ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಭಾಷಿಗನ ಕನ್ನಡ ಪ್ರೇಮ!

Last Updated 22 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಕರ್ನಾಟಕದಲ್ಲಿಯೇ ಕನ್ನಡ ಅಳಿವಿನಂಚಿಗೆ ಹೋಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕಾಗಿ ಕನ್ನಡ ಉಳಿಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಲೆಯಾಳಂ ಭಾಷಿಕ ವ್ಯಕ್ತಿಯೊಬ್ಬರು ಕನ್ನಡದ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡು ಸದ್ದಿಲ್ಲದೆ ಅದನ್ನು ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ರಾವೂರು ಗ್ರಾಮದ ಪಿ.ಸಿ.ಮ್ಯಾಥ್ಯು 1952ರಲ್ಲಿ ಕೇರಳದಿಂದ ಇಲ್ಲಿಗೆ ವಲಸೆ ಬಂದ ಇವರು ಕನ್ನಡದ ಬಗ್ಗೆ ಮೊದಲಿನಿಂದಲೂ ಅಭಿಮಾನ ಬೆಳೆಸಿಕೊಂಡು ಬಂದಿದ್ದಾರೆ.ವೃತ್ತಿಯಲ್ಲಿ ಕೃಷಿಕನಾದರೂ ಪ್ರವೃತ್ತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ನಾಟಕ ಹೀಗೆ ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇವರ ಹೊಟ್ಟೆಪಾಡಿನ ಮೂಲವಾದರೆ ಕನ್ನಡ ಸೇವೆ ಇವರ ಹವ್ಯಾಸಿ ಹಾಗೂ ಒಲವಿನ ವಿಚಾರ.1982ರಿಂದಲೂ ಸಪ್ತಶ್ರೀ ಹವ್ಯಾಸಿ ಕಲಾರಂಗವನ್ನು ಕಟ್ಟಿ ನಾಟಕಗಳ ಮೂಲಕ ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ಸ್ಥಳೀಯವಾಗಿ ನಾಟಕ ರಂಗಭೂಮಿಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಮ್ಯಾಥ್ಯು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಾಟಕ ಮಥಾಯಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ಹೆಸರು ಹೇಳಿದರೆ ಇವರ ಪರಿಚಯ ಇಲ್ಲದವರಿಲ್ಲ.

ಕಳೆದ 10ವರ್ಷಗಳಿಂದ ಯಾವುದೇ ಕನ್ನಡದ ಕಾರ್ಯಕ್ರಮ ನಡೆದರೂ ಅಲ್ಲಿ ಇವರ ಕನ್ನಡದ ಅಭಿಮಾನದ ನಾಮಫಲಕ ರಾರಾಜಿಸುತ್ತವೆ.   ‘ಪ್ರಮುಖ ಆಮಂತ್ರಣ ಪತ್ರಿಕೆಗಳನ್ನು ಕನ್ನಡದಲ್ಲೆ ಮುದ್ರಿಸಿ ಕನ್ನಡತನವನ್ನು ತೋರಿಸಿ’, ‘ಶುಭ ಸಮಾರಂಭಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಸಂಕಲ್ಪ ಮಾಡಿರಿ’, ‘ಭಾಷ ಅಲ್ಪಸಂಖ್ಯಾತರೆಲ್ಲರೂ ಬನ್ನಿ ಕನ್ನಡಾಂಬೆಯ ತೇರು ಎಳೆಯ ಬನ್ನಿ’, ‘ತಾನಿರುವ ನೆಲದಲ್ಲಿ ಕನ್ನಡವನ್ನು ಉತ್ತಿ ಬಿತ್ತಿ ಬೆಳೆಯುವವನೆ ನಿಜವಾದ ಕನ್ನಡಿಗ’, ’ಓ ಕನ್ನಡಿಗ ನೀನು ಕನ್ನಡವನ್ನು ಉಳಿಸುವುದು ಬೇಡ ಬೆಳೆಸುವುದು ಬೇಡ ಬಳಸಿದರೆ ಸಾಕು’,  ಕನ್ನಡ ಒಂದು ಜಾತಿಯ ಒಂದು ಕೋಮಿನ ಸ್ವತ್ತಲ್ಲ ಕನ್ನಡ ಎಂಬುದು ಒಂದು ಸಂಸ್ಕೃತಿ....... ಇತ್ಯಾದಿ ತಾವೇ ಬರೆದ ಕನಿಷ್ಠ 30 ಕನ್ನಡ ಭಾಷೆ ಬೆಳೆಸುವ ಬಗ್ಗೆ ಮಾಹಿತಿ ಇರುವ ನಾಮ ಫಲಕಗಳನ್ನು ಹಾಕುತ್ತಾರೆ.

ಪರಭಾಷಿಕನಾದರೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿರುವ ಇವರು ಮನೆ ಅಂಗಳ ಕಾರ್ಯಕ್ರಮವನ್ನು ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿ ಕೊಂಡಿರುವಂತೆ ಇವರ ಪುತ್ರನೊಬ್ಬ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವುದು ಇವರ ರಾಷ್ಟ್ರಪ್ರೇಮಕ್ಕೂ ಸಾಕ್ಷಿಯಾಗಿದೆ.

ಇವರ ಕನ್ನಡದ ಬಗೆಗಿನ ಅಭಿಮಾನದ ಬಗ್ಗೆ  ‘ಪ್ರಜಾವಾಣಿ’ ಮಾತನಾಡಿಸಿದಾಗ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯುವಾಗ ಪರಭಾಷಿಕರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಹಾಗಾಗಿ ಪರಭಾಷಿಕರಲ್ಲೂ ಕನ್ನಡದ ಸಂಸ್ಕೃತಿ ಭಾಷೆ ಬೆಳೆಸಿ ಎಲ್ಲರನ್ನೂ ಒಂದೇ ವೇದಿಕೆ ಅಡಿ ತರುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.

ಕನ್ನಡಿಗರಾಗಿದ್ದು ಕನ್ನಡದಲ್ಲಿ ಮಾತನಾಡದೆ ಇರುವವರು, ಕನ್ನಡ ಗೊತ್ತಿದ್ದು ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡು ಅದರಲ್ಲಿ ಮಾತನಾಡುವವರು, ಕನ್ನಡದ ಅಭಿಮಾನ, ನಾಟಕ, ಸಾಹಿತ್ಯ, ರಂಗಭೂಮಿ ರಾಷ್ಟ್ರ ಪ್ರೇಮದ ಬಗ್ಗೆ ವೇದಿಕೆ ಭಾಷಣಕಷ್ಟೇ ಸೀಮಿತಗೊಳಿಸುವವರ ಮಧ್ಯೆ ಪರಭಾಷಿಕನಾಗಿದ್ದರೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಿರುವ ಪಿ.ಸಿ.ಮ್ಯಾಥ್ಯು ಅಂತವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT