ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮಳೆ ಆರ್ಭಟ: ಬೆಳೆ ಹಾನಿ

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ, ಗದ್ದೆ, ತೋಟ ಜಲಾವೃತ
Last Updated 2 ಆಗಸ್ಟ್ 2013, 10:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನಾದ್ಯಂತ ಮಳೆ ಭಾರಿ ಗಾಳಿಯೊಂದಿಗೆ ಸುರಿದು, ಅಬ್ಬರಿಸಿದೆ. ಜನಜೀವನ ಅಸ್ಥವ್ಯಸ್ತಗೊಂಡಿದೆ.
ಒಂದೆಡೆ ಸುರಿದ ಭಾರಿ ಮಳೆಯಿಂದಾಗಿ ತೋಟ ಗದ್ದೆಗಳ ಮೇಲೆ ನೀರು ನುಗ್ಗಿದ್ದರೆ, ಭಾರಿ ಗಾಳಿಯಿಂದ ಮರಗಳು ಧರೆಗುರುಳಿವೆ. ಸಾಗರ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಸಾವಿರಾರು ಅಡಿಕೆ ಮರಗಳು, ಮುರಿದು ಬಿದ್ದಿವೆ. ಸೊರಬ ಹಾಗೂ ಇತರೆಡೆ ಮನೆಗಳು ಕುಸಿದು ಬಿದ್ದಿವೆ. ರಿಪ್ಪನ್‌ಪೇಟೆ ಬಳಿ ಬೃಹತ್ ಆಲದ ಮರವೊಂದು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಶಿಕಾರಿಪುರದಲ್ಲೂ ಸಣ್ಣ-ಪುಟ್ಟ ಸೇತುವೆಗಳಿಗೆ ಹಾನಿಯಾಗಿದೆ. ಹಲವು ಹಳ್ಳಿಗಳಲ್ಲಿ ಹೊಲ-ಗದ್ದೆಗಳು ಜಲಾವೃತಗೊಂಡಿವೆ.

ನದಿಗಳು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಿಲ್ಲೆಯ ಮೂರೂ ಪ್ರಮುಖ ಜಲಾಶಯಗಳು ತುಂಬಿದ್ದು, ಎಲ್ಲಾ ಜಲಾಶಯಗಳಿಂದಲೂ ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನೆರೆ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ತುಮರಿಯಲ್ಲಿ 20 ವರ್ಷಗಳ ಇತಿಹಾಸದ್ಲ್ಲಲಿ ಎಂದೂ ಸಂಚಾರ ಸ್ಥಗಿತಗೊಳಿಸದ ಲಾಂಚ್ ಸೇವೆಯನ್ನು ಭಾರೀ ಗಾಳಿ ಬೀಸಿದ ಕಾರಣ ಗುರುವಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಮುಳುಗಡೆ ಭೂಪ್ರದೇಶ ಅಕ್ಷರಶಃ ದ್ವೀಪವಾಗಿ ಪರಿಣಮಿಸಿದೆ.

ಹಾಲು, ದಿನಪತ್ರಿಕೆ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಯೂ ತಮರಿ ಹೋಬಳಿಗೆ ಇಲ್ಲದಾಗಿದೆ. ತುಮರಿ ಬಳಿ ಹತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಜಗತ್ತಿನ ಸಂಪರ್ಕವೂ ಇಲ್ಲದಂತಾಗಿದೆ.

ಮನೆಗಳಿಗೆ ಹಾನಿ
ಸಾಗರ:
ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದ ಇಡೀ ತಾಲ್ಲೂಕು ತತ್ತರಗೊಂಡಿದೆ.  ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ರಸ್ತೆಗಳು ಮಳೆಯಿಂದ ಕೊಚ್ಚಿಹೋಗಿದ್ದು ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಗೋಡೆ ಕುಸಿದಿದೆ.

ತಾಲ್ಲೂಕಿನ ತಾಳಗುಪ್ಪ ಹೋಬಳಿಯ 1100 ಎಕರೆ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ವರದಾನದಿ ಪ್ರವಾಹದಿಂದ ಪಕ್ಕದ ತಾಲ್ಲೂಕು ಸೇರಿದಂತೆ ಸುಮಾರು 15 ಸಾವಿರ ಎಕರೆ ಕೃಷಿಭೂಮಿಯಲ್ಲಿ 8 ರಿಂದ 10 ಅಡಿ ನೀರು ನಿಂತಿದೆ. ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.

ತಾಲ್ಲೂಕಿನ ವಿವಿಧೆಡೆ ಕೆರೆ ಏರಿ ಒಡೆದು ರಸ್ತೆ ಹಾಗೂ ಭತ್ತದಗದ್ದೆ, ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಕುಗ್ವೆ ಗ್ರಾಮದಲ್ಲಿ ಹೊಳೆ ಉಕ್ಕಿ ಹರಿದ ಪರಿಣಾಮ ಕೆರೆಏರಿ ಒಡೆದು ಜಮೀನು ಹಾಗೂ ಮನೆಗಳಿಗೆ ನೀರು ನುಗ್ಗಿದೆ.

ನಗರದ ಮಾರ್ಕೆಟ್ ರಸ್ತೆ, ಇಕ್ಕೇರಿ ರಸ್ತೆ, ಎಸ್‌ಬಿಎಂ ರಸ್ತೆ, ಕೆಳದಿ ರಸ್ತೆ ವಿಪರೀತ ಮಳೆನೀರಿನಿಂದಾಗಿ ತುಂಬಿಕೊಂಡಿದ್ದು, ವಾಹನ ಸಂಚಾರ ದುಸ್ತರವಾಗಿತ್ತು. ನಗರದ ಶ್ರೀರಾಮಪುರ ಬಡಾವಣೆಯಲ್ಲಿ ವರದಾನದಿ ಪ್ರವಾಹದಿಂದಾಗಿ ವುಡನ್‌ವರ್ಕ್ಸ್ ಅಂಗಡಿಗೆ ನೀರು ನುಗ್ಗಿದೆ.   ಈ ಸಂದರ್ಭದಲ್ಲಿ ಕಾಂಪೌಂಡ್  ಕುಸಿದಿದ್ದರಿಂದ ಚನ್ನಯ್ಯ ಆಚಾರ್ ಹಾಗೂ ಶಶಿ ಎಂಬುವವರಿಗೆ ಗಾಯವಾಗಿದೆ.

ನಗರದ ಜೋಸೆಫ್ ನಗರದಲ್ಲಿ ಜೈನುಲ್ಲಾ ಎಂಬುವವರ ಮನೆಯ  ಗೋಡೆ ಕುಸಿದಿದೆ. ಎಸ್.ಎನ್. ನಗರ ಹೊಸ ಬಡಾವಣೆಯ ಇಂದಿರಾಗಾಂಧಿ ಕಾಲೇಜು ಸಮೀಪ ಸೈಕಲ್ ಶಾಪ್ ಮುನ್ನಾ ಹಾಗೂ ಮುಜಾಹಿದ್ದೀನ್ ಎಂಬುವವರ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಘಟನೆ ವೇಳೆ ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಗಾಂಧಿನಗರದಲ್ಲಿ ಹರಿದ ನೀರು ಮೂರ‌್ನಾಲ್ಕು ಮನೆಯೊಳಗೆ ನುಗ್ಗಿದ್ದರೇ, ಭದ್ರಕಾಳಿ ದೇವಸ್ಥಾನದ ಸಮೀಪ ವರದಾನದಿ ಪ್ರವಾಹದಿಂದಾಗಿ ಪೊಲೀಸ್ ಬಸವರಾಜ್, ಪ್ರಶಾಂತ ಹುಲೇಕಲ್ಲು, ಸರ್ವೋತ್ತಮ ಪ್ರಭು ಎಂಬುವವರ ಮನೆಗೆ ನೀರು ನುಗ್ಗಿದೆ. ನಗರಕ್ಕೆ ನೀರು ಪೂರೈಸುವ ಬಸವನಹೊಳೆ ಡ್ಯಾಂ ಮತ್ತೊಮ್ಮೆ ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಕಂಬಳಿಕೊಪ್ಪ ಕೆರೆಯ ಕೋಡಿ ಬಿದ್ದಿದ್ದು, ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿದೆ. ಜೊತೆಗೆ ಅಕ್ಕಪಕ್ಕದ ಗದ್ದೆ ಹಾಗೂ ಅಡಿಕೆ ತೋಟಗಳಿಗೆ ಸಹ ನೀರು ನುಗ್ಗಿದೆ. ಪಡವಗೋಡು ಹಾಗೂ ಚಿಪ್ಪಳಿ ಲಿಂಗದಹಳ್ಳಿಯಲ್ಲಿ ಸಹ ಕೆರೆ ನೀರು ಉಕ್ಕಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಜಮೀನುಗಳು ಜಲಾವೃತವಾಗುವ ಭೀತಿ ಉಂಟಾಗಿದೆ.

ಆನಂದಪುರಂ ಹೋಬಳಿಯ ಕೊಲ್ಲಿಬಚ್ಚಲು ಡ್ಯಾಂ ತುಂಬಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಲಾರಂಭಿಸಿದೆ. ಇಲ್ಲಿನ ಸಿದ್ದೇಶ್ವರ ಕಾಲೊನಿಯಲ್ಲಿ ರಸ್ತೆಯ ನೀರು ಮನೆಗಳಿಗೆ ನುಗ್ಗಿದೆ. ಕಾಲೋನಿಯ ಗುಂಡಣ್ಣ, ಮಾರುತಿ, ಈಶ್ವರ, ನಾಗರಾಜ್, ಅಬ್ಬಾಸ್ ಎಂಬುವವರ ಮನೆಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ವಸ್ತುಗಳು ನೀರುಪಾಲಾಗಿದೆ.

ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಳ್ಳೂರು, ಗಿಳಾಲಗುಂಡಿ, ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ, ಶಾಂತಿನಗರ ಇನ್ನಿತರ ಭಾಗಗಳಲ್ಲಿ ಜಮೀನಿಗೆ ನೀರು ನುಗ್ಗಿದ್ದು, ಬಿತ್ತನೆ ಮಾಡಿದ ಬೀಜಗಳು ಜಲಾವೃತಗೊಂಡಿದ್ದು, ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತುಕೊಂಡಿದೆ.

ಭಾರಿ ಪ್ರಮಾಣದ ನೀರು ಹೊರಕ್ಕೆ
ಭದ್ರಾವತಿ: ಭದ್ರಾ ಜಲಾಶಯದಿಂದ ಗುರುವಾರ ಸಂಜೆಯಿಂದ ಸುಮಾರು 51,500 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು, ನಾಲ್ಕು ಗೇಟ್‌ಗಳನ್ನು ಸುಮಾರು 8.5 ಅಡಿ ಮಟ್ಟಕ್ಕೆ ಎತ್ತಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಜಲಾಶಯ ನೀರು ಹೊರಬಿಟ್ಟ ವಿಚಾರ ತಿಳಿಯುತ್ತಿದ್ದಂತೆ ಇಲ್ಲಿನ ಹೊಸಸೇತುವೆ ರಸ್ತೆ ಸಂಚಾರವನ್ನು ಬಂದ್ ಮಾಡಿದ ಪೊಲೀಸರು, ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಜನರ ವೀಕ್ಷಣೆಗೆ ಅನುವು ಮಾಡಿದರು.

ನದಿ ತೀರದ ಕವಲಗುಂದಿ ಪ್ರದೇಶದ ಜನರ ರಕ್ಷಣೆಗಾಗಿ ತಾಲ್ಲೂಕು ಆಡಳಿತ ಸಜ್ಜಾಗಿದ್ದು, ಅಲ್ಲಿನ ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ಸಾಗಿಸುವ ಕೆಲಸವನ್ನು ಆರಂಭಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ ಹಳೆ ಸೇತುವೆ ಮೇಲೆ ರಸ್ತೆಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆ ಇರುವ ಕಾರಣ ತರೀಕೆರೆ ರಸ್ತೆ, ಬಿಎಚ್ ರಸ್ತೆಯಲ್ಲಿ ಸಂಚಾರಿ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಕಾರ್ಯ ಮಾಡುತ್ತಿದ್ದ ದೃಶ್ಯ ಕಂಡುಬಂತು.

ನದಿಯ ಆರ್ಭಟ: ನಡುವೆ ನದಿ ಸಾಗುವ ಹಾದಿಯಲ್ಲಿನ ಅನೇಕ ಬೆಳೆಗಳಿಗೆ ಹಾನಿ ಉಂಟಾಗಿರುವ ಘಟನೆ ನಡೆದಿದೆ. ಅಡಿಕೆ ತೋಟ, ಭತ್ತದ ತಾಕು, ಕಬ್ಬಿನಗದ್ದೆ... ಹೀಗೆ ಹಲವೆಡೆ ನೀರು ನುಗ್ಗಿದೆ.

ಕಾಗೇಹಳ್ಳ ಜಲಾವೃತವಾಗಿದೆ. ಜತೆಗೆ ಬುಧವಾರ ಮಧ್ಯರಾತ್ರಿಯಿಂದ ಸುರಿಯುತ್ತಿರುವ ಮಳೆಯ ಆರ್ಭಟ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿದೆ. ಗುರುವಾರ ಸಂಜೆಯಿಂದ ಹೆಚ್ಚಿಸಿರುವ ಜಲಾಶಯ ನೀರಿನ ಪ್ರಮಾಣದಿಂದ ನದಿಪಾತ್ರದ ಹಾದಿಯಲ್ಲಿ ಒಂದಿಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಭದ್ರಾವತಿ: ಶಾಲೆಗೆ ರಜೆ
ಭದ್ರಾವತಿ:
ತಾಲ್ಲೂಕಿನೆಲ್ಲೆಡೆ ಬುಧವಾರ ರಾತ್ರಿಯಿಂದ ಸುರಿದಿರುವ ಭಾರಿ ಮಳೆ ಕಾರಣ ಶುಕ್ರವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ತಿಳಿಸಿದ್ದಾರೆ.

ಈ ಕುರಿತು ತಹಶೀಲ್ದಾರ್ ಜತೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸುರಿಯುತ್ತಿರುವ ಮಳೆ ಹಾಗೂ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣ ಮಕ್ಕಳ ಓಡಾಟಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸರ್ಕಾರಿ, ಅನುದಾನಿತ, ಅನುದಾನೇತರ ಹಾಗೂ ಇನ್ನಿತರ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಶಿಕಾರಿಪುರ: ಜಮೀನು ಜಲಾವೃತ
ಶಿಕಾರಿಪುರ:
ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆಯಿಂದ ಅಂಜನಾಪುರ ಹೋಬಳಿಯ ಈಸೂರು, ಅರಿಸಿಣಗೆರೆ, ಹಿತ್ತಲ, ಕಲ್ಮನೆ ಸೇರಿದಂತೆ ಇತರೆ ಗ್ರಾಮಗಳ ಸಮೀಪ ಕೆಲ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಜತೆಗೆ ನೂರಾರು ಹೆಕ್ಟೇರ್ ಜಮೀನುಗಳಲ್ಲಿ ನೀರು ಸಂಗ್ರಹವಾಗಿ ಬೆಳೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಸುರಿದ ಮಳೆಗೆ ಕುಮದ್ವತಿ ನದಿ ಪೂರ್ಣವಾಗಿ ಹರಿಯುತ್ತಿರುವ ಪರಿಣಾಮ ಈಸೂರಿನಿಂದ ಸಾಲೂರು ಗ್ರಾಮದ ರಸ್ತೆ ಸಮೀಪದ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತವಾಗಿದ್ದು, ರೈತರು ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ನಡೆಸಲು ಕಷ್ಟವಾಗಿದೆ.

ಜತೆಗೆ ಅಂಜನಾಪುರ ಎಡ ದಂಡೆ ನಾಲೆ ಪೂರ್ಣವಾದ ಪರಿಣಾಮ ನೂರಾರು ಏಕರೆ ಜಮೀನು ಜಲಾವೃತವಾಗಿದೆ ಹಾಗೂ ಈಸೂರು, ಕಲ್ಮನೆ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಕೆಲವು ಮನೆಗಳು ಕುಸಿದಿದ್ದು, ಈಸೂರು ಗ್ರಾಮದಲ್ಲಿ ಕುಸಿದ ಮನೆಯಿಂದ ಬಾಷಾ ಸಾಬ್ ಎಂಬುವರಿಗೆ ತೀವ್ರ ರೀತಿ ಗಾಯಗಳಾಗಿದ್ದು,ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹೋಬಳಿಯ ಬಹುತೇಕ ಕೆರೆಕಟ್ಟೆಗಳು ಪೂರ್ಣಗೊಂಡಿದ್ದು,ಹಲವು ರಸ್ತೆಗಳಲ್ಲಿ ನೀರು ಹರಿಯುತ್ತಿದೆ.
ಅಂಜನಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಈಸೂರು ಬಸವರಾಜ್ ಪ್ರಜಾವಾಣಿಯೊಂದಿಗೆ ಮಾತನಾಡಿ, ಹಲವು ವರ್ಷಗಳ ಬಳಿಕ ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ.


ಬಹುತೇಕ ರೈತರ ಜಮೀನುಗಳು ಜಲಾವೃತವಾಗಿದೆ. ಈಸೂರಿನಿಂದ ಸಾಲೂರು ಮಾರ್ಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನೂರಾರು ಹೆಕ್ಟೇರ್ ಜಮೀನಿದ್ದು, ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸಗಳಿಗೆ ಹೋಗಲು ಗ್ರಾಮದ ಜನತೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ಸೇತುವೆ ಮುಳುಗಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆ ನಡೆಸಲು ಸುಮಾರು 10 ಕಿ.ಮೀ. ಸುತ್ತುವರೆದು ಜಮೀನುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಈ ಸ್ಥಳದಲ್ಲಿ ಎತ್ತರ ಮಟ್ಟದ ನೂತನ ಸೇತುವೆ ನಿರ್ಮಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ತೆರಳಲು ಶಾಶ್ವತ ಪರಿಹಾರ ಮಾಡಬೇಕೆಂದು ಒತ್ತಾಯಿಸಿದರು. ಬೆನಕನಹಳ್ಳದಿಂದ ಹರಿದ ನೀರಿನಿಂದ ಕೂಡ ನೂರಾರು ರೈತರ ಬೆಳೆಗೆ ಹಾನಿಯಾಗಿದೆ. ಈಸೂರಿನಿಂದ ಸಾಲೂರು ಗ್ರಾಮ ಚಲಿಸುವ ಕಾಲುವೆ ಕೂಡ ಬಿರುಕು ಬಿಟ್ಟು ಹೊಡೆದಿದ್ದು,ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೋಗುವ ತರಲಘಟ್ಟ ಸಮೀಪದ ರಸ್ತೆಯಲ್ಲೂ ಕೂಡ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. 

ಹಾನಿ ಸಂಭವಿಸಿದ ಸ್ಥಳಗಳಿಗೆ ತಹಶೀಲ್ದಾರ್ ಪ್ರಕಾಶ್ ಗಣಚಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಚಂದ್ರಶೇಖರ್, ನೀರಾವರಿ ಇಲಾಖೆ ಎಂಜಿನಿಯರ್ ಚಂದ್ರಶೇಖರ್ ಸೂಲೆ ಪೆಟ್ಕಾರ್, ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ರಿಪ್ಪನ್‌ಪೇಟೆ ಗಾಳಿ-ಮಳೆಗೆ ಉರುಳಿಬಿದ್ದ ಮರ
ರಿಪ್ಪನ್‌ಪೇಟೆ:
ಎರಡು ದಿನಗಳಿಂದ ಸಲ್ಪ ಬಿಡುವು ನೀಡಿದ ಮಳೆ, ಬುಧವಾರ ಇಡೀ ರಾತ್ರಿ ನಿರಂತರವಾಗಿ ಸುರಿದ ಪರಿಣಾಮ ಆನಂದಪುರ- ರಿಪ್ಪನ್‌ಪೇಟೆ ಮಧ್ಯೆ ಹಾಲುಗುಡ್ಡೆಯಲ್ಲಿ ಗುರುವಾರ ದೊಡ್ಡ ಆಲದ ಮರ ಬುಡ ಸಮೇತ ಧರೆಗೆ ಉರುಳಿ ಈ ಮಾರ್ಗದ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ವಾಹನಗಳು ಬಟ್ಟೆಮಲ್ಲಪ್ಪ ಮಾರ್ಗವಾಗಿ ಬಳಸು ರಸ್ತೆಯನ್ನು ಅವಲಂಬಿಸಿವೆ. 11ಕೆ.ವಿ ವಿದ್ಯುತ್ ಕಂಬಗಳು ಸಹ ಧರೆಗೆ ಉರುಳಿದ್ದು 2ದಿನಗಳು ಈ ಭಾಗದ ಜನತೆ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ.

ಹೊಂಬುಜ ಹೋಬಳಿಯ ಮುಗುಡ್ತಿ ಗ್ರಾಮದ ಗೋಣಿಕೆರೆ ಚಕ್‌ಡ್ಯಾಂ ತೂಬಿಗೆ ಬಿದಿರುಮೆಳೆಗಳು ಸಿಕ್ಕಿದ ಪರಿಣಾಮ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತ ಗೊಂಡಿದ್ದು, ಅಡಿಕೆ, ಬಾಳೆ ತೋಟಗಳಿಗೂ ಹಾನಿಯಾಗಿವೆ.

ಬಿದರಹಳ್ಳಿ ದಂದಿಜಡ್ಡು ಗ್ರಾಮದ 1 ಕೋಣ, ಹಾಗೂ 1 ಎಮ್ಮೆ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿವೆ. ಹೊಂಡಲಗದ್ದೆ ಕೆರೆ ತುಂಬಿಹರಿದು ಭತ್ತದ ಗದ್ದೆ ಸಂಪೂರ್ಣ ಹಾನಿಗೀಡಾಗಿದೆ. ಗರತಿಕೆರೆ ಅವುಕ 1.ಕಿ.ಮಿ.ರಸ್ತೆ ಹಾಗೂ ಮೋರಿ ಹಳ್ಳ ಕೋಡಿ ಬಿದ್ದು ಕೊಚ್ಚಿಹೋಗಿವೆ. ಕಲ್ಲೂರು ಕುಮದ್ವತಿ ನದಿಯ ಸೇತುವೆ ಮೇಲೆ 3 ಅಡಿ ನೀರು ಉಕ್ಕಿ ಹರಿದ ಪರಿಣಾಮ 4 ಜಾನುವಾರು ಕೊಚ್ಚಿಹೋದ ಬಗ್ಗೆ ವರದಿಯಾಗಿದೆ.

ಎಡಗುಡ್ಡೆ -ಸಂಪಳ್ಳಿ 3 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಕೆರೆಹಳ್ಳಿ ಹಾಗೂ ಹೊಂಬುಜ ಹೋಬಳಿ ವ್ಯಾಪ್ತಿಯಲ್ಲಿ ್ಙ 1ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ್ ಗೌಡ, ಮಧುಸೂದನ್, ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶಿವಣ್ಣ, ಸಿಬ್ಬಂದಿ ರಾಘವೇಂದ್ರ, ಪ್ರಸನ್ನ, ಧರ್ಮಪ್ಪ, ಶೇಷಪ್ಪ, ಹಾಗೂ ಕಂದಾಯ ಇಲಾಖೆಯ ಉಪೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT