ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತುಹೋದ ರಾಜಕಾರಣಿ ಫಿರೋಜ್ ಗಾಂಧಿ

Last Updated 1 ಏಪ್ರಿಲ್ 2014, 20:20 IST
ಅಕ್ಷರ ಗಾತ್ರ

ದೇಶದ ಮೊದಲ ಪ್ರಧಾನಿ ನೆಹರೂ ಅಳಿಯ, ಮೂರನೇ ಪ್ರಧಾನಿ ಇಂದಿರಾ ಗಾಂಧಿಯವರ ಪತಿ ಮತ್ತು ಭಾರತದ  ಆರನೇ ಪ್ರಧಾನಿ ರಾಜೀವ್ ಗಾಂಧಿಯವರ ತಂದೆ, ಆಡಳಿತದ ಅದಕ್ಷತೆ ಮತ್ತು ಸಾರ್ವಜನಿಕ ಜೀವನದ ಭ್ರಷ್ಟಾಚಾರವನ್ನು ಬಯಲಿಗೆಳೆದ  ಅತ್ಯಂತ ಜನಪ್ರಿಯ ಲೋಕಸಭಾ ಸದಸ್ಯ ಫಿರೋಜ್ ಗಾಂಧಿ (1912–1960). ಮುಂಬೈನ ಪಾರ್ಸಿ ಕುಟುಂಬ­ದಲ್ಲಿ ಜನಿಸಿದ ಇವರು ಮೂಲತಃ  ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು.

ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಇವರು ಭಾರತಕ್ಕೆ ಮರಳಿ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋದರು.

ನೆಹರೂ ಕುಟುಂಬಕ್ಕೆ ಹತ್ತಿರವಾದ ಫಿರೋಜ್, ನೆಹರೂ ಪತ್ನಿ ಕಮಲಾ ನೆಹರೂ ಅವರು ಅನಾರೋಗ್ಯದಿಂದ ನಿಧನರಾದಾಗ ಅವರ ಸಮೀಪ­ದಲ್ಲಿದ್ದರು. 1942ರಲ್ಲಿ ಇಂದಿರಾ ಅವರನ್ನು ತಮ್ಮ 30ನೇ ವಯಸ್ಸಿನಲ್ಲಿ ಹಿಂದೂ ಆಚರಣೆ­ಯಂತೆ ವಿವಾಹ­ವಾದರು. ನೆಹರೂ ಅವರಿಗೆ ಈ ವಿವಾಹ ಇಷ್ಟವಿರ­ಲಿಲ್ಲ. ಅದೇ ವರ್ಷ ಕ್ವಿಟ್ ಇಂಡಿಯಾ ಚಳವಳಿ­ಯಲ್ಲಿ ಅವರಿ­ಬ್ಬರೂ ಭಾಗವಹಿಸಿ­ದರು. ಮುಂದೆ ಅಲಹಾ­ಬಾದನ್ನು ತಮ್ಮ ಕಾರ್ಯಕ್ಷೇತ್ರ ಮಾಡಿ­ಕೊಂಡರು.

‘ದಿ ನ್ಯಾಷನಲ್ ಹೆರಾಲ್ಡ್‘, ‘ದಿ ನವಜೀವನ್’ ಪತ್ರಿಕೆಗಳ ಕಾರ್ಯನಿರ್ವಾಹಕ ನಿರ್ದೇಶಕ­ರಾದರು. ಮೊದಲ ಲೋಕಸಭೆಗೆ  ರಾಯ್‌ಬರೇಲಿಯಿಂದ ಆಯ್ಕೆಯಾದ ಇವರು ಮರಣ ಹೊಂದುವ ತನಕ  ಆ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಜೀವನದಲ್ಲಿ ಎಂದೂ ಆಸ್ತಿ ಮಾಡದ ಇವರು ನೆಹರೂ ಕುಟುಂಬದ ನೆರಳು ತಮ್ಮ ಧ್ಯೇಯದ ಮೇಲೆ ಬೀಳದಂತೆ ನೋಡಿಕೊಂಡಿ­ದ್ದಲ್ಲದೆ, ಮೊದಲ ಚುನಾಯಿತ ಕೇಂದ್ರ ಸರ್ಕಾರ ಭ್ರಷ್ಟಾಚಾರಕ್ಕೆ ಬಲಿ ಬೀಳ­ಬಾರದೆಂದು ಶ್ರಮಿಸಿದರು. ವಿಮೆ ರೂಪದಲ್ಲಿ ಜನರಿಂದ ಸಂಗ್ರಹಿಸಿದ್ದ ಹಣವನ್ನು ರಾಮಕೃಷ್ಣ ದಾಲ್ಮಿಯಾ ಎಂಬ ಕಾಂಗ್ರೆಸ್ ಬೆಂಬಲಿಗ ದೊಡ್ಡ ವ್ಯಾಪಾರಿ ತಮ್ಮ ಸ್ವಂತದ ವ್ಯಾಪಾರಕ್ಕೆ ಬಳಸಿ ಕೊಳ್ಳುತ್ತಿದ್ದುದನ್ನು ಫಿರೋಜ್ ಬಯಲಿಗೆಳೆದರು. ಈ ಪ್ರಕರಣದಿಂದ ಕೇಂದ್ರ ಸರ್ಕಾರ  ವಿಮಾ  ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಬೇಕಾಯಿತು. ಮುಂದೆ ಇದು ಭಾರತೀಯ ಜೀವ ವಿಮಾ ನಿಗಮದ ಉದಯಕ್ಕೆ ಕಾರಣ­ಆಯಿತು.

ಅಂದಿನ ತಮ್ಮ ಪಕ್ಷದ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ಅವರ ನಿರ್ದೇಶನದಂತೆ ಎಲ್‌ಐಸಿಯು ಹರಿದಾಸ್‌ ಮುಂದ್ರಾ ಎಂಬ ಕಾಂಗ್ರೆಸ್‌ ದಾನಿ, ವ್ಯಾಪಾರಿಗೆ ಪರಿಹಾರ ಕೊಡುಗೆ ನೀಡಿದಾಗ ಉಂಟಾದ ಹಗರಣವನ್ನು ಫಿರೋಜ್ ಬಯಲಿಗೆಳೆದರು! ಇದರಿಂದಾಗಿ ನೆಹರೂಗೆ ಬಹಳ ಖಾಸಾ ಆಗಿದ್ದ ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗಿ ಬಂತು. ಹೀಗೆ ಹರಿದಾಸ್‌ ಮುಂದ್ರಾ, ಟಿ.ಟಿ.ಕೆ ಹಗರಣವನ್ನು ಮೊದಲಿಗೆ ಬಯಲಿಗೆಳೆದ ದಿಟ್ಟ ಸಂಸತ್ ಸದಸ್ಯ ಫಿರೋಜ್.

ಕೇವಲ 48 ವರ್ಷ ಜೀವಿಸಿದ್ದು ಹೃದಯಾಘಾತದಿಂದ ನಿಧನ­ರಾದ ಫಿರೋಜ್ ಸಂಸತ್ತಿನ ಘನತೆ ಎತ್ತಿ ಹಿಡಿದು ಇಂದಿಗೆ ಮರೆತು ಹೋದ ರಾಜಕಾರಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT