ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು, ಬಯಲು...

ನಗರದ ಹಳೆಯ ಜನವಸತಿಯ ಮೆಲುಕು
Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು ದಖ್ಖನ್ ಪ್ರಸ್ಥಭೂಮಿಯ ಮೇಲಿದೆ. ಇಂದು ನಾವು ವರ್ತಮಾನದ ಬೆಂಗಳೂರಿನ ಪ್ರಗತಿಯ ಕುರಿತು ಚಿಂತಿಸುವಾಗ ಈ ನಗರದ ವಿವಿಧ ಪ್ರದೇಶಗಳ ಭೂಮೇಲ್ಮೈಯ ಏರಿಳಿತಗಳನ್ನು ನಿರ್ಲಕ್ಷಿಸುತ್ತೇವೆ. ಬೆಂಗಳೂರಿನ ಆರಂಭಿಕ ಜನವಸತಿ ಪ್ರದೇಶಗಳ ಬೆಳವಣಿಗೆಯ ಮೇಲೆ ಈ ಭೂಲಕ್ಷಣಗಳ ಪ್ರಭಾವವಿದೆ. ನಗರದ ಪಶ್ಚಿಮ ಭಾಗ ಮಲೆನಾಡಿನಂತಿದ್ದು, ಅರ್ಕಾವತಿ ಕಣಿವೆಗೆ ಸೇರುವ ಸಣ್ಣ ಸಣ್ಣ ನದಿ ತೊರೆಗಳಿರುವ ಭೂ ಪ್ರದೇಶವಾಗಿತ್ತು. ಪೂರ್ವ ಭಾಗ ಬಯಲು ಸೀಮೆಯಂತಿದ್ದು ಮಳೆ ನೀರಿನ ಹಳ್ಳಗಳು ಮತ್ತು ಕೆರೆಗಳಿಂದ ಕೋಡಿಬಿದ್ದು ಹರಿದ ನೀರು ದಕ್ಷಿಣ ಪಿನಾಕಿನಿಗೆ ಹರಿದು ಬರುತ್ತಿತ್ತು.

ಬೆಂಗಳೂರಿನ ಪ್ರಾಗೈತಿಹಾಸಿಕ ನೆಲೆಗಳು ಒದಗಿಸುತ್ತಿರುವ ಸಾಕ್ಷ್ಯದಂತೆ ಈ ಪ್ರದೇಶ ಇತಿಹಾಸ ಪೂರ್ವ ಯುಗದಲ್ಲೇ ಜನವಸತಿಯನ್ನು ಹೊಂದಿತ್ತು. ಶಾಸನಗಳಲ್ಲಿರುವ ಮಾಹಿತಿಯನ್ನು ಪರಿಗಣಿಸಿ ನೋಡಿದಾಗ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವಸತಿಗಳಿದ್ದವು ಎಂಬುದು ತಿಳಿದು ಬರುತ್ತದೆ ಅಷ್ಟೇ ಅಲ್ಲ. ಇವು ಮಧ್ಯಯುಗದ ಬೆಂಗಳೂರು ನಗರಕ್ಕೆ ಮೂಲವಾಗಿದ್ದವು ಎಂಬುದೂ ಅರ್ಥವಾಗುತ್ತದೆ. ಬೆಂಗಳೂರಿನ ಒಳಗೆ ಇರುವ ಎರಡು ಭಿನ್ನ ಭೂಮೇಲ್ಮೈ ಲಕ್ಷಣಗಳಾದ ಬಯಲುಸೀಮೆ ಮತ್ತು ಮಲೆನಾಡುಗಳು ಇಲ್ಲಿ ಜನವಸತಿಗಳ ಹಂಚಿಕೆಯ ಮೇಲೂ ಪ್ರಭಾವ ಬೀರಿವೆ.

ಬೆಂಗಳೂರಿನ ಅತಿ ಪುರಾತನ ವಸತಿಯ ಕುರಿತಂತೆ ಇರುವ ದಾಖಲೆಯೆಂದರೆ ಕ್ರಿಸ್ತಶಕ 517ರ ಬೇಗೂರು ಶಾಸನ. ಇದರಲ್ಲಿರುವ ಮಾಹಿತಿಯಂತೆ ಈಗಿನ ನಗರದ ಆಗ್ನೇಯ ಭಾಗದ ನಸು ಇಳಿಜಾರಾದ ಪ್ರದೇಶದಲ್ಲಿ ವಸತಿಗಳಿದ್ದವು. ಇಲ್ಲಿ ಜನವಸತಿ ಹೆಚ್ಚಾಗಿದ್ದು ಕ್ರಿಸ್ತ ಶಕ 6ರಿಂದ 12 ಶತಮಾನದ ಅವಧಿಯ ಚೋಳ ಮತ್ತು ಗಂಗರ ಆಳ್ವಿಕೆಯ ಕಾಲದಲ್ಲಿ. ಇವೆಲ್ಲವೂ ಬೆಂಗಳೂರಿನ ಬಯಲುಸೀಮೆಯಂಥ ಪ್ರದೇಶವಾದ ಮಧ್ಯ, ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿವೆ. ಹೊಯ್ಸಳ ಮತ್ತು ವಿಜಯನಗರ ರಾಜವಂಶಗಳ ಕಾಲದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಮಲೆನಾಡು ಭಾಗಕ್ಕೆ ಜನವಸತಿ ವಿಸ್ತರಿಸಿಕೊಂಡಿತು. ಆಧುನಿಕ ಬೆಂಗಳೂರಿನ ವಸತಿ ಪ್ರದೇಶಗಳಿಗೆ ಮೂಲವಾದದು ಈ ಬೆಳವಣಿಗೆ ಎಂದುಕೊಳ್ಳಬಹುದು. ಜನವಸತಿಗೆ ಅನುಕೂಲಕರವಾಗಿದ್ದ ಮೈದಾನ ಪ್ರದೇಶವನ್ನು ಈ ಹೊತ್ತಿಗಾಗಲೇ ಜನವಸತಿ ದಟ್ಟವಾಗಿದ್ದರಿಂದ ಈ ಬೆಳವಣಿಗೆ ಸಂಭವಿಸಿತೆಂದು ಭಾವಿಸಬಹುದು. ಈ ಕಾಲದಲ್ಲಿಯೂ ಬೆಂಗಳೂರಿನ ಏಣುಗಳು ಅಥವಾ ಗುಡ್ಡಗಳ ನೆತ್ತಿ ಅಂದರೆ ಈಗಿನ ಗಾಲ್ಫ್ ಕೋರ್ಸ್ ಬಳಿಯ ‘ಹೈಗ್ರೌಂಡ್ಸ್’ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್‌ ಇರುವ ಪ್ರದೇಶಗಳು ವಸತಿ ಮುಕ್ತವಾಗಿದ್ದವು.

ಶಾಸನಗಳಲ್ಲಿರುವ ಮಾಹಿತಿ ಬೆಂಗಳೂರಿನ ಭೂಪ್ರದೇಶದ ಪರಿಸರದ ಕುರಿತು ಕುತೂಹಲಕಾರಿ ಒಳನೋಟಗಳನ್ನು ನೀಡುತ್ತವೆ. ಬಯಲುಸೀಮೆ ಪ್ರದೇಶದ ಶಾಸನಗಳು ಕೆರೆಗಳು, ಬಾವಿಗಳು, ತೋಟಗಳು ಮತ್ತು ಫಲವತ್ತಾದ ನೀರಾವರಿ ಸಹಿತ ಕೃಷಿಯಿದ್ದ ಪ್ರದೇಶವೊಂದರ ಚಿತ್ರಣವೊಂದನ್ನು ನೀಡುತ್ತವೆ. ನೈಋತ್ಯ ಭಾಗದಲ್ಲಿ ಅರ್ಥಾತ್ ಮಲೆನಾಡು ಭಾಗದಲ್ಲಿ ದೊರೆತಿರುವ ಶಾಸನಗಳು ದಟ್ಟಕಾಡನ್ನು ವರ್ಣಿಸುತ್ತವೆ. ಜಾನುವಾರುಗಳ ಮೇಲಿನ ದಾಳಿ, ಬೇಟೆ, ಹಂದಿ ಮತ್ತು ಹುಲಿಗಳ ದಾಳಿಯ ವಿವರಗಳಿರುವ ಕಥೆಗಳು ಇಲ್ಲಿ ಸಾಮಾನ್ಯ. ಇಂಥ ದಾಳಿಗಳಲ್ಲಿ ಹೋರಾಡಿ ಮರಣವನ್ನಪ್ಪಿದವರ ನೆನಪಿಸುವ ವೀರಗಲ್ಲುಗಳು ಇಲ್ಲಿ ಕಾಣಸಿಗುತ್ತವೆ.

14ನೇ ಶತಮಾನದಲ್ಲಿ ಯಲಹಂಕ ನಾಡ ಪ್ರಭುಗಳು ಬೆಂಗಳೂರಿಗೆ ಅಡಿ ಇಟ್ಟಾಗಿ ಇದ್ದ ಭೂ ಪ್ರದೇಶದ ಪರಿಸ್ಥಿತಿ ಇದು. ಲಭ್ಯ ಶಾಸನಗಳಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದಾಗ ಬೆಂಗಳೂರು ನಗರವನ್ನು ಜನವಸತಿಯೇ ಇಲ್ಲದ ಪ್ರದೇಶವೊಂದರಲ್ಲಿ ಹೊಸತಾಗಿ ನಿರ್ಮಿಸಿದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರದೇಶದಲ್ಲಿನ ಜನವಸತಿಯೇ ಸಮಯಕ್ಕೆ ತಕ್ಕಂತೆ ನಿಧಾನವಾಗಿ ಬೆಳೆಯುತ್ತಾ ಇಡೀ ಭೂ ಪ್ರದೇಶವನ್ನು ಆವರಿಸಿಕೊಂಡಿತು. ನಂತರ ಅದು ‘ಬೆಂಗಳೂರು’ ಎಂಬ ಹೆಸರಿನಲ್ಲಿ ಒಂದುಗೂಡಿತು. ಅಂದರೆ ಮಧ್ಯಕಾಲೀನ ಬೆಂಗಳೂರು ನಗರ ವಿವಿಧ ರೀತಿಯ ಭೂ ಪ್ರದೇಶಗಳ ಜೈವ ಭೌತಿಕ ಹಾಗೂ ಪರಿಸರದ ವಿಭಿನ್ನತೆಗಳಿಗೆ ಅನುಗುಣವಾಗಿಯೇ ರೂಪುಗೊಂಡಿತು.

ಆದರೂ ಈ ನಗರದ ಬೆಳವಣಿಗೆಯಲ್ಲಿನ ನೈಸರ್ಗಿಕ  ಮತ್ತು ಭೌಗೋಳಿಕ ಪ್ರಭಾವವನ್ನು ನಿರ್ಲಕ್ಷಿಸಿದ್ದೇವೆ ಎಂದೇ ಹೇಳಬಹುದು. ಈಗ ನಗರದ ಎಲ್ಲಾ ಭಾಗಗಳಲ್ಲೂ ಹೊಸ ಹೊಸ ಕಟ್ಟಡಗಳು ಕಾಣಿಸಿಕೊಳ್ಳುತ್ತಿವೆ. ತಗ್ಗು ಪ್ರದೇಶಗಳನ್ನು ಮುಚ್ಚಲಾಗುತ್ತಿದ್ದರೆ ಗ್ರಾನೈಟ್ ಗುಡ್ಡಗಳನ್ನು ನೆಲಸಮತಗೊಳಿಸುವ ಕ್ರಿಯೆ ಮುಂದುವರಿದಿದೆ. ಮಳೆಗಾಲದಲ್ಲಿ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾದಾಗಲಷ್ಟೇ ನಾವು ಮಾಡಿದ ತಪ್ಪುಗಳು ನಮಗೆ ಅರಿವಾಗುತ್ತವೆ. ನಾವು ತಪ್ಪುಗಳಿಂದ ಕಲಿಯುತ್ತಿರುವ ನೆಲದ ಮಿತಿಯ ಪಾಠ ನಮ್ಮ ಹಿರಿಯರಿಗೆ ಸಹಜವಾಗಿಯೇ ಗೊತ್ತಿತ್ತು.

(ಲೇಖಕಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ‘ಸುಸ್ಥಿರತೆ’ ವಿಷಯದ ಪ್ರೊಫೆಸರ್‌)
ನಾಳೆ:
ಬೆಳ್ಳಂದೂರು: ಒಂದು ಕೆರೆ, ಹಲವು ಅರ್ಥಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT