ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ನಿಲ್ಲದ ಸಂಘರ್ಷ

Last Updated 24 ಜೂನ್ 2011, 19:30 IST
ಅಕ್ಷರ ಗಾತ್ರ

ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆಯೂ ಆನೆ-ಮನುಷ್ಯ ನಡುವಿನ ಸಂಘರ್ಷದಿಂದ ಮುಕ್ತವಾಗಿಲ್ಲ. ಆನೆ ದಾಳಿಗೆ ಮನುಷ್ಯ ಬಲಿಯಾಗುವುದು; ಮನುಷ್ಯನ ಆಕ್ರೋಶಕ್ಕೆ ಆನೆಗಳ ಮಾರಣಹೋಮ ನಡೆಯುವುದು ಜಿಲ್ಲೆಯಲ್ಲಿ ಮುಂದುವರಿದೇ ಇದೆ.

ಮೂಡಿಗೆರೆ ತಾಲ್ಲೂಕಿನಲ್ಲಿಯೇ 2001ರಿಂದ 2010ರವರೆಗೆ ಆನೆ ದಾಳಿಗೆ ಐದು ಮಂದಿ ಪ್ರಾಣ ತೆತ್ತಿದ್ದಾರೆ. ಕಳೆದ ವರ್ಷ ಮೂಡಿಗೆರೆಯ ನಿಡುವಾಳೆ ಸಮೀಪದ ಬೀರಗೂರು ಸತೀಶ್ ಸ್ಥಳದಲ್ಲೇ ಮೃತಪಟ್ಟರೆ, ಅಣ್ಣಪ್ಪ ಎಂಬುವವರ ಸೊಂಟ ಮುರಿದ ಘಟನೆ ನಡೆದಿದೆ.
 
`ಪುಂಡಾನೆ~ ದಾಳಿಗೆ ತತ್ಕೊಳ ಅರಣ್ಯ ವ್ಯಾಪ್ತಿಯ ಬಾನಹಳ್ಳಿ ಸಮೀಪದ ಕುಂಡ್ರದಲ್ಲಿ ಮನೆಯೊಂದು ಸಂಪೂರ್ಣ ಜಖಂಗೊಂಡಿದೆ. ಸಂತ್ರಸ್ತ ರಿಗೆ ಇನ್ನೂ  ಪರಿಹಾರ ಸಿಕ್ಕಿಲ್ಲ.
ತಾಲ್ಲೂ ಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಬೆಳೆ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಅರಣ್ಯ ಇಲಾಖೆ ಮುಂದೆ ಮೊರೆ ಇಡುತ್ತಲೇ ಇದ್ದಾರೆ.

ಭದ್ರಾ ಅಭಯಾರಣ್ಯದ ತಣಿಗೆಬೈಲು ವಲಯದ ನಂದಿಬಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಮುತ್ತೋಡಿ ವಲಯದ ಮೇಲಿನ ಹುಲುವತ್ತಿ, ಕೊಳಗಾಮೆ ಗ್ರಾಮಗಳು ಕೂಡ ಆನೆ ದಾಳಿಗೆ ಪದೇ ಪದೇ ತುತ್ತಾಗುತ್ತಿವೆ.

ಚಿಕ್ಕಮಗಳೂರು ಸುತ್ತಮುತ್ತ ಆನೆಗಳಿಗೆ ಅವುಗಳದೇ `ಗಜ ಪಥ~ ಇದೆ. ಸಕಲೇಶಪುರ ಗಡಿಯಿಂದ ಮೂಡಿಗೆರೆ ಮಾರ್ಗವಾಗಿ ದೇವರಮನೆ, ಕುಂದೂರು ಮೀಸಲು ಅರಣ್ಯ, ಸಾರಗೋಡು ಮೀಸಲು ಅರಣ್ಯ, ಆಲ್ದೂರು, ಮಲ್ಲಂದೂರು, ಮುತ್ತೋಡಿ, ತಣಿಗೆಬೈಲು, ಹೊಸಪೇಟೆ, ಕಾಮೇನಹಳ್ಳಿ, ಅಯ್ಯನಕೆರೆ, ಲಕ್ಕವಳ್ಳಿ, ಎನ್.ಆರ್.ಪುರ, ಶೆಟ್ಟಿಹಳ್ಳಿ, ಜೋಗ, ಕಾರ್ಗಲ್ ಮಾರ್ಗವಾಗಿ ದಾಂಡೇಲಿ, ಉತ್ತರ ಕರ್ನಾಟಕ ಭಾಗದ ಅರಣ್ಯ ಪ್ರದೇಶಗಳಿಗೆ ಆನೆ ಪಥ ಹರಡಿಕೊಂಡಿದೆ.

ಜಿಲ್ಲೆಯ ಮೂಡಿಗೆರೆ, ಸಕಲೇಶಪುರ ಅಂಚಿನ ಗ್ರಾಮಗಳಲ್ಲಿ ಈ ವರ್ಷ ಅತೀ ಹೆಚ್ಚು ಬಾರಿ ಕಾಡಾನೆ-ಮಾನವ ಸಂಘರ್ಷ ಪ್ರಕರಣಗಳು ಘಟಿಸಿವೆ. ಕಾಡಿನ ಆನೆಗಳ ದಾಳಿ ಮನುಷ್ಯ ಜೀವಕ್ಕೆ ಕುತ್ತಾಗಿದ್ದರೆ, ನಾಡಿನ ಮನುಷ್ಯರ ಕೃತ್ಯಗಳು ಕಾಡಾನೆಗಳ ಜೀವಕ್ಕೆ ಎರವಾಗಿವೆ. 

ತಣಿಗೆಬೈಲು ಗುಡ್ಡದ ಬೀರನಹಳ್ಳಿ ಬೇಟೆ ನಿಗ್ರಹ ಶಿಬಿರದ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಸಲಗವೊಂದು ಹತ್ತಿ ಬೆಳೆದಿದ್ದ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟಿತ್ತು. ಕಳೆದ ಡಿಸೆಂಬರ್‌ನಲ್ಲೂ ತಣಿಗೆಬೈಲು ಪ್ರಾದೇಶಿಕ ವಲಯದಲ್ಲಿ ಇಂತಹದೇ ಘಟನೆ ನಡೆದು, ಮತ್ತೊಂದು ಸಲಗ ಜೀವ ತೆತ್ತಿದೆ.

ಈ ಭಾಗದಲ್ಲಿ ಕೃಷಿಕರು ವಿದ್ಯುತ್ ತಂತಿ ಬೇಲಿ ನಿರ್ಮಿಸಿದ್ದಾರೆ. ಇದರಿಂದಾಗಿ ಆಗಾಗ ಕಾಡಾನೆಗಳು ಇಲ್ಲಿ ಪ್ರಾಣ ತೆರುವುದು ಮುಂದುವರಿದೇ ಇದೆ.

ಆನೆ ದಾಳಿ ಮಾಡಿದಾಗ ಬೆಳೆ ಪರಿಹಾರ, ಜೀವ ತೆತ್ತವರ ಸಂತ್ರಸ್ತ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು; ಪರಿಹಾರ ಅತೀ ಶೀಘ್ರದಲ್ಲಿ ಸಂತ್ರಸ್ತರಿಗೆ ದೊರೆಯಬೇಕು ಎನ್ನುವ ಮಲೆನಾಡಿನ ಜನರ ಕೂಗು ಇಂದಿಗೂ ಅರಣ್ಯರೋದನವಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT