ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಸಂಸ್ಕೃತಿ ವಿಶಿಷ್ಟ, ವಿಭಿನ್ನ: ವೈಎಸ್ ವಿ ದತ್ತ

Last Updated 11 ಡಿಸೆಂಬರ್ 2013, 8:53 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲೆನಾಡಿನ ಸಂಸ್ಕೃತಿಯು ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಆದರೋಪಚಾರ, ಸಂಶೋಧನೆಯಲ್ಲಿ, ಸಾಹಿತ್ಯ ಕೃಷಿಯಲ್ಲಿ ಮುಂದಿದೆ’ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಮಲೆನಾಡ ಸೇನೆ ಬೆಂಗಳೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಸಂಗಮ ಮತ್ತು ಚಿತ್ರಕಲಾ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಲೆನಾಡಿನ ದಟ್ಟ ಹಸಿರು, ಕಾಡು, ಬೆಟ್ಟದಂತೆ ಅಲ್ಲಿನ ಜನರ ಮನಸ್ಸು ಕೂಡ ವಿಶಾಲವಾದುದು. ಅವರು ತಮ್ಮ ಸೌಜನ್ಯಯುತವಾದ ನಡವಳಿಕೆಯಿಂದ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ’ ಎಂದರು.

‘ನಾವು ಎಲ್ಲಿ ಹೋದರೂ ನಮ್ಮ ಊರಿನ ಬಗೆಗಿನ ಅಭಿಮಾನ ಮರೆಯಾಗಬಾರದು. ಕುವೆಂಪು ಅವರು ನಮ್ಮ ನಾಡು, ಸಂಸ್ಕೃತಿಯ ಬಗೆಗೆ, ಅದರಲ್ಲೂ ಮುಖ್ಯವಾಗಿ ಮಲೆನಾಡಿನ ಬಗೆಗೆ ಇಟ್ಟುಕೊಂಡಿದ್ದ ಉತ್ಕಟ ಅಭಿಮಾನ ಎಲ್ಲರಿಗೂ ಪ್ರೇರಣಾದಾಯಕವಾಗಬೇಕು’ ಎಂದು ಹೇಳಿದರು.

ಮಾಜಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ‘ಮಲೆನಾಡ ಸೇನೆಯು ಸಮಾಜಮುಖಿಯಾಗಿ ಪ್ರೇರಣೆ ನೀಡುವಂತಹ ಕಾರ್ಯವನ್ನು ಮಾಡಬೇಕು. ಸಂಯುಕ್ತ, ಸಂಘಟನೆಯಿಂದ ಬೆಳೆಯಬೇಕು’ ಎಂದು ಸಲಹೆ ನೀಡಿದರು.
‘ಮಲೆನಾಡಿನ ಜನರ ಬದುಕು ಅಡಿಕೆಯಲ್ಲಿದೆ. ಈ ವರ್ಷ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದು ಮಲೆನಾಡಿನ ಜನರ ಈ ವರ್ಷದ ದುರಂತವಾಗಿದೆ’ ಎಂದರು.

‘ರಾಜ್ಯ ಸರ್ಕಾರವು ಗುಟ್ಕಾವನ್ನು ನಿಷೇಧಿಸಿದಾಗ ಗುಟ್ಕಾ ನಿಷೇಧ ಬೇಡವೆಂದು ನಾವು ಹೋರಾಟ ನಡೆಸಬೇಕಾಗಿ ಬಂತು. ಏಕೆಂದರೆ, ಗುಟ್ಕಾದಲ್ಲಿ ಅಡಿಕೆಯಿದೆ. ಅಡಿಕೆಯಲ್ಲಿ ಮಲೆನಾಡಿನ ಜನರ ಜೀವನವಿದೆ’ ಎಂದು ಹೇಳಿದರು.
‘ಅಡಿಕೆಯಿದ್ದರೆ ಹೊಗೆಸೊಪ್ಪು, ಗುಟ್ಕಾ ಬಳಕೆಗೆ ಬರುತ್ತದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆಯನ್ನು ನಿಷೇಧಿಸಬೇಕು ಎಂದು ವಾದ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರವು ಅಲ್ಲಿ ರೈತರ ಪರ ಮಾತನಾಡುವ ವಕೀಲರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದು ಇಂದಿನ ಅಡಿಕೆ ಬೆಳೆಗಾರರ ಕಥೆಯಾಗಿದೆ’ ಎಂದರು.

ಕಲಾವಿದ ಕೋಟೆಗದ್ದೆ ರವಿ ಅವರ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಇ.ವಿ.ಸತ್ಯನಾರಾಯಣ ಉದ್ಘಾಟಿಸಿದರು. ಮಲೆನಾಡು ಸೇನೆಯ ಅಧ್ಯಕ್ಷ ಡಾ.ಅರುಣ್‌ ಹೊಸಕೊಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಜಿ.ನಾಗರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT