ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಳು ಮಾಡುತಿದೆ ಅರಳಿದ ತಾವರೆ

Last Updated 12 ಜನವರಿ 2012, 9:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಕುಂಟೆಗಳಲ್ಲಿ ತಾವರೆ ಹೂಗಳು ಅರಳಿ ನಗುತ್ತಿವೆ. ವರಮಹಾಲಕ್ಷ್ಮಿ ಹಬ್ಬಕ್ಕೂ ತಾವರೆ ಹೂವಿಗೂ ಬಿಡದ ನಂಟು. ಈ ಹಬ್ಬಕ್ಕೆ ಸರಿಯಾಗಿ ಕೊಳ, ಕುಂಟೆಗಳಲ್ಲಿ ತಾವರೆ ಹೂಗಳು ಅರಳುವುದು ಸಾಮಾನ್ಯ. ಆದರೆ ಈಗ ಚಳಿಯನ್ನು ಲೆಕ್ಕಿಸದೆ ಅರಳಿ ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿವೆ.

ಕಮಲ ಅಥವಾ ತಾವರೆ ಹೂಗಳು ಕೆಸರಿನ ಕೊಳಗಳಲ್ಲಿ ಬೆಳೆಯುತ್ತವೆ. ಆದರೆ ಬಯಲು ಸೀಮೆಯಲ್ಲಿ ಅಂತಹ ಕೊಳಗಳು ವಿರಳ. ಆದರೂ ಅಲ್ಲಲ್ಲಿ ಹೆಚ್ಚು ಕಾಲ ನೀರು ನಿಲ್ಲುವ ಕೊಳಗಳಲ್ಲಿ ಅಪರೂಪಕ್ಕೆ ತಾವರೆ ಗಿಡಗಳು ತಾವಾಗಿ ಬೆಳೆದಿರುತ್ತವೆ. ತಾವರೆ ಹೂಗಳಲ್ಲಿ ಎರಡು ವಿಧ. ಕೆಂದಾವರೆ ಮತ್ತು ಶ್ವೇತ ವರ್ಣದ ತಾವರೆ. ಬಣ್ಣಗಳು ಬೇರೆಯಾದರೂ ಸೌಂದರ್ಯ ಮಾತ್ರ ಒಂದೆ. ಅವುಗಳ ಸೊಬಗನ್ನು ಸೂರ್ಯೋದಯದ ಸಮಯದಲ್ಲಿ ನೋಡಿಯೇ ಸವಿಯಬೇಕು.

ತಾವರೆ ಕೊಳವೆಂದರೆ ಕೊಳದಲ್ಲಿ ಕೆಸರಿದೆ ಎಂದೇ ಅರ್ಥ. ನೈಸರ್ಗಿಕ ಕೊಳಗಳಾದರೆ ಬಹಳ ಎಚ್ಚರಿಕೆಯಿಂದ ಹೂಗಳನ್ನು ಕೀಳಬೇಕಾಗುತ್ತದೆ. ಯಾಕೆಂದರೆ ಕೊಳಕ್ಕೆ ಇಳಿದವರು ಕೆಸರಲ್ಲಿ ಹೂತುಹೋಗುವ ಅಪಾಯ ಇರುತ್ತದೆ. ಆದ್ದರಿಂದಲೆ ಜನ ತಾವರೆ ಕೊಳಕ್ಕೆ ಇಳಿಯಲು ಹಿಂಜರಿಯುತ್ತಾರೆ. ಉದ್ದನೆಯ ಕೋಲಿನ ಸಹಾಯದಿಂದ ಹೂಗಳನ್ನು ದಂಟಿನ ಸಮೇತ ಕೊಯ್ದು ದಡಕ್ಕೆ ಎಳೆದುಕೊಳ್ಳುತ್ತಾರೆ.

ಕಾಳಿದಾಸನ `ಶಾಕುಂತಲ~ ನಾಟಕದಲ್ಲೂ ತಾವರೆ ಸ್ಥಾನ ಪಡೆದಿದೆ. ನೀರನ್ನು ಅಂಟಿಸಿಕೊಳ್ಳದ ಅದರ ಎಲೆ, ತಣ್ಣನೆಯ ಹೂದಂಟು ಮತ್ತು ಕೋಮಲವಾದ ಸುಂದರ ಹೂಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಇದಕ್ಕೆ ಲಕ್ಷ್ಮೀಪ್ರಿಯ ಹೂ ಎಂಬ ಹೆಗ್ಗಳಿಕೆಯೂ ಇದೆ.

ಬಯಲು ಸೀಮೆಯಲ್ಲಿ ತಾವರೆಯನ್ನು ಕೃತಕವಾಗಿ ಬೆಳೆಯುವ ಪರಿಪಾಠ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಕೊಳವೆ ಬಾವಿಗಳ ನೀರನ್ನು ಸಂಗ್ರಹಿಸಲು ನಿರ್ಮಿಸುವ ಮಣ್ಣಿನ ತೊಟ್ಟಿಗಳಲ್ಲಿ ತಾವರೆಯನ್ನು ಬೆಳೆಯುತ್ತಾರೆ. ಬಿರಿದ ಹೂಗಳು ನೀರಿನ ತೊಟ್ಟಿಗೆ ಹೊಸ ಕಳೆಯನ್ನು ತಂದುಕೊಡುತ್ತವೆ. ಅದರ ಅಗಲವಾದ ಎಲೆಗಳು ತೊಟ್ಟಿಯಲ್ಲಿನ ನೀರು ಆವಿಯಾಗುವುದನ್ನು ಸ್ವಲ್ಪಮಟ್ಟಿಗೆ ತಡೆಯುತ್ತವೆ.

ಇನ್ನು ಕೆಲವರು ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ತಾವರೆಯನ್ನು ಬೆಳೆಯುವುದುಂಟು. ಹಬ್ಬದ ದಿನ ಹೂಗಳನ್ನು ಕೊಯ್ದು ಸಮೀಪದ ನಗರ ಅಥವಾ ಪಟ್ಟಣಕ್ಕೆ ಕೊಂಡೊಯ್ದು ಒಳ್ಳೆ ಬೆಲೆಗೆ ಮಾರಿ ಹಣ ಸಂಪಾದಿಸುತ್ತಾರೆ. ಆದರೆ ಈಗ ಬಿರಿದಿರುವ ಕಮಲಕ್ಕೆ ಬೇಡಿಕೆ ಇಲ್ಲ. ಬೆಳೆಗಾರರಿಗೆ ಆರ್ಥಿಕ ಲಾಭ ಇಲ್ಲದಿದ್ದರೂ ಅದರ ಅಗಲವಾದ ಎಲೆಗಳು ತೊಟ್ಟಿಗಳಲ್ಲಿ ನೀರು ಆವಿಯಾಗುವುದನ್ನು ತಡೆಯಲು ನೆರವಾಗುತ್ತಿವೆ. ರೈತರು ಅಷ್ಟರ ಮಟ್ಟಿಗೆ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.                                                                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT