ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ನಗರಿಯಲ್ಲಿ ಜಾನಪದ ಲೋಕ ಅನಾವರಣ

Last Updated 7 ಅಕ್ಟೋಬರ್ 2011, 5:10 IST
ಅಕ್ಷರ ಗಾತ್ರ

ಮೈಸೂರು: ಗದೆ ಹೊತ್ತ ಹನುಮಂತನ ನೆಗೆತ.. ಮಣಭಾರದ ಡೊಳ್ಳು ಕುಣಿತ.. ಏಣಿ ಮೇಲೆ ಪೂಜಾ ಕುಣಿತ.. ಟಿಬೆಟ್ ಬೆಡಗಿಯರ ಸ್ವದೇಸಿ ನೃತ್ಯ..ರುವಾಂಡಾ ಕಲಾವಿದರ ಸಂಭ್ರಮ.. ಅನಾವರಣಗೊಂಡ ಬಣ್ಣದ ಲೋಕ..
`ಮಲ್ಲಿಗೆ ನಗರಿ~ ಮೈಸೂರಿನ ಅಂಗಳದಲ್ಲಿ ಗುರುವಾರ ಅಕ್ಷರಶಃ `ಜಾನಪದ ಲೋಕ~ವೇ ಸೃಷ್ಟಿಯಾಗಿತ್ತು.

ವೀರಗಾಸೆ, ಕರಡಿ ಮಜಲು, ಡೊಳ್ಳುಕುಣಿತ, ನವಿಲು ನೃತ್ಯ, ಕೀಲು ಕುದರೆ, ಪೂಜಾ ಕುಣಿತ.. ಒಂದಾ, ಎರಡಾ? ಬರೋಬ್ಬರಿ 90ಕ್ಕೂ ಹೆಚ್ಚು ಜಾನಪದ ಕಲಾತಂಡಗಳ ಕಲಾವಿದರು ಜಂಬೂಸವಾರಿಗೆ ಕಳೆತಂದರು.

ದಸರೆಯ ಕೇಂದ್ರ ಬಿಂದುವಾದ `ಜಂಬೂಸವಾರಿ~ ಮೆರವಣಿಗೆಗೆ ಜಾನಪದ ಕಲಾವಿದರು ವಿಶೇಷ ರಂಗು ತಂದರು. ಇಡೀ ಮೈಸೂರಿಗೆ ಬಣ್ಣ ತುಂಬಿದರು.  ತಮ್ಮ ವಿಶಿಷ್ಟ ನೃತ್ಯದ ಮೂಲಕ `ದೇಶ-ವಿದೇಶ~ಗಳ ಸಾವಿರಾರು ಪ್ರವಾಸಿಗರಿಗೆ ಕನ್ನಡ ನಾಡಿನ ಪರಂಪರೆ, ಸಂಸ್ಕೃತಿಯನ್ನು ಪರಿಚಯಿಸಿದರು. ಕಲಾವಿದರು ಸುಡು ಬಿಸಿಲನಲ್ಲೂ ಲೆಕ್ಕಿಸದೆ ಬರಿಗಾಲಿನಲ್ಲೇ ಕುಣಿಯುತ್ತಿದ್ದರೆ ನೆರಳಲ್ಲಿ ಕುಳಿತ ಪ್ರೇಕ್ಷಕರು ದಂಗಾಗಿ ಹೋದರು.

ನಂದೀ ಧ್ವಜ ಕುಣಿತ:ಶೈವ ಸಂಪ್ರದಾಯದ ನಂದೀ ಧ್ವಜ ಕುಣಿತಕ್ಕೆ ಶಕ್ತಿ, ಯುಕ್ತಿ ಎರಡೂ ಬೇಕು. 18 ಮೊಳ ಎತ್ತರವಿರುವ ನೇರವಾದ ಬಿದಿರಿನ ಬೊಂಬನ್ನು ಹೊತ್ತು ಕಲಾವಿದರು ಕುಣಿಯುತ್ತಿದ್ದರೆ ಮೇಲ್ಮುಖವಾಗಿ ನೋಡುವ ಸರದಿ ಪ್ರೇಕ್ಷಕರದ್ದು. ಮೈಸೂರಿನ ಗೌರಿಶಂಕರ್ ನಂದೀ ಧ್ವಜ ಕಲಾವಿದರ ಕುಣಿತ ವಿದೇಶಿಯರ ಕುತೂಹಲವನ್ನು ಇಮ್ಮಡಿಗೊಳಿಸಿತು.

ವೀರಗಾಸೆ (ಪುರವಂತಿಕೆ): ಕೈಯಲ್ಲಿ ಕತ್ತಿ, ಗುರಾಣಿ ಹಿಡಿದು ವಿಶಿಷ್ಟ ದೇಹಭಾಷೆಯೊಂದಿಗೆ ವೀರಗಾಸೆ ಕಲಾವಿದರು ಕುಣಿಯುತ್ತಿದ್ದರೆ ನೆರೆದ ಪ್ರೇಕ್ಷಕರ ಎದೆ ಝಲ್ಲೆಂದಿತು. ತಲೆಗೆ ಬಿಳಿ ಚೌಲಿ, ಕಾವಿ ಲುಂಗಿ, ಕಿವಿಗೆ ರುದ್ರಾಕ್ಷಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಕಟ್ಟಿಕೊಂಡ `ವೀರಗಾಸೆ ಕುಣಿತ~ ಜಾನಪದ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.
ನವಿಲು ನೃತ್ಯ: ನವಿಲಿನ ವೇಷ ತೊಟ್ಟು ಹತ್ತಾರು ಕಲಾವಿದರು ನರ್ತನ ಮಾಡುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಹಿತ. ನವಿಲಿನ ನಡೆಯನ್ನೇ ಅನುಕರಿಸುವ ಈ ನೃತ್ಯದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಒಟ್ಟಿಗೆ ನಲಿದಾಡುವ ಜೋಡಿ ನವಿಲುಗಳು ಯುವ ಪ್ರೇಮಿಗಳ ಖುಷಿಯನ್ನು ಇಮ್ಮಡಿಗೊಳಿಸಿದವು. ಬೆಂಗಳೂರಿನ ಶ್ರೀಕೃಷ್ಣ ಜಾನಪದ ನವಿಲು ನೃತ್ಯ ಕಲಾ ತಂಡವು ಈ ನೃತ್ಯವನ್ನು ಪ್ರಸ್ತುತ ಪಡಿಸಿತು.

ಮಹಿಳೆಯರ ಡೊಳ್ಳುಕುಣಿತ!: `ಗಂಡುಕಲೆ~ ಎಂದೇ ಕರೆಯಲ್ಪಡುವ ಡೊಳ್ಳು ಕುಣಿತದಲ್ಲಿ ಮಹಿಳೆಯರೂ ಪಾಲ್ಗೊಂಡು, ಪಿರಮಿಡ್ ಮಾದರಿಯಲ್ಲಿ ಡೊಳ್ಳು ಕುಣಿತವನ್ನು ಪ್ರದರ್ಶಿಸುವ ಮೂಲಕ ತಾವೇನೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮೈಗೆ ಕಂಬಳಿ, ತಲೆಗೆ ಬಣ್ಣದ ರುಮಾಲು ತೊಟ್ಟ ಪುರುಷ ಡೊಳ್ಳುಕುಣಿತ ಕಲಾವಿದರೂ ಲಾಗಹಾಕಿ, ನೆಗೆದು, ಕುಪ್ಪಳಿಸಿದರು.

ಅಬ್ಬಾ, ದೊಣ್ಣೆ ವರಸೆ: ಹತ್ತಾರು ಜನ ಕಲಾವಿದರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಕಲಾತ್ಮಕವಾಗಿ ತಿರುಗಿಸುತ್ತ ರೊಯ್ಯನೆ ಬೀಸುತ್ತಿದ್ದರೆ ನೆರೆದವರಲ್ಲಿ ನಡುಕ. ಎದುರಾಳಿಯ ದೊಣ್ಣೆಗೆ ಏಟು ತಾಕಿಸಿ ರಕ್ಷಿಸಿಕೊಳ್ಳುವ ಚಾಣಾಕ್ಷತನ ಮಾತ್ರ ರೋಮಾಂಚಕಾರಿ. ದೊಣ್ಣೆಗಳ ತುದಿಗೆ ಚಾಕು ಸಿಗಿಸಿ ದೊಣ್ಣೆ ತಿರುಗಿಸುವ ಚಮತ್ಕಾರ ಮೈನವಿರೇಳಿಸುವಂತೆ ಮಾಡಿತು.

ಹುಲಿ ಬಂತು ಹುಲಿ!: ಮೈಗೆ ಹುಲಿಯ ಚರ್ಮವನ್ನು ಹೋಲುವ ಬಣ್ಣ ಬಳಿದುಕೊಂಡ ಹುಲಿವೇಷಧಾರಿಗೆ ಪ್ರೇಕ್ಷಕರ ಮೇಲೆ ಎರಗುವ ಆತುರ, ತವಕ. ಅದನ್ನು ನಿಯಂತ್ರಿಸಲು ಇಬ್ಬರು, ಮೂವರ ಹರಸಾಹಸ. ಮೇಲಿಂದ ಮೇಲೆ ಗಿರಕಿ ಹೊಡೆಯುತ್ತ, ಕುಪ್ಪ ಳಿಸುತ್ತ,ಕುಣಿಯುತ್ತ, ಲಾಗ ಹಾಕುತ್ತ ಪದೇ ಪದೇ ಪ್ರೇಕ್ಷಕರ ಮೇಲೆರಗಲು ಬಂದ ಹುಲಿವೇಷಧಾರಿಯ ಕಲೆ ಅದ್ಭುತವಾಗಿತ್ತು. ವಾದ್ಯಗಳ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು.

ಕೊರಗ ಕುಣಿತ: ಮೈತುಂಬ ಕಪ್ಪುಬಣ್ಣ ಬಳಿದುಕೊಂಡ ಕೊರಗ ಕುಣಿತ ಕಲಾವಿ ದರು ಚಿಕ್ಕ ಮಕ್ಕಳಲ್ಲಿ ಭಯ ಹುಟ್ಟಿಸಿದರು. ಶಿವಮೊಗ್ಗ ಜಿಲ್ಲೆಗೆ ಸೇರಿದ ಬುಡಕಟ್ಟು ಜನಾಂಗವಾದ ಕೊರಗರು ಸಂಪ್ರದಾ ಯ ಬದ್ದ ಉಡುಗೆಯಲ್ಲಿ, ಕಪ್ಪುಬಣ್ಣ ಬಳಿದು ಕೊಂಡು ಲಯಬದ್ದವಾಗಿ ಕುಣಿದು ರಂಜಿಸಿದರು.

`ಏಣಿ ಮೇಲೆ~ ಪೂಜಾ ಕುಣಿತ!: ಮೈಸೂರು, ಮಂಡ್ಯ, ಚಾಮರಾಜಗರದ ವಿವಿಧ ಕಲಾ ತಂಡಗಳು ಪ್ರಸ್ತುತ ಪಡಿಸಿದ ಪೂಜಾ ಕುಣಿತವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು. ಏಣಿ ಮೇಲೆ ಹತ್ತಿ ಪೂಜಾ ಕುಣಿತ ಪ್ರದರ್ಶಿಸಿದ್ದು ರೋಚಕವಾಗಿತ್ತು. ಹಣೆಗೆ ಕುಂಕುಮ, ವೀರಗಾಸೆ ಪಂಚೆ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಅನೇಕ ಭಾವ ಭಂಗಿಯಲ್ಲಿ ಬಾಗುತ್ತ, ಬಳಕುತ್ತ, ಕೈಬಿಟ್ಟು ಅನೇಕ ಚಮತ್ಕಾರಗಳಿಂದ ತಮಟೆಯ ಸದ್ದಿಗೆ ನರ್ತಿಸುವ ವೈಖರಿ ಅದ್ಭುತವಾಗಿತ್ತು.

ದೈವೀ ಶಕ್ತಿಯ ಸೋಮನ ಕುಣಿತ: ದೈವೀ ಶಕ್ತಿಯ ಆರಾಧನೆಯಿಂದ ಬಂದಿರುವ ಸೋಮನ ಕುಣಿತ ಆಕರ್ಷಕವಾಗಿತ್ತು. ಸೋಮನ ಮುಖವಾಡ ಧರಿಸಿ, ರಕ್ತಭೂತಾಳೆ ಮರದ ಎಲೆಗಳಿಂದ ಅಲಂಕಾರ ಮಾಡಿಕೊಂಡು ವಿಶಿಷ್ಟವಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ತುಮಕೂರು, ಮಂಡ್ಯ, ಚಿತ್ರದುರ್ಗದ ಕಲಾವಿದರ ಸೋಮನ ಕುಣಿತ ಜಂಬೂ ಸವಾರಿ ಮೆರವಣಿ ಗೆಗೆ ಕಳೆ ತಂದಿತು.

ವಿದೇಶಿಯರ ನೃತ್ಯದ ಝಲಕ್: ರುವಾಂಡಾ ದೇಶದ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ ನೋಡುಗ ರಿಗೆ ಆನಂದ ಉಂಟು ಮಾಡಿತು. ಹಸಿರು  ಬಟ್ಟೆ ತೊಟ್ಟ ಕಲಾವಿ ದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿ ಕೊಂಡರು. ಟಿಬೆಟ್ ಕಲಾವಿದರ ನೃತ್ಯವೂ ಆಕ ರ್ಷಕವಾಗಿತ್ತು. ಸಾಂಪ್ರದಾಯಿಕ ವೇಷತೊಟ್ಟ ಕಲಾವಿದರು ಖುಷಿ ಯಿಂದ ಕುಣಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT