ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿಗರ ಮೋಡಿ ಮಾಡಿದ ಟೇಕ್ವಾಂಡೊ...!

Last Updated 7 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕಾರು, ಬೈಕು ರೇಸು, ಗಾಲ್ಫ್, ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ... ಕ್ರೀಡೆಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದ ಕಾಫಿ ಕಣಿವೆ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾ ಪ್ರೇಮಿಗಳು, ಕ್ರೀಡಾಪಟುಗಳ ಹೃದಯಕ್ಕೆ ದಕ್ಷಿಣ ಕೊರಿಯಾದ ಸಿಯಾಲ್‌ನಲ್ಲಿ ಹುಟ್ಟಿದ ಸಮರ ಕಲೆ ಟೇಕ್ವಾಂಡೊ ಲಗ್ಗೆ ಇಟ್ಟಿದೆ. ಹೃದಯಬಡಿತ ಹೆಚ್ಚಿಸುವ ಜತೆಗೆ ಯಾಹ್...ಆಹ್...ಊಹ್.... ಅಂತ ಪೋರ, ಪೋರಿಯರು ಸಂಭ್ರಮಿಸುವಂತೆ ಮಾಡಿದೆ.

ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಟೇಕ್ವಾಂಡೊ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದರೂ ರಾಜ್ಯಮಟ್ಟದ ಟೂರ್ನಿ ನಡೆಸುವ ಭಾಗ್ಯ ದೊರೆತಿರಲಿಲ್ಲ.

ಈಗ ಆ ಕೊರತೆಯೂ ನೀಗಿದೆ. ಜತೆಗೆ ಚಿಕ್ಕ ಮಗಳೂರು ಜಿಲ್ಲಾ ಟೇಕ್ವಾಂಡೊ ಸಂಸ್ಥೆ  ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಮೂಲಕ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗೂ ಸೈ ಎನ್ನುವ ಸಂದೇಶವನ್ನು ಟೇಕ್ವಾಂಡೊ ಫೆಡರೇಷನ್‌ಗೆ ರವಾನಿಸಿದೆ.

ಜುಲೈ 27ರಿಂದ ಮೂರು ದಿನಗಳ ಕಾಲ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದ ಅಂಕಣಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ತೋರಿದ ಚಾಕಚಕ್ಯತೆ, ಸಾಮರ್ಥ್ಯ ಒಲಿಂಪಿಕ್ ಕ್ರೀಡೆಯಾಗಿರುವ ಟೇಕ್ವಾಂಡೊದಲ್ಲಿ ವಿಶ್ವಮಟ್ಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದರು.

ರಾಷ್ಟ್ರ, ರಾಜ್ಯಮಟ್ಟದ ಕ್ರೀಡಾಪಟುಗಳಾದ ಪ್ರಶಾಂತ್, ಅನುರಾಗ್ ವಿನಾಯಕ್, ನಿಶಾಂತ್ ಬಾಲೊಡಿ, ವಿವೇಕಶೆಟ್ಟಿ, ಜಿ.ಪವನ್‌ಕುಮಾರ್, ಎಲ್.ವರ್ಷಿತ್, ಕೆ. ಪ್ರಮೋದ್, ರಾಕೇಶ್ ಸಿಂಗ್, ಕೆ. ಕವಿತಾ, ಕೆ. ಆಲಿಶಾ ಥಾಪಾ, ಕವನಾ ಬಿ.ಹಿರೇಮಠ, ಅಸ್ಮಾ ಕೌಸರ್ ಎಸ್.ಲಿಖಿತಾ, ಪಿ.ಪೂಜಾ, ಎಸ್.ವೈಷ್ಣವಿ, ಬಿ.ಸುಜಾತಾ, ಮೇಘಾ ಎಂ.ಕೋರೆ ಚಿನ್ನ ಗೆದ್ದು ಗಮನ ಸೆಳೆದರು.

ಟೂರ್ನಿಯ ಪ್ರತಿಯೊಂದು ಪಂದ್ಯವನ್ನು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಕಣ್ತುಂಬಿಕೊಂಡರು. ಟೂರ್ನಿಯಲ್ಲಿ 620ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. 29ನೇ ವರ್ಷದ ಟೂರ್ನಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದ ದಾಖಲಾರ್ಹ ಸಂಗತಿ ಕೂಡ.

ರಾಜ್ಯ ಟೇಕ್ವಾಂಡೊ ಇತಿಹಾಸದಲ್ಲಿ ಕಳೆದ ಬಾರಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ 450 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದು ದಾಖಲೆಯಾಗಿತ್ತು.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ 65 ಸ್ಪರ್ಧಿಗಳು ಪಾಲ್ಗೊಂಡು, 77 ಪಾಯಿಂಟ್ ಗಳಿಸಿ ಸಮಗ್ರ ಚಾಂಪಿಯನ್‌ಷಿಪ್ ಅನ್ನು ತಮ್ಮದಾಗಿಸಿಕೊಂಡರು. ಬೆಂಗಳೂರು ಕ್ರೀಡಾ ಪ್ರಾಧಿಕಾರದ ಭರವಸೆಯ ಕ್ರೀಡಾಪಟು ಲಲಿತಾ ದೇವಿ ಈ ಟೂರ್ನಿಯಲ್ಲೂ `ಹೆಡ್ ಕಿಕ್~ ಮೂಲಕ ಎದುರಾಳಿಗಳನ್ನು ನೆಲಕಚ್ಚಿಸಿದರು.

ಸಮರ್ಥ ಎದುರಾಳಿ ಅಂಬಿಕಾ ಅವರನ್ನು ಮಣಿಸಿ 16 ಪಾಯಿಂಟ್ ಸಂಪಾದಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡರು. ರಾಷ್ಟ್ರ, ವಿಶ್ವಮಟ್ಟದಲ್ಲಿ ಪದಕ ಗೆಲ್ಲುವ ಆಶಾಕಿರಣವಾಗಿ ಹೊರಹೊಮ್ಮಿದರು.

ಆತಿಥೇಯ ಚಿಕ್ಕಮಗಳೂರು ಜಿಲ್ಲೆಯಿಂದ 80 ಮಂದಿ ಭಾಗವಹಿಸಿದ್ದು, ಇದರಲ್ಲಿ 15 ಬಾಲಕಿಯರು ಹಾಗೂ 65 ಬಾಲಕರು ಇದ್ದರು. 2 ಚಿನ್ನ, 5 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಜಿಲ್ಲೆಯ ಕ್ರೀಡಾಪಟುಗಳು ಗೆದ್ದುಕೊಂಡು ಸ್ಥಳೀಯ ಕ್ರೀಡಾಭಿಮಾನಿಗಳಿಗೆ ಖುಷಿ ನೀಡಿದರು.

ಟೇಕ್ವಾಂಡೊ ಜಿಲ್ಲೆಯ ಹೆಚ್ಚಿನ ಜನರಿಗೆ ಪರಿಚಯ ಇರಲಿಲ್ಲ. ಆದರೆ, ಈ ಟೂರ್ನಿಯನ್ನು `ಸಮರ ಕಲೆ~ಯನ್ನು ಜಿಲ್ಲೆಗೆ ಪರಿಚಯಿಸುವ ಜತೆಗೆ ಪ್ರತಿಭೆಗಳ ಶೋಧಕ್ಕೂ ಒಳ್ಳೆಯ ವೇದಿಕೆ ಒದಗಿಸಿತು.

ಆಗಸ್ಟ್ 21ರಂದು ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಜೂನಿಯರ್ ವಿಭಾಗದಲ್ಲಿ 10 ಬಾಲಕರು, 10 ಬಾಲಕಿಯರನ್ನು ಆಯ್ಕೆ ಮಾಡಲಾಯಿತು.

ಬರುವ ಅಕ್ಟೋಬರ್ 8ರಂದು ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸಬ್ ಜೂನಿಯರ್ ವಿಭಾಗದ ಸ್ಪರ್ಧೆಗೂ 10 ಬಾಲಕರು ಮತ್ತು 20 ಬಾಲಕಿಯರು  ಅರ್ಹತೆ ಪಡೆದುಕೊಂಡರು. ಈ ಪೈಕಿ ಚಿನ್ನದ ಪದಕಗಳನ್ನು ಗೆದ್ದ ಚಿಕ್ಕಮಗಳೂರಿನ ವಿವೇಕಶೆಟ್ಟಿ ಮತ್ತು ಕವಿತಾ ಸಹ ಭಾಗವಹಿಸಲಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರೂ ಯುವ ಕೇಂದ್ರ, ಚಿಕ್ಕಮಗಳೂರು ಜಿಲ್ಲಾ ಟೇಕ್ವಾಂಡೊ ಸಂಸ್ಥೆ  ಆಶ್ರಯದಲ್ಲಿ ಟೂರ್ನಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಪ್ರತಿ ದಿನ ಪಂದ್ಯಗಳ ವೀಕ್ಷಣೆಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರೇಕ್ಷಕರು ಪಾಲ್ಗೊಂಡು ಪಂದ್ಯಗಳಿಗೆ ರೋಚಕತೆ ತಂದುಕೊಟ್ಟರು.

ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಪಟುಗಳು ಮಿನುಗುವ ಭರವಸೆಯ ಕಿರಣಗಳಂತು ಟೂರ್ನಿಯಲ್ಲಿ ಮೂಡಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT