ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಕಲ್ ಗ್ರಾಮ ಸಂಚಾರ ಕಡಿತ ಭೀತಿ

Last Updated 5 ಜುಲೈ 2013, 8:11 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ನಿಡುವಾಳೆ ಸಮೀಪದ ಮರ್ಕಲ್ ಮತ್ತು ಸುತ್ತಮುತ್ತಲ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಭೂಕುಸಿತ ಉಂಟಾದ ಕಾರಣ ಸಂಚಾರ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ 35 ಕಿ. ಮೀ ದೂರದಲ್ಲಿರುವ ಈ ರಸ್ತೆ, ಚಂದುವಳ್ಳಿ, ಮಕ್ಕಿಮನೆ, ಮೇಗೂರು, ಅರೆಕೂಡಿಗೆ, ಗದಗೋಡು ಮುಂತಾದ ಗ್ರಾಮಗಳಿಂದ ನಿಡುವಾಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು, ಭೂ ಕುಸಿತದಿಂದ ರಸ್ತೆ ಕಡಿತಗೊಳ್ಳುವ ಅಪಾಯ ಎದುರಾಗಿದೆ.

ಸುಮಾರು ಐದು ನೂರು ಮನೆಗಳನ್ನು ಹೊಂದಿರುವ ಮೇಲಿನ ಎಲ್ಲಾ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರೇ ಹೆಚ್ಚಾಗಿದ್ದು, ಈ ಜನರು ತಮ್ಮ ದಿನನಿತ್ಯದ ಬದುಕಿಗಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವ ರೋಗಿಗಳು, ವೃದ್ಧರು ಇದೇ ಮಾರ್ಗದಲ್ಲಿ ಸಾಗಬೇಕಾಗಿದ್ದು, ಭೂ ಕುಸಿತ ಉಂಟಾಗಿರುವುದರಿಂದ ಈ ರಸ್ತೆಯಲ್ಲಿ ಖಾಸಗೀ ವಾಹನಗಳು ತೆರಳಲು ಹಿಂದೇಟು ಹಾಕುತ್ತಿದ್ದು, ಕಾಲ್ನಡಿಗೆಯಲ್ಲಿಯೇ ಸಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಸುಮಾರು ಆರು ಕಿ.ಮೀ ನಷ್ಟು ಉದ್ದದಲ್ಲಿ ಕಡಿದಾದ ಶೈಲಿಯಲ್ಲಿ ಹಿಮ್ಮುರಿ ತಿರುವುಗಳನ್ನು ಹೊಂದಿರುವ ಈ ರಸ್ತೆಯಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ಮಳೆಯ ನೀರೆಲ್ಲವೂ ರಸ್ತೆಯ ಮೇಲೆ ಹರಿದು ಬರುತ್ತಿದ್ದು, ಇಳಿಜಾರು ಪ್ರದೇಶಕ್ಕೆ ನುಗ್ಗುವುದರಿಂದ ಪ್ರತಿ ವರ್ಷವೂ ಭೂಮಿ ಕುಸಿಯತೊಡಗುತ್ತದೆ. ಇದರಿಂದಾಗಿ ಕಡಿದಾದ ರಸ್ತೆಯಲ್ಲಿ ಅನೇಕ ಕಡೆ ಅರ್ಧ ರಸ್ತೆಯೇ ತೆರವುಗೊಂಡಿದ್ದು, ಹರಸಾಹಸ ಪಟ್ಟು ವಾಹನಗಳನ್ನು ಸಾಗಿಸಬೇಕಾದ ದುಃಸ್ಥಿತಿ ಒದಗಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: ನೂರಾರು ಕುಟುಂಬದ ಜನರು ಬಳಸುವ ಮರ್ಕಲ್ ರಸ್ತೆಯಲ್ಲಿ ಭೂಕುಸಿತ ಉಂಟಾದ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಿ, ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸಿ ರಸ್ತೆಯ ಬದಿಗೆ ಚರಂಡಿನಿರ್ಮಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಗ್ರಾಮದ ನಿವಾಸಿ ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಎಂ.ಪಿ. ಸತೀಶ್, ಯುವ ಜನತಾದಳದ ತಾಲ್ಲೂಕು ಅಧ್ಯಕ್ಷ ಅರುಣ್‌ಕುಮಾರ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT