ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಗುಳಿ ಪ್ರೊಫೆಸರ್ ಆಗಬೇಡಿ ಸರ್

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಪ್ತರ ಹೆಸರು, ವಿಳಾಸಗಳು ಮರೆತು ಹೋಗುತ್ತಿವೆಯೇ? ಈ ದಿನ ಮಾಡಬೇಕಾದ ಕೆಲಸಗಳು ಸಹ ನೆನಪಾಗುತ್ತಿಲ್ಲವೇ? ಮನೆಯಲ್ಲಿ ನೀವೇ ಇಟ್ಟ ವಸ್ತುಗಳು ಎಲ್ಲಿವೆ ಎಂಬುದೇ ಅರಿವಿಗೆ ಬರುತ್ತಿಲ್ಲವೇ? ಮನೆಯಿಂದ ಹೊರಟಿದ್ದೀರಿ, ಬಾಗಿಲಿಗೆ ಬೀಗ ಹಾಕೋಣಎಂದರೆ ಬೀಗವಾಗಲೀ, ಅದರ ಕೀಲಿ ಕೈಯಾಗಲೀ ಕಾಣುತ್ತಿಲ್ಲ, ಬೇಸರವಾಯಿತು ಟಿ.ವಿ ನೋಡೋಣ ಎಂದುಕೊಂಡರೆ ರಿಮೋಟ್ ಕಾಣಿಸುತ್ತಿಲ್ಲ, ಎಲ್ಲಿಟ್ಟಿದ್ದೀರಿ ಎಂಬುದೇ ನೆನಪಾಗುತ್ತಿಲ್ಲ. ಕಡೆಗೆ ಮನೆಯಿಂದ ಹೊರಬಿದ್ದರೆ ಯಾವ ದಿಕ್ಕಿಗೆ ಹೋಗಬೇಕಿದೆ ಎಂಬುದೇ ಗೊಂದಲಕ್ಕೀಡು ಮಾಡಿದೆ. ಪರೀಕ್ಷೆ ಹತ್ತಿರವಾಗುತ್ತಿದೆ ಎಂದು ವಾರಗಟ್ಟಲೆ ಕುಳಿತು ಓದಿದ್ದೀರಿ, ಆದರೆ ನಾಳೆ ಪರೀಕ್ಷೆ ಎಂದಾಗ ಎಲ್ಲವೂ ಮರೆತೇ ಹೋಗಿದೆ. ಎಷ್ಟೇ ನೆನಪಿಸಿಕೊಳ್ಳಲು ಯತ್ನಿಸಿದರೂ ಸ್ವಲ್ಪವೂ ನೆನಪಿಗೆ ಬರುತ್ತಿಲ್ಲ...

ನೆನಪು ಕೈಕೊಡುವುದು ಎಷ್ಟೊಂದು ದೊಡ್ಡ ಸಮಸ್ಯೆ, ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು, ನೆನಪಿನ ಶಕ್ತಿ ಮತ್ತೆ ಮೈಗೂಡಿಸಿಕೊಳ್ಳಬೇಕು ಎನಿಸುತ್ತಿದೆಯೇ?

ಮೇಲಿನ ಎಲ್ಲ ಪ್ರಶ್ನೆಗಳಿಗೂ ಅಥವಾ ಕೆಲವಕ್ಕಾದರೂ ನಿಮ್ಮ ಉತ್ತರ 'ಹೌದು' ಎಂದಾಗಿದ್ದರೆ, ನೀವು ನಿಮ್ಮನ್ನು `ಮರೆಗುಳಿ ಪ್ರೊಫೆಸರ್' ಎಂಬ ಅಣಕದಿಂದ `ಎಂಥ ಜ್ಞಾಪಕ ಶಕ್ತಿಯ ವ್ಯಕ್ತಿ ನಾನು' ಎಂದು ಗುರುತಿಸಿಕೊಳ್ಳುವಂತೆ ಮಾಡಿಕೊಳ್ಳಲು ಸೂಕ್ತ ಮಾರ್ಗ ಕಂಡುಕೊಳ್ಳಲೇಬೇಕು.

ಮರೆಗುಳಿತನದ ಸಮಸ್ಯೆ ನಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಜೀವನದ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ `ಅತ್ಯುತ್ತಮವಾದ ನೆನಪಿನ ಶಕ್ತಿ' ಇರುವುದು ವೃತ್ತಿ ಕ್ಷೇತ್ರ, ಆಪ್ತರ ನಡುವಿನ ಪ್ರಗತಿ ಹಾಗೂ ಸಂಬಂಧ ವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಯೇ ಒಪ್ಪುತ್ತಾರೆ. ಇಂಥ ಶಕ್ತಿಯನ್ನು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಯಾರೂ `ಮರೆಯಬಾರದು'.

ಮರೆವು ಮರೆಗೆ
ಹಲವರು ವಯಸ್ಸು ಆಗುತ್ತಿದ್ದಂತೆಯೇ ಕಲಿಕಾ ಪ್ರವೃತ್ತಿಯನ್ನು ಬಹುತೇಕ ನಿಲ್ಲಿಸಿಯೇ ಬಿಡುತ್ತಾರೆ. ಶಾಲೆ-ಕಾಲೇಜಿನ ವ್ಯಾಸಂಗ ಪೂರ್ಣಗೊಳ್ಳುತ್ತಿದ್ದಂತೆಯೇ ಹೊಸತನ್ನು ಕಲಿಯುವ ವಿಚಾರವನ್ನು, ಹೊಸ ಮಾಹಿತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದನ್ನೆಲ್ಲ `ಮರೆತೇ ಬಿಡುತ್ತಾರೆ'. ಅವರಿಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೆಂದರೆ ಅದೊಂದು ವೃಥಾ ಶ್ರಮದ ಕೆಲಸ ಎನಿಸಿಬಿಡುತ್ತದೆ. ಹಾಗಾಗಿ ಅವರು ನೆನಪಿಟ್ಟುಕೊಳ್ಳುವ ಕಸರತ್ತನ್ನೇ ಪಕ್ಕಕ್ಕೆ ತಳ್ಳಿಬಿಡುತ್ತಾರೆ. ಇದೇ ಅವರಲ್ಲಿನ ನೆನಪಿನ ಶಕ್ತಿ ಕ್ಷೀಣಿಸುತ್ತಾ ಬರುವಂತೆ ಮಾಡುತ್ತದೆ.

ವಯಸ್ಕರಂತೂ ತಮ್ಮದೇ ಆದ ಪ್ರತ್ಯೇಕ ಲೋಕದಲ್ಲಿ  ಕಳೆದುಹೋಗುತ್ತಾರೆ. ಜತೆಗೆ ಕೆಲವು ವೃತ್ತಿ ಕ್ಷೇತ್ರದ ಚಟುವಟಿಕೆಗಳು, ಮಿತವಾದ ಹವ್ಯಾಸಗಳು ಏನನ್ನಾದರೂ ಹೊಸತನ್ನು ಕಲಿಯುವುದಕ್ಕೆ ಪ್ರೋತ್ಸಾಹಿಸುವುದೇ ಇಲ್ಲ. ಭದ್ರತಾ ಸೇವೆ, ಕಂಪ್ಯೂಟರ್‌ನಲ್ಲಿ ದತ್ತಾಂಶ (ಡೇಟಾ) ದಾಖಲೀಕರಣ, ವಿವಿಧ ಕಂಪೆನಿಗಳಲ್ಲಿನ ಸ್ವಾಗತಕಾರರ ಮತ್ತು ಫ್ರಂಟ್ ಆಫೀಸ್ ಕೆಲಸ, ಅದರಲ್ಲೂ ಕಾಲ್ ಸೆಂಟರ್‌ಗಳಲ್ಲಿ ಒಂದೇ ಬಗೆಯ ಚಟುವಟಿಕೆಯಲ್ಲಿ ಇರುವವರು ಏಕತಾನತೆಯ ಕೆಲಸದ ವೈಖರಿಯಿಂದ ಹೊಸದರೆಡೆಗೆ ತೆರೆದುಕೊಳ್ಳುವ ಸಂಭವ ಬಹಳ ಕಡಿಮೆ. ಕೆಲಸದಲ್ಲಿ ಭಿನ್ನ ಸವಾಲುಗಳು, ಹೊಸ ಕಲಿಕೆ ಇಲ್ಲದಿರುವುದು, ಆಗಾಗ್ಗೆ ತರಬೇತಿಯೂ ಇಲ್ಲದ ಕಾರಣ ಇಂಥ ವೃತ್ತಿ ಬದುಕಿನವರ ಮೆದುಳು ಹೆಚ್ಚು ಚಟುವಟಿಕೆಯೇ ಇಲ್ಲದಂತೆ ಆಗುತ್ತದೆ. ಪರಿಣಾಮವಾಗಿ ಆ ಮೆದುಳು ಮಿತವಾದ ಕೆಲಸಗಳಿಗಷ್ಟೇ ಸೀಮಿತಗೊಂಡು, ಹೆಚ್ಚಿನ ಚಟುವಟಿಕೆಯನ್ನು, ನೆನಪಿನ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತಾ ಬರುತ್ತದೆ.

ಆರೋಗ್ಯದಿಂದ ಇರುವ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿ 40 ಅಥವಾ 50 ವರ್ಷ ಆಗುತ್ತಿದ್ದಂತೆಯೇ ಹಲವರಲ್ಲಿ ಆಲೋಚನೆಗಳು ಅರೆಬರೆಯಾಗುವುದು, ಹಳೆಯ ಕೆಲವು ಸಂಗತಿಗಳನ್ನು ತಕ್ಷಣಕ್ಕೆ ನೆನಪಿಸಿಕೊಳ್ಳಲು ಕಷ್ಟಪಡುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿಗೆ ವಯಸ್ಸಾಗುತ್ತಿದೆ, ಆತನ ನೆನಪಿನ ಶಕ್ತಿ ಶೇ 45ರಷ್ಟು ಕಡಿಮೆ ಆಗಿದೆ, ಇದು ವಯೋಸಹಜ ಲಕ್ಷಣ ಎನ್ನುವುದನ್ನು ವೈದ್ಯಶಾಸ್ತ್ರವೂ ಖಚಿತಪಡಿಸುತ್ತದೆ. ಹಾಗೆಂದು ಇದೊಂದು ದೊಡ್ಡ ಕಾಯಿಲೆ ಎಂದೋ, ಗಂಭೀರ ಸಮಸ್ಯೆ ಎಂದೋ ಪರಿಗಣಿಸಿ ಆತಂಕ ಪಡಬೇಕಾಗಿಲ್ಲ. ಕಳೆದು ಹೋಗುತ್ತಿರುವ ನೆನಪಿನ ಶಕ್ತಿಯನ್ನು ಮತ್ತೆ ಒಗ್ಗೂಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಸೂಕ್ತ ದಾರಿಗಳೂ ಇವೆ.

ಅಸಾಧಾರಣ ಈ ಮೆದುಳು
ನೀವೀಗ 40 ವರ್ಷದ ಗಡಿ ದಾಟಿದ್ದೀರಿ ಎಂದುಕೊಳ್ಳಿ. ನೀವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ನಿಮ್ಮ ಮೆದುಳು ಸಹ ದೇಹದ ಇತರ ಮಾಂಸಖಂಡಗಳಂತೆಯೇ ಒಂದು ಅಂಗ. ನೀವು ನಿಮ್ಮ ಕೈ-ಕಾಲುಗಳನ್ನು ಸಮರ್ಥವಾಗಿ ಬಳಸುವಂತೆಯೇ ಆ ಮೆದುಳೆಂಬ ಮಾಸಖಂಡವನ್ನೂ ಸಶಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು, ಇಲ್ಲವೆ ಹಾಗೇ ಅದರ ಶಕ್ತಿ-ಸಾಮರ್ಥ್ಯ ವ್ಯರ್ಥವಾಗಲು ಬಿಟ್ಟುಬಿಡಬಹುದು.

ಇಲ್ಲಿ ನೀವು ಬಹಳ ಅಗತ್ಯವಾಗಿ ತಿಳಿಯಲೇ ಬೇಕಾದದ್ದು ಏನೆಂದರೆ, 'ಮೆದುಳು ಎಂಬುದು ಹೆಚ್ಚು ಹೆಚ್ಚು ಬಳಕೆಯಾದಷ್ಟೂ ಅದಕ್ಕೆ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹರಿಯುತ್ತದೆ. ಅದರಲ್ಲೂ ಅದನ್ನು ಅಸಾಮಾನ್ಯ ರೀತಿಯಲ್ಲಿ ಬಳಸುತ್ತಾ ಹೋದಂತೆಲ್ಲ ಆ ಮೆದುಳಿನಲ್ಲಿ ಇನ್ನಷ್ಟು ಕೋಶಗಳ, ಸಂಪರ್ಕ ತಂತುಗಳ ಅಭಿವೃದ್ಧಿ ಆಗುತ್ತದೆ'- ಇದನ್ನು ಮೆದುಳಿಗೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳೆಲ್ಲವೂ ಖಚಿತಪಡಿಸಿವೆ.

ವಯಸ್ಸು ಆಗುತ್ತಿದ್ದಂತೆಯೇ ನೆನಪಿನ ಶಕ್ತಿ ಕ್ಷೀಣಿಸುವುದು ಒಂದು ಸಹಜವಾದ ದೈಹಿಕ ಕ್ರಿಯೆ. ಹಾಗಿದ್ದೂ, ಮೆದುಳಿಗೆ ಹೆಚ್ಚು ಸವಾಲಿನಂತಹ ಕೆಲಸಗಳನ್ನು ನೀಡುವ ಮೂಲಕ, ಅದರ ಶಕ್ತಿಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಮೂಲಕ, ಸದಾ ಹೊಸತನ್ನೇನಾದರೂ ಕಲಿಯುವ ಮೂಲಕ ನೆನಪಿನ ಶಕ್ತಿ ಕಡಿಮೆ ಆಗುವ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಇತ್ತೀಚಿನ ಹಲವು ಅಧ್ಯಯನಗಳೂ ಈ ಅಂಶವನ್ನು ದೃಢಪಡಿಸಿವೆ.

ಮೆದುಳಿನ ಶಕ್ತಿ ಬಳಸಿ ಇಲ್ಲವೇ ಕಳೆದುಕೊಳ್ಳಿ!

ಮೆದುಳಿಗೆ ಕಸರತ್ತು ನೀಡುವಂತಹ ಹೊಸ ಹೊಸ ಲೆಕ್ಕದಾಟ, ಪದಬಂಧಗಳಲ್ಲಿ ತೊಡಗಿಸಿಕೊಳ್ಳಿ


ಚದುರಂಗದಾಟ ಕಲಿಯಿರಿ, ಆಗಾಗ್ಗೆ ಆಡುತ್ತಿರಿ


ಯಾವುದಾದರೂ ವಿದೇಶಿ ಭಾಷೆ ಕಲಿಯಲು ಆರಂಭಿಸಿ, ಅದಕ್ಕೆ ಸಂಬಂಧಿಸಿದ ಕೋರ್ಸ್‌ಗೆ ಸೇರಿಕೊಳ್ಳಿ

ಪ್ರತಿನಿತ್ಯವೂ ನಿಮ್ಮ ಮೆದುಳಿಗೆ ಸವಾಲು ಒಡ್ಡುವಂತಹ ಕೆಲಸಗಳನ್ನು ಮಾಡಿ

ಧ್ಯಾನ- ಪ್ರಾಣಾಯಾಮವನ್ನು ನಿತ್ಯ ರೂಢಿಸಿಕೊಳ್ಳಿ

ಮೆದುಳಿಗೆ ಕಸರತ್ತು
ಮೆದುಳಿಗೆ ಸಾಕಷ್ಟು ಕಸರತ್ತು ನೀಡುವಂತಹ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಪುಸ್ತಕಗಳ ಓದು ಸಹ ಮೆದುಳಿಗೆ ಉತ್ತಮ ವ್ಯಾಯಾಮ ಒದಗಿಸಬಲ್ಲದು. ಪದಬಂಧ ರಚನೆ, ಚದುರಂಗದ ಆಟ, ಸಣ್ಣ ಗಣಿತ ಸಮಸ್ಯೆಗಳನ್ನು ಪರಿಹರಿಸುವಂತಹ ಆಟ ಮೊದಲಾದವೂ ಪೂರಕ ಚಟುವಟಿಕೆಗಳೇ ಆಗಿವೆ.

ವಯಸ್ಕರ ನಿತ್ಯ ಬದುಕಿನಲ್ಲಿ ನಿಗದಿತ ಆಹಾರ ಪದ್ಧತಿ ಸಹ ಅವರ ಮೆದುಳಿನ ಕಾರ್ಯವೈಖರಿ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲಿನಿಂದಲೂ ಉತ್ತಮ ಆಹಾರ ಸೇವನೆ ರೂಢಿಸಿಕೊಂಡವರು ಅದರ ಫಲವನ್ನು, ಫಲಿತಾಂಶವನ್ನು ವಯಸ್ಸಾದ ಕಾಲದಲ್ಲಿ ಖಂಡಿತಾ ಪಡೆದುಕೊಳ್ಳುತ್ತಾರೆ. ನಿಯಮಿತವಾದ ದೈಹಿಕ ವ್ಯಾಯಾಮ ಮಾನಸಿಕ ಶಕ್ತಿ ಹೆಚ್ಚಿಸಬಲ್ಲದು. ನಿಯಮಿತವಾಗಿ ವ್ಯಾಯಾಮ ಮಾಡುವವರ ಪ್ರತಿಕ್ರಿಯೆಯ ವೇಗ ಇತರರಿಗಿಂತ ಹೆಚ್ಚೇ ಇರುತ್ತದೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ಅವಧಿಯೂ ದೀರ್ಘವಾಗಿರುತ್ತದೆ.

ಆರೋಗ್ಯಕಾರಿ ಮೆದುಳು ಎಂಬುದು ಬುದ್ಧಿವಂತ ಮಸ್ತಿಷ್ಕವಷ್ಟೇ ಆಗಿರುವುದಿಲ್ಲ, ಅದರ ಕಾರಣವಾಗಿ ನಡೆಯುವ ಸಾಮಾಜಿಕ ಚಟುವಟಿಕೆಗಳೂ ಮಹತ್ವದ್ದೇ ಆಗಿರುತ್ತವೆ. ವಿರಾಮವಿದೆ ಎಂದು ಸುಮ್ಮನೇ ಟಿ.ವಿ ಎಂಬ ಮೂರ್ಖರ ಪೆಟ್ಟಿಗೆ ಎದುರು ಕೂರಬಾರದು. ಓದುಗರ ಕೂಟ, ಸಾಮೂಹಿಕ ಪ್ರಾರ್ಥನೆ ಮೊದಲಾದ ಗುಂಪು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವೃದ್ಧಾಪ್ಯ ಎನ್ನುವುದು ಆರೋಗ್ಯಕಾರಿಯಾಗಿಯೇ ಇರುತ್ತದೆ. ಸಾಮಾಜಿಕ ಸಂಬಂಧ ಮತ್ತು ಚಟುವಟಿಕೆಗಳನ್ನು ಕಡಿಮೆಗೊಳಿಸಿದರೆ ಅದರ ಪರಿಣಾಮ ವ್ಯಕ್ತಿಯ ಮೇಲೆ ಆಗೇ ಆಗುತ್ತದೆ.

ರಷ್ಯಾ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಡಾ. ರಾಬರ್ಟ್ ವಿಲ್ಸನ್ ಅವರು ಹೇಳುವಂತೆ, 'ಯಾರು ಒತ್ತಡ, ಆತಂಕ, ಗಂಭೀರ ಸ್ವರೂಪದ ನಿರಾಶೆಗೆ ಒಳಗಾಗುವರೋ ಅಥವಾ ವಿಪರೀತ ಚಿಂತೆಗಳನ್ನು ಹಚ್ಚಿಕೊಳ್ಳುತ್ತಾರೋ ಅವರು ಮರೆಗುಳಿತನಕ್ಕೆ ಇತರರಿಗಿಂತ ಬಹಳ ಬೇಗ ತುತ್ತಾಗುತ್ತಾರೆ'.

ಕಡಿಮೆ ವಿದ್ಯಾಭ್ಯಾಸದವರು, ಮೆದುಳಿಗೆ ಸವಾಲು ಎನಿಸದ ಕೆಲಸಗಳನ್ನು ನಿರ್ವಹಿಸುವವರು 'ಅಲ್‌ಝೈಮರ್' (ನೆನಪಿನ ಶಕ್ತಿ ನಾಶ) ಕಾಯಿಲೆಗೆ ತುತ್ತಾಗುವ ಅಪಾಯ ಇತರರಿಗಿಂತ ಮೂರು-ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎಂಬುದನ್ನು ಇತ್ತೀಚಿನ ಹಲವು ಅಧ್ಯಯನ ವರದಿಗಳು ಖಚಿತಪಡಿಸಿವೆ.

ಉತ್ತಮ ನೆನಪಿನ ಶಕ್ತಿಗೆ ಕೆಲವು ಟಿಪ್ಸ್‌ಗಳು ಇಲ್ಲಿವೆ (ವಿಶೇಷವಾಗಿ ವಿದ್ಯಾರ್ಥಿಗಳಿಗೆ)
ನೆನಪಿಟ್ಟುಕೊಳ್ಳಲು ಪ್ರಯತ್ನಿಸುವುದು
ಆಸಕ್ತಿ: ಅರ್ಥ, ಮೌಲ್ಯ ಮತ್ತು ಸಂಬಂಧವನ್ನು ಅವಲಂಬಿಸಿಯೇ ಯಾವುದೇ ವಿಷಯಕ್ಕೆ ಮೆದುಳು ಪ್ರಾಧಾನ್ಯತೆ ನೀಡುತ್ತದೆ. ಹಾಗಾಗಿ ನೀವು ಏನು ಕಲಿಯುತ್ತಿದ್ದೀರೋ ಅದರ ಅರ್ಥವನ್ನು ಚೆನ್ನಾಗಿ ತಿಳಿದುಕೊಳ್ಳಿ. ಯಾವುದನ್ನೇ ಆದರೂ ಕ್ರಮಬದ್ಧವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಆ ವಿಷಯ ಅಥವಾ ವಸ್ತುವಿನಲ್ಲಿ ನಿಮಗೆ ಅಪಾರ ಆಸಕ್ತಿ ಇರಬೇಕು. ಆಗ ಆ ವಿಷಯ/ ವಸ್ತುವಿನ ನೆನಪು ನಿಮ್ಮ ಮೆದುಳಿನಲ್ಲಿ ಅಳಿಸಲಾಗದಂತೆ ದಾಖಲಾಗಿರುತ್ತದೆ.
ಉದ್ದೇಶಪೂರ್ವಕವಾಗಿ ನೆನಪಿಟ್ಟುಕೊಳ್ಳುವುದು: ನಿಮ್ಮ ಕ್ರಿಯೆಯು ನೀವು ಯಾವುದನ್ನು ನೆನಪಿಟ್ಟುಕೊಳ್ಳಲು ಇಚ್ಛಿಸುತ್ತೀರಿ ಅಥವಾ ಯಾವುದನ್ನು ಅಲ್ಲ ಎಂಬುದನ್ನೇ ಅವಲಂಬಿಸಿರಬೇಕು. ನೀವು ಯಾವುದನ್ನು ಬಹಳ ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಎಂದಿರುವಿರೋ, ಆ ವಿಷಯ/ ವಸ್ತು ನಿಮಗೆ ಸರಿಯಾದ ರೀತಿಯಲ್ಲಿ, ಮೊದಲ ಬಾರಿಗೆ ದೊರಕಿದೆ ಎಂದು ಭಾವಿಸುವಂತಹ ಸಕಾರಾತ್ಮಕ ನಡೆ ನಿಮ್ಮದಾಗಿರಬೇಕು. ಗಮನವಿಟ್ಟು ಆಲಿಸುವುದರಿಂದಲೇ ಕಲಿತಂತಾಯಿತು ಎಂದಲ್ಲ, ಸಾಕಷ್ಟು ಗಮನ ನೀಡದೇ ಇರುವಾಗಲೂ ಕಲಿತುಕೊಳ್ಳುವ ಕ್ರಿಯೆಯೇ ನೆನಪಿನಲ್ಲಿ ಇರಿಸಬಲ್ಲದು.

ಹಿನ್ನೆಲೆ ಅರಿವು: ಯಾವುದೇ ವಿಷಯ/ ವಸ್ತುವಿಗೆ ಸಂಬಂಧಿಸಿ ನಿಮ್ಮ ಮೂಲ ಜ್ಞಾನವನ್ನು ನೀವು ಎಷ್ಟು ಹೆಚ್ಚಿಸಿಕೊಳ್ಳುವಿರೋ ಅಷ್ಟರಮಟ್ಟಿಗೆ ಹೊಸತರ ಕಲಿಕೆ, ಅರ್ಥ ಮಾಡಿಕೊಳ್ಳುವಿಕೆ ಹಾಗೂ ನೆನಪಿಟ್ಟುಕೊಳ್ಳುವಿಕೆಯ ಸಾಮರ್ಥ್ಯ ಇರುತ್ತದೆ.

ಯಾರೇ ಆದರೂ ಯಾವುದಾದರೂ ವಿಷಯವನ್ನು ಕಲಿಯಬೇಕೆಂದರೆ ಅದರಲ್ಲಿನ ಬಹಳ ಪ್ರಮುಖವಾದ ಅಂಶ ಯಾವುದು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಅಂತಹುದನ್ನೇ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು ಕಲಿಯಲು ಆರಂಭಿಸಬೇಕು. ಹೊಸ ಆಲೋಚನೆಗಳನ್ನು ಒಂದು ಕ್ರಮಬದ್ಧ ರೀತಿಯಲ್ಲಿ ಗುಂಪುಗಳಾಗಿಸಿ ರೂಪಿಸಿಕೊಂಡರೆ ನಿಮ್ಮ ಕಲಿಯುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆಯೂ ಸರಳ ಮತ್ತು ವೇಗವಾಗುತ್ತದೆ.
ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು

ಕಂಠಪಾಠ ಅಥವಾ ಉದ್ಘೋಷ: ನಿಮ್ಮ ಆಲೋಚನೆಗಳನ್ನು ನಿಮ್ಮಷ್ಟಕ್ಕೆ ನೀವೇ ಗಟ್ಟಿಯಾಗಿ ದೊಡ್ಡ ದನಿಯಲ್ಲಿ ಹೇಳಿಕೊಳ್ಳುವುದರಿಂದಲೂ ಅವನ್ನು ನಿಮ್ಮ ನೆನಪಿನ ಕೋಶದಲ್ಲಿ ದಾಖಲಿಸಿದಂತಾಗುತ್ತದೆ ಮತ್ತು ಅವು ತಕ್ಷಣದ ಪ್ರತಿಕ್ರಿಯೆಯನ್ನೂ ಒದಗಿಸುತ್ತವೆ. ಇಂಥ ಪ್ರತಿಕ್ರಿಯೆಗಳು ಹೆಚ್ಚಿದಲ್ಲಿ ನಿಮ್ಮ ಕಲಿಯುವಿಕೆಯು ವೇಗ ಪಡೆದುಕೊಂಡಿದೆ ಮತ್ತು ನಿಖರವಾಗಿದೆ ಎಂದೇ ಅರ್ಥ.

ದೃಶ್ಯೀಕರಣ: ಮೆದುಳು ಬಹಳ ಬೇಗ ಗ್ರಹಿಸುವುದು ಮತ್ತು ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂತಹ ಕ್ರಿಯೆಯು ದೃಶ್ಯಗಳ ವೀಕ್ಷಣೆಯ ಮೂಲಕವೇ ಆಗಿದೆ. ಅದೇ ರೀತಿ ನೀವು ಕಲಿಯುವುದನ್ನು ಮೆದುಳಿನಲ್ಲೇ ಚಿತ್ರೀಕರಿಸಿ ಇಟ್ಟುಕೊಳ್ಳುವ ಕ್ರಿಯೆಯನ್ನು ರೂಢಿಸಿಕೊಂಡರೆ ಅದು ಮೆದುಳಿನ ಪ್ರತ್ಯೇಕ ಕೋಶದಲ್ಲಿ ದಾಖಲಾದಂತೆಯೇ ಸರಿ. ಅಂದರೆ, ಈ ದೃಶ್ಯೀಕರಣ ಕ್ರಮವು ಓದುವ ಮತ್ತು ಕೇಳುವ ಮೂಲಕ ಕಲಿತು ನೆನಪಿಟ್ಟುಕೊಳ್ಳುವ ಕ್ರಿಯೆಗಿಂತ ಬಹಳ ಸಮರ್ಥ ಮಾರ್ಗವಾಗಿದೆ.

ಸಂಘಟಿತ ಕ್ರಮ: ನೀವು ಏನು ಕಲಿಯುತ್ತಿರುವಿರೋ ಅದು ನಿಮಗೆ ಪರಿಚಿತವಾದುದು ಎಂದು ಪದೇ ಪದೇ ಎನಿಸುತ್ತಿದ್ದರೆ ಅಂತಹ ವಿಷಯ/ ವಸ್ತುಗಳನ್ನು ಕುರಿತ ನಿಮ್ಮ ನೆನಪು ಹೆಚ್ಚೇ ಇರುತ್ತದೆ. ನರಮಂಡಲದಲ್ಲಿ ಸಂಪರ್ಕಗಳ ಕೊಂಡಿ ಏರ್ಪಡುವ ಮೂಲಕವೇ ನೆನಪು ಎಂಬ ಕ್ರಿಯೆ ನಡೆಯುತ್ತದೆ. `ಇದು ನಾನಾಗಲೇ ತಿಳಿದಿರುವ ಮತ್ತು ಅರ್ಥ ಮಾಡಿಕೊಂಡಿರುವುದಕ್ಕೆ ಎಷ್ಟು ಹೋಲುತ್ತದೆ' ಎಂಬ ಪ್ರಶ್ನೆಯೊಂದಿಗೇ ನಿಮ್ಮ ಕಲಿಕೆ ಆರಂಭಿಸಿ. ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುತ್ತಾ ಸಾಗಿ.

(ಲೇಖಕರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಮಿಕ್ಸ್ ಸಂಸ್ಥೆಯ ಸಿಇಒ ಮತ್ತು ಸ್ಮರಣಶಕ್ತಿ ತಂತ್ರಜ್ಞ)(ಮರೆಗುಳಿತನ ಮಹಿಳೆಯರಿಗೂ ಅನ್ವಯಿಸುತ್ತದೆ. ಕೇವಲ ಪ್ರಾಸದ ಕಾರಣಕ್ಕಾಗಿ ತಲೆಬರಹದಲ್ಲಿ ಸರ್ ಎಂದು ಸಂಬೋಧಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT