್ತಿತ್ವಕ್ಕೆ ಬಂದರೂ ಪುಷ್ಕರಣಿಗಳ ಸ್ಥಿತಿಗತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡು ಬಂದಿಲ್ಲ.

ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕುಗಳಲ್ಲಿ ವಿವಿಧೆಡೆಯಿರುವ ಪುಷ್ಕರಣಿಗಳಿಗೆ ಮತ್ತೆ ಜೀವ ಕಳೆ ಬರಲಿದೆ ಎಂಬ ಸಂಭ್ರಮ ಸಂಘಸಂಸ್ಥೆಗಳ ಸದಸ್ಯರಲ್ಲಿ ಅದರಲ್ಲೂ ಪುಷ್ಕರಣಿಗಳೊಂದಿಗೆ ವಿಶೇಷ ನಂಟು ಬೆಳೆಸಿಕೊಂಡಿರುವ ಪರಿಸರವಾದಿಗಳಲ್ಲಿ ಮತ್ತು ರೈತರಲ್ಲಿ ಸಂತಸ ಮೂಡಿಸಿತ್ತು.

ನಗರದ ಭಾರತಿನಗರ ಮತ್ತು ಬಸಪ್ಪ ಛತ್ರದ ಬಳಿ ತಲಾ ಒಂದೊಂದು ಪುಷ್ಕರಣಿಯಿದ್ದರೆ, ನಗರದ ಹೊರವಲಯದ ಚಿತ್ರಾವತಿ ಸಮೀಪ ಒಂದು, ರಂಗಸ್ಥಳದಲ್ಲಿ ಮತ್ತು ನಂದಿ ಗ್ರಾಮದಲ್ಲಿ ತಲಾ ಮೂರು ಪುಷ್ಕರಣಿಗಳಿವೆ ಎಂದು ಪಟ್ಟಿಯನ್ನು ಸಿದ್ಧಪಡಿಸಿದ್ದರು.

ಆಯಾ ಪುಷ್ಕರಣಿಗಳಿಗೆ ಸಂಬಂಧಿಸಿದಂತೆ ಇರುವ ಐತಿಹಾಸಿಕ ಕತೆಗಳು ಮತ್ತು ಅವುಗಳ ಹಿನ್ನೆಲೆಯನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆಯಾ ಪುಷ್ಕರಣಿಗಳ ಎದುರು ಫಲಕವೊಂದನ್ನು ಅಳವಡಿಸಿ, ವಿಸ್ತ್ರತ ಮಾಹಿತಿ ಒದಗಿಸಲು ಸಹ ಸಿದ್ಧತೆ ನಡೆಸಿದ್ದರು.

ಭರವಸೆ ಈಡೇರಲಿಲ್ಲ: `ಪುಷ್ಕರಣಿಗಳಿಗೆ ಮರುಜೀವ ಕೊಡುವುದರ ಜೊತೆಗೆ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಆಸಕ್ತಿ ಹೊಂದಿದೆ.  ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಷ್ಕರಣಿಗಳ ಮರುಜೀವ ನೀಡುವ ಕಾರ್ಯ ಆರಂಭಗೊಳ್ಳಲಿದೆ ಎಂದು ಕಳೆದ ವರ್ಷ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಮನೋಜ್‌ಕುಮಾರ್ ಮೀನಾ ಹೇಳಿದ್ದು, ನಮ್ಮ ಸಂತಸ ಇಮ್ಮಡಿಗೊಳಿಸಿತ್ತು.

ಹಿಂದುಳಿದ ಜಿಲ್ಲೆಯತ್ತ ಕೊನೆಗೂ ರಾಜ್ಯ ಸರ್ಕಾರ ಗಮನಹರಿಸಿದೆ. ಇನ್ನೇನೂ ಪುಷ್ಕರಣಿಗಳ ಸ್ವಚ್ಛತಾ ಮತ್ತು ನವೀಕರಣ ಕಾರ್ಯ ಆರಂಭಗೊಂಡು ನೀರು ತುಂಬಿಸುವ ಪ್ರಕ್ರಿಯೆಗೂ ಚಾಲನೆ ದೊರೆಯಲಿದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಯಾವುದೇ ಆಶಾಭಾವನೆಗಳು ಈಡೇರಲಿಲ್ಲ.

ಪುಷ್ಕರಣಿಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳು ನೆರವೇರಲಿಲ್ಲ' ಎಂದು ಜಿಲ್ಲಾ ರೇಷ್ಮೆಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಯ ಯಲುವಹಳ್ಳಿ ಸೊಣ್ಣೇಗೌಡ ಪ್ರಜಾವಾಣಿ'ಗೆ ತಿಳಿಸಿದರು.

  `ಪುಷ್ಕರಣಿಗಳನ್ನು ವಿನೂತನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳುವ ಮುನ್ನವೇ ಕುಮದೇಂದು ಮಹರ್ಷಿ ಯುವಕರ ಸಂಘದ ಸದಸ್ಯರು ಮತ್ತು ಪರಿಸರವಾದಿಗಳ ಜೊತೆಗೂಡಿ ಚಿತ್ರಾವತಿ ಮತ್ತು ರಂಗಸ್ಥಳದಲ್ಲಿರುವ ಪುಷ್ಕರಣಿಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೆವು. ಪುಷ್ಕರಣಿಗಳ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡುವಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೂ ಮನವಿ ಮಾಡಿಕೊಂಡಿದ್ದೆವು.

ತಾಲ್ಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಂದ ಭರವಸೆಯ ಮಾತುಗಳು ಸಿಕ್ಕವೇ ಹೊರತು ಭರವಸೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಸುಮಾರು ಒಂದು ವರ್ಷ ಕಳೆಯುತ್ತ ಬಂದರೂ ಪುಷ್ಕರಣಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ. ಅವುಗಳ ಕುರಿತು ಯಾರೂ ಪ್ರಸ್ತಾವನೆ ಮಾಡುತ್ತಿಲ್ಲ. ಮಾತನಾಡಲು ಸಹ ಬಯಸುತ್ತಿಲ್ಲ' ಎಂದು ಅವರು ಹೇಳಿದರು.

ಎಲ್ಲರಿಗೂ ಉಪಯುಕ್ತ: `ದಿನದಿಂದ ದಿನಕ್ಕೆ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಿದ್ದು, ಕೊಳವೆಬಾವಿಗಳು ಕೂಡ ಬತ್ತತೊಡಗಿವೆ. ಇಂತಹ ಸಂದರ್ಭದಲ್ಲಿ ಪುಷ್ಕರಣಿಗಳ ಪಾತ್ರ ತುಂಬ ಪ್ರಮುಖವಾಗಿದೆ. ಪಾಳುಬಿದ್ದಿರುವ ಪುಷ್ಕರಣಿಗಳನ್ನು ಶುಚಿಗೊಳಿಸಿ, ನೀರು ಸಂಗ್ರಹಿಸಿದ್ದಲ್ಲಿ ನೀರಿನ ಸಮಸ್ಯೆಯನ್ನು ಸರಿದೂಗಿಸಬಹುದು.

ಉತ್ಸವ ಮತ್ತು ಜಾತ್ರೆಗಳಲ್ಲಿ ಮಾತ್ರವಲ್ಲದೇ ಇತರ ಸಂದರ್ಭಗಳಲ್ಲೂ ಪುಷ್ಕರಣಿಗಳನ್ನು ಶುಚಿಗೊಳಿಸಿ, ನೀರು ತುಂಬಿಸುವಂತೆ ಮಾಡಬೇಕು. ಇದರಿಂದ ಇಡೀ ಪುಷ್ಕರಣಿಯು ಆಕರ್ಷಕವಾಗಿ ಕಾಣುವುದಲ್ಲದೇ ಜನಸಾಮಾನ್ಯರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುತ್ತದೆ' ಎಂದು ಅವರು ಹೇಳಿದರು.

`ನಂದಿ ಗ್ರಾಮದ ಭೋಗನಂದೀಶ್ವರ ದೇಗುಲ ಆವರಣದಲ್ಲಿ, ಚಿತ್ರಾವತಿ, ಬಸಪ್ಪ ಛತ್ರ ಮತ್ತು ಭಾರತಿನಗರದ ಬಳಿಯಿರುವ ಪುಷ್ಕರಣಿಗಳೆಲ್ಲ ಬೇರೆಬೇರೆಯದ್ದೇ ವಿನ್ಯಾಸಗಳನ್ನು ಹೊಂದಿವೆ. ಪ್ರತಿಯೊಂದು ಪುಷ್ಕರಣಿ ನಿರ್ಮಾಣದ ಹಿಂದೆ ಅದರದ್ದೇ ಆದ ಕಾರಣಗಳು ಮತ್ತು ಘಟನೆಗಳಿವೆ. ಅವುಗಳ ಇತಿಹಾಸದ ಬಗ್ಗೆಯೂ ಸಂಶೋಧನೆ ನಡೆಸಿ, ಕಾಯಕಲ್ಪ ಮಾಡಿದ್ದಲ್ಲಿ ಎಲ್ಲರಿಗೂ ತುಂಬ ಅನುಕೂಲವಾಗುತ್ತದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT