ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ಸ್ವಾಮಿ ರಥೋತ್ಸವ

Last Updated 5 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಮಹದೇಶ್ವರ ಸ್ವಾಮಿ ರಥೋತ್ಸವ ವೈಭವದಿಂದ ಶನಿವಾರ ನಡೆಯಿತು.

ರಾಜ್ಯದ ವಿವಿಧೆಡೆಗಳಿಂದ ಮತ್ತು ನೆರೆಯ ತಮಿಳುನಾಡಿನಿಂದ  ಮಾದಪ್ಪನ ಸಾವಿರಾರು ಭಕ್ತರು ಆಗಮಿಸಿದ್ದರು. ಬೆಳಿಗ್ಗೆ 8.30ಗಂಟೆಗೆ ರಥೋತ್ಸವ ಆರಂಭಗೊಂಡಿತು. ಭಕ್ತರ ಜಯಘೋಷದೊಂದಿಗೆ ರಥ ಎಳೆಯಲಾಯಿತು.

ರಥದ ಹಿಂದೆ ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ವಾಹನದ ಪ್ರದಕ್ಷಿಣೆ ನಡೆಯಿತು. ಬೆಲ್ಲದ ಆರತಿ ಹಿಡಿದು 108 ಹೆಂಗಳೆಯರು ಪಾಲ್ಗೊಂಡಿದ್ದರು. ಹರಕೆ ಹೊತ್ತವರು ದೇವಾಲಯದ ಆವರಣದಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ‘ರಜ ಸೇವೆ’ ಸಲ್ಲಿಸಿದರು. ವೀರಮಕ್ಕಳ ನೃತ್ಯದಲ್ಲಿ ಮಹಿಳೆಯರು ಸಹ ಕುಣಿದು ಕುಪ್ಪಳಿಸಿದರು.

ವೀರಗಾಸೆ ಕಲಾವಿದರು, ಬಾಲ್ಯದಲ್ಲಿಯೇ ಮಣಿಧಾರಿಗಳಾಗಿ ದೀಕ್ಷೆ ಪಡೆದ ‘ದೇವರ ಗುಡ್ಡ’ದವರು ಮಾದಪ್ಪನ ಮೌಖಿಕ ಕಾವ್ಯ ಹಾಡುವುದರಲ್ಲಿ ತಲ್ಲೆನರಾಗಿದ್ದರು. ಭಕ್ತರ ಅನುಕೂಲಕ್ಕಾಗಿ 250ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಳೆದ ವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವದ ಮೂರು ದಿನದ ಅವಧಿಯಲ್ಲಿ ಭಕ್ತರಿಂದ ಒಟ್ಟು 28.69 ಲಕ್ಷ ರೂ ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ 31.40 ಲಕ್ಷ ರೂ ಸಂಗ್ರಹವಾಗಿದೆ. ಶುಕ್ರವಾರ ರಾತ್ರಿ ದೇವಾಲಯದ ಆವರಣದಲ್ಲಿ ಚಿನ್ನದ ತೇರು ಎಳೆಯಲಾಯಿತು. ಈಶ್ವರ-ಪಾರ್ವತಿ ಮೆರವಣಿಗೆ ಹಾಗೂ ಗಜ ವಾಹನೋತ್ಸವ ನಡೆಯಿತು. ಸಾಲೂರು ಮಠದ ಗುರು ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT