ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನ ಕೆಲಸಕ್ಕೆ ದೂರದ ಕಾರ್ಮಿಕರು

ಗದ್ದೆ ನಾಟಿ, ಕೊಯ್ಲು, ಅಡಿಕೆ ತೋಟಕ್ಕೆ ಗೊಬ್ಬರ, ಕೊನೆ ಕೊಯ್ಲಿನಲ್ಲಿ ನಿರತ
Last Updated 5 ಜನವರಿ 2013, 6:59 IST
ಅಕ್ಷರ ಗಾತ್ರ

ತುಮರಿ: ಮಲೆನಾಡಿನಲ್ಲಿ ಕೃಷಿ ಕೆಲಸ ನಿರ್ವಹಿಸಲು ಕೂಲಿಯಾಳುಗಳ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಡಿಕೆ ತೋಟದ ಮಣ್ಣುಉದಿ ಹೊಯ್ಯುವ ಕೆಲಸಕ್ಕೆ ದ್ವೀಪದಲ್ಲಿ ದೂರ ಬಯಲುಸೀಮೆಯ ಲಂಬಾಣಿ ತಾಂಡಾ ಕುಟುಂಬಗಳು ಗುತ್ತಿಗೆ  ಪಡೆದು ಕೆಲಸದಲ್ಲಿ ತೊಡಗಿಕೊಂಡಿವೆ.

ಕರೂರು ಹೋಬಳಿಯಲ್ಲಿ ಗದ್ದೆ ನಾಟಿ, ಕೊಯ್ಲು, ಅಡಿಕೆ ತೋಟಕ್ಕೆ ಗೊಬ್ಬರ, ಕೊನೆ ಕೊಯ್ಲು ಮುಂತಾದ ಸಾಂಪ್ರಾದಾಯಿಕ ಕೆಲಸಗಳಿಗೆ ಕೂಲಿಯಾಳುಗಳ ಕೊರತೆ ಇದೆ. ಗಂಡಾಳಿಗೆ ತಲಾ ರೂ 250 ಮತ್ತು ಹೆಣ್ಣಾಳುಗಳಿಗೆರೂ 100 ನೀಡಿದರೂ ಕೆಲಸಕ್ಕೆ ಕೂಲಿಯಾಳುಗಳು ಸಮಸಯಕ್ಕೆ ಸಿಗುತ್ತಿಲ್ಲ.

ಕೂಲಿಯಾಳುಗಳ ಕೊರತೆಯನ್ನು ಸರಿದೂಗಿಸಿಕೊಳ್ಳಲು ದೊಡ್ಡ ರೈತರು ಕಳೆ ಕೊಚ್ಚುವ, ಗದ್ದೆಯ ಕೊಯ್ಲಿನ ಯಂತ್ರಗಳ ಮೊರೆ ಹೋಗಿದ್ದರೂ ಸಣ್ಣ ರೈತರಿಗೆ ಇದು ಸಾಧ್ಯವಾಗುತ್ತಿಲ್ಲ. ಮೈಯಾಳು ರೀತಿಯ ಪದ್ಧತಿಯ ಶ್ರಮ ವಿನಿಮಯದ ತಂತ್ರ ಬಳಸಿದರೂ ಕೂಡಾ ಕೂಲಿಯಾಳು ಸಮಸ್ಯೆ ಬಗೆ ಹರಿದಿಲ್ಲ.

ದ್ವೀಪದ ಬಹುತೇಕ ಹಳ್ಳಿಗಳಲ್ಲಿ ಈ ಕಾರಣದಿಂದಲೇ ತೋಟದ ಉಷ್ಣಾಂಶ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಾಂಪ್ರದಾಯಿಕವಾಗಿ ಮಣ್ಣುಉದಿ ಹೊಯ್ಯುವ ಕಠಿಣ ಕೆಲಸ ನಿರ್ವಹಿಸಲು ಕಳೆದ ಏಳೆಂಟು ವರ್ಷಗಳಿಂದ ಸಾಧ್ಯವೇ ಆಗಿರಲಿಲ್ಲ.

ದೈಹಿಕವಾಗಿ ಕಠಿಣವಾದ ಶ್ರಮವನ್ನು ಬಯಸುವ ತೋಟದ ಉದಿ ಹೊಯ್ಯುವ ಕೆಲಸದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಜಾನ್‌ಗುಂಡಿನಕೊಪ್ಪದ ತಾಂಡಾದ ಇಪ್ಪತ್ತು ಜನರ ತಂಡ ದ್ವೀಪದ ತುಮರಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ತುಂಡು ಗುತ್ತಿಗೆ ಪಡೆದು ಕೆಲಸ ನಿರ್ವಹಿಸುವ ಈ ತಾಂಡಾದ ಜನರ ಬೆವರ ಬದುಕು ನಿಜವಾಗಿಯೂ ಮೆಚ್ಚುಗೆಗೆ ಪಾತ್ರವಾಗಿದ್ದರೂ ಅದು ವಲಸೆಗೆ ಬಂದ ದುಡಿಯುವ ಜನರ ಬದುಕಿನ ಸವಾಲುಗಳನ್ನು ತೆರೆದಟ್ಟಿದೆ.
ಹತ್ತು ಜೋಡಿಗಳಲ್ಲಿ ಪ್ರತ್ಯೇಕ ಕುಟುಂಬಗಳಾಗಿ ಮಕ್ಕಳು ಸೇರಿ ಮೂವತ್ತು ಜನ ಒಳಗೊಂಡಿರುವವರಲ್ಲಿ ಬಹುತೇಕರು ಅನಕ್ಷರಸ್ಥರು. ಆದರೆ, ಮಣ್ಣುಉದಿ ಹೊಯ್ಯುವ ಗಣಿತ ಲೆಕ್ಕಾಚಾರ ಅವರಿಗೆ ಚೆನ್ನಾಗಿ ಗೊತ್ತು.

ಇವರ ಜತೆ ಶಾಲೆ ಕಾಣದ 12 ಮಕ್ಕಳು ಜತೆಯಲ್ಲಿದ್ದು `ಅರ್ಧ ವರ್ಷ ಸಾಲೆ ಕಳಿಸ್ತಿವ್ರಿ' ಎನ್ನುವ ಅವರ ಉತ್ತರದಲ್ಲೇ  ಮಕ್ಕಳ ಶಿಕ್ಷಣದ ಕಥೆವ್ಯಥೆ ಇದೆ.ದೇವದಾಸಿ ಪದ್ಧತಿ ಹಿರಿಯರು ಆಚರಿಸುತ್ತಿದ್ದರು. ನಾವು `ವಲ್ಲೆ ` ಎಂದು ದುಡಿಯುತ್ತಿದ್ದೇವೆ ಎನ್ನುವ ಮಹಿಳೆಯರು ಪುರುಷರಿಗೆ ಸರಿ ಸಾಟಿಯಾಗಿ ಗುದ್ದಲಿ, ಪಿಕಾಶಿ ಹಿಡಿದು ನೆಲ ಅಗೆದು ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

`ಉದ್ಯೋಗ ಖಾತ್ರಿ ಗೊತ್ರಿ, ನಮ್ಮೂರಾಗೇ ಇಲ್ರಿ, ಲಾಭ ಇಲ್ಲಾಂತ ಪಂಚಾಯ್ತಿ ಜನ ಸುಮ್ಮನಾಗ್ಯಾರ‌್ರಿ' ಎನ್ನುವ ಅವರ ಮಾತು ಸರ್ಕಾರಿ ಯೋಜನೆಗಳು ಅವರಿಗೆ ಹೇಗೆ ತಲುಪುತ್ತಿವೆ ಎಂಬುದರ ಕನ್ನಡಿಯೂ ಆಗಿದೆ.
ಸುರೇಶ, ಚಂದ್ರಪ್ಪ, ವೆಂಕಪ್ಪ, ದರ್ಗಪ್ಪ, ನಾಗಪ್ಪ, ಚನ್ನಪ್ಪ, ಕುಮಾರಪ್ಪ, ಶಂಕರಪ್ಪರ ಜತೆ ಗಿರಿಜವ್ವ, ಕಾಲವ್ವ, ಸುಮತವ್ವ... ಹೀಗೆ ಅವರ ಪ್ರಾಸಬದ್ಧ ಹೆಸರುಗಳು ಇವರ ಜೀವನ ಪ್ರೀತಿಯಂತೆ ಬೆಳೆಯುತ್ತಾ ಹೋಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT