ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಮತ್ತೂರು ಕೃಷ್ಣಮೂರ್ತಿ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಸ್ಕೃತ, ವೇದ, ಉಪನಿಷತ್‌ಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ.ಮತ್ತೂರು ಕೃಷ್ಣಮೂರ್ತಿ ಅವರು ಗಮಕ ವ್ಯಾಖ್ಯಾನಕಾರರಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಉನ್ನತ ಶಿಕ್ಷಣ ಪಡೆಯದಿದ್ದರೂ ಸ್ವಂತ ಪರಿಶ್ರಮದಿಂದ ಪಾಂಡಿತ್ಯ ಗಳಿಸಿ `ಭಾರತದ ಸಾಂಸ್ಕೃತಿಕ ರಾಯಭಾರಿ~ ಎಂಬ ಮನ್ನಣೆಗೆ ಪಾತ್ರರಾಗಿದ್ದರು. ಆ ಮೂಲಕ ಪ್ರತಿಷ್ಠಿತ `ಪದ್ಮಶ್ರೀ~ ಪ್ರಶಸ್ತಿಗೆ ಭಾಜನರಾಗಿದ್ದರು.

ಜವಾಹರಲಾಲ್ ನೆಹರು, ರಾಜಾಜಿ, ಕಾಮರಾಜ್, ಕಂಚಿ ಪರಮಾಚಾರ್ಯರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದ ಶ್ರೇಷ್ಠ ಅನುವಾದಕರಾಗಿದ್ದ ಅವರು, ಭಾರತೀಯ ವಿದ್ಯಾಭವನದ ಬೆಳವಣಿಗೆಗೆ ಶ್ರಮಿಸಿದರು.

ರಾಮಕೃಷ್ಣಯ್ಯ ಹಾಗೂ ನಂಜಮ್ಮ ಅವರ ಎಂಟನೇ ಹಾಗೂ ಕೊನೆಯ ಪುತ್ರರಾಗಿ ಕೃಷ್ಣಮೂರ್ತಿ ಅವರು 1929ರ ಆಗಸ್ಟ್ 8ರಂದು ಶಿವಮೊಗ್ಗ ಬಳಿಯ ಮತ್ತೂರಿನಲ್ಲಿ ಜನಿಸಿದರು. ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದ ಕಾರಣಕ್ಕೆ ಮಗುವಿಗೆ ಕೃಷ್ಣಮೂರ್ತಿ ಎಂಬ ಹೆಸರನ್ನಿಡಲಾಯಿತು. ಮರಗೆಲಸ ಮಾಡುತ್ತಿದ್ದ ರಾಮಕೃಷ್ಣಯ್ಯ ಅವರ ದುಡಿಮೆಯಿಂದ ದೊಡ್ಡ ಸಂಸಾರದ ನಿರ್ವಹಣೆ ಕಷ್ಟಕರವಾಗಿತ್ತು. ಹಾಗಾಗಿ ಕೃಷ್ಣಮೂರ್ತಿ ಅವರು ವಾರಾನ್ನ ಮಾಡಿ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ಅಣ್ಣನೊಂದಿಗೆ ಅಂದಿನ ಮದ್ರಾಸ್‌ಗೆ ತೆರಳಿದ ಬಾಲಕನಿಗೆ ಮಹಾತ್ಮ ಗಾಂಧೀಜಿ ಅವರನ್ನು ಕಾಣುವ ಅವಕಾಶ ದೊರೆಯಿತು. ಅವರನ್ನು ನೋಡಲೇಬೇಕೆಂಬ ತವಕದಿಂದ ಮೂರೇ ದಿನದಲ್ಲಿ ಹಿಂದಿ ಓದು- ಬರಹ ಕಲಿತ ಬಾಲಕ, ಮೂರು ವಾರಗಳ ಕಾಲ ಗಾಂಧೀಜಿ ಅವರ ಕೊಠಡಿಯ ಕಾವಲು ಸೇವೆಗೆ ನಿಯೋಜನೆಗೊಂಡ. ಗಾಂಧೀಜಿ ಅವರ ಪ್ರವಚನ, ಇತರೆ ಹಿರಿಯರ ಮಾತುಗಳು ಬಾಲಕನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದುವು.

ಬಳಿಕ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದರು. ಅಂದಿನ ಜನಪ್ರಿಯ ತಮಿಳು ನಟ ಶಿವಾಜಿ ಗಣೇಶನ್ ಅವರ ಪರಿಚಯದಿಂದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಒದಗಿ ಬಂದರೂ ಅಭಿನಯಿಸಲು ಆಸಕ್ತಿ ತೋರಲಿಲ್ಲ. ಬಳಿಕ ಕ್ಯಾಂಟೀನ್‌ವೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲ ತಿಂಗಳು ಕಾರ್ಯ ನಿರ್ವಹಿಸಿದರು.

ನಂತರ ಬೆಂಗಳೂರಿಗೆ ಬಂದ ಅವರು ಬಸವನಗುಡಿಯಿಂದ ಶಿವಾಜಿನಗರಕ್ಕೆ ಸಂಚರಿಸುತ್ತಿದ್ದ ಸಿಟಿ ಬಸ್‌ನ ಕಂಡಕ್ಟರ್ ಆಗಿ ಮೂರು ತಿಂಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಟಿಕೆಟ್ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದರು. ರಾಜಾ ಮಿಲ್, ಮಿನರ್ವ್ ಮಿಲ್‌ಗಳಲ್ಲಿ ಕೆಲ ಸಮಯ ಕೆಲಸ ಮಾಡಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಆಯ್ಕೆಯಾದ ಅವರು ನಂತರ ಉಪಸಂಪಾದಕರಾಗಿ 12 ವರ್ಷ ಕಾಲ ಕಾರ್ಯ ನಿರ್ವಹಿಸಿದರು. ಈ ನಡುವೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿ ಕೆಲಕಾಲ ದುಡಿದರು.

ಭವನದ ನಂಟು: ಕೆ.ಎಂ. ಮುನ್ಷಿ ಅವರು ಸ್ಥಾಪಿಸಿದ್ದ ಭಾರತೀಯ ವಿದ್ಯಾಭವನದ ಮದ್ರಾಸ್ ಶಾಖೆಯ ನಿರ್ದೇಶಕರಾಗಿದ್ದ ಎಸ್. ರಾಮಕೃಷ್ಣನ್ ಅವರು ಬೆಂಗಳೂರಿನ ಶಾಖೆಗೆ ಅರ್ಹ ವ್ಯಕ್ತಿಯೊಬ್ಬರ ಹುಡುಕಾಟದಲ್ಲಿ ತೊಡಗಿದ್ದರು. ಮತ್ತೂರು ಕೃಷ್ಣಮೂರ್ತಿ ಅವರ ವ್ಯಕ್ತಿತ್ವದ ಬಗ್ಗೆ ಆಕರ್ಷಿತರಾದ ಅವರು, 1969ರಲ್ಲಿ ಭವನದ ಬೆಂಗಳೂರು ಶಾಖೆಯ ರಿಜಿಸ್ಟ್ರಾರ್ ಆಗಿ ನೇಮಿಸಿದರು. ಅಲ್ಲಿಂದ ಭವನದಲ್ಲಿ ಅವರ ಸೇವಾ ಕಾರ್ಯ ಆರಂಭವಾಯಿತು.

ಇವರ ಕಾರ್ಯವೈಖರಿಯಿಂದ ಪ್ರಭಾವಿತರಾದ ರಾಮಕೃಷ್ಣನ್ ಅವರು ಲಂಡನ್‌ನಲ್ಲಿ ಆರಂಭಿಸಲು ಉದ್ದೇಶಿಸಿದ ವಿದ್ಯಾಭವನದ ಮೊದಲ ಕೇಂದ್ರಕ್ಕೆ ಕೃಷ್ಣಮೂರ್ತಿ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಿಸಿದರು. ಹಾಗಾಗಿ ಕೃಷ್ಣಮೂರ್ತಿ ಅವರು 1972ರಲ್ಲಿ ಲಂಡನ್‌ಗೆ ತೆರಳಿದರು. ಅಲ್ಲಿ ಕಾವ್ಯ ವ್ಯಾಖ್ಯಾನ, ಉಪನ್ಯಾಸಗಳ ಮೂಲಕ ಗಮನ ಸೆಳೆದ ಅವರು, ರಾಮಾಯಣ- ಮಹಾಭಾರತ, ಭಗವದ್ಗೀತೆ, ತಿರುಕ್ಕುರಳ್ ಮತ್ತಿತರ ಗ್ರಂಥಗಳು, ದೇಶೀಯ ಸಂಸ್ಕೃತಿ ಕುರಿತು ಸಾಕಷ್ಟು ಉಪನ್ಯಾಸ ನೀಡಿದರು. ಅವರು ಅಲ್ಲಿ ಇರುವಾಗಲೇ ಅಂದಿನ ಬ್ರಿಟಿಷ್ ಸರ್ಕಾರದ ಪ್ರಧಾನಿಗಳಾಗಿದ್ದ ಜೇಮ್ಸ ಕಲೆಹನ್, ಮಾರ್ಗರೇಟ್ ಥ್ಯಾಚರ್ ಇತರ ಪ್ರಮುಖರು ಲಂಡನ್ನಿನಲ್ಲಿರುವ ವಿದ್ಯಾಭವನಕ್ಕೆ ಭೇಟಿ ನೀಡಿದರು. ಲಂಡನ್‌ನಲ್ಲಿ ಒಟ್ಟು 23 ವರ್ಷ ಅವರು ಕಾರ್ಯ ನಿರ್ವಹಿಸಿದರು.

1995ರಲ್ಲಿ ಬೆಂಗಳೂರಿಗೆ ಹಿಂತಿರುಗಿದ ಅವರು ಮೇ 15ರಂದು ಕಾರ್ಯಕಾರಿ ನಿರ್ದೇಶಕರಾಗಿ ನೇಮಕಗೊಂಡರು. ತಮ್ಮ ಸ್ನೇಹಿತ ಗಮಕಿ ಎಚ್. ಆರ್. ಕೇಶವಮೂರ್ತಿ ಅವರೊಂದಿಗೆ ಭವನದಲ್ಲೇ ಆರಂಭಿಸಿದ ಕುಮಾರವ್ಯಾಸ ಭಾರತ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಜನರನ್ನು ಭವನದತ್ತ ಸೆಳೆಯಲಾರಂಭಿಸಿತು.

ಮತ್ತೂರರು ಇಡೀ ಕುಮಾರವ್ಯಾಸ ಭಾರತದ ಪದ್ಯಗಳಿಗೆ ವ್ಯಾಖ್ಯಾನ- ಸಾಹಿತ್ಯ ಬರೆದು 90 ನಿಮಿಷಗಳ ಧ್ವನಿಮುದ್ರಿಕೆ ರೂಪಿಸಿದರು. ಈ ಧ್ವನಿಮುದ್ರಿಕೆ ಕೇಳಿ ಪ್ರಭಾವಿತರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗಾಂಧಿ ಸಂಪುಟಗಳ ಯೋಜನೆಗೆ ಸರ್ಕಾರದ ವತಿಯಿಂದ ಪ್ರತಿ ಸಂಪುಟಕ್ಕೆ ತಲಾ ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿಕೊಟ್ಟರು.

ಸಾಕಷ್ಟು ಶ್ರಮವಹಿಸಿ ಮೈಸೂರಿನಲ್ಲಿ ಭವನದ ಕೇಂದ್ರ ತೆರೆಯುವಲ್ಲಿ ಕೃಷ್ಣಮೂರ್ತಿ ಅವರು ಯಶಸ್ವಿಯಾದರು. ಅಲ್ಲದೇ ಬೆಂಗಳೂರಿನ ಬಸವನಗುಡಿಯಲ್ಲಿ ಮತ್ತೊಂದು ಕೇಂದ್ರ ಪ್ರಾರಂಭಿಸಿದರು. ಹಾಗೆಯೇ ಮಡಿಕೇರಿ, ಬಾಗಲಕೋಟೆಯಲ್ಲಿ ಕೇಂದ್ರಗಳು ತಲೆಯೆತ್ತಿದವು. ಹಾಸನ, ಬಳ್ಳಾರಿಯಲ್ಲೂ ಕೇಂದ್ರ ಸ್ಥಾಪಿಸುವ ಇರಾದೆ ಅವರಿಗಿತ್ತು. ಇಷ್ಟೆಲ್ಲಾ ಕಾರಣಗಳಿಗೆ ಅವರು `ಭಾರತದ ಸಾಂಸ್ಕೃತಿಕ ರಾಯಭಾರಿ~ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.

ಸಂದ ಪ್ರಶಸ್ತಿಗಳು: ಕೇಂದ್ರ ಸರ್ಕಾರದ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳ ಧರ್ಮ ಸಮ್ಮೇಳನ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಕಲಾ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿ-ಸಿರಿ ಪುರಸ್ಕಾರ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಮತ್ತೂರು ಕೃಷ್ಣಮೂರ್ತಿ ಅವರಿಗೆ ಸಂದಿವೆ.

ಪ್ರಮುಖ ಕೃತಿಗಳು: ಮತ್ತೂರು ಕೃಷ್ಣಮೂರ್ತಿ ಅವರು ಅನುವಾದ ಸಾಹಿತ್ಯ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. `ಅಲೈ ಓಷೈ~, ದೀಪ ಧಾರಿಣಿ, ಹಿಮಾಲಯದ ವೀರರು, ರಾಮಕಥಾಸಾರ, ನಮ್ಮೆಲ್ಲರ ಶ್ರೀರಾಮ, ಯೋಗಕ್ಷೇಮಂ ವಹಾಮ್ಯಹಂ, ಗಾಂಧಿ ಉಪನಿಷತ್, ಉಪಖ್ಯಾನ ಪಂಚಕ, ಧರ್ಮರಾಜ ಯುಧಿಷ್ಠಿರ... ಅವರ ಪ್ರಮುಖ ಕೃತಿಗಳು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ `ಇನ್‌ಸೈಡರ್~ ಆತ್ಮಕತೆಯನ್ನು `ಅಂತಃದೃಷ್ಟಿ~ ಹೆಸರಿನಲ್ಲಿ ಅನುವಾದ ಮಾಡ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT