ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಪರಿಶೀಲನೆ ನಡೆಯಲಿ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಕಾಯ್ದೆಗಳನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಹೇಳುವ ಮೂಲಕ  ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರಾದ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹಳೆಯ ಚರ್ಚೆಗೆ ಚಾಲನೆ ನೀಡಿದ್ದಾರೆ. `ಬ್ರಿಟಿಷರ ಕಾಲದಲ್ಲಿದ್ದ ಕಾಯ್ದೆಯ ಆಧಾರದಲ್ಲಿಯೇ 1971ರಲ್ಲಿ ರೂಪಿಸಲಾದ ಈಗಿನ ನ್ಯಾಯಾಂಗ ನಿಂದನೆ ಕಾಯ್ದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಪ್ಪುವಂತಹದಲ್ಲ, ಇದು ಊಳಿಗಮಾನ್ಯ ವ್ಯವಸ್ಥೆಗೆ ಹೊಂದುವಂತಹದ್ದು' ಎಂದು ಅವರು ಹೇಳಿದ್ದಾರೆ. ನ್ಯಾಯಾಲಯದ ಆದೇಶಗಳು ಅನುಷ್ಠಾನಗೊಳ್ಳಬೇಕು, ನ್ಯಾಯಾಂಗದ ಕಲಾಪಕ್ಕೆ ಅಡ್ಡಿ ಉಂಟಾಗಬಾರದು, ಕಕ್ಷಿದಾರರು ಬೆದರಿಕೆಗೆ ಈಡಾಗಬಾರದು, ಸಾಕ್ಷಿದಾರರು ಇಲ್ಲವೇ ನ್ಯಾಯಾಲಯದ ಅಧಿಕಾರಿಗಳಿಗೆ ಆಮಿಷವೊಡ್ಡಬಾರದು - ಇವೇ ಮೊದಲಾದ ಕಾರಣಗಳಿಗಾಗಿ ನ್ಯಾಯಾಂಗ ನಿಂದನೆ ಅಗತ್ಯ ಎಂದು ನ್ಯಾಯಾಲಯಗಳು ವಾದಿಸುತ್ತಾ ಬಂದಿವೆ. ಈ ಕಾನೂನಿನ ಪ್ರಕಾರ `ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ, ನ್ಯಾಯಾಂಗದ ಕಲಾಪದಲ್ಲಿ ಮಧ್ಯೆ ಪ್ರವೇಶಿಸುವ ಮತ್ತು ನ್ಯಾಯಾಂಗದ ಆಡಳಿತಕ್ಕೆ ಅಡಚಣೆ ಉಂಟು ಮಾಡುವ'  ಕೃತ್ಯಗಳು ನ್ಯಾಯಾಂಗ ನಿಂದನೆಯಾಗುತ್ತವೆ. ಈ ಮೂರರ ಬಗ್ಗೆ ಹೆಚ್ಚು ವಿವಾದಗಳಿಲ್ಲ, ಆದರೆ `ಹಗರಣವಾಗಿಸುವ' (ಸ್ಕಾಂಡೈಲಿಸಿಂಗ್) ಇಲ್ಲವೆ `ನ್ಯಾಯಾಂಗದ ಅಧಿಕಾರವನ್ನು ಕೀಳಾಗಿ ಕಾಣುವ' ಕೃತ್ಯ ಕೂಡಾ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿರುವ ನಾಲ್ಕನೇ ಅಂಶವೇ ಆಗಾಗ ವಿವಾದದ ಕಿಡಿ ಹತ್ತಲು ಕಾರಣವಾಗಿದೆ. ಯಾವುದು `ಹಗರಣವಾಗಿಸುವ' ಕೃತ್ಯವಾಗುತ್ತದೆ ಎನ್ನುವುದನ್ನು ಕಾಯ್ದೆ ಸ್ಪಷ್ಟೀಕರಿಸಿಲ್ಲ.

`ಪ್ರಕರಣಗಳ ವಿಚಾರಣೆ ನಡೆಸಿ ನ್ಯಾಯಾಲಯ ನೀಡುವ ತೀರ್ಪಿನ ಬಗ್ಗೆ ಟೀಕೆ-ಟಿಪ್ಪಣಿ ಮಾಡಬಹುದು' ಎಂಬ ಮಾರ್ಗಸೂಚಿ ಕಾಯ್ದೆಯಲ್ಲಿಯೇ ಇದ್ದರೂ ಗೊಂದಲ ತಪ್ಪಿಲ್ಲ. ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ನ್ಯಾಯಾಂಗ ನಿಂದನೆಯ ಕಾಯ್ದೆ ಇದ್ದರೂ ಅವುಗಳ ಬಳಕೆಯಾಗುವುದು ಅಪರೂಪ. ಆದರೆ ಭಾರತದಲ್ಲಿ ಈ ಕಾಯ್ದೆಯ ಬಳಕೆ ಸಾಮಾನ್ಯವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ `ನ್ಯಾಯಾಂಗ ನಿಂದನೆ' ಕಾಯ್ದೆಯನ್ನು ಸುಧಾರಣೆಗೊಳಪಡಿಸುವ ಪ್ರಯತ್ನಗಳು ನಡೆಯುತ್ತಾ ಬಂದಿವೆ. `ನ್ಯಾಯಾಂಗ ನಿಂದನೆಯ ಆರೋಪವನ್ನು `ಸತ್ಯ'ದ ಪ್ರತಿಪಾದನೆಯ ಮೂಲಕವೇ ಎದುರಿಸಬೇಕು' ಎಂದು `ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ' 2002ರಲ್ಲಿಯೇ ಹೇಳಿತ್ತು. 2004ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾಯಾಂಗ ನಿಂದನೆ ತಿದ್ದುಪಡಿ ಕಾಯ್ದೆಯನ್ನು ಪರಿಶೀಲಿಸಿದ್ದ ಸಂಸದೀಯ ಸ್ಥಾಯಿಸಮಿತಿ ಕೂಡಾ `ಸಾರ್ವಜನಿಕ ಹಿತದೃಷ್ಟಿಯಿಂದ ನ್ಯಾಯಾಲಯದ ತೀರ್ಪಿನ ಬಗ್ಗೆ  ಸತ್ಯ ಹೇಳಲು ಅವಕಾಶ ನೀಡಬೇಕು' ಎಂದು ಹೇಳಿತ್ತು. ಆರುವರ್ಷಗಳ ಹಿಂದೆ ತಿದ್ದುಪಡಿ ಮಾಡಿದ ಸರ್ಕಾರ ನ್ಯಾಯಾಂಗ ನಿಂದನೆಯ ಆರೋಪಿಗಳು `ಸತ್ಯ'ದ ಮೂಲಕ ಪಡೆಯುವ ರಕ್ಷಣೆಯನ್ನು ಒಪ್ಪಿಕೊಂಡರೂ, ಅದನ್ನು ಹೇಳಲು `ಸಾರ್ವಜನಿಕ ಹಿತದೃಷ್ಟಿ ಕಾರಣ ಮತ್ತು ತಮ್ಮ ಉದ್ದೇಶ ಪ್ರಾಮಾಣಿಕವಾದುದು' ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿತ್ತು. 

ಸ್ಪಷ್ಟ ವ್ಯಾಖ್ಯಾನದ ಮೂಲಕ ಸಾರ್ವಜನಿಕರನ್ನು `ಮನವರಿಕೆ ಮಾಡಿಕೊಡುವ ಕಷ್ಟ'ದಿಂದ ಪಾರುಮಾಡುವ ಪ್ರಯತ್ನ ಇನ್ನೂ ನಡೆದಿಲ್ಲ.  ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನ್ಯಾಯಾಂಗ ವ್ಯವಸ್ಥೆಯನ್ನೂ ಬದಲಾವಣೆಗೊಳಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT