ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ರೆಗೆ ಆಘಾತ ನೀಡಿದ ವಾವ್ರಿಂಕಾ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ನೊವಾಕ್‌ ಜೊಕೊವಿಚ್‌
Last Updated 6 ಸೆಪ್ಟೆಂಬರ್ 2013, 19:33 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬ ಆ್ಯಂಡಿ ಮರ್ರೆ ಕನಸು ಭಗ್ನಗೊಂಡಿದೆ. ಬ್ರಿಟನ್‌ನ ಆಟಗಾರ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ 6–4, 6–3, 6–2 ರಲ್ಲಿ ಒಲಿಂಪಿಕ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ಮರ್ರೆಗೆ ಆಘಾತ ನೀಡಿದರು.

ಒಂಬತ್ತನೇ ಶ್ರೇಯಾಂಕದ ಆಟಗಾರ ವಾವ್ರಿಂಕಾ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯೊಂದರ ನಾಲ್ಕರಘಟ್ಟ ಪ್ರವೇಶಿಸಿದ್ದು ಇದೇ ಮೊದಲು. ‘ಇದು ವಿಶೇಷ ಅನುಭವ. ನನಗೆ ನಿಜವಾಗಿಯೂ ಸಂತಸ ಉಂಟಾಗಿದೆ. ಮೊದಲ ಬಾರಿಗೆ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಸೆಮಿ ಪ್ರವೇಶಿಸಲು ಸಾಧ್ಯವಾಗಿರುವುದು ಸಂತೋಷಕ್ಕೆ ಕಾರಣ­ವಾಗಿದೆ’ ಎಂದು ವಾವ್ರಿಂಕಾ ಪ್ರತಿಕ್ರಿಯಿಸಿದ್ದಾರೆ.

ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ನಾಲ್ಕರಘಟ್ಟ ಪ್ರವೇಶಿಸಿದ ಸ್ವಿಟ್ಜರ್‌ಲೆಂಡ್‌ನ ಮೂರನೇ ಆಟಗಾರ ಎಂಬ ಗೌರವವನ್ನು ವಾವ್ರಿಂಕಾ ತಮ್ಮದಾಗಿಸಿಕೊಂಡರು. ಈ ಮೊದಲು ರೋಜರ್‌ ಫೆಡರರ್‌ ಮತ್ತು ಮಾರ್ಕ್‌ ರೊಸೆಟ್‌ ಮಾತ್ರ ಈ ಸಾಧನೆ ಮಾಡಿದ್ದರು.

‘ಮರ್ರೆ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಲು ಸಾಧ್ಯವಾಗಿದೆ. ಉನ್ನತಮಟ್ಟದ ಆಟ ತೋರಲು ಯಶಸ್ವಿಯಾದೆ’ ಎಂದು ಅವರು ನುಡಿದಿದ್ದಾರೆ. ಮರ್ರೆ ಈ ಪಂದ್ಯದಲ್ಲಿ ಯಾವುದೇ ಬ್ರೇಕ್‌ ಪಾಯಿಂಟ್‌ ಅವಕಾಶ ಸೃಷ್ಟಿಸುವಲ್ಲಿ ವಿಫಲರಾದರು. ಈ ಹಿಂದೆ ಆಡಿದ್ದ 145 ಗ್ರ್ಯಾಂಡ್‌ ಸ್ಲಾಮ್‌ ಪಂದ್ಯಗಳಲ್ಲಿ ಮರ್ರೆ ಬ್ರೇಕ್‌ ಪಾಯಿಂಟ್‌ ಅವಕಾಶ ಸೃಷ್ಟಿಸಲು ವಿಫಲರಾದದ್ದು ಒಮ್ಮೆ ಮಾತ್ರ.

‘ಶ್ರೇಷ್ಠ ಪ್ರದರ್ಶನ ತೋರಿದ ವಾವ್ರಿಂಕಾ ಚೆಂಡನ್ನು ಸೊಗಸಾದ ರೀತಿಯಲ್ಲಿ ಹಿಂದಿರುಗಿಸುತ್ತಿ­ದ್ದರು. ನನಗೆ ಬ್ರೇಕ್‌ ಪಾಯಿಂಟ್‌ ಅವಕಾಶ ಸೃಷ್ಟಿಸಲೂ ಆಗಲಿಲ್ಲ. ಅವರ ಸರ್ವ್‌ ಕೂಡಾ ಉತ್ತಮವಾಗಿತ್ತು’ ಏಂದು ಮರ್ರೆ ಎದುರಾಳಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಾವ್ರಿಂಕಾ ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರ ರಿ್ಯಾಂಕ್‌ನ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರ ಸವಾಲನ್ನು ಎದುರಿಸಲಿ­ದ್ದಾರೆ. ದಿನದ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಜೊಕೊವಿಚ್‌ 6–3, 6–2, 3–6, 6–0 ರಲ್ಲಿ ರಷ್ಯಾದ ಮಿಖಾಯಿಲ್‌ ಯೂಜ್ನಿ ಅವರನ್ನು ಮಣಿಸಿದರು.

26ರ ಹರೆಯದ ಜೊಕೊವಿಚ್‌ ಮೊದಲ ಎರಡು ಸೆಟ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು. ಮೂರನೇ ಸೆಟ್‌ ಗೆದ್ದುಕೊಂಡ ಯೂಜ್ನಿ ಮರುಹೋರಾಟದ ಸೂಚನೆ ನೀಡಿದರು. ಆದರೆ ನಾಲ್ಕನೇ ಸೆಟ್‌ನಲ್ಲಿ ಲಯ ಕಂಡುಕೊಂಡ ಜೊಕೊವಿಚ್‌ ಎದುರಾಳಿಗೆ ಯಾವುದೇ ಗೇಮ್‌ ಬಿಟ್ಟುಕೊಡದೆಯೇ ಗೆಲುವು ತಮ್ಮದಾಗಿಸಿಕೊಂಡರು.

ಜೊಕೊವಿಚ್‌ ಅಮೆರಿಕ ಓಪನ್‌ನಲ್ಲಿ ಸತತ ಏಳನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಅದೇ ರೀತಿ ಒಟ್ಟಾರೆಯಾಗಿ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಅವರಿಗೆ ಇದು ಸತತ 14ನೇ ಸೆಮಿಫೈನಲ್‌ ಪಂದ್ಯ ಎನಿಸಿದೆ.

ಜೊಕೊವಿಚ್‌ ಅವರು ವಾವ್ರಿಂಕಾ ವಿರುದ್ಧ 12–2 ಗೆಲುವಿನ ದಾಖಲೆ ಹೊಂದಿದ್ದಾರೆ. ಹೋದ ಋತುವಿನ ಅಮೆರಿಕ ಓಪನ್‌ನಲ್ಲಿ ಹಾಗೂ ಈ ಬಾರಿ ಆಸ್ಟ್ರೇಲಿಯಾ ಓಪನ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಆಟಗಾರ ವಾವ್ರಿಂಕಾ ವಿರುದ್ಧ ಗೆಲುವು ಪಡೆದಿದ್ದರು.

ಆದರೆ ಎದುರಾಳಿಯನ್ನು ಹಗುರವಾಗಿ ಪರಿಗ­ಣಿ­­ಸಲು ಸಿದ್ಧನಿಲ್ಲ ಎಂದು ಜೊಕೊವಿಚ್‌ ಹೇಳಿ­ದ್ದಾರೆ. ‘ಈ ಪಂದ್ಯ ಪ್ರಬಲ ಪೈಪೋಟಿಯಿಂದ ಕೂಡಿ-­ರಲಿದೆ. ಯಾರಿಗೂ ಫೇವರಿಟ್‌ ಎಂಬ ಹಣೆಪಟ್ಟಿ ದೊರೆತಿಲ್ಲ’ ಎಂದು ಅವರು ನುಡಿದಿದ್ದಾರೆ.

ಶನಿವಾರ ನಡೆಯುವ ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್‌ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT