ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಹಾಲಿವುಡ್ ದಂತಕಥೆ ಎಲಿಜಬೆತ್

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಪಿಟಿಐ): ಹಾಲಿವುಡ್‌ನ ದಂತಕಥೆ ಎಂದೇ ಪ್ರಖ್ಯಾತಳಾಗಿದ್ದ ತಾರೆ ಎಲಿಜಬೆತ್ ಟೇಲರ್ (79) ಅವರು ಬುಧವಾರ ಹೃದಯಾಘಾತದಿಂದ ನಿಧರಾದರು.

 ಮೂರು ಬಾರಿ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದ ಅವರು, ಲಾಸ್ ಏಂಜಲೀಸ್‌ನ ಸೆಡಾರ್ಸ್‌ ಸಿನಾಯ್ ಆಸ್ಪತ್ರೆಯಲ್ಲಿ ಶಾಂತವಾಗಿ ಕಣ್ಮುಚ್ಚಿದರು ಎಂದು ಆಕೆಯ ಪರ ಪ್ರಕಾಶಕ ಮುಖ್ಯಸ್ಥ ಸ್ಯಾಲಿ ಮೊರಿಸನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೈಗಾರಿಕೋದ್ಯಮಿಯೂ ಆಗಿದ್ದ ಟೇಲರ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ. 10 ಮೊಮ್ಮಕ್ಕಳಿದ್ದಾರೆ. ಅಷ್ಟೇ ಅಲ್ಲ ನಾಲ್ವರು ಮರಿ ಮೊಮ್ಮಕ್ಕಳೂ ಇದ್ದಾರೆ.

ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಎರಡು ತಿಂಗಳ ಹಿಂದೆ ಇಲ್ಲಿನ ಆಸ್ಪತ್ರೆಗೆ ಸೇರಿಸಲಾಗಿತ್ತು.
ವಾಚಾಳಿತನ ಮತ್ತು ಸೌಂದರ್ಯದ ಖನಿಯಂತಿದ್ದ ಟೇಲರ್ ತಮ್ಮ ಜೀವಿತಾವಧಿಯಲ್ಲಿ ಎಂಟು ಮದುವೆಯಾಗಿದ್ದರು. ತಮ್ಮ ನೀಲಿಕಂಗಳಿಂದ ಜಗತ್ತಿನಾದ್ಯಂತ ರಸಿಕರ ಹೃದಯ ಸೂರೆಗೊಂಡಿದ್ದ ಅವರು ದಿವಂಗತ  ಪಾಪ್ ಗಾಯಕ ಮೈಕೆಲ್ ಜಾಕ್ಸ್‌ನ್‌ನ ಆಪ್ತ ಗೆಳತಿಯೂ ಆಗಿದ್ದರು.

1960ರಲ್ಲಿ ‘ಬಟರ್‌ಫೀಲ್ಡ್  8’,  1966ರಲ್ಲಿ ‘ವೂ ಈಸ್ ಅಫ್ರೈಡ್ ಆಫ್ ವರ್ಜೀನಿಯಾ’ ಹಾಗೂ 1933ರಲ್ಲಿ ಆಕೆಯ ಮಾನವೀಯ ಕೆಲಸಗಳಿಗಾಗಿ ಒಟ್ಟು ಮೂರು ಬಾರಿ ಆಸ್ಕರ್ ಪ್ರಶಸ್ತಿ ದೊರೆತಿದೆ.

ಅತ್ಯಪೂರ್ವ ಸೌಂದರ್ಯ ಹಾಗೂ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿದ್ದ ಎಲಿಜಬೆತ್ ಸದಾ ಒಂದಿಲ್ಲೊಂದು ಹಗರಣಗಳ ಮೂಲಕ  ಸುದ್ದಿಲ್ಲಿರುತ್ತಿದ್ದರು. ಇದರಿಂದಾಗಿ ಇವರ ಹಾಲಿವುಡ್ ಜೀವನದಲ್ಲಿ ಕಂಡು ಬಂದ ಏರಿಳಿತಳಿಗೆ ಲೆಕ್ಕವಿಲ್ಲ.

ಈಜಿಪ್ಟ್‌ನ ಸುಂದರಿ ಕ್ಲಿಯೊಪಾತ್ರಳ ತದ್ರೂಪ ಎಂದೇ ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದ ಟೇಲರ್ ಬದುಕಿನ ತೀವ್ರತೆಗಳನ್ನು ಅಷ್ಟೇ ತೀವ್ರರೂಪದಲ್ಲಿ ಅನುಭವಿಸಿದ ಭಾವುಕ ಚೆಲುವೆ.  ಅನವರತವೂ ಜೀವನಪ್ರೀತಿಯನ್ನು ತನ್ನ ಅವಡುಗಚ್ಚಿಕೊಂಡೇ ಬದುಕಿದ ಆಕೆ ನಟಿಸಿದ್ದು 50 ಚಿತ್ರಗಳಾದರೂ ಜಗದಗಲಕ್ಕೂ ಗಳಿಸಿದ ಖ್ಯಾತಿ ಮಾತ್ರ  ಅಪಾರ.

ತನ್ನನ್ನೇ ಪ್ರೀತಿಸಿಕೊಳ್ಳುವ, ಗೌರವಿಸಿಕೊಳ್ಳುವ ಗುಣಗಳಿಂದಲೂ ಕಂಗೊಳಿಸುತ್ತಿದ್ದ ಟೇಲರ್ ಒಮ್ಮೊಮ್ಮೆ “ಅರೆ ಈಕೆ ಇನ್ನೂ ಬದುಕಿದ್ದಾಳಲ್ಲಾ ಎಂದು ಜನ ಯೋಚಿಸುವಂತಾಗಬೇಕು. ಹಾಗೆ ಬದುಕುತ್ತೇನೆ ನೋಡಿ” ಎಂದೆನ್ನುತ್ತಿದ್ದಳು.

ಆಕೆಯ ಎಲ್ಲ ಕಷ್ಟಕಾಲದಲ್ಲೂ ಕಾಪಾಡಿದ್ದೇ ಅವಳ ಚೆಲವು ಎಂದು ವಿಶ್ಲೇಷಿಸುವ ಮಟ್ಟಕ್ಕೆ ತನ್ನ ಸೌಂದರ್ಯ ಮುಕ್ಕಾಗದಂತೆ ನೋಡಿಕೊಂಡಿದ್ದಳು ಟೇಲರ್. ಬಾಲ್ಯದ ಏಳು ವರ್ಷಗಳನ್ನು ಲಂಡನ್‌ನಲ್ಲಿ ಕಳೆದಿದ್ದ ಆಕೆ ನಂತರ ಲಾಸ್ ಏಂಜಲೀಸ್‌ಗೆ ಬಂದು ನೆಲೆಸಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT