ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುತ್ತಿರುವ ಜವಾರಿ ಭತ್ತದ ತಳಿ

Last Updated 6 ಫೆಬ್ರುವರಿ 2011, 9:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು:  ಉದಾರೀಕರಣ ಮತ್ತು ಜಾಗತೀಕರಣ ಕಬಂಧ ಬಾಹುಗಳನ್ನು ಚಾಚಿರುವ ಈ ಸಂದರ್ಭದಲ್ಲಿ ‘ನಮ್ಮತನ’ ಎಂಬುದು ನೇಪಥ್ಯಕ್ಕೆ ಸರಿಯುತ್ತಿದೆ. ಹಳ್ಳಿಗಾಡಿನ ಕಲೆ, ಸಂಸ್ಕೃತಿ, ಅಲ್ಲಿನ ಆಚಾರ, ವಿಚಾರ ಆಧುನೀಕರಣದ ಈ ಕಾಲದಲ್ಲಿ ‘ಯು ಟರ್ನ್’ ತೆಗೆದುಕೊಂಡು ನಿಂತಿದೆ.

ಕೃಷಿ ಹಾಗೂ ಹಸಿರು ಕ್ರಾಂತಿ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಅಜ್ಜ, ಮುತ್ತಜ್ಜ ಇಲ್ಲಿಯವರೆಗೆ ಜೋಪಾನವಾಗಿ ಕಾಯ್ದುಕೊಂಡು ಬಂದಿದ್ದ ಜವಾರಿ ‘ಬೀಜ ಸಂಸ್ಕೃತಿ’ ಕೂಡಾ ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ. ಹೊಸ, ಹೊಸ ತಳಿಯ ಸಂಶೋಧನೆ ಮಧ್ಯೆ ಮೂಲ ಬೀಜಗಳು ಕಾಲಗರ್ಭ ಸೇರುತ್ತಿರುವುದು ಕಾಲದ ಬದಲಾವಣೆಯ ಬಿರುಸಿನ ಓಟಕ್ಕೆ ಸಾಕ್ಷಿಯಾಗಿದೆ.

ಪ್ರಸ್ತುತ ಕಾಲದ ‘ಪರಾವಲಂಬಿ’ ಕೃಷಿಯೂ ಅನೇಕ ಅಡ್ಡಿ, ಆತಂಕಗಳನ್ನು ಮಣ್ಣಿನ ಮಕ್ಕಳಿಗೆ ತಂದೊಡ್ಡುತ್ತಿದೆ. ಹೈಬ್ರಿಡ್ ಬೀಜ ಬಿತ್ತನೆ, ಅದರಲ್ಲಿ ಉದ್ಭವವಾಗುವ ಕೀಟಗಳನ್ನು ನಿಯಂತ್ರಿಸಲು ಕ್ರಿಮಿನಾಶಕ ಎಂಬ ವಿಷ ಸಿಂಪರಣೆ, ಕುಂಠಿತಗೊಂಡ ಬೆಳೆಗೆ ‘ಯಮಕಿನ’ ರಾಸಾಯನಿಕ ಗೊಬ್ಬರಗಳು. ಇವೆಲ್ಲವುಗಳನ್ನು ಪಡೆಯಲು ಮೈಲುದ್ದದ ಸಾಲು, ಸಾಲು. ಸಾಲದ್ದಕ್ಕೆ ಪೊಲೀಸರ ಲಾಠಿ ಏಟು, ಗೋಲಿಬಾರ್...!

ಚಿಕ್ಕ ಹಾಗೂ ಅತಿಚಿಕ್ಕ ಹಿಡುವಳಿದಾರನ ಸಂಕಷ್ಟದ ಬದುಕಿಗೆ ಕೊನೆಯೇ ಇಲ್ಲವೇ? ಇಂತಹ ರೈತನ ಬ್ಯಾಂಕ್ ಖಾತೆಗೆ ಬೀಜ ಕೊಳ್ಳಲು ಬಿತ್ತನೆ ಹಂಗಾಮಿನಲ್ಲಿ ಯಾವಾಗಲಾದರೊಮ್ಮೆ ಸಾವಿರ ರೂಪಾಯಿ ಜಮೆ ಮಾಡಿದರೆ ತನ್ನ ಕರ್ತವ್ಯ ಮುಗಿಯಿತು; ಕಡಿಮೆ ಬಡ್ಡಿ ದರದಲ್ಲಿ ಆತನಿಗೆ ಸಾಲ ಕೊಟ್ಟರೆ ಆತನ ಬದುಕು ಬಂಗಾರವಾಯಿತು ಎಂದು ಆಳುವ ಸರಕಾರ ತಿಳಿದುಕೊಂಡಿದೆ. ಇವೆಲ್ಲ ಅಗ್ಗದ ಪ್ರಚಾರಗಳು ಆತನನ್ನು ಮತ್ತಷ್ಟು ಅತಂತ್ರದ ಪಾತಾಳಕ್ಕೆ ತಳ್ಳುತ್ತಿದೆ. ಅನ್ನದಾತನಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡದ ಇಚ್ಛಾಶಕ್ತಿಯಿಲ್ಲದ ಸರಕಾರಗಳು ಕೈಚೆಲ್ಲಿ ಕುಳಿತಂತೆ ಭಾಸವಾಗುತ್ತವೆ.

ಸಿದ್ಧ ಸಾಳಿ ಹಾಕಿದ್ರೆ..: ಸೃಷ್ಟಿಯ ಹಸುಗೂಸಾಗಿ ಅಸಹನೀಯ ವಾತಾವರಣದ ಮಧ್ಯೆಯೂ ವಾಕರಿಕೆ ಮಾಡಿಕೊಳ್ಳದೆ, ಹಗಲು ರಾತ್ರಿಯೆನ್ನದೆ ನಿತ್ಯ ಸಂಘರ್ಷದ ಬದುಕು ಸಾಗಿಸುವ ಅನ್ನದಾತ ಬಿತ್ತನೆ ಸಂದರ್ಭದಲ್ಲಿ ಬೀಜಕ್ಕಾಗಿ ಕಂಡವರ ಮುಂದೆ ಕೈಚಾಚಿ ನಿಲ್ಲದೆ ‘ಬೀಜ ಸಂಸ್ಕೃತಿ’ ಬೆಳೆಸಬೇಕಾಗಿದೆ. ಅಂಬಾರಿ, ಕಣಜ, ಗಳಿಗೆ, ಗಡಿಗೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಬೀಜವನ್ನ ಹದ ಬಂದ ಕೂಡಲೇ ಹಿಂದಿನ ಹಿರಿಯರು ಬಿತ್ತನೆ ಮಾಡುತ್ತಿದ್ದರು. ತತಿ ನೋಡಿ ಬಿತ್ತನೆ ಮಾಡುವುದರಿಂದ ಫಸಲು ನಿರೀಕ್ಷಿಸಿದಷ್ಟು ಮನೆಗೆ ಬರುತ್ತಿತ್ತು. ದುರಂತವೆಂದರೆ, ಅತ್ತ ಹೊಲಕ್ಕೆ ಕೂರ್ಗಿ (ಬಿತ್ತನೆ ಸಾಧನ) ಕೊಟ್ಟು ಕಳಿಸಿ, ಇತ್ತ ಬೀಜಕ್ಕಾಗಿ ಮೈಲುದ್ದ ಸರದಿಯಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಈಗಿನ ಕೃಷಿಕನದಾಗಿದೆ.

‘ಸಿದ್ಧಸಾಳಿ ಹಾಕಿದ್ರೆ ಇದ್ದ ಸಾಲವೂ ಹೋಗತೈತಿ’ ಎಂಬ ಮಾತೊಂದಿತ್ತು. ಅಷ್ಟು ಇಳುವರಿ ಅದು ಬರುತ್ತಿತ್ತು ಎಂದು ಸ್ಮರಿಸುತ್ತಾರೆ ಹಿರಿಯರು. ಒಂದು ಬಗೆಯ ಜವಾರಿ ಭತ್ತದ ತಳಿಯ ಅನ್ನ ಉಂಡರೆ ಶೀತ ಹೋಗುತ್ತಿತ್ತು. ಹುಗ್ಗಿಗಾಗಿಯೇ ಹುಗ್ಗಿ ಭತ್ತವಿತ್ತು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾಡಿದ ಅನ್ನದ ಸುವಾಸನೆ ವರಾಂಡಾದಲ್ಲಿ ಕುಳಿತಿದ್ದವರ ಮೂಗು ಮೆತ್ತುತ್ತಿತ್ತು. ಈಗ ನೋಡಿದರೆ ಹೈಬ್ರಿಡ್ ಭಾಸುಮತಿ ತಳಿಯನ್ನು ಮೂಗಿಗೆ ಹಿಡಿದರೂ ಸುವಾಸನೆ ಬಡಿಯದಾಗಿದೆ. ಕುಮುದ, ಬಂಗಾರ ಕಡಿ, ಮುಗದ ದೋಡಗ್ಯಾ, ಚಂಪಾಸಾಳಿ, ಅಭಿದಾಳಿ, ಅಂಬೆಮುರಿ, ಕಾಲಾನಮಕ್, ಕಾಗಸಾಳಿ, ಕರಿಗಿಜವಿಲಿ, ಡಾಂಬರಸಾಳಿ, ಕಂದಸಾಳಿ, ಬಿಳಿನವಿಲಿ, ಚಕೋಲಾ (ಹುಗ್ಗಿ ಭತ್ತ), ಬಾದಶಾ ಬೋಗ, ನವಲಿ ಸಾಳಿ, ಬಿಳಿ ಫಾರ್ಮ್, ಶಂಕರ ಪುನರಿ, ಕೃಷ್ಣ ಕುಮುದ ಕುಂಕುಮಸಾಳಿ, ಮಂಡಿಲಾ, ಕಾಶ್ಯಾಳಿ, ಕರಿ ಹಕ್ಕಲ ಸಾಳಿ, ಕೋತಂಬರಿ ಸಾಳಿ, ನವರಾ, ಕರಿದಡಿ ಜವಾರಿ ತಳಿಯ ಇಂತಹ ಬೀಜಗಳನ್ನು ಸಂಗ್ರಹಿಸಿ ಉಳಿಸಬೇಕಾಗಿದೆ. ಬಿತ್ತನೆ ಕಾಲದಲ್ಲಿ ಮನೆಯಲ್ಲಿಯ ಕಣಜ ನೋಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT