ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆಗಳ ಸಾಲಿನಲ್ಲಿ ಜನರ ದಟ್ಟಣೆ!

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಮಡಿಕೇರಿ: ಸೂರ್ಯ ನೆತ್ತಿಮೇಲೆ ಬರುವ ಹೊತ್ತು. ‘ಹೆಜ್ಜೆಗಳ ಟ್ರಾಫಿಕ್ ಜಾಮ್’- ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಪುಸ್ತಕಗಳ ಮಳಿಗೆಗಳಲ್ಲಿ ನಡು ಮಧ್ಯಾಹ್ನ ಕಂಡ ಚಿತ್ರವಿದು.

ಸಾಮಾನ್ಯವಾಗಿ ಉತ್ಸವ, ಮೇಳಗಳ ಪುಸ್ತಕಗಳ ಮಳಿಗೆಗಳ ಸ್ಥಳದಲ್ಲಿ ನಿತ್ಯವೂ ಅವುಗಳ ಪ್ರವೇಶವನ್ನು ಬದಲಿ­ಸುವ ಪರಿಪಾಠ ಇದೆ. ಇಲ್ಲಿ ಆಯೋಜ­ಕರು ಅದಕ್ಕೆ ವ್ಯತಿರಿಕ್ತವಾದ ನಿಲುವು ತಳೆದರು. ಹಾಗಾಗಿ ಪ್ರವೇಶ ದ್ವಾರ­ದಿಂದ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿ­ರುವ ಸಪ್ನಾ ಬುಕ್ ಹೌಸ್‌ನ ದೊಡ್ಡ ಮಳಿಗೆಯ ಎದುರು ಜನ ನಿಲ್ಲುತ್ತಿ­ದ್ದರು. ಅದಕ್ಕೆ ಸಮೀಪ­ದಲ್ಲೇ ಕಾಫಿ ಮಂಡಳಿಯ ಮಳಿಗೆ ಇದ್ದು, ಅಲ್ಲಿ ಕಾಫಿಯ ರುಚಿ ಸವಿಯುವವರ ಸಾಲು. ಹೀಗಾಗಿ ಪ್ರವೇಶಿಸಿ, ಸುತ್ತಿ ಬಳಸಿ ಒಂದಿಷ್ಟು ಸಾಲುಗಳನ್ನು ಹಾದು ಪುಸ್ತಕ ಅಥವಾ ತಮ್ಮಿಷ್ಟದ ವಸ್ತುಗಳನ್ನು ಕೊಂಡವರು ಹೊರನಡೆಯಬೇಕಿತ್ತು. ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಸಮರ್ಪಕ­ವಾಗಿಲ್ಲ ಎಂದು ಪುಸ್ತಕ ಮಳಿಗೆಗಳ ಕೆಲವರು ದೂರಲು ಇದೇ ಕಾರಣ.

ಪುಸ್ತಕಳ ಮಳಿಗೆಗಳತ್ತ ಪ್ರವೇಶಿಸಿ­ದೊಡನೆ ಕಾಣುವ ಸೈ ಫೈ ಅನಿ­ಮೇಷನ್‌ನಲ್ಲಿ ‘ಆನೆ ಬಂತೊಂದಾನೆ’ ಶೀರ್ಷಿಕೆಯ ಕನ್ನಡ ಶಿಶುಕತೆಗಳ ಡಿವಿಡಿ, ಸೀಡಿ ಮಾರಾಟ. ಒಂದೂವರೆ ದಿನದಲ್ಲೇ 150 ಡಿವಿಡಿ ಮಾರಿದ ಖುಷಿ ಮಳಿಗೆಯಲ್ಲಿದ್ದ ಸಂತೋಷ್ ಅವರದ್ದು. 15 ಮಕ್ಕಳ ಕತೆಗಳಿರುವ ಡಿವಿಡಿಯ ಜೊತೆಗೆ ಸೀಡಿಯನ್ನೂ ಅವರು ಉಚಿತವಾಗಿ ನೀಡುತ್ತಾರೆ. ₨150 ಬೆಲೆಗೆ (ಶೇ 50 ರಿಯಾ­ಯಿತಿ) ಅವನ್ನು ಮಾರುತ್ತಿರು­ವುದರಿಂದ ಮಕ್ಕಳು ಅತ್ತ ಗಮನ­ಹರಿಸುತ್ತಿದ್ದಾರೆ.

ನಿಮ್ಮದೇ ಅಂಚೆ ಚೀಟಿ: ಅಂಚೆ ಇಲಾಖೆಯ ಮಳಿಗೆ ಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತದೆ. ಅಲ್ಲಿ ಜನರು ತಮ್ಮದೇ ಚಹರೆ ಇರುವ ಸ್ಟಾಂಪ್‌­ಗಳನ್ನು ಹಣ ಕೊಟ್ಟು ಪಡೆಯಬ­ಹುದು. ₨300  ಕೊಟ್ಟರೆ, ₨60 ಮೊತ್ತದ ತಲಾ ₨5  ಬೆಲೆಯ12 ಸ್ಟಾಂಪ್‌­ಗಳನ್ನು ಇಲಾಖೆಯವರು ಕೊಡು­ತ್ತಾರೆ. ತಮ್ಮದೇ ಚಿತ್ರವಿರುವ ಸ್ಟಾಂಪನ್ನು ಲಕೋಟೆಗೆ ಅಂಟಿಸಿ, ಬಂಧು-ಮಿತ್ರರೊಡನೆ ಪತ್ರ ವ್ಯವಹಾರ ಮಾಡುವ ಅವಕಾಶ ಸಮ್ಮೇಳನಕ್ಕೆ ಬಂದ ಸಹೃದಯರದ್ದು.

‘ಕಳೆದ ವರ್ಷದಿಂದ ತಮ್ಮದೇ ಭಾವಚಿತ್ರವಿರುವ ಲಕೋಟೆಯನ್ನು ಪಡೆಯುವ ಅವಕಾಶವನ್ನು ಅಂಚೆ ಇಲಾಖೆಯು ನಾಗರಿಕರಿಗೆ ಕಲ್ಪಿಸಿದೆ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಈ ಸಮ್ಮೇಳನದಲ್ಲಿ ಇದುವರೆಗೆ ಹತ್ತು ಮಂದಿ ಹಣ ಕೊಟ್ಟು, ಎನ್ರೋಲ್ ಮಾಡಿಸಿದ್ದಾರೆ. ತಮ್ಮದೇ ಅಂಚೆಚೀಟಿ­ಯನ್ನು ಪ್ರೀತಿಪಾತ್ರರಿಗೆ ಕಳುಹಿಸುವ ಈ ಅವಕಾಶಕ್ಕೆ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಗಬೇಕು. ಮೈಸೂರು ದಸರಾದಲ್ಲೂ ಇಂಥದ್ದೊಂದು ಮಳಿಗೆ ಹಾಕಿದ್ದೆವು. ಇನ್ನೂ ಒಂದೂವರೆ ದಿನ ಉತ್ತಮ ಪ್ರತಿಕ್ರಿಯೆ ಬರಬಹುದು’ ಎಂದು ಅಂಚೆ ಇಲಾಖೆ ಸಿಬ್ಬಂದಿ ಸವಿತಾ ಪ್ರತಿಕ್ರಿಯಿಸಿದರು.

ನಿಘಂಟಿಗೆ ಜೈ: ಕನ್ನಡ ಸಾಹಿತ್ಯ ಪರಿಷತ್‌ನ ಮಳಿಗೆಯು ಪ್ರವೇಶದ ಭಾಗದಲ್ಲೇ ಇದ್ದು, ‘ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು’ ಹಾಗೂ ‘ಕನ್ನಡ ರತ್ನಕೋಶ’ದಂಥ ಪುಸ್ತಕಗಳಿಗೆ ಅಲ್ಲಿ ಬೇಡಿಕೆ ಹೆಚ್ಚು. ಇವಲ್ಲದೆ ಗದ್ಯಾನು­ವಾದಗಳಿಗೂ ಬೇಡಿಕೆ ಇದೆ ಎಂದು ಮಳಿಗೆಯಲ್ಲಿದ್ದ ಸಿಬ್ಬಂದಿ ನಾಗರತ್ನ ಹೇಳಿದರು. ಅಷ್ಟರಲ್ಲಿ ‘ವಡ್ಡಾರಾಧನೆ’ ಕೃತಿಯನ್ನು ಕೇಳಿಕೊಂಡು ಮಧ್ಯಮ ವಯಸ್ಸಿನ ಮಹಿಳೆ ಅಲ್ಲಿಗೆ ಬಂದರು.

‘ವ್ಯವಸ್ಥೆ ಸರಿ ಇಲ್ಲ’: ಕೇಂದ್ರ ಸಾಹಿತ್ಯ ಅಕಾಡೆಮಿಯ ಮಳಿಗೆಯಲ್ಲಿ ‘ಕೊಡ­ಗಿನ ಗೌರಮ್ಮ’ ಪುಸ್ತಕಗಳು ಗೋಬಿ ಮಂಚೂರಿಯಂತೆ ಖರ್ಚಾಗುತ್ತಿವೆ. ಮಂಗಳವಾರ 30 ಪ್ರತಿಗಳನ್ನು ಮಾರಿದ ಹೆಮ್ಮೆ ಮಳಿಗೆಯ ಸಿ.ಎನ್.­ರಾಜು ಅವರದ್ದು. ಅಲ್ಲಿಯೇ ಬಿಲ್ ಹಾಕುತ್ತಿದ್ದ ಚಂದ್ರಶೇಖರ ಅವರದ್ದು ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರು.

‘ಪ್ರವೇಶವನ್ನು ನಿತ್ಯ ಬದಲಾಯಿ­ಸ­ಬೇಕು. ಇದರಿಂದ ಬರುವ ಗ್ರಾಹಕರಿಗೆ ವೈವಿಧ್ಯಮಯ ಕೃತಿ ನೋಡುವ, ಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಎಲ್ಲಾ ಮಳಿಗೆಯವರಿಗೆ ನ್ಯಾಯ ಒದ­ಗಿಸಿ­ದಂತಾಗು­ತ್ತದೆ’. ಚಂದ್ರ­ಶೇಖರ ಅವರು ದೂರು­ಗಳ ಪಟ್ಟಿ ಮುಂದು­ವರಿಸುವ ವೇಳೆಗೆ ರಂ.ಶ್ರೀ.­ಮುಗಳಿ­ಯವರ ‘ಕನ್ನಡ ಸಂಕ್ಷಿಪ್ತ ಕಾವ್ಯ’ ಕೃತಿಗೆ ಗ್ರಾಹಕ­ರೊಬ್ಬರು ಬೇಡಿಕೆ­ಯಿಟ್ಟು, ಮಾತನ್ನು ಮೊಟಕುಗೊಳಿಸಿದರು.

*ಕೊಡಗಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಛಾಯಾಚಿತ್ರ ಪ್ರದ­ರ್ಶನ ಸಮ್ಮೇಳನದಲ್ಲಿ ಸಾವಿರಾರು ಜನ­ರನ್ನು ಆಕರ್ಷಿಸುತ್ತಿದೆ. ಕನ್ನಡ ದೇಶಿ ಪರಂಪರೆ ಹೆಸರಿನ ಛಾಯಾಚಿತ್ರ ಪ್ರದರ್ಶನದಲ್ಲಿ ಕೊಡಗು ಸಂಸ್ಕೃತಿಗೆ ಸಂಬಂಧಪಟ್ಟ 150 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT