ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮರೆಯಾಗುತ್ತಿರುವ ಜಾನಪದ ಕಲೆಗಳು'

Last Updated 5 ಮಾರ್ಚ್ 2013, 6:41 IST
ಅಕ್ಷರ ಗಾತ್ರ

ಹಾಸನ: `ದೇಶೀಯ ಕಲೆ, ಸಂಸ್ಕೃತಿಗಳನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮತ್ತಿತರ ಕಾರಣಗಳಿಂದ ಜನಪದ ಕಲೆಗಳು ಮರೆಯಾಗುತ್ತಿವೆ' ಎಂದು ಜಾನಪದ ತಜ್ಞ ಡಾ. ಚಂದ್ರು ಕಾಳೇನಹಳ್ಳಿ ನುಡಿದರು.

ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ  ಹಾಗೂ ಶಾಂತಿಗ್ರಾಮದ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಹಾಸನ ತಾಲ್ಲೂಕು ಶಾಂತಿಗ್ರಾಮದ ಸೌಮ್ಯ ಕೇಶವ ದೇವಾಲಯದ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ `ಗ್ರಾಮ ಸಂಸ್ಕೃತಿ ಜಾನಪದ ಸಂಭ್ರಮ ಹಾಗೂ ಬೆಳದಿಂಗಳ ತಿಂಗಳ ಮಾವನ ಹಬ್ಬ' ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

`ನಮ್ಮ ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕವೇ ನಮ್ಮ ಹಿರಿಯರು ಬದುಕು ಕಟ್ಟಿಕೊಂಡು ಬೆಳೆದವರು. ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ನಮ್ಮ ಕಲೆ ಸಂಸ್ಕೃತಿ ಉಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೆೀವೆ. ಮುಂದೊಂದು ದಿನ ಜಗತ್ತಿನ ಸಂಪನ್ಮೂಲಗಳೆಲ್ಲ ಮುಗಿದಾಗ ಮತ್ತೆ ನಾವು ಹಳೆಯ ಜೀವನ ಶೈಲಿಗೆ ಮರುಳಬೇಕಾಗಿ ಬರಬಹುದು' ಎಂದರು.

ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ, `ಹಳ್ಳಿಗಾಡಿನ ಜನ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಜಾನಪದ ಆಚರಣೆಗಳು ಮರೆಯಾಗುತ್ತಿವೆ. ಆದರೆ ಜನಪದ ಕಾಣೆಯಾಗುವುದಿಲ್ಲ. ಎಷ್ಟೇ ಸವಾಲುಗಳಿದ್ದರೂ ಜನಪದಕ್ಕೆ ಸಾವಿಲ್ಲ' ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಅಕಾಡಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, `ಗ್ರಾಮೀಣ ಸಂಸ್ಕೃತಿ ನಗರಕ್ಕೂ ವಿಸ್ತರಣೆಯಾಗಬೇಕು. ಜಾನಪದ ಕಲೆಗಳು ಈಚೆಗೆ ಮೂಲ ವಾದ್ಯ ಪರಿಕರಗಳ ಕೊರತೆಯಿಂದ ನೈಜತೆ ಕಳೆದುಕೊಳ್ಳುತ್ತಿವೆ. ಜಾನಪದ ಅಕಾಡೆಮಿ ಉತ್ತರ ಕರ್ನಾಟಕದಲ್ಲಿ ಶೀಘ್ರದಲ್ಲಿಲ್ಲೇ ಚರ್ಮವಾದ್ಯದ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ' ಎಂದು ತಿಳಿಸಿದರು.

ನಾರ್ವೆ ರಾಜಶೇಖರ್, ಶಾಂತಿಗ್ರಾಮ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಮಣ್ಣ, ನಿವೃತ್ತ ಸೇನಾಧಿಕಾರಿ ಮೇಜರ್ ಶಿವರಾಂ ಮತ್ತಿತರರು ಉಪಸ್ಥತರಿದ್ದರು.

ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಎನ್.ಪರಡ್ಡಿ ಸ್ವಾಗತಿಸಿದರು. ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಮಂಜೇಶ್ ನಿರೂಪಿಸಿದರು. ಕಾರ್ಯದರ್ಶಿ ರಾಜಶೇಖರ್ ವಂದಿಸಿದರು.

ತಿಂಗಳ ಮಾವನ ಹಬ್ಬ
ನಂತರ ನಡೆದ ಜಾನಪದ ಸಂಭ್ರಮ ಮತ್ತು ಬೆಳದಿಂಗಳ ತಿಂಗಳ ಮಾವನ ಹಬ್ಬ ಕಾರ್ಯಕ್ರಮಗಳು ಗ್ರಾಮೀಣ ಬದುಕಿನ ನೈಜ ಕಲೆ, ಸಂಸ್ಕೃತಿ ಆಚರಣೆ, ಅಲ್ಲಿನ ಜನರ ಸಾಮರಸ್ಯ, ಕೃಷಿ ಬಗೆಗಿನ ಪ್ರೀತಿ ಮತ್ತಿತರ ಅಂಶಗಳನ್ನು ಅನಾವರಣಗೊಳಿಸಿದವು.
ಗ್ರಾಮದ ಜನರೆಲ್ಲರೂ ಬಂಧುಮಿತ್ರರೊಡನೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಸಾಂಕೇತಿಕವಾಗಿ ಇಬ್ಬರು ಮಕ್ಕಳಿಗೆ ಮದುವೆ ಮಾಡುವ ಮೂಲಕ ಭೂಮಿಗೆ ಬಂದ ಚಂದ್ರನಿಗೆ (ಮೋಜಿನ ಮದುವೆ) ಮದುವೆ ಮಾಡಿಸಿದರು. ಗ್ರಾಮದ ಮಹಿಳೆಯರು ದೇವಸ್ಥಾನದ ಮುಂದೆ ಚುಕ್ಕಿ ರಂಗೋಲಿ ಹಾಕಿ ತಿಂಗಳ ಮಾವನಿಗೆ ರಂಗೋಲಿ ತೇರಿನ ಸ್ವಾಗತ ಕೋರಿದ್ದರು.

ಕುಮಾರಯ್ಯ ಮತ್ತು ತಂಡದಿಂದ ಚಿಟ್ಟಿ ಮೇಳ, ಮಾರುತಿ ಯುವಕ ಸಂಘದ ತಮಟೆ, ಸಿಂಗಟಗೆರೆಯ ಕೀಲುಕುದುರೆ, ದೊಡ್ಡಳ್ಳಿಯ ರಮೇಶ ತಂಡದ ಜನಪದ ಗೀತೆ ಎಲ್ಲವೂಜನರನ್ನು ರಂಜಿಸಿದವು.

ಎಂ.ವಿ. ಪ್ರಭಾಮಣಿ ಮಂಜುನಾಥ್ ಹಾಗೂ ಸ್ಪೂರ್ತಿ ಜೈನ್ ಸಂಗಡಿಗರು, ಸಕಲೇಶಪುರದ ರತ್ನಮ್ಮ ಮತ್ತು ಸಂಗಡಿಗರು ಜಾನಪದ ಗೀತೆಗಳ ಗಾಯನ ನಡೆಸಿಕೊಟ್ಟರು.

ಪ್ರವಾಸೋದ್ಯಮ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಸ್. ಬೋರೇಗೌಡ ಸೋಬಾನೆ ಪದಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿದರು. ಶಾಂತಿಗ್ರಾಮದ ಮಹಿಳೆಯರು ಸಹ ಇವರೊಂದಿಗೆ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

ರೊಟ್ಟಿ ಹಾಕುವುದು, ರೊಟ್ಟಿ ಪೂಜೆ, ಗಂಗಾ ಪೂಜೆಗಳು ಜನರು ಮರೆತು ಹೋಗಿದ್ದ ಸಂಭ್ರಮವನ್ನು ನೆನಪಿಸಿಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT