ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ತ್ಯಲೋಕದಲ್ಲಿ ಊರ್ವಶಿ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ವಿಜಯ ಕನ್ನಡ ರಕ್ಷಣಾ ವೇದಿಕೆ ಎಂಬ ಸಂಘಟನೆಯ ನಿರ್ಮಾಣದ ಹೊಸ ಚಿತ್ರದ ಮುಹೂರ್ತ ಸಮಾರಂಭ. ಮೂವರು ನಾಯಕಿಯರು, ಇಬ್ಬರು ನಾಯಕರು. ಸಂಘಟನೆಯ ಅಧ್ಯಕ್ಷರಾದಿಯಾಗಿ ವೇದಿಕೆಯಲ್ಲಿ ಕುಳಿತಿದ್ದ ಎಲ್ಲರೂ ಮಾತನಾಡುವ ಅವಕಾಶವನ್ನು ಹಂಚಿಕೊಂಡರು.

ಒಬ್ಬರಾದರೂ ಸ್ಪಷ್ಟವಾಗಿ ಕನ್ನಡ ಉಚ್ಚರಿಸುತ್ತಾರೆ ಎಂದು ಕಾದಿದ್ದವರಿಗೆ ಎದುರಾದದ್ದು ನಿರಾಸೆ. `ಊರ್ವಶಿ' ಎಂಬ ಚಿತ್ರದ ಸುದ್ದಿಗೋಷ್ಠಿಯದು. `ಸೀಮೆಗಿಲ್‌ದೋಳು' ಎನ್ನುವುದು ಸಿನಿಮಾದ ಅಡಿಶೀರ್ಷಿಕೆ. ಈ ಚಿತ್ರದ ಹಿಂದಿರುವವರು `ಕೊಟ್ಲಲ್ಲಪ್ಪೋ ಕೈ' ಖ್ಯಾತಿಯ ನಟಿ ನಯನಾಕೃಷ್ಣ. ಮಾತನಾಡಿದವರೆಲ್ಲರೂ ನಯನಾಕೃಷ್ಣರ ಹೆಸರು ಜಪಿಸಿದರೂ, ಸುದ್ದಿಮಿತ್ರರ ಮುಂದೆ ಅವರು ಹಾಜರಿರಲಿಲ್ಲ.

ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿರುವ ರಾಮ್‌ಪ್ರಕಾಶ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅವರಿಗಿದು ಎರಡನೇ ಚಿತ್ರ. ಮೊದಲನೇ ಚಿತ್ರ `ಶಿವಕಾಶಿ' ಇನ್ನೂ ಸಂಪೂರ್ಣಗೊಂಡಿಲ್ಲ. `ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಲಿದ್ದಾರೆ. ಅವರಿಗಾಗಿ ಕಾದಿದ್ದೇವೆ' ಎಂಬ ಉತ್ತರ ಅವರದು. `ಊರ್ವಶಿ'ಯ ವರ್ಣನೆಗೆ ಅವರು ಆಸಕ್ತಿ ತೋರಲಿಲ್ಲ.

ಮೂವರು ನಾಯಕಿಯರಿರುವ ಕಾರಣಕ್ಕೆ ಒಬ್ಬ ನಾಯಕಿ ಊರ್ವಶಿಯಾದರೆ, ಇನ್ನಿಬ್ಬರು ರಂಭೆ, ಮೇನಕೆ ಎಂದು ಊಹಿಸಿದರೆ ತಪ್ಪು. ನಿಜವಾದ ಊರ್ವಶಿ ಯಾರು ಎಂಬುದು ಚಿತ್ರದಲ್ಲಿ ಅವರು ಕೊನೆವರೆಗೂ ಕಾಪಾಡಿಕೊಂಡು ಬರುವ ರಹಸ್ಯವಂತೆ. ನಾಯಕ ಭರತ್ ಸಾಗರ್ ರಂಗಭೂಮಿ ಮತ್ತು ಕೆಲವು ಚಿತ್ರಗಳಲ್ಲಿ ನಟಿಸಿದ ಅನುಭವವುಳ್ಳವರು.

ಚಿತ್ರದಲ್ಲಿ ಅವರದು ಬಿಜಿನೆಸ್‌ಮ್ಯಾನ್ ಪಾತ್ರ. ಮತ್ತೊಬ್ಬ ನಾಯಕ ನಿತಿನ್ ಮಾಗಡಿ ಅವರಿಗೆ ಇದು ಮೂರನೇ ಚಿತ್ರ. ನೆಗೆಟಿವ್ ಛಾಯೆಯ ಪಾತ್ರ ತಮ್ಮದು ಎಂದು ಅವರು ಹೇಳಿಕೊಂಡರು. ಸಂಜನಾ ನಾಯ್ಡು, ಅಕ್ಷತಾ ಶೆಟ್ಟಿ ಮತ್ತು ದೀಕ್ಷಾ ಕೃಷ್ಣಮೂರ್ತಿ ನಾಯಕಿಯರು.

ಮೂವರಿಗೂ ತಮ್ಮ ಪಾತ್ರಗಳ ಆಳ ಅಗಲದ ತಿಳಿವಳಿಕೆ ಇದ್ದಂತಿರಲಿಲ್ಲ. ಕನ್ನಡತಿಯರೇ ಆದರೂ ಪರಭಾಷಾ ನಟಿಯರ ಶೈಲಿಯ ಕನ್ನಡ ಹೊರಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT