ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯರ ಮಬುಲಾದಲ್ಲಿ ಕಾಡು ಸುತ್ತಿ...

Last Updated 6 ಜನವರಿ 2011, 10:55 IST
ಅಕ್ಷರ ಗಾತ್ರ

ನನಗೆ ಅನುಮಾನ ಬರತೊಡಗಿತ್ತು, ನಾವು ಹೊರಟ ದಾರಿ ಸರಿ ಇರಲಿಕ್ಕಿಲ್ಲ ಎಂದು. ಜೊಹಾನ್ಸ್‌ಬರ್ಗ್‌ನಿಂದ ಬೇಲಾ ಬೇಲಾ ಮೂಲಕ ಮಬುಲಾ ವನ್ಯಧಾಮಕ್ಕೆ ನಮ್ಮ ವಾಹನ ಹೊರಟಿತ್ತು. ಅದು ಎರಡು ಗಂಟೆಯ ಪ್ರಯಾಣ. ಬೇಲಾ ಬೇಲಾ ದಾಟಿದ ಮೇಲೆ ನಮ್ಮ ಚಾಲಕ ದಾರಿ ತಪ್ಪಿದ. ವಿಶಾಲವಾದ ಮುಖ್ಯರಸ್ತೆಯಿಂದ ಕಚ್ಚಾ ರಸ್ತೆಯಲ್ಲಿ ವಾಹನ ಹೊರಟಿತು. ಈ ರಸ್ತೆ ಮಬುಲಾಕ್ಕೆ ಹೋಗಲಿಕ್ಕಿಲ್ಲ ಎಂದು ಅನಿಸತೊಡಗಿತು. ಇನ್ನಾವುದೋ ದೇಶಕ್ಕೆ ಹೋಗಿ ಅಲ್ಲಿ ನಾವು ಹೊರಟ ರಸ್ತೆ ಇರಲಿಕ್ಕಿಲ್ಲ ಎಂದು ಹೇಳುವುದು ಅಧಿಕಪ್ರಸಂಗತನ ಅನಿಸೀತು ಎಂದು ಸುಮ್ಮನಿದ್ದೆ. ನಮ್ಮ ವಾಹನ ಇನ್ನಷ್ಟು ಮುಂದೆ ಹೋಗಿ ರಸ್ತೆ ಮುಗಿದು ನಿಂತುಕೊಂಡಿತು. ನಮ್ಮ ಮುಂದೆ ಮಬುಲಾ ವನ್ಯಧಾಮದ ಬದಲು ‘ಝಬುಲಾ’ ವನ್ಯಧಾಮದ ಬಾಗಿಲು ಇತ್ತು. ವಾಹನ ಚಾಲಕ ಎಲ್ವಿಸ್ ಆಫ್ರಿಕಾನ್ ಭಾಷೆಯಲ್ಲಿ ಮಬುಲಾಗೆ ಹೇಗೆ ಹೋಗಬೇಕು ಎಂದು ಅಲ್ಲಿ ನಿಂತಿದ್ದ ದ್ವಾರಪಾಲಕನಿಗೆ ಕೇಳಿದ. ಆತ ಹೀಗೆ ಹೀಗೆ ಹೋಗಿ ಎಂದು ಹೇಳಿ ಬಾಗಿಲು ಹಾಕಿಕೊಂಡ. ಮುಖ್ಯ ರಸ್ತೆಯವರೆಗೆ ಬಂದು ಸ್ವಲ್ಪ ದೂರ ಸಾಗಿ ನಮ್ಮ ವಾಹನ ತಿರುವು ತೆಗೆದುಕೊಂಡಿತು. ಅಲ್ಲಿಯೂ ಮುಖ್ಯ ರಸ್ತೆಯ ಹಾಗೆಯೇ ಅಚ್ಚುಕಟ್ಟಾದ ಡಾಂಬರು ರಸ್ತೆ ಇತ್ತು. ಮಧ್ಯದಲ್ಲಿ ಅಳುಕದ ಬಿಳಿ ಬಣ್ಣ ಇತ್ತು. ಐದಾರು ಕಿ.ಮೀ ಸಾಗಿ ಮಬುಲಾ ಬಾಗಿಲಲ್ಲಿ ಇಳಿಯುತ್ತಿದ್ದಂತೆಯೇ ಕೇರಳದ ಅನಿತಾ ಬಬ್ಬರ್ ಮತ್ತು ಅವರ ಸಹಾಯಕರು ತಂಪು ಪಾನೀಯದ ವೆಲ್‌ಕಂ ಡ್ರಿಂಕ್ ಹಿಡಿದುಕೊಂಡು ನಮಗಾಗಿ ಅರ್ಧಗಂಟೆಯಿಂದ ಕಾಯುತ್ತಿದ್ದರು.

ಅದು ಕನ್ನಡಿಗ ವಿಜಯ ಮಲ್ಯ ಅವರ ಒಡೆತನದ ವನ್ಯಧಾಮ! ದಕ್ಷಿಣ ಆಫ್ರಿಕಾ ದೇಶದ ಲಿಂಫೋಫೊ ಪ್ರಾಂತ್ಯದ ವಾಟರ್‌ಬರ್ಗ್ ಪರ್ವತಶ್ರೇಣಿಯ ತಪ್ಪಲಿನ 12,000 ಹೆಕ್ಟೇರ್‌ನಷ್ಟು ವಿಶಾಲ ಪ್ರದೇಶದಲ್ಲಿ ಈ ವನ್ಯಧಾಮ ಹಬ್ಬಿಕೊಂಡಿದೆ. ಎಲ್ಲವೂ ಅದ್ಭುತ ಎನ್ನುವಷ್ಟು ಓರಣವಾಗಿರುವ ರೆಸಾರ್ಟ್‌ಗೆ ಬರುವ ರಸ್ತೆ ಅಷ್ಟು ಕಚ್ಚಾ ಇರಲಿಕ್ಕಿಲ್ಲ ಎಂಬ ನನ್ನ ಅನುಮಾನ ನಿಜವಾಗಿತ್ತು. ಮಲ್ಯ ಅವರ ಬಗ್ಗೆ ಬೇರೆ ಏನಾದರೂ ಹೇಳಬಹುದು. ಅವರು ವಿವರಗಳ ಕಡೆಗೆ ಕೊಡುವ ಗಮನವನ್ನು ಅನುಸರಿಸುವುದು ಬಹಳ ಕಷ್ಟ.

ಮಬುಲಾ ವನ್ಯಧಾಮದಲ್ಲಿನ ರೆಸಾರ್ಟ್‌ಗೆ ಭಾರತದ ಕೆಲವರು ಕ್ರಿಕೆಟ್ ಆಟಗಾರರು ಭೇಟಿ ನೀಡಿದಾಗಲೇ ನಮಗೆಲ್ಲ ಗೊತ್ತಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ಮಲ್ಯ ಒಂದು ರೆಸಾರ್ಟ್ ಹೊಂದಿದ್ದಾರೆ ಎಂದು. ಆದರೆ, ಅದರ ವ್ಯಾಪ್ತಿ, ಅಲ್ಲಿ ಏನಿದೆ ಇತ್ಯಾದಿಯೆಲ್ಲ ಗೊತ್ತಿರಲಿಲ್ಲ. ನೋಡುವುದು ಅಂದರೆ ನಂಬುವುದು. ಒಬ್ಬ ಕನ್ನಡಿಗ ಇಷ್ಟೆಲ್ಲ ಮಾಡಬಹುದೇ ಎಂದು ಅಚ್ಚರಿ, ಆನಂದ ಎರಡೂ ಆಗುವಷ್ಟು ಮಬುಲಾ ಚೆನ್ನಾಗಿದೆ. ಮಬುಲಾ ರೆಸಾರ್ಟ್‌ನಲ್ಲಿ 47 ಕೊಠಡಿಗಳು ಇವೆ. ಎಲ್ಲ ಕೊಠಡಿಗಳಿಗೆ ಅಲ್ಲೇ ಕಾಡಿನಲ್ಲಿ ಸಿಗುವ ಹುಲ್ಲಿನ ಮೆದೆಯ ಛಾವಣಿ. ದೂರದಿಂದ ನೋಡಿದರೆ ದೊಡ್ಡ ಗುಡಿಸಲು ಕಂಡಂತೆ ಆಗುತ್ತದೆ. ಒಳಗೆ ಹೋದರೆ ಪಂಚತಾರಾ ಕೊಠಡಿಯಲ್ಲಿ ಇರುವ ಎಲ್ಲ ಸೌಲಭ್ಯಗಳೂ ಇವೆ.

ಅಲ್ಲಿ ತಂಗುವವರಿಗೆ ಪ್ರತಿ ದಿನ ಸಂಜೆ ಮತ್ತು ಬೆಳಿಗ್ಗೆ ತೆರೆದ ಜೀಪುಗಳಲ್ಲಿ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಅದು ದಟ್ಟ ಕಾಡೇನೂ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಮಗೆ ದಟ್ಟ ಕಾಡು ಎಲ್ಲಿಯೂ ಕಾಣಲಿಲ್ಲ. ಎಲ್ಲೆಲ್ಲೂ ಕುರುಚಲು ಗಿಡಗಳು, ಪೊದೆಗಳು. ಎಲ್ಲೋ ಒಂದೆರಡು ದೊಡ್ಡ ಗಿಡಗಳು. ನಾವು ಹೋದುದು ಅಲ್ಲಿ ಚಳಿಗಾಲವಾದ್ದರಿಂದ ಯಾವ ಗಿಡದಲ್ಲಿಯೂ ಹಸಿರು ಕಾಣುತ್ತಿರಲಿಲ್ಲ. ಎತ್ತರಕ್ಕೆ ಬೆಳೆದ ಹುಲ್ಲು ಕೂಡ ಹಳದಿ ಬಣ್ಣಕ್ಕೆ ತಿರುಗಿತ್ತು. ಅಚ್ಚರಿಯೆಂದರೆ ಆ ಕಾಡಿನಲ್ಲಿ ಕಾಲಿಗೆ ಬಳ್ಳಿ ತೊಡರಿದಂತೆ ಎಲ್ಲೆಂದರಲ್ಲಿ ಕಾಡು ಪ್ರಾಣಿಗಳು ಕಾಣುತ್ತವೆ. ಖಡ್ಗಮೃಗಗಳ ದೊಡ್ಡ ದಂಡೇ ನಮ್ಮ ಕಣ್ಣಿಗೆ ಬಿತ್ತು. ಒಂದೆರಡು ಆನೆಗಳು ಮರಗಳ ನಡುವೆ ಕಿವಿಯಾಡಿಸುತ್ತ ನಿಂತಿದ್ದುವು. ಜಿರಾಫೆ, ಜೀಬ್ರಾ, ಹೇಸರಗತ್ತೆ, ಜಿಂಕೆ, ಸಾರಂಗ, ಕಿರುಬ, ಬಲಿಷ್ಠ ಕಾಡೆಮ್ಮೆ, ಕಾಡು ಹಂದಿಗಳಿಗೆ ಲೆಕ್ಕವೇ ಇರಲಿಲ್ಲ. ಉಷ್ಟ್ರಪಕ್ಷಿಗಳನ್ನು ನಾನು ನೋಡಿದ್ದು ಅದೇ ಮೊದಲು. ಎತ್ತರದ ಕಪ್ಪು, ಕಂದು ಬಣ್ಣದ ಉಷ್ಟ್ರಪಕ್ಷಿಗಳ ದಂಡೇ ಅಲ್ಲಿ ಇತ್ತು. ವಾಹನದ ಮುಂಭಾಗದಿಂದ ಚಿತ್ರ ವಿಚಿತ್ರವಾದ ಹಕ್ಕಿಗಳು ಕೂಗುತ್ತ, ಅರಚುತ್ತ ಹಾರಿ ಹೋಗುತ್ತಿದ್ದುವು.

ನಮ್ಮ ವಾಹನ ಚಾಲಕ ರೇಯಾನ್ ಒಬ್ಬ ವನ್ಯಜೀವಿ ಪರಿಣತ. ಒಂದೊಂದೇ ಪ್ರಾಣಿಯ ವರ್ತನೆ- ವೈಶಿಷ್ಟ್ಯಗಳ ಬಗ್ಗೆ ಆತ ಮನದಣಿಯೆ ವರ್ಣಿಸುತ್ತಿದ್ದ. ಬಹುಶಃ ಅಲ್ಲಿ ಇದ್ದ ಎಲ್ಲ 22 ತೆರೆದ ಜೀಪುಗಳಿಗೂ ಇಂಥದೇ ಒಬ್ಬೊಬ್ಬ ಚಾಲಕ ನೇಮಕವಾಗಿದ್ದ. ಮಬುಲಾ ಕಾಡಿನಲ್ಲಿ 300 ಬಗೆಯ ಹಕ್ಕಿಗಳು, 60 ಬಗೆಯ ಸಸ್ತನಿಗಳು ವಾಸಿಸುತ್ತವೆ. ವಿಶಾಲ ಬಯಲಿನಲ್ಲಿ ಕುರುಚಲು ಗಿಡಗಳ ನಡುವಿನ ರಸ್ತೆಯಲ್ಲಿ ಜೀಪು ಹೋಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಒಂದು ಕಡೆ ದೊಡ್ಡ ಕೆರೆ, ಅಲ್ಲಲ್ಲಿ ಹೊಂಡಗಳು ಕಾಣಿಸುತ್ತವೆ. ತಿಳಿನೀರಿನ ಅಂಚಿನಲ್ಲಿ ಕಾಡು ಪ್ರಾಣಿಗಳು ಯಾರ ಬೆದರಿಕೆಯಿಲ್ಲದೆ ನೀರು ಕುಡಿದು ರಾಜಾರೋಷವಾಗಿ ಹೊರಟು ಹೋಗುತ್ತವೆ. ಅವುಗಳಿಗೆ ಮನುಷ್ಯರ ಭಯವಿಲ್ಲ. ನಮ್ಮಂಥ ಎಷ್ಟು ಜನರನ್ನು ಅವು ನಿತ್ಯ ನೋಡುತ್ತವೆಯೋ? ಜನರ ಬಗ್ಗೆ ಅವುಗಳಿಗೆ ಒಂದು ಬಗೆಯ ನಿರ್ಲಕ್ಷ್ಯ, ತಾತ್ಸಾರ! ದಾರಿಯಲ್ಲಿ ಎರಡೆರಡು ಖಡ್ಗ ಮೃಗಗಳು ಎದುರುಬದುರಾಗಿ ಬಂದುವು. ಅದರಲ್ಲಿ ಎರಡು ಖಡ್ಗ ಮೃಗಗಳು ಪರಸ್ಪರ ಮೂತಿ ಮೂಸುತ್ತ ನಿಂತುಕೊಂಡವು. ‘ನಾವು ಹೇಗೆ ಎದುರು ಬದುರಾದರೆ ಮಾತನಾಡುತ್ತೇವೆಯೋ ಅವೂ ಹಾಗೆಯೇ ಮಾತನಾಡುತ್ತವೆ’ ಎಂದ ರೇಯಾನ್. ಎಷ್ಟು ನಿಜ ಅನಿಸಿತು. ಪ್ರಾಣಿಗಳಿಗೂ ಒಂದು ಭಾಷೆ ಇರುತ್ತದೆ, ಭಾವನೆ ಇರುತ್ತದೆ ಎಂದುಕೊಂಡೆ.

ಮರಳಿ ಬರುವಾಗ ಸಂಜೆ ಕವಿಯತೊಡಗಿತು. ಶೀತ ಗಾಳಿ ಬೀಸತೊಡಗಿತು. ರೇಯಾನ್ ಯುದ್ಧಕ್ಕೆ ಹೋಗುವವರ ಹಾಗೆ ದಪ್ಪನೆಯ, ಬೆಚ್ಚನೆಯ ಜಾಕೆಟ್ ಹಾಕಿಕೊಂಡಿದ್ದ. ನಮ್ಮ ಯಾರ ಬಳಿಯೂ ಅವು ಇರಲಿಲ್ಲ. ನಮ್ಮ ಕೊಠಡಿಗೆ ತೆರಳಲು 10-15 ನಿಮಿಷದ ದಾರಿ ಬಾಕಿ ಇತ್ತು ಅಷ್ಟೇ. ಎಲ್ಲರೂ ಗಡ ಗಡ ನಡುಗತೊಡಗಿದೆವು. ಶೀತ ಗಾಳಿಗೆ ಮೂಗು ಒದ್ದೆಯಾಯಿತು. ಇನ್ನೇನು ಒಡೆದು ಹೋಗುತ್ತದೆ ಎಂದು ಭಯವಾಯಿತು. ಕರವಸ್ತ್ರವನ್ನು ಮೂಗಿಗೆ ಕಟ್ಟಿಕೊಂಡು, ಕಾಲರ್‌ಗಳಿಂದ ಕಿವಿ ಮುಚ್ಚಿಕೊಂಡರೂ ಪ್ರಯೋಜನವಾಗಲಿಲ್ಲ. ದೆಹಲಿಯ ಕಡೆಯಿಂದ ಬಂದ ಗೆಳೆಯರು, ‘ಜಲ್ದಿ ಚಲೊ ಯಾರ್’ ಎಂದು ಅವಸರ ಮಾಡತೊಡಗಿದರು. ಆದರೆ, ದಾರಿ ಕ್ರಮಿಸಲೇಬೇಕಲ್ಲ? ಕೊಠಡಿ ಸೇರುವುದರ ಒಳಗೆ ಸಾಕುಸಾಕಾಗಿ ಹೋಯಿತು. ತಾಯಿಯ ಹೊಟ್ಟೆಯನ್ನು ಮತ್ತೆ ಸೇರಿಕೊಳ್ಳಬೇಕು ಅನಿಸಿತು... ಮುಖದ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿತು. ತುಟಿಗಳು ಸೀಳಿ ರಕ್ತ ಸೋರತೊಡಗಿತು. ವಾಪಸು ಊರಿಗೆ ಬರುವವರೆಗೂ ನನ್ನ ಬಣ್ಣ ಹಾಗೆಯೇ ಇತ್ತು. ತುಟಿಗಳ ಬಿರುಕು ಕೂಡಿರಲಿಲ್ಲ. ‘ಆಫ್ರಿಕಾಕ್ಕೆ ಹೋಗಿದ್ದನ್ನು ಹೀಗೆ ತೋರಿಸಬೇಕಿರಲಿಲ್ಲ’ ಎಂದು ಗೆಳೆಯರಿಂದ ಛೇಡಿಸಿಕೊಂಡೆ.

ಹುಲಿ, ಸಿಂಹಗಳಂಥ ಹಿಂಸ್ರ ಪ್ರಾಣಿಗಳನ್ನು ಸಂಜೆ ನೋಡಲು ಆಗದು. ಸಾಮಾನ್ಯವಾಗಿ ಅವು ಬೇಟೆ ಮುಗಿಸಿ ಸಂಜೆ ವಿರಮಿಸುತ್ತ ಇರುತ್ತವೆ. ಮರುದಿನ ಚುಮು ಚುಮು ಬೆಳಕು ಹರಿಯುವಾಗಲೇ ಹೋಗಿ ನೋಡಬೇಕು. ಬೆಳಕು ಹರಿಯುವುದಕ್ಕಿಂತ ಮುಂಚೆಯೇ ಎಲ್ಲರೂ ಗಾಡಿಯಲ್ಲಿ ಕುಳಿತಿದ್ದೆವು. ‘ನಿನ್ನೆ ನೀವೆಲ್ಲ ಫಜೀತಿಯಾದಿರಿ. ನಿಮ್ಮ ಸೀಟಿನ ಅಡಿಯಲ್ಲಿಯೇ ಜಾಕೆಟ್‌ಗಳು ಇದ್ದುವು. ನಾನು ಹೇಳಿದೆ. ನೀವು ಯಾರೂ ಹಾಕಿಕೊಳ್ಳಲಿಲ್ಲ. ಇವೊತ್ತು ಹಾಕಿಕೊಳ್ಳಿ’ ಎಂದು ರೇಯಾನ್ ಹೊರಡುವುದಕ್ಕಿಂತ ಮುಂಚೆಯೇ ತಾಕೀತು ಮಾಡಿದ. ಜಾಕೀಟು ಹಾಕಿಕೊಂಡು, ತಲೆಯನ್ನೆಲ್ಲ ಮುಚ್ಚಿಕೊಂಡು ಕುಳಿತೆವು. ಹುಲಿ, ಸಿಂಹಗಳು ಇರುವ ಪ್ರದೇಶ ಬೇರೆಯೇ ಇದೆ. ವಿದ್ಯುತ್ ತಂತಿ ಬೇಲಿ ಇರುವ ಪ್ರದೇಶದ ಗೇಟ್ ತೆರೆದುಕೊಂಡು ಒಳಗೆ ಹೋಗಬೇಕು. ಸ್ವಲ್ಪ ದೂರ ಹೋದ ಮೇಲೆ ಒಂದು ಕಡೆ ಸಿಂಹಗಳ ಗುಂಪು ಇರುವ ಮಾಹಿತಿ ಬಂತು. ಆದರೆ, ರಸ್ತೆಯ ಬದಿ ನಿಂತರೆ ಅವು ಕಾಣುತ್ತಿರಲಿಲ್ಲ. ಸ್ವಲ್ಪ ಕಾಡಿನ ಒಳಗೆ ಹೋಗಲು ರೇಯಾನ್‌ಗೆ ಆತನ ಮುಖ್ಯಸ್ಥರ ಅನುಮತಿ ಬೇಕಿತ್ತು. ಸಿಕ್ಕ ಸಿಕ್ಕವರನ್ನು ಸಿಕ್ಕ ಸಿಕ್ಕ ಹಾಗೆ ಕಾಡಿನ ಒಳಗೆ ಕರೆದುಕೊಂಡು ಹೋಗಲು ಬಿಡುವುದಿಲ್ಲ. ಪೇಪರ್‌ನವರು ಎಂದರೆ ಗೊತ್ತಲ್ಲ, ಕಾನೂನು ಮುರಿಯಲು ಅವರಿಗಿಂತ ಬೇರೆ ಯಾರು ಬೇಕು? ರೇಯಾನ್ ಅನುಮತಿ ಕೇಳಿದ. ಸಿಕ್ಕಿತು. ಅರ್ಧ ಫರ್ಲಾಂಗ್‌ನಷ್ಟು ಕಾಡಿನ ಒಳಗೆ ವಾಹನ ತೆಗೆದುಕೊಂಡು ಹೋಗಿ ಸಿಂಹದ ಗುಂಪಿನ ಮುಂದೆ ವಾಹನ ನಿಲ್ಲಿಸಿದ. ಕಂದುಗಪ್ಪು ಬಣ್ಣದ ಭಾರಿ ಗಾತ್ರದ ಸಿಂಹದ್ದು ಅದೇ ನಿರಾಸಕ್ತ ನೋಟ. ಒಂದು ಸಾರಿ ಕತ್ತು ಎತ್ತಿ ನೋಡಿ ಮತ್ತೆ ಕೆಳಗೆ ಹಾಕಿತು. ಜಾಸ್ತಿ ಹೊತ್ತು ಅಲ್ಲಿ ಇರಲು ರೇಯಾನ್ ಬಿಡಲಿಲ್ಲ. ಯಾರಿಗೋ ಒಬ್ಬರಿಗೆ ಅದೇ ವೇಳೆಗೆ ಮೂತ್ರ ಮಾಡುವ ಅವಸರ. ‘ಕೆಳಗೆ ಇಳಿದರೆ ನೋಡಿ ನಿಮ್ಮನ್ನು ಇಲ್ಲಿಯೇ ಬಿಟ್ಟು ಹೊರಡುತ್ತೇನೆ!’ ಎಂದು ರೇಯಾನ್ ಎಚ್ಚರಿಸಿದ. ಕಾಡನ್ನು ಬಿಟ್ಟು ರಸ್ತೆಯ ಕಡೆಗೆ ಬಂದ ನಂತರವೂ ಆತ ಕೆಳಗೆ ಇಳಿಯಲು ಬಿಡಲೇ ಇಲ್ಲ. ‘ಅವಸರದವರು’ ರೂಮಿಗೆ ಬರುವವರೆಗೆ ರೇಯಾನ್‌ಗೆ ಹಾಕಿದ ಶಾಪಕ್ಕೆ ಲೆಕ್ಕವೇ ಇಲ್ಲ! ‘ಈ ಕಾಡಿನಲ್ಲಿ ಏಳು ಸಿಂಹಗಳು ಇವೆ. ಮೂರು ಗಂಡು, ನಾಲ್ಕು ಹೆಣ್ಣು. ಸಿಂಹಗಳು ಹಿಂಸ್ರ ಮೃಗಗಳು. ಇನ್ನೊಂದು ಪ್ರಾಣಿಯನ್ನು ತಿಂದೇ ಬದುಕುವಂಥವು. ಅವುಗಳ ಸಂಖ್ಯೆ ಹೆಚ್ಚಿದಷ್ಟೂ ಇತರ ಪ್ರಾಣಿಗಳ ಸಂಖ್ಯೆ ಕಡಿಮೆ ಆಗುತ್ತ ಹೋಗುತ್ತದೆ. ಅದಕ್ಕಾಗಿಯೇ ಸಿಂಹಗಳ ಸಂತತಿ ಹೆಚ್ಚಿದಂತೆಲ್ಲ ಅವುಗಳನ್ನು ಬೇರೆ ಕಾಡಿಗೆ ಕಳಿಸಿಕೊಡುತ್ತಿದ್ದೇವೆ’ ಎಂದ ರೇಯಾನ್.

ದಕ್ಷಿಣ ಆಫ್ರಿಕಾದ ಒಂದು ವಿಶೇಷ ಎಂದರೆ ಅಲ್ಲಿ ಕೃತಕವಾದುದು ಏನೂ ಇಲ್ಲ. ಇಂಥ ಪ್ರಾಣಿ ಇಂಥಲ್ಲಿ ಸಿಕ್ಕೇ ಸಿಗುತ್ತದೆ ಎಂದು ಗ್ಯಾರಂಟಿ ಹೇಳಲು ಆಗದು. ಅದಕ್ಕಾಗಿಯೇ ಒಂದೇ ಸಾರಿ ಸಫಾರಿಗೆ ಹೊರಡುವ ವಾಹನ ಸವಾರರು ದಾರಿಯುದ್ದಕ್ಕೂ ಇತರ ಚಾಲಕರ ಜತೆಗೆ ವೈರ್‌ಲೆಸ್‌ನಲ್ಲಿ ನೀನು ಏನು ಕಂಡೆ, ನಾನು ಏನು ಕಂಡೆ ಎಂದು ಮಾತನಾಡುತ್ತಲೇ ಇರುತ್ತಾರೆ. ವಿಶೇಷ ಪ್ರಾಣಿಗಳು ಕಂಡರೆ ಪರಸ್ಪರ ಮಾಹಿತಿ ಕೊಡುತ್ತಾರೆ. ಸಫಾರಿಯ ರೋಮಾಂಚನ ಅಂದರೆ ಅದೇ. ಅದೇ  ಕಾಡಿನ, ನಿಸರ್ಗದ ಚೋದ್ಯ ಕೂಡ! ಒಂದೇ ಜಾಗದಲ್ಲಿ ನಿಂತು ಕ್ಯಾಮೆರಾಕ್ಕೆ ಪೋಸ್ ಕೊಟ್ಟರೆ ಏನು ವಿಶೇಷ? ಸಿಂಗಪುರದಲ್ಲಿ ರಾತ್ರಿ ಸಫಾರಿ ಇದೆ. ಯಾವ ಪ್ರಾಣಿಗಳು ಎಲ್ಲಿ ನಿಂತಿರುತ್ತವೆ ಎಂದು ಖಚಿತವಾಗಿ ಹೇಳಬಹುದು. ಚಿಕ್ಕ ಗುಡ್ಡದ ಮೇಲೆ, ಬಂಡೆಯ ಮೇಲೆ, ಮರಗಳ ನಡುವೆ, ಕಂದರದ ಅಂಚಿನಲ್ಲಿ ಬೆಳಕು ಬಿಟ್ಟ ಜಾಗದಲ್ಲಿಯೇ ಪ್ರಾಣಿಗಳು ನಿಂತಿರುತ್ತವೆ. ಅಲ್ಲಿಗೆ ಹೋಗಿದ್ದಾಗ ಇದೆಲ್ಲ ಕೃತಕವೇ ಎಂದು ನನಗೆ ಅನುಮಾನ ಬಂದಿತ್ತು. ಈಗಲೂ ನನಗೆ ಆ ಅನುಮಾನ ನಿವಾರಣೆಯಾಗಿಲ್ಲ!

ನಾವು ಭಾರತದ ಮಾಧ್ಯಮದವರು ಎಂದೋ ಏನೋ ಅನಿತಾ ಬಬ್ಬರ್ ಮತ್ತು ಅವರ ತಂಡ ನಮ್ಮನ್ನು ತುಂಬು ಪ್ರೀತಿಯಿಂದ ನೋಡಿಕೊಂಡಿತು. ನನ್ನಂಥ ಒಬ್ಬಿಬ್ಬರು ಸಸ್ಯಾಹಾರಿಗಳ ಬಗ್ಗೆ ಅವರು ವಿಶೇಷ ಮುತುವರ್ಜಿ ವಹಿಸಿದರು. ನಾವು ಅಲ್ಲಿಂದ ಹೊರಡುವ ದಿನ ಬೆಳಿಗ್ಗೆ ತಿಂಡಿಗೆ ಅವರು ಮಾಡಿಸಿದ ಉಪ್ಪಿಟ್ಟು, (ಅಲ್ಲಿಯೂ ಹೋಗಿ ಉಪ್ಪಿಟ್ಟನ್ನೇ ತಿಂದಿರಾ ಎಂದು ಯಾರಾದರೂ ಕೇಳಿಯಾರು!) ಅವಲಕ್ಕಿಯ ರುಚಿ ಇನ್ನೂ ನಾಲಿಗೆಯಲ್ಲಿ ನೀರು ಸುರಿಸುತ್ತಿದೆ. ಮಬುಲಾದ ಕೆಲಸಗಾರರಲ್ಲಿ ಒಬ್ಬರಾದರೂ ಕನ್ನಡಿಗರು ಇದ್ದಾರೆಯೇ ಎಂದು ಹುಡುಕಿದೆ. ತಮ್ಮ ಊರನ್ನು ಜಪ್ಪಯ್ಯ ಎಂದರೂ ಬಿಡದ ಕನ್ನಡಿಗರು ಅಲ್ಲಿ ಹೇಗೆ ಸಿಕ್ಕಾರು?

(ಲೇಖಕರು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಇಲಾಖೆ ಆಮಂತ್ರಣದ ಮೇರೆಗೆ ಆ ದೇಶಕ್ಕೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT