ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಗರಿಗೆದರಿದ ಸಾಹಿತ್ಯ ಸಾಂಸ್ಕೃತಿಕ ಸಂವಾದ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಕಾಲದಲ್ಲಿ ಇಡೀ ಶಿವಮೊಗ್ಗ ಜಿಲ್ಲೆಯ ಆಡಳಿತ ಮತ್ತು ವ್ಯವಹಾರದ ವಿದ್ಯಮಾನಗಳನ್ನು ಅವರೇ ಅಕ್ರಮಿಸಿದ್ದರು.
 
ಜನಪರ ಹೋರಾಟ, ಸಮಾಜಮುಖಿ ಬೌದ್ಧಿಕ ಚಿಂತನೆ, ಮನಸು ಅರಳಿಸುವ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆದ ಮೂರು ವರ್ಷಗಳ ಕಾಲ ಬಹುಮಟ್ಟಿಗೆ ಹಿಂದಕ್ಕೆ ಸರಿದಿದ್ದವು.

ಜನರ ಮನಸ್ಸು ಮತ್ತು ಮಾಧ್ಯಮಗಳಲ್ಲಿ ಯಡಿಯೂರಪ್ಪ ಅವರ `ಅಭಿವೃದ್ಧಿ~ ಚಿಂತನೆಗಳೇ ಅವಕಾಶ ಪಡೆದುಕೊಳ್ಳುತ್ತಿದ್ದವು. ಸದ್ಯ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಶಿವಮೊಗ್ಗದ ಬೌದ್ಧಿಕ ಜಗತ್ತು ಮುನ್ನೆಲೆಗೆ ಬಂದಿದೆ.

ವಾರಕ್ಕೆರಡು ದಿವಸ ಶಿವಮೊಗ್ಗಕ್ಕೆ ಹೆಲಿಕಾಪ್ಟರ್‌ನಲ್ಲಿ ಹಾರಿ ಬರುತ್ತಿದ್ದ ಯಡಿಯೂರಪ್ಪ ಸತತ ಓಡಾಟ, ಕಾಮಗಾರಿ ಪರಿಶೀಲನೆ, ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ನಗುವಿಲ್ಲ, ಹಾಸ್ಯ ಚಟಾಕಿಯೂ ಇಲ್ಲದೇ ನೀರಸವಾಗಿ ನಡೆಯುತ್ತಿದ್ದ ಸಭೆಗಳಲ್ಲಿ ಅಧಿಕಾರಿಗಳ ಜತೆ ಜನಪ್ರತಿನಿಧಿಗಳೂ ಕುಳಿತುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. 

ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆದರೆ ತಪ್ಪಿಸಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರು ಒಂದು ವೇಳೆ ಭಾಗವಹಿಸಲೇ ಬೇಕಾದ ಅನಿವಾರ್ಯ ಎದುರಾದರೆ ಶಾಸ್ತ್ರಕ್ಕೆ ಸ್ವಲ್ಪ ಹೊತ್ತು ಕುಳಿತಿದ್ದು, ಎದ್ದು ಓಡುತ್ತಿದ್ದರು.

ಮೂರು ವರ್ಷವೂ ಅವರು ಯಾವುದೇ ಸಾಹಿತ್ಯ- ಸಂಗೀತ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿದ ಉದಾಹರಣೆಗಳಿಲ್ಲ. ಯಾವುದೇ ಸಾಹಿತಿಗಳ ಮಾತನ್ನೂ ಅವರು ಆಲಿಸಲಿಲ್ಲ.

ಯಡಿಯೂರಪ್ಪ ಮಾಜಿಯಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಸಾಹಿತ್ಯದ ಕಾರ್ಯಕ್ರಮಗಳ ಸುಗ್ಗಿ ಆರಂಭವಾಗಿದೆ. ಸಾಹಿತಿಗಳು, ಸಂಘಟಕರು ದಿಢೀರನೇ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ 80 ವರ್ಷ ತುಂಬಿದ ಹರ್ಷಕ್ಕೆ ಸಾಕ್ಷಿಯಾಗಲು ಈಗಷ್ಟೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಡಾ.ಚಂದ್ರಶೇಖರ ಕಂಬಾರ ವಾರದ ಹಿಂದಷ್ಟೇ ಸಾಗರಕ್ಕೆ ಬಂದು ಹೋಗಿದ್ದರು (ತಮ್ಮ ವೃತ್ತಿ ಜೀವನದ ಆರಂಭಕಾಲದಲ್ಲಿ ಕಂಬಾರರು ಸಾಗರದಲ್ಲಿ ಕಳೆದಿದ್ದರು).
 
ಒಬ್ಬ ಕನಸಿನ ರಾಜಕಾರಣಿಗೆ ಇರಬೇಕಾದ ಲಕ್ಷಣಗಳನ್ನು ತಮ್ಮದೇ ಧಾಟಿಯಲ್ಲಿ ಅವರು ಸೊಗಸಾಗಿ ಹೇಳಿದ್ದರು. ಇದಾದ ನಂತರ ಕೆಲವು ಕಾಲೇಜಿನಲ್ಲಿ ಕಥಾ ಕಮ್ಮಟಗಳು ಜರುಗಿದವು.
 
ಅಲ್ಲಿ ಭಾಗವಹಿಸಿದ ಬಹುತೇಕ ಸಾಹಿತಿಗಳು ಶಿವಮೊಗ್ಗದ ಪ್ರಸ್ತುತ ರಾಜಕಾರಣದ ಬಗ್ಗೆ ಪರೋಕ್ಷವಾಗಿ ವಿಶ್ಲೇಷಿಸಿದರು. ಲೇಖಕ ಡಾ.ಅಮರೇಶ ನುಗಡೋಣಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲೂ ಇದು ಚರ್ಚೆಗೆ ಬಂತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಸಮಯದಲ್ಲಿ `ಶಾಲೆಯೊಂದು ಸಾಹಿತ್ಯ~ ಕಾರ್ಯಕ್ರಮ ಏರ್ಪಡಿಸಿದೆ. ಇದಕ್ಕೂ ಉತ್ತಮ ಸ್ಪಂದನೆ ಸಿಗುತ್ತಿದೆ.

 ಸ್ಥಳೀಯ ಕರ್ನಾಟಕ ಸಂಘದ ಸಹಯೋಗದೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ `ಕನ್ನಡ ಸಾಹಿತ್ಯ: 2001-2011~ ಕುರಿತು ಎರಡು ದಿನಗಳ ವಿಚಾರಸಂಕಿರಣ ಸಂಘಟಿಸಿತ್ತು.
 
ನಾಡಿನ ವಿವಿಧೆಡೆಯಿಂದ ಆಗಮಿಸಿದ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಭವಿಷ್ಯದ ಬದುಕು ಮತ್ತು ಸಾಹಿತ್ಯದ ಬಗ್ಗೆಯೂ ಚರ್ಚೆ ನಡೆಸಿದರು. ಈ ಚರ್ಚೆ- ಸಂವಾದಗಳು, ಭಾಗವಹಿಸಿದ್ದ ಆಸಕ್ತರು ಹಾಗೂ ವಿದ್ಯಾರ್ಥಿಗಳಲ್ಲಿ ಹೊಸ ನೋಟಗಳನ್ನು ಹುಟ್ಟುಹಾಕಿದ್ದರಲ್ಲಿ ಅನುಮಾನವೇ ಇಲ್ಲ.

ಇದು ಮುಗಿಯುತ್ತಿದ್ದಂತೆ ಪ್ರೊ.ರಾಜೇಂದ್ರ ಚೆನ್ನಿ ಅವರ ಅಂಕಣ ಬರಹ `ಕಾಲಕಥನ~ ಬಿಡುಗಡೆಗೆ ಪ್ರೊ.ಚಂಪಾ ಆಗಮಿಸಿದ್ದರು. ತಾವು ಹಿಂದೆ ಕೈಗೊಂಡ ಚಳವಳಿ, ಪ್ರಭುತ್ವದ ಎದುರಿನ ಹೋರಾಟಗಳನ್ನು ಹೇಳಿ, ಎಲ್ಲರಲ್ಲೂ ಮೈ ಜುಂ ಎನಿಸುವಂಥ ಪರಿಣಾಮ ಉಂಟು ಮಾಡಿದರು.

`ಸಾಹಿತ್ಯದಲ್ಲಿ ಚಿಂತಕರು ಇರುವಂತೆ ಸುಪಾರಿ ಹಂತಕರೂ ಇದ್ದಾರೆ. ಕೆಲವರು ಸಂಘ ಪರಿಹಾರ ಮತ್ತಿತರ ಕಡೆಯಿಂದ ವೀಳ್ಯ ಪಡೆದು ಚಿಂತಾಜನಕವಾಗಿ ತಮ್ಮ ಚಿಂತನೆಗಳನ್ನು ಹರಿಯಬಿಡುತ್ತಾರೆ~ ಎಂದು ತಮ್ಮದೇ ಧಾಟಿಯಲ್ಲಿ ಚಂಪಾ ವ್ಯಂಗ್ಯವಾಡಿದರು.

ಚಂಪಾ ಅವರ ಭಾಷಣದ ಗುಂಗಿನಲ್ಲೇ ಇದ್ದವರಿಗೆ ಮರುದಿನವೇ ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಶಿವಮೊಗ್ಗದಲ್ಲಿ ಪ್ರತ್ಯಕ್ಷರಾಗಿದ್ದರು. ಅವರ ಆತ್ಮಕಥನ `ಆಡಾಡತ ಆಯುಷ್ಯ~ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಜತೆ ಸಂವಾದದಲ್ಲಿ ಪಾಲ್ಗೊಂಡು, ಲೇಖಕ ಸಮಾಜಕ್ಕೆ ಹೇಗೆ ಮುಖ್ಯ ಎಂದು ಪ್ರತಿಪಾದಿಸಿದರು.

ಇದೇ ಸಮಯದಲ್ಲೇ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯ `ಶಿಕ್ಷಣದಲ್ಲಿ ರಂಗಭೂಮಿ~ಯಡಿ ತರಬೇತುಗೊಂಡ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ನಾಟಕದ ಪ್ರದರ್ಶನ ಜಿಲ್ಲೆಯ ಮೂರ‌್ನಾಲ್ಕು ಗ್ರಾಮಗಳಲ್ಲಿ ನಡೆಯಿತು.

`ಕಲಾಜ್ಯೋತಿ~ ರಂಗ ತಂಡ ತನ್ನ 35ನೇ ವರ್ಷದ ಸವಿನೆನಪಿಗಾಗಿ ಹತ್ತು ದಿನಗಳ ನಾಟಕೋತ್ಸವ ಹಮ್ಮಿಕೊಂಡು, ಜನರಿಗೆ ಅತ್ಯುತ್ತಮ ನಾಟಕಗಳ ಪ್ರದರ್ಶನವನ್ನು ಈಗ ಪ್ರತಿನಿತ್ಯ ನೀಡುತ್ತಿದೆ. ಈ ಮಧ್ಯೆ ರಂಗಕರ್ಮಿಗಳಾದ ಕೆ.ವಿ. ಅಕ್ಷರ, ಕೆ.ಜಿ. ಕೃಷ್ಣಮೂರ್ತಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
 
ರಂಗಾಸಕ್ತರು ಇದರಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದರು. ಇದೇ ತಿಂಗಳಲ್ಲಿ ಮತ್ತೆ ಬಿ.ವಿ. ಕಾರಂತ ನೆನಪಿನಲ್ಲಿ ಅಂತರರಾಷ್ಟ್ರೀಯ ನಾಟಕೋತ್ಸವವೊಂದು ಜರುಗಲಿದೆ.

ಶಿವಮೊಗ್ಗ ರಾಜಕೀಯವಷ್ಟೇ ಅಲ್ಲ, ಚಳವಳಿ, ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳ ತವರೂರು ಕೂಡ. ಕೆಲವು ವರ್ಷಗಳಿಂದ ನೇಪಥ್ಯಕ್ಕೆ ಸರಿದಿದ್ದ ಇವೆಲ್ಲವೂ ಈಗ ಮತ್ತೆ ಮುಖ್ಯವಾಹಿನಿಗೆ ಬರುತ್ತಿರುವುದು ಸಹೃದಯ ಸೂಕ್ಷ್ಮಮತಿಗಳಿಗಂತೂ ಸಂತಸ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT