ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸೀಡೀಸ್‌ನ ಹೊಸ ಬೆಂಜ್ ಮಾರ್ಕ್!

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಪರಿಚಯವಾಗಿ ದಶಕಗಳೇ ಕಳೆದು ಅದರ ಎರಡು ತಲೆಮಾರುಗಳು ಉರುಳಿಹೋಗಿವೆ. ಇದೀಗ ಮೂರನೇ ತಲೆಮಾರಿನ ಸಿ-ಕ್ಲಾಸ್ ಹೊಚ್ಚ ಹೊಸ ರೂಪದೊಂದಿಗೆ ಹಾಗೂ ಅದಕ್ಕಿಂತಲೂ ಮಿಗಿಲಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಇಳಿದಿದೆ.

36 ಲಕ್ಷ ರೂಪಾಯಿ ಬೆಲೆಯ ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಬಾನೆಟ್ ಮೇಲಿದ್ದ ಪುಟ್ಟದಾದ ಮೂರು ಸ್ಪೋಕ್ಸ್‌ನ ಮರ್ಸಿಡೀಸ್ ಬೆಂಜ್ ಲೊಗೊ ಈಗ ದೊಡ್ಡದಾಗಿ ಗ್ರಿಲ್‌ನಲ್ಲಿ ಬಂದು ಕೂತಿರುವುದು ಕಾರಿಗೆ ಯೌವನದ ಕಳೆ ನೀಡಿರುವುದಲ್ಲದೆ ಮೊದಲ ನೋಟದಲ್ಲೇ ಸೆಳೆಯುವಂತಿದೆ.

ತಮ್ಮ ಎತ್ತರ, ಗಾತ್ರ ಹಾಗೂ ಆರಾಮಕ್ಕೆ ಅನುಗುಣವಾಗಿ ಮುಂಭಾಗದ ಎರಡು ಆಸನಗಳ ಬ್ಯಾಕ್‌ರೆಸ್ಟ್ ಹಾಗೂ ಹೆಡ್‌ರೆಸ್ಟ್‌ಗಳನ್ನು ಕೇವಲ ಗುಂಡಿಯ ಮೂಲಕವೇ ಹೊಂದಿಸಿಕೊಳ್ಳಬಹುದು. ಮೂವರು ಚಾಲಕರಿಗೆ ಸಂಬಂಧಿಸಿದ ಈ ವಿವರಗಳನ್ನು ಕಾರು ನೆನಪಿಟ್ಟುಕೊಳ್ಳುವಂತೆಯೂ ಮಾಡಬಹುದು.
 
ಇದರಿಂದ ಪ್ರತಿ ಬಾರಿ ಆಸನವನ್ನು ಹೊಂದಿಸಿಕೊಳ್ಳುವ ಅಗತ್ಯವಿಲ್ಲ. ಇನ್ನು ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಓಡಿಸುವವರೂ ಒಂದೇ ಗುಂಡಿಯಲ್ಲಿ ತಮ್ಮ ಆಸನಗಳು, ಸ್ಟಿಯರಿಂಗನ್ನು ಮುಂದೆ-ಹಿಂದೆ, ಮೇಲೆ-ಕೆಳಗೆ ಹಾಗೂ ಅಕ್ಕಪಕ್ಕದ ಕನ್ನಡಿಗಳನ್ನು ಸರಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಒಂದೇ ಗುಂಡಿಯಲ್ಲಿ ಸಸ್ಪೆನ್ಷನ್ ಕೂಡ ಸಾಮಾನ್ಯ ಅಥವಾ ಸ್ಪೋರ್ಟ್ಸ್ ಮೋಡ್‌ಗೆ ಬದಲಿಸಿಕೊಳ್ಳಬಹುದು. 

 ಆಟೋ ಗೇರ್ ಹೊಂದಿರುವ ಸಿ-ಕ್ಲಾಸ್‌ನಲ್ಲಿ ಕ್ಲಚ್ ಇಲ್ಲದ ಕಾರಣ ಎಡಗಾಲಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಆದರೆ ಅತಿ ವೇಗದಲ್ಲಿ ಹೋಗುವಾಗ ತಕ್ಷಣ ನಿಲ್ಲಿಸಲು ಅನುವಾಗುವಂತೆ ಬ್ರೇಕ್ ವ್ಯವಸ್ಥೆಯೂ ಇದೆ. ಬಲಗಾಲು ಎಂದಿನಂತೆ ಬ್ರೇಕ್ ಹಾಗೂ ಆಕ್ಸಲರೇಟರ್‌ಗಳನ್ನು ನಿಭಾಯಿಸಬೇಕು.
 
ಆಕ್ಸಲರೇಟರ್ ನೀಡಿದಂತೆ ಕಾರಿನ ಗೇರ್‌ಗಳು ತಂತಾವೇ ಬದಲಾಗುತ್ತಾ ಹೋಗುತ್ತವೆ. ಸ್ಪೀಡೋ ಮೀಟರ್‌ನಲ್ಲೇ ಗೇರ್, ಪಾರ್ಕಿಂಗ್, ಡ್ರೈವ್ ಮೋಡ್‌ನಲ್ಲಿದೆಯೇ ಎಂಬ ಮಾಹಿತಿಯೊಂದಿಗೆ ಈಗ ಬರುತ್ತಿರುವ ಹಾಡು ಯಾವುದು, ಬಂದ ಕರೆಯ ವಿವರ ಇತ್ಯಾದಿ ಮಾಹಿತಿಯ ಜತೆಗೆ ಚಕ್ರದಲ್ಲಿ ಗಾಳಿ ಎಷ್ಟಿದೆ, ಸಸ್ಪೆನ್ಷನ್ ಸಾಮಾನ್ಯದಲ್ಲಿದೆಯೇ ಅಥವಾ ಸ್ಪೋರ್ಟ್ಸ್‌ನಲ್ಲಿದೆಯೋ ಎಂಬ ವಿವರಗಳೂ ಲಭ್ಯ.

 ಈ ಕಾರು ಪ್ರತಿ ಗಂಟೆಗೆ ಗರಿಷ್ಠ 260 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವಿದ್ದರೂ ಟೆಸ್ಟ್ ಡ್ರೈವ್ ಸಂದರ್ಭದಲ್ಲಿ ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಓಡಿಸಲಾಯಿತು. ಆರಾಮದಲ್ಲಿ ಕೊಂಚವೂ ಏರುಪೇರಾಗದ ಸಿ-ಕ್ಲಾಸ್ ತಕ್ಷಣ ನಿಯಂತ್ರಣಕ್ಕೆ ಬರುವ ಹಾಗೂ ಬಲು ಬೇಗ ವೇಗ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
 
ಗರಿಷ್ಠ 200 ಕಿ.ಮೀ. ವೇಗ ತಲುಪಿದ ನಂತರ ಕ್ರೂಸ್ ಕಂಟ್ರೋಲ್ ಗುಂಡಿ ಒತ್ತಿದೊಡನೆ ಆಕ್ಸಲರೇಟರ್ ನೀಡದೆ ಅದೇ ವೇಗದಲ್ಲಿ ಕೇವಲ ಸ್ಟಿಯರಿಂಗ್ ನಿಯಂತ್ರಿಸಿ ಚಲಿಸಬಹುದು. ಬ್ರೇಕ್ ಒತ್ತಿದೊಡನೆ ಕ್ರೂಸ್ ಕಂಟ್ರೋಲ್ ಸ್ಥಗಿತಗೊಂಡು ಕಾರು ನಿಯಂತ್ರಣಕ್ಕೆ ಬರಲಿದೆ. 

 ಇದರ ಜತೆಯಲ್ಲಿ ಎಎಂಜಿ (ಅಫ್ರೆಟ್, ಮೆಲ್ಚರ್, ಗ್ರೊಬಸ್ಪಾಚ್. ಇದು ಮರ್ಸಿಡೀಸ್ ಬೆಂಜ್‌ನ ಮೂವರು ಮಾಜಿ ಎಂಜಿನೀಯರ್‌ಗಳ ಹೆಸರಿನ ಕೊನೆಯ ಭಾಗ. ಈ ಮೂವರು ಸೇರಿ ರೇಸಿಂಗ್, ಸ್ಪೋರ್ಟ್ಸ್, ಅಧಿಕ ಶಕ್ತಿ ಉತ್ಪಾದನೆ ಇತ್ಯಾದಿ ಗುಣಗಳುಳ್ಳ ಕಾರಿನ ತಯಾರಿಕೆಯಲ್ಲಿ ತೊಡಗಿದರು) ಬಾಡಿ ಕಿಟ್ ಹೊಂದಿದೆ.

ಮುಂಭಾಗದಲ್ಲಿ 17 ಇಂಚ್‌ನ ಶಕ್ತಿ ಶಾಲಿ ಡಿಸ್ಕ್ ಬ್ರೇಕ್, ಸ್ಟೇನ್‌ಲೆಸ್ ಸ್ಟೀಲ್ ಹೊಗೆ ಕೊಳವೆ, ಐದು ಟ್ವಿನ್ ಸ್ಪೋಕ್ಸ್‌ನ ಹಗುರವಾದ ಅಲಾಯ್ ಚಕ್ರ, ಹೊರ ಹಾಗೂ ಒಳಭಾಗದಲ್ಲಿ ಎಎಂಜಿ ಸ್ಪೋರ್ಟ್ಸ್ ಪ್ಯಾಕ್ ಸೌಕರ್ಯವಿದೆ. ಬಹುಬಗೆ ಕಾರ್ಯ ನಿರ್ವಹಿಸಬಲ್ಲ 12 ಗುಂಡಿಗಳನ್ನು ನಾಲ್ಕು ಸ್ಟೇರಿಂಗ್ ಹೊಂದಿದೆ.
 
ಎಲ್ಲಕ್ಕೂ ಮಿಗಿಲಾಗಿ ಇದರಲ್ಲಿರುವ ಬ್ಲೂ ಎಫಿಷಿಯನ್ಸ್‌ನಿಂದಾಗಿ ಎಂಜಿನ್ ಉತ್ಪಾದಿಸುವ ಶಕ್ತಿಯ ಕೊನೆಯ ಅಣುವೂ ಬಳಕೆಯಾಗುವುದರಿಂದ ಇಂಧನದ ಪರಿಪೂರ್ಣ ಬಳಕೆ ಸಾಧ್ಯ. ಮಾಲಿನ್ಯದ ಪ್ರಮಾಣ ತೀರಾ ಕಡಿಮೆ.

ಎಂಜಿನ್ ಸಾಮರ್ಥ್ಯ
ಡೀಸಲ್ ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ 2143 ಸಿಸಿಯ 170 ಅಶ್ವ ಶಕ್ತಿ ಉತ್ಪಾದಿಸಬಲ್ಲ ಎಂಜಿನ್ ಹೊಂದಿದೆ. 1400-2800 ಆರ್‌ಪಿಎಂನಲ್ಲಿ ಒಟ್ಟು 400 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು. 0-100 ಕಿ.ಮೀ. ವೇಗ ಕ್ರಮಿಸಲು ಇದಕ್ಕೆ ಬೇಕಾಗಿರುವ ಸಮಯ 8.5 ಕಿ.ಮೀ. ಮಾತ್ರ.

ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 228 ಕಿ.ಮೀ.  ಪೆಟ್ರೋಲ್ ಎಂಜಿನ್ 1796 ಸಿಸಿಯ 186 ಅಶ್ವ ಶಕ್ತಿ ಉತ್ಪಾದಿಸಬಲ್ಲದು. ಪೆಟ್ರೋಲ್ ಕಾರಿನಲ್ಲಿ ಒಟ್ಟು ಏಳು ಸ್ವಯಂಚಾಲಿತ ಗೇರ್‌ಗಳಿವೆ. ಇದು ಒಟ್ಟು 285 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 0-100 ಕಿ.ಮೀ. ವೇಗ ತಲುಪಲು ಇದಕ್ಕೆ ಬೇಕಾಗಿರುವ ಸಮಯ 8.8 ಸೆಕೆಂಡುಗಳು. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 230 ಕಿ.ಮೀ.

ಇವುಗಳಿಗೆ ಹೋಲಿಸಿದಲ್ಲಿ ಸಿ 63 ಎಎಂಜಿ ಭಾರಿ ಶಕ್ತಿಶಾಲಿ ಕಾರು. 8ವ್ಯಾಲ್ವ್‌ಗಳ 6208 ಸಿಸಿ ಹಾಗೂ 457 ಅಶ್ವ ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಇದರದ್ದು. 600 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯವಿರುವುದರಿಂದ ನೂರು ಕಿ.ಮೀ. ವೇಗವನ್ನು ಕೇವಲ 4.5 ಸೆಕೆಂಡುಗಳಲ್ಲಿ ಕ್ರಮಿಸಲಿದೆ.

ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 250 ಕಿ.ಮೀ.  ಇದೇ ಶ್ರೇಣಿಯ ಬಿಎಂಡಬ್ಲೂ ಹಾಗೂ ಆಡಿ ಕಾರುಗಳಿಗೆ ಹೋಲಿಸಿದಲ್ಲಿ ಮರ್ಸಿಡೀಸ್ ಬೆಂಜ್‌ನ ಎಂಜಿನ್ ಶಬ್ದ ಕೊಂಚ ಕಡಿಮೆ. ಹೀಗಾಗಿ ಡೀಸಲ್ ಕಾರುಗಳಿಗೆ ಅವಕಾಶವೇ ನೀಡದ ಕೆಲವೊಂದು ರಾಷ್ಟ್ರಗಳು ಈಗ ಮರ್ಸಿಡೀಸ್ ಬೆಂಜ್‌ಗೆ ಅವಕಾಶ ನೀಡಿರುವುದಕ್ಕೆ ಕಾರಣ ಇದರಲ್ಲಿರುವ ಬ್ಲೂ ಮೋಷನ್ ತಂತ್ರಜ್ಞಾನದಿಂದಾಗಿ. ಶೂನ್ಯ ಮಾಲಿನ್ಯ ಹಾಗೂ ಪರಿಪೂರ್ಣ ಇಂಧನ ಬಳಕೆಯಿಂದ ಅಧಿಕ ಶಕ್ತಿ ಉತ್ಪಾದನೆ ಇದರ ಮುಖ್ಯ ಉದ್ದೇಶ.

ಅತ್ಯುತ್ತಮ ನಿಯಂತ್ರಣ
ಅಪಘಾತ ಆಗುವವರೆಗೂ ಕಾಯದೆ, ಸಂಭವಿಸಬಹುದಾದ ಅಪಘಾತವನ್ನು ತಾನೇ ಅರಿತು ಅದಕ್ಕೆ ತಕ್ಕಂತೆ ಕಾರಿನ ಒಳಗಿರುವವರ ಸುರಕ್ಷತೆಗೆ ಮುಂದಾಗುವ ಅತ್ಯಂತ ತೀಕ್ಷ್ಣಬುದ್ಧಿಯ ಸೆನ್ಸಾರ್‌ಗಳನ್ನು ಮರ್ಸಿಡೀಸ್ ಬೆಂಜ್ ತನ್ನ ಸಿ-ಕ್ಲಾಸ್‌ನಲ್ಲಿ ಅಳವಡಿಸಿದೆ.
 
ಅಪಘಾತ ಸಂಭವಿಸುವುದನ್ನು ಮುಂಚೆಯೇ ಅರಿಯುವ ಇದರ ಸೆನ್ಸರ್‌ಗಳು ತಕ್ಷಣ ಆಸನದ ಪಟ್ಟಿಗಳನ್ನು ಬಿಗಿಗೊಳಿಸುತ್ತದೆ. ಆಸನಗಳನ್ನು ಹೇಗೆಯೇ ಭಾಗಿಸಿಕೊಂಡಿದ್ದರೂ ಅವುಗಳು ಸರಿಯಾದ ಭಂಗಿಗೆ ಬರಲಿವೆ. ಮೇಲ್ಛಾವಣಿ ಹಾಗೂ ಕಿಟಕಿಗಳು ಮುಚ್ಚಿಕೊಳ್ಳುತ್ತವೆ. ಕಾರಿನ ಮುಂಭಾಗದಲ್ಲಿ ಮಾತ್ರವಲ್ಲ ಮಧ್ಯದಲ್ಲೂ ಏರ್‌ಬ್ಯಾಗ್ ವ್ಯವಸ್ಥೆ ಇದೆ.

 ಇದರೊಂದಿಗೆ ಕಾರಿನ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಒಟ್ಟು 60 ಎಲೆಕ್ಟ್ರಾನಿಕ್ ಸೆನ್ಸಾರ್ ಸೌಲಭ್ಯಗಳಿವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ಇಎಸ್‌ಪಿ) ಸ್ಟಿಯರಿಂಗ್ ಹೆಚ್ಚು ಅಥವಾ ಕಡಿಮೆ ತಿರುಗಿದಾಗ ಕಾರನ್ನು ಸರಿಯಾದ ಪಥದತ್ತ ಚಲಿಸಲು ಸಹಕರಿಸಲಿದೆ.

ಇದರೊಂದಿಗೆ ಎಬಿಎಸ್, ಎಎಸ್‌ಆರ್, ಕಡಿದಾದ ರಸ್ತೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ, ಹೆದ್ದಾರಿ ಪ್ರಯಾಣಕ್ಕೆ ಕ್ರೂಸ್ ಕಂಟ್ರೋಲ್ ಹಾಗೂ `ಎಸಿಸ್ಟ್~ ಎಂಬ ಸೇವೆಯು ಸಿ-ಕ್ಲಾಸ್ ಕಾರನ್ನು ಎಂದು ಸೇವಾ ಕೇಂದ್ರಕ್ಕೆ ಒಯ್ಯಬೇಕೆಂಬುದರ ಮಾಹಿತಿ ನೀಡಲಿದೆ.

ಕಾರಿನ ಒಳಾಂಗಣ
ಕಾರಿನ ಹೊರ ಭಾಗ ಎಷ್ಟು ಸುಂದರವಾಗಿದೆಯೋ ಅಷ್ಟೇ ಸೊಗಸಾದ ಒಳಾಂಗಣವನ್ನೂ ಸಿ-ಕ್ಲಾಸ್ ಹೊಂದಿದೆ. ಮೃದುವಾದ ಚರ್ಮ ಹಾಗೂ ಹೆಚ್ಚು ಬೆಳಕು ನೀಡುವ ಬಣ್ಣದ ವಸ್ತುಗಳ ಬಳಕೆ ಕಾರನ್ನು ಒಳಗಿನಿಂದಲೂ ಪ್ರೀತಿಸುವಂತೆ ಮಾಡುತ್ತದೆ. ಉಳಿದ ಆಸನಗಳಿಗಿಂತ ಚಾಲಕನ ಆಸನ ತುಸು ಎತ್ತರವಾಗಿದೆ.

ರಸ್ತೆಯ ಹೆಚ್ಚು ಸ್ಪಷ್ಟವಾಗಿ ಕಾಣಲಿ ಎಂಬ ಉದ್ದೇಶ ಇದ್ದಿರಬಹುದು. ಮುಂಗೈ ಇಡಲು ಹೆಚ್ಚು ಆರಾಮ ನೀಡುವಂತೆ ಮಾಡಲಾಗಿದೆ. ಉಳಿದಂತೆ ಹಿಂಬದಿಯಲ್ಲಿ ಈಗ ಇನ್ನಷ್ಟು ಹೆಚ್ಚು ಸ್ಥಳಾವಕಾಶ ನೀಡಲಾಗಿದೆ.

ನಪ್ಪಾ ಚರ್ಮವನ್ನು ಆಸನಗಳಿಗೆ ಬಳಸಲಾಗಿದೆ.  ಕಾರಿನ ಒಳಗೆ ಕಪ್ ಹೋಲ್ಡರ್‌ಗಳು, ತಂಪು ಕನ್ನಡ ಇಡಲು ಹಾಗೂ ಇತ್ಯಾದಿಗಳಿಗಾಗಿ ಹೆಚ್ಚು ಸ್ಥಳಾವಕಾಶವಿದೆ. ಮೇಲ್ಛಾವಣಿ ಸೌಲಭ್ಯದಿಂದ ಹೆಚ್ಚು ಗಾಳಿ ಒಳ ಬರುವಂತೆ ಮಾಡಬಹುದಾಗಿದೆ. ಬೆಳಕು ಇರಲಿ ಗಾಳಿ ಬೇಡವೆಂದರೂ ಅದಕ್ಕೊಂದು ಪರದೆ ಎಳೆಯುವ ಸೌಲಭ್ಯ ಕೇವಲ ಒಂದು ಗುಂಡಿ ಒತ್ತುವ ಮೂಲಕ ನಿರ್ವಹಿಸಬಹುದು.

ಇಂಧನ ಕ್ಷಮತೆ
ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಒಟ್ಟು ಏಳು ಶ್ರೇಣಿಗಳಲ್ಲಿ ಲಭ್ಯ. ಇವುಗಳಲ್ಲಿ ನಾಲ್ಕು ಪೆಟ್ರೋಲ್ ಹಾಗೂ ಉಳಿದವು ಡೀಸಲ್ ಮಾದರಿಯವು. 1796 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ಗಳು 200ಬಿಇ ಸಿಜಿಐ ಎಕ್ಸಿಕ್ಯುಟಿವ್, ಎಲಿಗೆನ್ಸ್ ಹಾಗೂ ಅವೆಂಟ್‌ಗ್ರೇಡ್ ಎಂಬ ಮಾದರಿಗಳಲ್ಲಿವೆ.

ಈ ಮಾದರಿಯ ಕಾರುಗಳು ನಗರದಲ್ಲಿ ಪ್ರತಿ ಲೀಟರ್‌ಗೆ 7.4 ಹಾಗೂ ಹೆದ್ದಾರಿಯಲ್ಲಿ 11.7 ಕಿ.ಮೀ. ಇಂಧನ ಕ್ಷಮತೆ ನೀಡಲಿವೆ. ಪೆಟ್ರೋಲ್‌ನಲ್ಲಿ ಅಧಿಕ ಆಕ್ಟೇನ್ ಪೆಟ್ರೋಲ್‌ನಿಂದ ಚಲಿಸುವ ಸಿ63 ಎಎಂಜಿ ಕೂಡಾ ಲಭ್ಯ. ಡೀಸಲ್‌ನಲ್ಲಿ 250ಬಿಇ ಸಿಡಿಐ ಎಕ್ಸಿಕ್ಯುಟಿವ್, ಎಲಿಗೆನ್ಸ್ ಹಾಗೂ ಅವೆಂಟೆಗ್ರೇಡ್ ಮಾದರಿಗಳು ನಗರದಲ್ಲಿ ಪ್ರತಿ ಲೀಟರ್‌ಗೆ 10 ಹಾಗೂ ಹೆದ್ದಾರಿಯಲ್ಲಿ 15.8 ಕಿ.ಮೀ. ಇಂಧನ ಕ್ಷಮತೆ ನೀಡಲಿವೆ.

ಸ್ಟಿರಿಯೊ
ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್‌ನ ಎಕ್ಸಿಕ್ಯುಟಿವ್ ಶ್ರೇಣಿಯು 20 ಸಿಡಿ ಪ್ಲೇಯರ್ ಹೊಂದಿದೆ. ಎಲಿಗೆನ್ಸ್ ಹಾಗೂ ಅವಾಂಟ್‌ಗ್ರೇಡ್ 20 ಸಿಡಿ ಪ್ಲೇಯರ್ ಹಾಗೂ 6 ಸಿಡಿ ಬದಲಿಸಬಲ್ಲ ಸೌಲಭ್ಯವಿರುವ ಸ್ಟಿರಿಯೋ ಹೊಂದಿದೆ. ಈ ಮ್ಯೂಸಿಕ್ ಸಿಸ್ಟಂನಲ್ಲಿ ಆಕ್ಸ್-ಇನ್ ಹಾಗೂ ಯುಎಸ್‌ಬಿ ಸಂಪರ್ಕವಿದೆ.

ಇದರೊಂದಿಗೆ ಬ್ಲೂಟೂತ್ ಸಂಪರ್ಕ ಹಾಗೂ ಹ್ಯಾಂಡ್ಸ್‌ಫ್ರೀ ಕೂಡಾ ಲಭ್ಯ. ರೇಡಿಯೋ ಜತೆ ಟ್ವಿನ್ ಟ್ಯೂನರ್ ಕೂಡಾ ಇದೆ. ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್‌ನ ಬೆಲೆ ಎಕ್ಸ್ ಶೋ ರೂಂ ಬೆಲೆ 26ರಿಂದ 36 ಲಕ್ಷ ರೂಪಾಯಿ.
 
ಇನ್ನು ಸಿ 63 ಎಎಂಜಿ ಕಾರಿನ ಬೆಲೆ 81 ಲಕ್ಷ ರೂಪಾಯಿ. ಕಾಸಿಗೆ ತಕ್ಕಂತೆ ಕಜ್ಜಾಯ ಎಂಬಂತೆ ಕಾರಿನ ಬೆಲೆಗೆ ತಕ್ಕಂತೆ ಸೌಲಭ್ಯ ಹಾಗೂ ಸುರಕ್ಷತೆಯನ್ನು ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್‌ನಿಂದ ಪಡೆಯಬಹುದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT