ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತ ಚಿತ್ರವ ಮರಳಿ ತಂದು...

ಕಲಾಪ
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಮಿಲಿಂದ್ ನಾಯಕ್- ಮೂರ್ನಾಲ್ಕು ದಶಕಗಳಿಂದ ಕುಂಚದ ಸಹವಾಸಕ್ಕೆ ಬಿದ್ದ ಹೆಸರಾಂತ ಚಿತ್ರಕಲಾವಿದ. ಅವರಿಗೀಗ ಅರವತ್ತರ ಏರುಜವ್ವನ. ಆದರೆ ಚಿತ್ರಕಲೆಯ ಬಗ್ಗೆ, ಕಲಾಕೃತಿಗಳ ಬಗ್ಗೆ ಮಾತಿಗಿಳಿದರೆಂದರೆ ಷೋಡಶದ ಹುಮ್ಮಸ್ಸು.

ಬಾಳಸಂಜೆ ಎದುರಾದಾಗ ಅದೇ ಬೆಳಗು ಮತ್ತು ಮಧ್ಯಾಹ್ನ; ಅಂದರೆ ಬಾಲ್ಯ ಮತ್ತು ತಾರುಣ್ಯದ ದಿನಗಳು ಕಾಡುವುದು ಸಹಜ. ಮಿಲಿಂದ್ ನಾಯಕ್ ಅವರನ್ನು ಇತ್ತೀಚೆಗೆ ಕಾಡಿದ್ದು ಅಂತಹ ಕಾಲಘಟ್ಟದಲ್ಲಿ ಅವರು ಮಾಡಿರಬಹುದಾದ ಕಲಾಕೃತಿಗಳು. ತಾನು ಹೇಗೆ ಬರೆದಿರಬಹುದು? ಅವು ಬರಿಯ ಗೀಚುಗಳೇ? ಅಲ್ಲೇನಾದರೂ ತಿರುಳು ಇದ್ದಿತ್ತೇ? ಜನಪರವಾದ ಕಲಾಕೃತಿಗಳು ಇದ್ದುವೇ ಎಂಬ ಪ್ರಶ್ನೆ.

ಅವರ `ಕರ್ಮಭೂಮಿ' (ಸ್ಟುಡಿಯೊ)ದ ತುಂಬಾ ಪೇರಿಸಿಟ್ಟ ಕಲಾಕೃತಿಗಳ ಪೆಟ್ಟಿಗೆಗಳನ್ನು ತೆರೆದಾಗ ಅವರಿಗೇ ಅಚ್ಚರಿಯಾಯಿತಂತೆ. ಆಗ ತಮಗಾದ ಅಚ್ಚರಿ, ಖುಷಿ ಕಲಾಪ್ರೇಮಿಗಳಿಗೂ ಆದರೆ ಒಳ್ಳೆಯದಲ್ಲವೇ ಎಂಬ ಯೋಚನೆ ಬಂದಿದ್ದೇ ಅವರೊಂದು ಪ್ರದರ್ಶನಕ್ಕೆ ಸಿದ್ಧತೆ ಮಾಡಿಯೇಬಿಟ್ಟರು.

ಮರೆತ ಕಲಾಕೃತಿಗಳ ವೀಕ್ಷಣೆಯ ಬೆರಗು
ಮಿಲಿಂದ್ ನಾಯಕ್ ಅವರು ತಮ್ಮ ಹಳೆಯ ಕಲಾಕೃತಿಗಳ ಪ್ರದರ್ಶನವನ್ನು ಕೂಕ್ಸ್‌ಟೌನ್‌ನ ತಮ್ಮ ಸ್ಟುಡಿಯೊದಲ್ಲಿ ಜು.17ರಿಂದ ಒಂದು ತಿಂಗಳ ಕಾಲ ಏರ್ಪಡಿಸಿದ್ದಾರೆ.

1973ರಿಂದೀಚೆಗೆ ಮಾಡಿದ ಕಲಾರಚನೆಗಳನ್ನು ವೀಕ್ಷಿಸುವ ಅವಕಾಶ ಈ ಪ್ರದರ್ಶನದಲ್ಲಿದೆ. ಬರೋಬ್ಬರಿ ಮೂರು ದಶಕಗಳ ಕಲಾಕೃತಿಗಳನ್ನು ಜೋಪಾನ ಮಾಡಿದ್ದೀರಾ? ಎಂದು ಕೇಳಿದರೆ, `ಇದು ನನ್ನ ಐಡಿಯಾ ಅಲ್ಲ. ನನ್ನ ಆತ್ಮೀಯ ಕಲಾವಿದರೊಬ್ಬರು ತಮ್ಮ ಹಳೆಯ ಕಲಾಕೃತಿಗಳನ್ನು, ಅವು ಇಷ್ಟವಾಗಲಿಲ್ಲ ಅಥವಾ ಸಂಗ್ರಹಿಸಿಟ್ಟುಕೊಳ್ಳಲು ಜಾಗವಿಲ್ಲ ಇತ್ಯಾದಿ ಸಬೂಬುಗಳನ್ನು ಇಟ್ಟುಕೊಂಡು ಎಸೆಯುವುದು, ನಾಶಪಡಿಸುವುದು ದೊಡ್ಡ ತಪ್ಪು. ಆ ಸಂದರ್ಭದಲ್ಲಿ ಒಂದು ಕಲಾಕೃತಿ ಇಷ್ಟವಾಗದಿದ್ದರೂ ದಶಕದ ನಂತರ ನೀವೇ ನೋಡಿದರೂ ಅಲ್ಲೊಂದು ಅರ್ಥ, ಹೊಸ ಹೊಳಹು ನಿಮಗೇ ಕಂಡೀತು' ಎಂದು ಕಿವಿಮಾತು ಹೇಳಿದರು. ಅಂದಿನಿಂದ ಕಲಾಕೃತಿಗಳನ್ನು ನಾನು ನಾಶಪಡಿಸಿಲ್ಲ. ಈಗ ಮಾಗಿದ ಅನುಭವ ನನ್ನದಾಗಿದೆ. ಎಲ್ಲವನ್ನೂ ತಲಸ್ಪರ್ಶಿಯಾಗಿ ನೋಡುವ ಅವಕಾಶ ಸಿಕ್ಕಿದೆ' ಎಂದು ನಗುತ್ತಾರೆ.

ಜಗತ್ತಿನ ಹೆಸರಾಂತ ಚಿತ್ರ ಕಲಾವಿದರ ಸಾಲಿನಲ್ಲಿರುವ ಮಿಲಿಂದ್ ನಾಯಕ್ ಅವರಿಗೆ ಯೌವನದಲ್ಲಿ ತಾವು ಬಿಡಿಸಿದ ಕಲಾಕೃತಿಗಳನ್ನು ಈಗ ನೋಡಿದರೆ ಏನನ್ನಿಸಬಹುದು? ಹೀಗಂತಾರೆ:

`ಕಲಾಕೃತಿಗೆ ಆಳ, ವಿಸ್ತಾರವಾದ ಅರ್ಥ, ನೋಟ ಸಿಗಬೇಕೆಂದರೆ ಅನುಭವ ಮಾಗಬೇಕು. ಕುಂಚದ ಬೀಸುಗಳು ಪಳಗಿ ಪಳಗಿ ಉತ್ತಮ ಕಲಾಕೃತಿಗಳು ಹೊರಹೊಮ್ಮುತ್ತವೆ. ನಾನೂ ಹಾಗೆಯೇ. ಆ ಕಾಲದಲ್ಲಿ ಮಾಡಿದ ಚಿತ್ರಗಳು ಆ ಕಾಲಕ್ಕೆ ನನಗೆ ಹಿಡಿಸಿರಬಹುದು. ಇಷ್ಟು ವರ್ಷಗಳ ಅನುಭವದ ನಂತರ ಈಗ ಅವುಗಳನ್ನು ನೋಡುವಾಗ ಕೆಲವು ಬಾಲಿಶ ಅನಿಸಬಹುದು, ಇನ್ನು ಕೆಲವು ಹೆಮ್ಮೆ ಮೂಡಿಸಬಹುದು. ಎಷ್ಟೋ ಚಿತ್ರಗಳನ್ನು ಗ್ಯಾಲರಿ ಅಥವಾ ನನ್ನದೇ ಸ್ಟುಡಿಯೊದಲ್ಲಿ ನೋಡುವುದು ಹಾಗಿರಲಿ, ನನ್ನ ಸ್ಮೃತಿಪಟಲದಿಂದಲೇ ಮಾಸಿಹೋಗಿದ್ದವು, ಗೊತ್ತಾ?'

ಇಂತಹುದೊಂದು ಪ್ರದರ್ಶನ ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ ಎಂಬುದು ಇದರ ವಿಶೇಷ ಎಂದು ಅವರು ಹೇಳಿಕೊಳ್ಳುತ್ತಾರೆ.

ಇಷ್ಟಕ್ಕೂ ಪ್ರದರ್ಶನ ಈಗ ಯಾಕೆ ಎಂದರೆ...

`ನಾನು ಯಾವತ್ತೂ ಯಾವುದೋ ಪೂರ್ವನಿರ್ಧರಿತ ಐಡಿಯಾದಂತೆ ಕಲಾಕೃತಿ ರಚಿಸಿದವನಲ್ಲ. ಕೈಗಳು ಓಡಿದಂತೆ ಕಣ್ಣು ಅನುಸರಿಸುತ್ತದೆ. ಆ ಕ್ಷಣಕ್ಕೆ ತೋಚಿದ ಥೀಮ್, ಶೇಡ್, ಸೈಜ್ ಎಲ್ಲವೂ ಮೂಡಿಬರುತ್ತದೆ. ಕೆಲವೊಮ್ಮೆ 30ರಿಂದ 40 ಗಂಟೆ ಕೆಲಸ ಮಾಡಿದ್ದೂ ಇದೆ. ಅವೆಲ್ಲವೂ ಈಗ ಸಿಹಿ ನೆನಪು. ಸ್ಟುಡಿಯೊದಲ್ಲಿ ಸಂಗ್ರಹಿಸಿಟ್ಟಿರುವ ಅಷ್ಟೂ ಬಾಕ್ಸ್‌ಗಳಲ್ಲಿ ಇರುವುದು ನನ್ನ ಅಂತಹ ನೂರಾರು ನೆನಪುಗಳೇ. ಇವ್ಯಾವುದೂ ಎಂದೂ ಪ್ರದರ್ಶನ ಕಂಡ ಕಲಾಕೃತಿಗಳಲ್ಲ. ಹಾಗಾಗಿ ಕುಂಚಪ್ರೇಮಿಗಳು ಬೇಕಾದ ಬಾಕ್ಸ್‌ನಿಂದ ಬೇಕಾದ ಕಲಾಕೃತಿಯನ್ನು ವೀಕ್ಷಿಸಬಹುದು. ಅದರ ಬಗ್ಗೆ ನನ್ನೊಂದಿಗೆ ಚರ್ಚಿಸಬಹುದು' ಎಂದು ವಿವರಿಸುತ್ತಾರೆ ನಾಯಕ್.

ಕಲಾಕೃತಿಗಳು ಜನಪರವಾಗಿರಬೇಕು. ಜೊತೆಗೆ ಜನರನ್ನು ತಲುಪಬೇಕು ಎಂಬ ಚಿಂತನೆಯುಳ್ಳ ಕಲಾವಿದ ಮಿಲಿಂದ್ ನಾಯಕ್. ತಮ್ಮ ಕಲಾಕೃತಿಗಳನ್ನು ಹೀಗೆ ಮುಕ್ತ ವೀಕ್ಷಣೆಗೆ ತೆರೆದಿಡುವುದೂ ಜನಪದ ನಿಲುವೇ.

ಪ್ರದರ್ಶನ ನಡೆಯುವ ಸ್ಥಳ: ದಿ ಸ್ಟುಡಿಯೊ, 26/2, ಒಂದು ಮತ್ತು ಎರಡನೆಯ ಅಡ್ಡರಸ್ತೆಯ ನಡುವೆ, ಡಿ ಕಾಸ್ತಾ ಲೇಔಟ್, ಕೂಕ್‌ಟೌನ್. ಸಮಯ: 11ರಿಂದ 6 (ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 6). ಜುಲೈ 17ರಿಂದ ಆಗಸ್ಟ್ 16ರವರೆಗೆ. ಸಂಪರ್ಕಕ್ಕೆ: 93412 47279.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT