ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಯಿತೇ ಮಾಧುರ್ಯ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅದು ಪಿ.ಬಿ. ಶ್ರೀನಿವಾಸರ ಕಾಲ. ಅವರು ಎಪ್ಪತ್ತರ ದಶಕದಲ್ಲಿ ಚಿತ್ರರಂಗ ಕಂಡ ಅತ್ಯಂತ ಬೇಡಿಕೆಯ ಹಿನ್ನೆಲೆ ಗಾಯಕ. 1973ರ ನವೆಂಬರ್ ಇರಬಹುದು. ಪಿ.ಬಿ. ಶ್ರೀನಿವಾಸ್ ಅವರಿಗೆ ಆಂಧ್ರದಿಂದ ಕರೆ ಬರುತ್ತಿತ್ತು. ಅವರ ಕಾಲ್‌ಶೀಟ್‌ಗಾಗಿ ಸಿನಿಮಾ ಮಂದಿ ಕಾಯುತ್ತಾ ಕುಳಿತಿರುತ್ತಿದ್ದರು. ಮಲಯಾಳಂ ಚಿತ್ರರಂಗದವರೂ ತಿರುವನಂತಪುರಕ್ಕೆ ಯಾವಾಗ ಬರುತ್ತೀರಿ ಎಂದು ಮೇಲಿಂದ ಮೇಲೆ ಕೇಳುತ್ತಿದ್ದರು.

ತಮಿಳುನಾಡಿನಲ್ಲಿ ಜೆಮಿನಿ ಗಣೇಶನ್ ಅಭಿನಯದ ಚಿತ್ರಗಳಿಗಾಗಿ ಹಾಡಲು ಪಿಬಿಎಸ್‌ಗಾಗಿ ಕಾಯಲಾಗುತ್ತಿತ್ತು. ಪಿ.ಬಿ. ಶ್ರೀನಿವಾಸ್ ಹಾಡುವುದಕ್ಕಾಗಿಯೇ ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರುತ್ತಿದ್ದರು. ಹಾಡುವುದೆಂದರೆ ಅವರಿಗೆ ಇನ್ನಿಲ್ಲದ ಉತ್ಸಾಹ.
ಕನ್ನಡ ಚಿತ್ರರಂಗದಲ್ಲಿ ಆಗ ರಾಜಕುಮಾರ್ ಅವರ ಯುಗ. ಇಡೀ ಕನ್ನಡ ಚಿತ್ರರಂಗವನ್ನು ಹೆಗಲ ಮೇಲೆ ಹೊತ್ತು ರಾಜಕುಮಾರ್ ಮುನ್ನಡೆಸುತ್ತಿದ್ದರು.

ರಾಜಕುಮಾರ್ ಅವರ ಚಿತ್ರ ಜೀವನದ ಉದ್ದಕ್ಕೂ ಅವರ ಶಾರೀರವಾಗಿದ್ದವರು ಪಿ.ಬಿ. ಶ್ರೀನಿವಾಸ್. ರಾಜಕುಮಾರ್ ಅವರ ಅಭಿನಯದ “ಸಂಪತ್ತಿಗೆ ಸವಾಲ್‌” ಚಿತ್ರಕ್ಕಾಗಿ ಒಂದು ಹಾಡು ಬೇಕಾಗಿತ್ತು. ಅಂದು ಹಾಡಿನ ಧ್ವನಿ ಮುದ್ರಣಕ್ಕಾಗಿ ಮದ್ರಾಸಿನ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಚಡಪಡಿಸುತ್ತಿದ್ದರು.

ಪಿಬಿಎಸ್ ಎಷ್ಟು ಕಾದರೂ ಬರಲೇ ಇಲ್ಲ. ಇದೊಂದು ಹಾಡು ಧ್ವನಿ ಮುದ್ರಣವಾದರೆ, ಚಿತ್ರ ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಆಂಧ್ರ, ಕೇರಳ, ಮುಂಬೈ, ಚೆನ್ನೈ, ಬೆಂಗಳೂರು ಹೀಗೆ ಎಲ್ಲ ಕಡೆಯಿಂದ ಪಿಬಿಎಸ್‌ಗೆ ಬೇಡಿಕೆ ಇರುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಪಿಬಿಎಸ್ ಕಾಲ್‌ಶೀಟ್‌ಗೆ ಕಾಯುವುದು ಅನಿವಾರ್ಯ ಸ್ಥಿತಿ. ಆದರೆ ಅವರು ಆಗ ನೇಪಾಳದಲ್ಲಿ ಕಾರ್ಯಕ್ರಮವೊಂದಕ್ಕಾಗಿ ತೆರಳಿದ್ದರು. `ಈಗ ಬರುವೆ, ನಾಳೆ ಬರುವೆ' ಎಂಬ ಉತ್ತರ ಬರುತ್ತಿತ್ತು.

ಸಂಪತ್ತಿಗೆ ಸವಾಲ್‌” ತಂಡ ಎರಡು ದಿನ ಕಾದದ್ದೇ ಬಂತು. ಜೆ.ಕೆ. ವೆಂಕಟೇಶ್ ಅವರಿಗೆ ಕಾಯುವುದು ಬೇಕಾಗಿರಲಿಲ್ಲ. “ಯಾರೇ ಕೂಗಾಡಲಿ, ಊರೇ ಹೋರಾಡಲಿ.. ಎಮ್ಮೇ ನಿನಗೆ ಸಾಟಿಯಿಲ್ಲ...” ಎಂಬ ಹಾಡಿನ ಟ್ರ್ಯಾಕ್ ರೆಡಿಯಾಗಿತ್ತು. ಆದರೆ ಪಿ.ಬಿ. ಶ್ರೀನಿವಾಸ್ ಅವರು ಯಾವಾಗ ಬರುತ್ತಾರೆ ಎನ್ನುವುದು ಖಚಿತವಾಗಿರಲಿಲ್ಲ. ಆ ಸಮಯದಲ್ಲಿ ಜಿ.ಕೆ. ವೆಂಕಟೇಶ್, ರಾಜಕುಮಾರ್ ಅವರ ಬಳಿ ಬಂದು, ಈ ಹಾಡನ್ನು ನೀವೇ ಹಾಡಿಬಿಡಿ ಎಂದರು.

(ಜಿ.ಕೆ. ವೆಂಕಟೇಶ್‌ರವರು ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ರಾಜಕುಮಾರ್ ಅವರಿಂದ ಈ ಹಿಂದೆ ಹಾಡಿಸಿದ್ದರು) ಅದೇ ಒತ್ತಡವನ್ನು ಈಗಲೂ ಜಿ.ಕೆ. ವೆಂಕಟೇಶ್ ಮಾಡಿದರು. ರಾಜಕುಮಾರ್ ಇದರಿಂದ ಹೌಹಾರಿದರು. ನನ್ನಿಂದ ಸಾಧ್ಯವೇ ಇಲ್ಲ ಎಂದರು. ಚಿತ್ರತಂಡದ ಒತ್ತಡಕ್ಕೆ ರಾಜಕುಮಾರ್ ಮಣಿಯಲೇಬೇಕಾಯಿತು. 1974ರಲ್ಲಿ “ಸಂಪತ್ತಿಗೆ ಸವಾಲ್‌” ಬಿಡುಗಡೆಯಾದಾಗ ಎಮ್ಮೆ ಹಾಡು... ಸೂಪರ್‌ಹಿಟ್. ನಂತರ ಅಭಿಮಾನಿಗಳ ಒತ್ತಡದಿಂದಾಗಿ ರಾಜಕುಮಾರ್ ಗಾಯಕರೂ ಆದರು.

ಪಿ.ಬಿ. ಶ್ರೀನಿವಾಸ್ ಏಪ್ರಿಲ್ 14ರಂದು ನಿಧನರಾದರು ನಿಜ. ಆದರೆ ಮೇರು ಹಿಮಾಲಯದೆತ್ತರಕ್ಕೆ ಏರಿದ್ದ ಅವರ ಹಿನ್ನೆಲೆ ಗಾಯನದ ಸುವರ್ಣ ಕಾಲ “ಎಮ್ಮೆ ಹಾಡು” ಜನಪ್ರಿಯವಾದ ದಿನವೇ ಸಮಾಧಿಯಾಗಿತ್ತು. 39 ವರ್ಷಗಳ ಹಿಂದೆಯೇ ಪಿಬಿಎಸ್ “ಇನ್ನಿಲ್ಲ”ವಾಗಿದ್ದರು.

ರಾಜ್‌ಗೆ ಶಾರೀರ
ಹತ್ತೊಂಬತ್ತು ವರ್ಷಗಳಿಂದ ತನ್ನ ದನಿಯಾಗಿದ್ದ, ಅತ್ಯುತ್ಕೃಷ್ಟ ಹಾಡುಗಳಿಗೆ ಜೀವ ತುಂಬಿದ ಪಿ.ಬಿ. ಶ್ರೀನಿವಾಸರನ್ನು ದೂರವಿಡುವುದು ರಾಜಕುಮಾರ್ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ನಾನು ಒಂದು ಹಾಡನ್ನು ಮಾತ್ರ ಹಾಡುತ್ತೇನೆ. ಉಳಿದವೆಲ್ಲಾ ಪಿಬಿಎಸ್ ಅವರೇ ಹಾಡಲಿ ಎಂದು ಮೊದಲಿಗೆ ರಾಜಕುಮಾರ್ ಷರತ್ತು ಹಾಕಿದರು. ಅದು ಜಾರಿಗೂ ಬಂತು.

ಆದರೆ ಮುಂದೆ ಅಭಿಮಾನಿಗಳ ಒತ್ತಡ, ನಿರ್ಮಾಪಕರ ಒತ್ತಡದಿಂದ ಎಲ್ಲ ಹಾಡುಗಳನ್ನು ರಾಜಕುಮಾರ್ ಅವರೇ ಹಾಡಬೇಕೆಂಬ ನಿಯಮ ಕಡ್ಡಾಯವಾಯಿತು. ಪಿ.ಬಿ. ಶ್ರೀನಿವಾಸರ ಕಂಠ ರಾಜಕುಮಾರ್ ಅವರಿಗೆ ಹಾಗೂ ತಮಿಳುನಾಡಿನಲ್ಲಿ ಜೆಮಿನಿ ಗಣೇಶನ್ ಅವರಿಗೆ ಹೊಂದಾಣಿಕೆಯಾದಂತೆ ಬೇರೆ ಯಾರಿಗೂ ಆಗಲಿಲ್ಲ. ಆದರೂ ಮುಂದೆ `ಬಬ್ರುವಾಹನ'ದಲ್ಲಿ ಅರ್ಜುನ ಪಾತ್ರಧಾರಿಗೆ ಪಿ.ಬಿ. ಶ್ರೀನಿವಾಸ್ ಹಾಡಿದರು.

ಬಬ್ರುವಾಹನನಿಗೆ ರಾಜಕುಮಾರ್ ಹಾಡಿದರು. ಸವಾಲ್-ಜವಾಬ್ ರೀತಿಯ ಈ ಹಾಡನ್ನು ಎರಡೂ ದೈತ್ಯ ಪ್ರತಿಭೆಗಳು ಹಾಡಿದ್ದು ಒಂದು ಇತಿಹಾಸ. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ... (ಭಕ್ತ ಕನಕದಾಸ), ಇವಳು ಯಾರು ಬಲ್ಲೆಯೇನು...      (ಗೌರಿ), ಆಡಿಸಿನೋಡು, ಬೀಳಿಸಿನೋಡು... (ಕಸ್ತೂರಿನಿವಾಸ), ಮಾನವಾ ದೇಹವು ಮೂಳೆ ಮಾಂಸದ ತಡಿಕೆ... (ಭಕ್ತಕಂಬಾರ), ಹಾಡೊಂದ ಹಾಡುವೆ... (ನಾಂದಿ), ಜಯತು ಜಯವಿಠಲಾ... (ಸಂತತುಕಾರಾಂ), ಆಕಾಶವೇ ಬೀಳಲಿ ಮೇಲೆ...ಒಂದೇ ಎರಡೇ.. ಪಿ.ಬಿ. ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ಮರೆಯಲಾಗದ ಭಾವಪೂರ್ಣ ಹಾಡುಗಳನ್ನು ಬಿಟ್ಟು ಹೋಗಿದ್ದಾರೆ. ರಾಜಕುಮಾರ್ ಅವರ ಶರೀರ ಮತ್ತು ಶಾರೀರಕ್ಕೆ ಉದಾಹರಣೆಯಾಗಿದ್ದರು ಎನ್ನುವುದಕ್ಕೆ “ನಾನೇ ರಾಜಕುಮಾರ್‌”  (ಭಾಗ್ಯದ ಬಾಗಿಲು) ಎಂಬ ಹಾಡೇ ಸಾಕ್ಷಿ.

ತಮಿಳಿನಲ್ಲಿ ಇಂದಿಗೂ ಪಿ.ಬಿ.ಶ್ರೀನಿವಾಸ್ ಅವರ ಹಾಡುಗಳನ್ನು ಆರಾಧಿಸುವ ಭಕ್ತರು ಇದ್ದಾರೆ. `ಪಾವಮನ್ನಿಪ್ಪು' ಚಿತ್ರಕ್ಕಾಗಿ ಕಣ್ಣದಾಸನ್ ಬರೆದ `ಕಾಲಂಗಳಿಲ್ ಅವಳ್ ವಸಂತಂ',  ವೀರ ತಿರುಮಗಳ್ (1962) ಚಿತ್ರದ `ರೋಜಾಮಲರೇ ರಾಜಕುಮಾರಿ...', ಕಾದಲಿಕ್ಕು ನೇರಮಿಲ್ಲೈ, ತೆಲುಗು ಚಿತ್ರವಾದ ಗುಡಿಗುಂಟಾಲು, ಪ್ರೇಮಿಂಚಿ ಚೂಡು.. ಪಿಬಿಎಸ್ ದನಿ ಮೂರುಸಾವಿರಕ್ಕೂ ಹಾಡುಗಳ ಮೂಲಕ ಅಲೆಅಲೆಯಾಗಿ ಹರಡಿ ಹೋಗಿದೆ. 2010 ರ `ಆಯಿರತ್ತಿಲ್ ಒರುವನ್' ಚಿತ್ರದಲ್ಲಿ ಅವರದು ಕೊನೆಯ ಹಾಡು.

ಬಹುಭಾಷಾ ಆಸಕ್ತಿ
ಆಂಧ್ರ ಪ್ರದೇಶದ ಕಾಕಿನಾಡದ ಫಣೀಂದ್ರ ಸ್ವಾಮಿ ಮತ್ತು ಶೇಷಗಿರಿಯಮ್ಮ ಅವರ ಪುತ್ರ ಪ್ರತಿವಾದಿ ಭಯಂಕರ ಶ್ರೀನಿವಾಸ್, ಹುಟ್ಟಿದ್ದು 1930ರ ಸೆಪ್ಟೆಂಬರ್ 22 ರಂದು. ಬಿ.ಕಾಂ ಓದಿ ಎಂಟು ಭಾಷೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಮದ್ರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಸಂಗೀತ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವರ ಹೆಸರು ಪಿ.ಬಿ. ಶ್ರೀನಿವಾಸಾಚಾರ್ಯ. ಜೆಮಿನಿ ಸ್ಟುಡಿಯೋದವರು ಹಿಂದಿಯಲ್ಲಿ “ಮಿಸ್ಟರ್ ಸಂಪತ್‌” ಚಿತ್ರ ನಿರ್ಮಿಸಿದಾಗ ಅದರಲ್ಲಿ ಹಾಡಿನ ತುಣುಕೊಂದನ್ನು ಈ ಶ್ರೀನಿವಾಸಾಚಾರ್ಯರು ಹಾಡಿದ್ದಾರೆ.

ಆದರೆ ಪಿಬಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಒದಗಿಸಿದ್ದು ಆರ್. ನಾಗೇಂದ್ರರಾವ್ ನಿರ್ದೇಶನದ “ಜಾತಕಫಲ”. ನಾಗೇಂದ್ರರಾಯರು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರವನ್ನು ನಿರ್ಮಿಸಿದರು.  ಆರ್. ಗೋವರ್ಧನ್ ಅವರ ಸಂಗೀತ ನಿರ್ದೇಶನದಲ್ಲಿ ಪಿ.ಬಿ. ಶ್ರೀನಿವಾಸ್ “ಚಿಂತಿಸದಿರು ರಮಣಿ ಮೂಢತನವಿದೇಕೆ ಈ ಮೂಢತನವಿದೇಕೆ...” ಎಂಬ ಗೀತೆ ಹಾಡಿದರು. ಮೂರೂ ಭಾಷೆಯಲ್ಲಿ ಹಾಡಿದ ಪಿ.ಬಿ. ಶ್ರೀನಿವಾಸ್, ಅವರನ್ನು ಈ ಹಾಡು ಗಾಯನ ಉತ್ತುಂಗಕ್ಕೇರಿಸಿತು. ಎಂಟು ಭಾಷೆಗಳಲ್ಲಿ ಅವರು ಹಾಡುವಷ್ಟು ಪಾರಂಗತರಾದರು. ಹಿಂದಿ, ಉರ್ದು, ಇಂಗ್ಲಿಷ್, ಸಂಸ್ಕೃತ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಹಟ ಅವರಲ್ಲಿತ್ತು. ಸಂಸ್ಕೃತದಲ್ಲಿ ಹಾಡು ಬರೆಯುತ್ತಿದ್ದರು. “ಭಾಗ್ಯಜ್ಯೋತಿ” ಚಿತ್ರಕ್ಕಾಗಿ ಸಂಸ್ಕೃತ ಗೀತೆ ರಚಿಸಿ ಹಾಡಿದ್ದು ಅವರ ಸಾಧನೆ. ನೂರಾರು ಗಜಲ್‌ಗಳನ್ನು ಬರೆದಿದ್ದಾರೆ.

ಸಣ್ಣ ಕೊರಗು
ಪಿಬಿಎಸ್‌ಗೆ ಸಣ್ಣ ಕೊರಗೊಂದಿತ್ತು. ಎಂಟು ಭಾಷೆಗಳಲ್ಲಿ ಪಾರಂಗತರಾದರೂ ಅವರನ್ನು ಭಾರತೀಯ ಸಂಗೀತಗಾರ, ಗಾಯಕ ಎಂದು ಯಾರೂ ಕರೆಯುತ್ತಿರಲಿಲ್ಲ. ದಕ್ಷಿಣ ಭಾರತದ ಪ್ರಖ್ಯಾತ ಗಾಯಕ ಎಂದೇ ಹೇಳುತ್ತಿದ್ದರು. ಹಾಗೆ ನೋಡಿದರೆ, ಪಿಬಿಎಸ್ ಅವರು ಮೊದಲು ಹಾಡಿದ್ದೇ ಹಿಂದಿಯಲ್ಲಿ. “ಮೈ ಭೀ ಲಡ್ಕೀ ಹೂಂ” ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆ ಯುಗಳಗೀತೆ ಹಾಡಿದ್ದಾರೆ. ಆದರೂ ಉತ್ತರ ಭಾರತೀಯರು ಪಿಬಿಎಸ್ ಅವರನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಹೋದರು.

ದಕ್ಷಿಣ ಭಾರತೀಯರ ಬಗ್ಗೆ ಉತ್ತರ ಭಾರತೀಯರು ತಾತ್ಸಾರ ತೋರುತ್ತಾರೆ ಎಂದು ಅವರಿಗೆ ಅನಿಸಿತ್ತು. ( ಗಾಯಕಿ ಎಸ್.ಜಾನಕಿ ಅವರಿಗೂ ಹೀಗೇ ಅನ್ನಿಸಿ ಅವರು ಪದ್ಮ ಪ್ರಶಸ್ತಿಯನ್ನೇ ನಿರಾಕರಿಸಿಲ್ಲವೇ?) ಒಮ್ಮೆ ಚಿತ್ರ ನಿರ್ಮಾಪಕರೊಬ್ಬರು, ದಕ್ಷಿಣ ಭಾರತೀಯರಿಗೆ ಹಿಂದಿ ಭಾಷೆಗೆ ಹೊಂದಾಣಿಕೆ ಬರುವುದಿಲ್ಲ ಎಂದರಂತೆ. ಆಗ ಪಿ.ಬಿ.ಶ್ರೀನಿವಾಸ್ ಅವರು ಗಜಲ್‌ಗಳನ್ನು ಹಾಡಿ ತೋರಿಸಿದರಂತೆ. ದಕ್ಷಿಣ ಭಾರತೀಯರು ಇಷ್ಟು ಚೆನ್ನಾಗಿ ಗಜಲ್ ಹಾಡುವುದುಂಟೇ ಎಂದು ಅವರು ಅಚ್ಚರಿ ಪಟ್ಟರಂತೆ.

ಅಚ್ಚರಿಯನ್ನೇನೋ ವ್ಯಕ್ತಪಡಿಸಿದರು. ಆದರೆ ಅವಕಾಶ ಕೊಡಲಿಲ್ಲ. 64 ವರ್ಷಗಳ ಕಾಲ ಅವರು ಸಂಗೀತಮಯ ಜೀವನ ನಡೆಸಿದರು. ಇತರ ಹಿನ್ನೆಲೆ ಗಾಯಕರ ಬೆಳವಣಿಗೆಯನ್ನು ಕಣ್ಣಾರೆ ಕಂಡರು. ಚೆನ್ನೈನಲ್ಲಿ ನೆಲೆಸಿದ್ದರೂ, ಪದೇಪದೇ ಬೆಂಗಳೂರಿಗೆ ಬಂದು ಸಂಗೀತ ಸಂಜೆ ನಡೆಸಿಕೊಡುತ್ತಿದ್ದರು. ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಕಳೆದ ತಿಂಗಳೂ ಅವರು ಬೆಂಗಳೂರಿಗೆ ಬಂದು ಸಮಾರಂಭದಲ್ಲಿ ಭಾಗವಹಿಸಿದ್ದರು. “ನಮ್ಮ ಕಾಲದಲ್ಲಿ ಚಿತ್ರಗೀತೆಗಳಲ್ಲಿ ಮಾಧುರ್ಯವಿತ್ತು. ಈಗ ಅದು ಸ್ವಲ್ಪ ಕಾಣೆಯಾಗಿದೆ. ಆದರೆ ನನಗೆ ವಿಶ್ವಾಸವಿದೆ, ಮಾಧುರ್ಯದ ಸಂಗೀತ ಮತ್ತೆ ಬರಲಿದೆ” ಎಂದು ಅವರು `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಸಂಗೀತ ದಿಗ್ಗಜರ ಮಿಲನ
ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಮನ್ನಾಡೆ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಸಮಯದಲ್ಲಿ ಹೆಚ್ಚು ಖುಷಿ ಪಟ್ಟವರು ಪಿ.ಬಿ.ಶ್ರೀನಿವಾಸ್. ಮನ್ನಾಡೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಬೆಂಗಳೂರಿಗೆ ಬಂದ ಪಿ.ಬಿ.ಶ್ರೀನಿವಾಸ್, ನೇರವಾಗಿ ಮನ್ನಾಡೆ ಅವರ ಮನೆಗೆ ತೆರಳಿದರು. ಇಬ್ಬರು ಸಂಗೀತ ದಿಗ್ಗಜಗಳ ಮಿಲನ. ಮನ್ನಾಡೆ ಅವರ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಮನ್ನಾಡೆ ಅವರು, ಪಿಬಿಎಸ್ ಅವರನ್ನು ಸ್ವಾಗತಿಸಲು ಎದುರಾದರು. ಪಿಬಿಎಸ್ ಎಷ್ಟು ಭಾವುಕರಾದರೆಂದರೆ, ಮನ್ನಾಡೆ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ, ಕಾಲುಮುಟ್ಟಿ ನಮಸ್ಕರಿಸಿದರು.

ಇದರಿಂದ ದಿಗ್ಭ್ರಾಂತರಾದ ಮನ್ನಾಡೆ ಅವರು, “ಅಯ್ಯೋ, ನೀವು ನನಗಿಂತ ದೊಡ್ಡವರು, ನೀವು ಹೀಗೆಲ್ಲಾ ಮಾಡಬಾರದು” ಎಂದು ಗದ್ಗದಿತರಾದರು. ಎರಡು ಸಂಗೀತ ದಿಗ್ಗಜಗಳು  ಕೆಲಕಾಲ ಭಾವುಕವಾಗಿ, ವಿಸ್ಮಿತರಾಗಿ ಮಾತೇ ಹೊರಡದೆ ನಿಂತುಬಿಟ್ಟರು. ಅದೊಂದು ಮೌನರಾಗ. ಸಂಗೀತದ ಬಗ್ಗೆ, ಸಂಗೀತ ಸಾಧನೆಯ ಬಗ್ಗೆ ಪಿ.ಬಿ.ಶ್ರೀನಿವಾಸ್ ಹೊಂದಿದ್ದ ಭಕ್ತಿ ಇದು. ಪಿಬಿಎಸ್‌ಗೂ ಫಾಲ್ಕೆ ಬರುವ ಯೋಗ್ಯತೆ ಇತ್ತು.

ಗಗ್ನಂಸ್ಟಾರ್ ಎಂಬ ಒಂದೇ ಹಾಡಿನಲ್ಲಿ ಪಿಎಸ್‌ವೈ ವಿಶ್ವವಿಖ್ಯಾತಿಯಾದರು. ಮುಂದೆ ಜಂಟಲ್‌ಮನ್ ಬರಲಿದೆ ಎನ್ನುವುದೂ ಜಗದ್ವಿಖ್ಯಾತ ಸುದ್ದಿಯಾಗಿದೆ. ಆದರೆ ನಮ್ಮ ಪಿಬಿಎಸ್, 64 ವರ್ಷಗಳಿಂದ ಅವಿರತ ಸಂಗೀತ ಸೇವೆ ಸಲ್ಲಿಸಿಯೂ ಚೆನ್ನೈ-ಬೆಂಗಳೂರು ನಡುವೆ ಕಳೆದುಹೋದರಲ್ಲಾ ಎಂದು ದುಃಖವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT