ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ವಿದ್ಯಾಸಂಸ್ಥೆ ಸುವರ್ಣ ಸಂಭ್ರಮ

Last Updated 11 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ವಿಶೇಷ ವರದಿ
ಚಿಕ್ಕಮಗಳೂರು:
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾರಂಭದಿಂದಲೂ ಆದ್ಯತೆ ನೀಡಿರುವ ನಗರದ ಮಲೆನಾಡು ವಿದ್ಯಾಸಂಸ್ಥೆ (ಎಂಇಎಸ್) ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಮಾಜ ಸುಧಾರಣೆಯ ಹಾದಿಯಲ್ಲಿ ಶಿಕ್ಷಣದ ಮಹತ್ವ ಕಂಡುಕೊಂಡ ಸ್ವಾತಂತ್ರ್ಯ ಹೋರಾಟ ಗಾರರ ಕನಸಿನ ಕೂಸಾದ ಎಂಇಎಸ್ ನಡೆದು ಬಂದ ಹಾದಿಯ ಸಂಕ್ಷಿಪ್ತ ಪರಿಚಯ ಇಲ್ಲಿದೆ.ಬಾಲಕಿಯರಿಗೆ ಪ್ರತ್ಯೇಕ ಪ್ರೌಢಶಾಲೆ ಇರಬೇಕು. ಹೆಣ್ಣು ಮಕ್ಕಳು ಓದಬೇಕು ಎಂಬ ಚಿಂತನೆ ಯೊಂದಿಗೆ ಮಲೆನಾಡು ವಿದ್ಯಾಸಂಸ್ಥೆಯನ್ನು ಸಿ.ಎಂ. ಎಸ್.ಶಾಸ್ತ್ರಿ ಅವರು 1958ರಲ್ಲಿ ಹುಟ್ಟು ಹಾಕಿದರು. ಅವರಿಗೆ ಹೆಗಲು ನೀಡಿ ದುಡಿದ ದಿವಂಗತ ಎಸ್.ರಾಮಚಂದ್ರರಾವ್ ಅವರು ಶಿಕ್ಷಣ ಸಂಸ್ಥೆಗೆ ಭದ್ರ ಬುನಾದಿ ಹಾಕಿದರು.

ಇಂದು ಎಂಇಎಸ್ ಅಗಾಧವಾಗಿ ಬೆಳೆದಿದೆ. ಪದವಿ ಪೂರ್ವ, ಪದವಿ, ಬಿಎಡ್, ಬಿಬಿಎಂ ಸೇರಿದಂತೆ ಹಲವು ಜ್ಞಾನಶಾಖೆಗಳ ಅಧ್ಯಯನಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಸಂಸ್ಥೆ ಆರಂಭವಾದಾಗ ಇದ್ದ ವಿದ್ಯಾರ್ಥಿನಿಯರು ಕೇವಲ 14 ಮಂದಿ. ಇಂದು ಒಟ್ಟು 3500 ವಿದ್ಯಾರ್ಥಿನಿಯರು ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

‘ರಾಜಸೂಯ’ದ ನೆರವು: ಸಂಸ್ಥೆಯ ಆರಂಭದ ದಿನಗಳಲ್ಲಿ ಎದುರಾದ ಆರ್ಥಿಕ ಮುಗ್ಗಟ್ಟಿಗೆ ಪರಿ ಹಾರ ಹುಡುಕಲು ಯತ್ನಿಸಿದ ಸ್ಥಾಪಕರು, ‘ರಾಜಸೂಯಯಾಗ’ ಎಂಬ ಪೌರಾಣಿಕ ನಾಟಕ ಅಭಿನಯಿಸಿ ಹಣ ಸಂಗ್ರಹಿಸಿ ಕಟ್ಟಡಗಳನ್ನು ನಿರ್ಮಿಸಿದರು.ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಿ.ಎಂ.ಎಸ್.ಶಾಸ್ತ್ರಿ ಆ ನಾಟಕದಲ್ಲಿ ಭೀಮನ ಪಾತ್ರ ವಹಿಸಿದ್ದರು. ಸಂಸ್ಥಾಪಕ ಕಾರ್ಯದರ್ಶಿ ಎಸ್.ರಾಮಚಂದ್ರ ರಾವ್ ಅವರು ಧರ್ಮರಾಯ, ಸಂಸ್ಥೆಯ ಹಿತೈಷಿ ಗಳಾದ ಡಾ.ಗೊರೂರ್ ಅವರು ನಾರದನ ಪಾತ್ರ ಮತ್ತು ಡಾ.ಕೆ.ಪಿ.ರಘುನಾಥ್ ಅವರು ದುರ್ಯೋಧನನ ಪಾತ್ರ ನಿರ್ವಹಿಸಿದ್ದರು.

ದಶಕಕ್ಕೊಂದು ವಿಸ್ತರಣೆ: ಸಂಸ್ಥಾಪಕರ ಪ್ರಾಮಾ ಣಿಕ ಕಾಳಜಿಯಿಂದ ಎಂಇಎಸ್ ಆಂದಿನಿಂದ ಇಂದಿನವರೆಗೆ ಊರ್ಧ್ವಮುಖಿ ಬೆಳವಣಿಗೆಯನ್ನೇ ದಾಖಲಿಸಿದೆ. ನರ್ಸರಿಗೆ ಸೇರಿದ ಮಗು ಸುಶಿಕ್ಷಿತ ಯುವತಿಯಾಗಿ ಸಮಾಜಕ್ಕೆ ಹಿಂದಿರುಗಬಹುದಾದ ಅವಕಾಶವನ್ನು ಸಂಸ್ಥೆ ನೀಡಿದೆ.

 ವಿದ್ಯಾಸಂಸ್ಥೆಗಳು:  ಮೈಸೂರು ಕೃಷ್ಣಶೆಟ್ಟಿ ರೋಟರಿ ನರ್ಸರಿ ಶಾಲೆ, ಕಮಲಬಾಯಿ ನಾಗ ರಾಜ್ ಸಿಂಗ್ ಹಿರಿಯ ಪ್ರಾಥಮಿಕ ಶಾಲೆ, ಸೀತಮ್ಮ ಸರಾಫ್ ರಾಮಚಂದ್ರ ರಾವ್ ಪ್ರಾಯೋ ಗಿಕ ಪ್ರೌಢಶಾಲೆ, ಕೆ.ಆರ್.ಪೇಟೆ ಪ್ರೌಢಶಾಲೆ, ಪರ್ವತವರ್ಧನ ಎಂ.ಎಲ್.ವಾಸುದೇವಮೂರ್ತಿ ಬಾಲಿಕಾ ಪ್ರೌಢಶಾಲೆ, ಸುಂದರಮ್ಮ ಶಂಕರ ಮೂರ್ತಿ ಮಹಿಳಾ ಪದವಿ ಪೂರ್ವ ಕಾಲೇಜು, ಎಂ.ಎಸ್.ಪದ್ಮಾವತಮ್ಮ ಸಾಂಬಶಿವಶೆಟ್ಟಿ ಮಹಿಳಾ ಪದವಿ ಕಾಲೇಜು. ಎಂ.ಎಲ್.ಮಂಜಯ್ಯಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಕಾಲೇಜುಗಳನ್ನು ಎಂಇಎಸ್ ನಡೆಸುತ್ತಿದೆ.

ಹೊಸ ಕನಸು: ಸಂಸ್ಥೆಯ ಆಡಳಿತ ನಡೆಸಿದ ಎಲ್ಲ ಆಡಳಿತ ಮಂಡಳಿಗಳೂ ಸಂಸ್ಥೆಯ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಉತ್ತಮಪಡಿಸಲು ಯತ್ನಿಸಿದೆ. 2005ರಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಎಸ್.ಶಾಸ್ತ್ರಿ ಮತ್ತು ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಅವರು ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದ ನಂತರ ಶಾಲೆಯ ಶೈಕ್ಷಣಿಕ ವಾತಾವರಣ ಮತ್ತಷ್ಟು ಉತ್ತಮಗೊಂಡಿತು.

ಸಿಬ್ಬಂದಿಯ ವೇತನ ದ್ವಿಗುಣ, ಪದವಿ ಪೂರ್ವ ಕಾಲೇಜಿಗೆ ಸರ್ಕಾರಿ ಅನುದಾನ ಮಂಜೂರಾತಿ, ಪ್ರತಿ ತರಗತಿಗಳಿಗೆ ಕಂಪ್ಯೂಟರ್ ಅಳವಡಿಕೆ, ಮಹಿಳಾ ಹಾಸ್ಟೆಲ್ ಆರಂಭ, ಪ್ರಾಯೋಗಿಕ ಪ್ರೌಢಶಾಲೆಗೂ ಅನುದಾನ, ಕಳೆದ 10 ವರ್ಷದಿಂದ ಖಾಲಿಯಿದ್ದ 15 ಶಿಕ್ಷಕರ ಹುದ್ದೆ ಭರ್ತಿ ಈ ಅವಧಿಯಲ್ಲಿ ಆದ ಪ್ರಮುಖ ಬೆಳವಣಿಗೆಗಳು.

ಮುಂದಿನ ಕನಸು: ಅತ್ಯಾಧುನಿಕ ಗ್ರಂಥಾಲಯ, ಪ್ರಯೋಗಾಲಯ ಮತ್ತು ಬೋಧನಾ ಕೊಠಡಿ ಗಳನ್ನು ಒಳಗೊಂಡ ಮೂರು ಅಂತಸ್ತಿನ ಕಟ್ಟಡ ವನ್ನು ನಗರದ ಹೊರ ವಲಯದಲ್ಲಿ ನಿರ್ಮಿಸಿ ಉನ್ನತ ಪದವಿ ತರಗತಿಗಳನ್ನು ಕೇಂದ್ರಸ್ಥಾನದಿಂದ ಬೇರ್ಪಡಿಸುವುದು.

ನೌಕರರ ಸಮಯ ಮತ್ತು ಶಿಸ್ತು ಪಾಲನೆಗೆ ಬಯೋಮೆಟ್ರಿಕ್ ಉಪಕರಣ ಅಳವಡಿಕೆ. ತ್ರೈ ಮಾಸಿಕ ಪತ್ರಿಕೆ, ನೌಕರ ವರ್ಗಕ್ಕೆ ವೈದ್ಯಕೀಯ ವಿಮಾ ಸೌಲಭ್ಯ, ಗೃಹ ನಿರ್ಮಾಣ, ಸಹಕಾರಿ ಸಂಘ ಮತ್ತು ಆಪದ್ಧನ ಸೌಲಭ್ಯವನ್ನು ವಿಸ್ತರಿಸಲು ಆಲೋಚನೆಗಳನ್ನು ಸಂಸ್ಥೆಯ ಗೌರವ ಕಾರ್ಯ ದರ್ಶಿ ಡಾ.ಡಿ.ಎಲ್.ವಿಜಯ್ ಕುಮಾರ್ ಹಂಚಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT