ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಳ ಶಂಕರದೇವ

Last Updated 4 ಮೇ 2013, 19:59 IST
ಅಕ್ಷರ ಗಾತ್ರ

ಅಲ್ಲಮನಿಂದ ಬಸವನಿಗೆ ಮರುಳ ಶಂಕರನ ಪರಿಚಯ

ಒಂದು
ಮರಹು ಮರೆಯ ನಿಧಾನವನಾರು ಬಲ್ಲರು?

ಅಗೆದು ತೋರುವೆ ಬಾರ, ಬಸವಡಣ್ಣಾಯಕ:
ಬೆವರು ನುಂಗಿದ ಮೈಯಿ,
ಬಯಲ ಹೀರಿ ಹೀರಿ ಕುಳಿವೋದ ಕೆನ್ನೆಗಳು:
ತಲೆಗೂದಲಿನ ಕಾನನದ ಕೆಳಗೆ
ಖನಿಜಗಳ ಖನಿ ತೆಗೆತೆಗೆದು ತೋರುವ ಮೊದಲು
ಇಕೊ ಬಸವ
ಈ ಸುಟ್ಟ ಕಣ್ಣುಗಳ ಮಧ್ಯೆ
ಬೆಳ್ಳಿಬೆಳಕುಲಿವ ಪರುಷದ ಪಕ್ಷಿ
ಮಹಾಮನೆಯ ಪಂಜರಕೆ
ಸಿಗದಷ್ಟು ಕಿರಿದು.

ಅವಶೇಷಗಳ ಗಾಳಿ ಹುಯ್ಯಲಿನಲ್ಲಿ ಸತ್ಯವನೆರೆದೆ:
ಬೆಟ್ಟಗಳಿಗೆಣೆಯಾಗಿ ಕೊಬ್ಬಿದ ನದಿಯ,
ಬಡಬಾಗ್ನಿ ಸೀಳಿದ ಸಮುದ್ರದ ಬಸಿರಿನ ನೀರು
ಮಗದೊಮ್ಮೆ
ದೋಣಿ ಹಡಗುಗಳ ತಳದ ಸೋಂಕಲ್ಲಿ
ಪುಳಕಗೊಂಬುದ ಕಂಡೆ.

ನಿನ್ನಂಗಳದ ಪ್ರಸಾದಕುಳದೆಂಜಲೆಲೆ ದಡದಲ್ಲಿ
ನಾ-ಹಡಗನಪ್ಪಳಿಸಿ ಗಳಿಸಿ ಬದುಕಿದ ವಣಿಜ
ಮರುಳ ಶಂಕರದೇವ. ಹಡಗಲ್ಲ,
ಕಜ್ಜಿನಾಯಿಯ ತುರಿತುರಿ ಮೈಯ್ಯ
ದಿಕ್ಕೆಟ್ಟ ಮೋಡಗಳ ಹರುಕನ್ನು ಹೊತ್ತ
ಮರೆವ ಹಿಂದಣ ಮರಣ
ಮರುಳ ಶಂಕರದೇವ.

ಎರಡು
ಈ ಕಣ್ಣಗೊಂಬೆಯ ಸೂತ್ರದ

ಈ ಕಳ್ಳ ನಗುವಿನ ಸವಿಯ ಸಾರದ
ಈ ಮೈಗೆ ಬಿದ್ದ ಕೂರೆಗಳ ಪಡೆಯ
ಹಡೆದ ಕರುಳಿರದ ತಾಯಿ
ಮಹಾಮನೆಯ ಲಕ್ಷ್ಮಿ ಬಸವಾ.
ಮಲತಂಗಿ ಬಸವಾ ಆಕೆ
ಕಲಚೂರ್ಯ ವಿಜಯಲಕ್ಷ್ಮಿಗೆ.

ಬೂದಿಹುಬ್ಬುಗಳ ಮರುಳ ಶಂಕರಗೀಗ
ಕಂಗಳೇ ಪ್ರಾಣ;
ಕಾಯುವಿಕೆ ಕಾಯಿ ಮಾಗಿತ್ತು ಈ ಹೊತ್ತು;
ಹಣ್ಣು ರಸವೂರುತಿದೆ; ತೊಟ್ಟುಗಳಚುವ ಮೊದಲೆ
ಕಿತ್ತು ಒಪ್ಪಿಸು ನಿನ್ನ ಶರಣ ಸಂದೋಹಕ್ಕೆ. ಹಣ್ಣಲ್ಲ,
ಮಣ್ಣು ಹುಳುಗಳ ಹಬ್ಬ.

ಬೀಜ ಗರ್ಭಿಣಿ ಹೆರುವ ಕಾಮಲತೆಯರು ನೆರೆದ
ಮೃತ್ತಿಕೆಯ ಮಹಮನೆಯ ಹೊಸ್ತಿಲಿಗೆ
ಕರೆಯದೇ ಬಂದವರ,
ಮಿಂದುಣದೆ, ಹೇಳದೇ ಹೋದವರ
ಹೆಜ್ಜೆ ಸಾಲು...

ಬೆಚ್ಚಿದೆಯ ಹೇಳು                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT